ತುಳಸಿ ವಿವಾಹ ಭಾರತೀಯ ಸಂಸ್ಕೃತಿ-ಪಾವಿತ್ರ್ಯ-ಆದರ್ಶಗಳನ್ನು ಎತ್ತಿ ಹಿಡಿಯುವ ಆಚರಣೆಯಾಗಿದೆ. ಸಮುದ್ರಮಥನದ ಸಮಯದಲ್ಲಿ, ಸಕಲ ಜೀವಿಗಳಿಗೂ ಅಮರತ್ವ ಪ್ರಧಾನ ಮಾಡುವ ಅಮೃತ ಕಲಶವೊಂದನ್ನು ಹಿಡಿದು, ಅವತರಿಸಿದ ಧನ್ವಂತರಿ ದೇವನನ್ನು ಕಂಡಾಗ, ಭಗವಂತನ ನೇತ್ರಗಳಿಂದ ಕಲಶದಲ್ಲಿ., ಉದುರಿದ ಸುಖಾಶ್ರುಗಳಿಂದ ಉಧ್ಭವಿಸಿದ ಮಾತೆಯೇ ತುಳಸಿ. ತುಲನೆಯಿಲ್ಲದಷ್ಟು ಅಮೃತ ಗುಣಗಳನ್ನು ಹೊಂದಿದ ಸಂಜೀವಿನಿ ದೇವತೆಯನ್ನು ತುಳಸಿ ಮಾತೆಯೆಂದು ಪೂಜಿಸಲಾಗುತ್ತದೆ. ದೇವತೆಗಳು, ಲಕ್ಷ್ಮಿಯಂತೆ, ತುಳಸಿಯನ್ನು ವಿಷ್ಣುವಿನ ಸೇವೆಗೆಂದು ಸಮರ್ಪಿಸಿದ್ದರಿಂದ ತುಳಸಿ ಮಾತೆ, ವೈಷ್ಣವಿ, ಹರಿಪ್ರಿಯಾ, ಸುರವಲ್ಲಿ, ಸಂಜೀವಿನಿಯೆಂದು ಪೂಜಿಸಲ್ಪಡುತ್ತಾಳೆ.

ಇನ್ನೊಂದು ಪುರಾಣ ಕಥೆಯ ಪ್ರಕಾರ, ವೃಂದಾಳೆಂಬ ಯುವತಿ, ಜಲಂಧರನೆಂಬ ದುಷ್ಟ ರಾಕ್ಷ ಸನನ್ನು ಮದುವೆಯಾಗುತ್ತಾಳೆ. ವೃಂದೆ ತಪಸ್ಸು ಮಾಡಿ, ಲಕ್ಷ್ಮೀನಾರಾಯಣರು ಸದಾ ತಮ್ಮ ಮನೆಯಲ್ಲಿ ನೆಲೆಗೊಳ್ಳಲೆಂಬ ವರವೊಂದನ್ನು ಪಡೆದಿದ್ದಳು. ಪತಿವ್ರತೆಯಾದ ವೃಂದಾಳ, ತಪಃಶಕ್ತಿಯ ಪ್ರಭಾವದಿಂದ ಜಲಂಧರನಿಗೆ ಸೋಲೆಂಬುದೇ ಇರಲಿಲ್ಲ. ಅಹಂಕಾರ, ಅಧರ್ಮಗಳ ಪ್ರತಿರೂಪವೆನಿಸಿದ ಜಲಂಧರ, ದೇವತೆಗಳ ಮೇಲೆ ಯುದ್ಧ ಸಾರುತ್ತಾನೆ. ಋಷಿ, ಮುನಿಗಳ ಯಜ್ಞ-ಹವನಾದಿಗಳಿಗೆ ಭಂಗ ತರುತ್ತಾನೆ. ಈತನ ಉಪಟಳ ತಾಳಲಾರದ ದೇವತೆಗಳು ಪರಿಹಾರಕ್ಕಾಗಿ, ವಿಷ್ಣುವಿನ ಮೊರೆ ಹೋಗುತ್ತಾರೆ. ವಿಷ್ಣು ಜಲಂಧರ ರಾಕ್ಷಸನ ವೇಷದಲ್ಲಿ ಬಂದು, ವೃಂದಾಳ ಪಾತಿವ್ರತ್ಯವನ್ನು ಭಂಗ ಮಾಡುತ್ತಾನೆ, ಈ ಸಂದರ್ಭದಲ್ಲಿ ಶಿವನು ಜಲಂಧರ ರಾಜನನ್ನು ಸಂಹರಿಸುತ್ತಾನೆ. ಇತ್ತ ತನ್ನ ಚಾರಿತ್ರ್ಯಕ್ಕೆ ಧಕ್ಕೆ ತರುವ ವಿಷ್ಣುವಿಗೆ ವೃಂದಾ ಕಪ್ಪು ಕಲ್ಲಾಗಿ ಹೋಗು ಎಂದು ಶಾಪ ನೀಡುವಳಲ್ಲದೆ ನಿನಗೆ ಪತ್ನಿಯ ವಿರಹವುಂಟಾಗಲಿ ಎಂದು ಆಶಿಸುತ್ತಾಳೆ.

