ಮಡಿಕೇರಿ, ನ. 19: ಕಳೆದ ಆಗಸ್ಟ್ ತಿಂಗಳಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪ ದುರಂತದಲ್ಲಿ ನಷ್ಟಕ್ಕೊಳಗಾಗಿ ಸಂತ್ರಸ್ತರಾಗಿ ಪರಿಹಾರ ಕೇಂದ್ರದಲ್ಲಿ ತಂಗಿದ್ದ ಸಂತ್ರಸ್ತರೋರ್ವರು ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಇಂದು ಸಂಭವಿಸಿದೆ. ಸೋಮವಾರಪೇಟೆ ತಾಲೂಕಿನ ಕೆದಕಲ್ ಗ್ರಾ.ಪಂ. ವ್ಯಾಪ್ತಿಯ ಕಡಂದಾಳು ಗ್ರಾಮದ ನಿವಾಸಿ ನಾರಾಯಣ ನಾಯಕ್ (60) ಎಂಬವರೇ ನೇಣಿಗೆ ಶರಣಾದ ದುರ್ದೈವಿ.ಪ್ರಕೃತಿ ವಿಕೋಪದಲ್ಲಿ ನಾರಾಯಣ ನಾಯಕ್ ಅವರಿಗೆ ಸೇರಿದ ಮನೆ ಹಾನಿಗೀಡಾಗಿ ವಾಸಮಾಡಲು ಯೋಗ್ಯವಲ್ಲದಂತಾಗಿದೆ. ಹಾಗಾಗಿ ನಾರಾಯಣ ಅವರ ಕುಟುಂಬ ಕುಶಾಲನಗರ ವಾಲ್ಮೀಕಿ ಭವನದಲ್ಲಿರುವ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿತ್ತು. ತಾ. 17 ರಂದು ಅವರು ಕಡಂದಾಳುವಿನಲ್ಲಿರುವ ತಮ್ಮ ಸಹೋದರಿ ಮೀನಾಕ್ಷಿ ಅವರ ಮನೆಗೆ ತೆರಳಿದ್ದಾರೆ.
ಇಂದು ಬೆಳಿಗ್ಗೆ ಮೀನಾಕ್ಷಿ ಮತ್ತು ಸಂಸಾರ ಕೆಲಸಕ್ಕೆ ತೆರಳಿದ್ದಾರೆ. ಸಂಜೆ ಬಂದು ನೋಡುವಾಗ ಮನೆಯಲ್ಲಿ ನಾರಾಯಣ ಅವರು ಇಲ್ಲದಿದ್ದುದನ್ನು ಗಮನಸಿ ಸುತ್ತ ಮುತ್ತೆಲ್ಲ ಹುಡುಕಾಡಿದ್ದಾರೆ. ಕೊನೆಗೆ ನಾರಾಯಣ ಅವರ ಮನೆಗೆ ತೆರಳಿ ನೋಡುವಾಗ ಮುಂಬಾಗಿಲು ತೆರೆದಂತೆ ಗೋಚರಿಸಿದ್ದು, ಒಳ ಹೊಕ್ಕು ನೋಡಿದಾಗ ನಾರಾಯಣ ಅವರು ಮನೆಯೊಳಗಿನ ಮೇಲ್ಛಾವಣಿಯ ಕಬ್ಬಿಣದ ಸಲಾಖೆಗೆ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವದು ಗೋಚರಿಸಿದೆ.
ಈ ಬಗ್ಗೆ ಮೃತರ ಪುತ್ರ ಬಾಲಕೃಷ್ಣ ನೀಡಿದ ದೂರಿನ ಮೇರೆ ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ. ಮೃತರು ಪತ್ನಿ, ಪುತ್ರರನ್ನು ಅಗಲಿದ್ದಾರೆ.