ಪತಿಯೊಂದಿಗೆ ಚಿತೆಯೇರು ತ್ತಾಳೆ. ರಾಮಾಯಣದಲ್ಲಿ, ವಿಷ್ಣುವಿನ ಅವತಾರವಾಗಿರುವ ರಾಮನಿಗೆ ಸೀತಾ ವಿಯೋಗ ವಾಗುವುದನ್ನು ಇಲ್ಲಿ ಸ್ಮರಿಸಬಹುದು.

ಪಾರ್ವತಿ ದೇವಿ, ವೃಂದೆಯ ಚಿತೆಯ ಸುತ್ತಲೂ ತುಳಸಿ, ನೆಲ್ಲಿ, ಹುಣಸೆ ಗಿಡಗಳನ್ನು ನಿರ್ಮಿಸಿ, ವೃಂದಾವನವೊಂದನ್ನು ನಿರ್ಮಿಸಿದಾಗ, ನಳನಳಿಸಿ ಬೆಳೆದ ತುಳಸಿಯನ್ನು ವಿಷ್ಣು ವರಿಸುತ್ತಾನೆಂದು ಪ್ರತೀತಿಯಿದೆ. ಮುಂದೆ, ತುಳಸಿ ಮಾತೆಯೇ ರುಕ್ಮಿಣಿಯಾಗಿ ಜನಿಸಿ, ತುಳಸಿ ವಿವಾಹದ ದಿನವಾದ ಉತ್ಥಾನ ದ್ವಾದಶಿಯಂದು ಕೃಷ್ಣನನ್ನು ವರಿಸುತ್ತಾಳೆ ಎನ್ನುವ ಕತೆಯೂ ಇದೆ.. ಈ ವಿವಾಹೋತ್ಸವದ ಸ್ಮರಣೆಯನ್ನೇ ತುಳಸಿ ವಿವಾಹವೆಂದು ಆಚರಿಸುವ ಸಂಪ್ರದಾಯ ಬೆಳೆದು ಬಂದಿದೆ.

ತುಳಸಿ ಅಲಂಕಾರ

ಕಾರ್ತಿಕ ಮಾಸದ ಉತ್ಥಾನ ದ್ವಾದಶಿಯಂದು, ಸಂಜೆಯ ಸಮಯದಲ್ಲಿ, ತುಳಸಿ ವೃಂದಾವನವನ್ನು ಶುಭ್ರಗೊಳಿಸಿ, ಸುಣ್ಣ, ಬಣ್ಣಗಳಿಂದ ಅಲಂಕರಿಸಬೇಕು. ಮನೆಯ ಅಂಗಳ ಹಾಗೂ ತುಳಸಿ ವೃಂದಾವನಗಳೆದುರು ರಂಗೋಲಿಗಳನ್ನು ಬಿಡಿಸಿ, ಮಾವಿನ ತಳಿರು, ತೋರಣಗಳಿಂದ ಅಲಂಕರಿಸಬೇಕು. ವಿವಿಧ ಫಲ-ಪುಷ್ಪ, ಚೆಂಡು ಹೂಗಳಿಂದ ಅಲಂಕರಿಸಿ, ವೃಂದಾವನದಲ್ಲಿ, ಹುಣಸೆ ಗಿಡ, ನೆಲ್ಲಿ ಗಿಡಗಳನ್ನು ನೆಟ್ಟು ಪೂಜಿಸಬೇಕು. ತುಳಸಿಯ ಸನ್ನಿಧಿಯಲ್ಲಿ, ಶ್ರೀ ಕೃಷ್ಣನ ಪ್ರತಿಮೆಯನ್ನಿರಿಸಿ, ಅರಿಶಿಣ, ಕುಂಕುಮ, ಮಂಗಲಸೂತ್ರ ಮುಂತಾದ ಮಂಗಳಕರ ಅಲಂಕಾರ ಮಾಡಿ, ಘಂಟಾನಾದವನ್ನು ಮಾಡಿ, ಭಗವಂತನನ್ನು ಎಬ್ಬಿಸಬೇಕು. ತುಳಸಿ ಮೂಲದಲ್ಲಿ ಲಕ್ಷ್ಮೀಸಹಿತನಾದ ವಿಷ್ಣುವನ್ನೂ, ತುಳಸಿಯನ್ನೂ ಭಕ್ತಿಯಿಂದರ್ಚಿಸಿ, ನೈವೇದ್ಯ ರೂಪದಲ್ಲಿ ಕೊಬ್ಬರಿ, ಬೆಲ್ಲ, ಖರ್ಜೂರ, ಬಾಳೆಹಣ್ಣು, ಕಬ್ಬುಗಳನ್ನು ಸಮರ್ಪಿಸಿ, ತಾಂಬೂಲ ನೀರಾಜನವನ್ನು ಸಮರ್ಪಿಸಬೇಕು. ತುಳಸಿ ಸಹಿತ ಲಕ್ಷ್ಮಿನಾರಾಯಣ ಮಹಾತ್ಮೆಯನ್ನು ಕೇಳಬೇಕು. ದೀಪದಾನವನ್ನು ಮಾಡಬೇಕೆಂದು ಹೇಳುತ್ತಾರೆ

ತುಳಸಿ ವಿವಾಹ, ಪೂಜೆ

ಹಿಂದೂ ಸಂಸ್ಕೃತಿಯಲ್ಲಿ ತುಳಸಿ ಗಿಡವನ್ನು ಭಕ್ತಿಯಿಂದ ಪೂಜಿಸುತ್ತಾರೆ. ಶುಭ-ಅಶುಭ ಕಾರ್ಯಗಳಲ್ಲಿ ತುಳಸಿ ಎಲೆಗೆ ವಿಶೇಷ ಸ್ಥಾನವಿದೆ. ತುಳಸಿ ಎಂದರೆ ತುಲನ ನಸ್ತಿ ಅಂದರೆ ಗುಣದಲ್ಲಿ ತುಲನೆ ಮಾಡಲು ಸಾಧ್ಯವಾಗದಿರುವ ಗಿಡವೇ ತುಳಸಿ.

ದೀಪಾವಳಿ ಹಬ್ಬ ಮುಗಿದು ಹಿಂದೂಗಳು ಆಚರಿಸುವ ಹಬ್ಬವೇ ತುಳಸಿ ಪೂಜೆ ಅಥವಾ ಕಿರು ದೀಪಾವಳಿ. ಚಾಂದ್ರಮಾನ ಕಾರ್ತಿಕಮಾಸದ ಶುಕ್ಲಪಕ್ಷದ 12ನೇ ದಿನ ಅಂದರೆ ದ್ವಾದಶಿಯಂದು ಈ ಹಬ್ಬವನ್ನು ಉತ್ಥಾನ ದ್ವಾದಶಿ ಎಂದು ಆಚರಿಸಲಾಗುತ್ತದೆ.

ಇನ್ನೊಂದು ಪುರಾಣದ ಪ್ರಕಾರ ದೇವತೆಗಳೂ, ದಾನವರೂ ಕ್ಷೀರಸಾಗರವನ್ನು ಕಡೆದಾಗ ಕೊನೆಯಲ್ಲಿ ಅಮೃತ ಬಂತು. ಅದನ್ನು ಕೈಗೆ ತೆಗೆದುಕೊಂಡ ವಿಷ್ಣುವಿನ ಕಣ್ಣುಗಳಿಂದ ಬಂದ ಆನಂದಬಾಷ್ಪಗಳು ಕಲಶದಲ್ಲಿ ಬಿದ್ದು ಅದರಿಂದ ಒಂದು ಸಣ್ಣ ಗಿಡ ಹುಟ್ಟಿತು. ಅದಕ್ಕೆ ತುಲನೆ ಇಲ್ಲವಾದ್ದರಿಂದ ತುಳಸಿ ಎಂದು ಹೆಸರಿಟ್ಟು ಲಕ್ಷ್ಮಿಯೊಂದಿಗೆ ತುಳಸಿಯನ್ನು ವಿಷ್ಣುವು ಮದುವೆಯಾದನು. ಹಿಂದೂ ಧರ್ಮದಲ್ಲಿ ಮಹಾವಿಷ್ಣುವಿನ ಮಡದಿಯೆಂದೂ ಅವರಿಬ್ಬರಿಗೆ ನಡೆಯುವ ವಿವಾಹವನ್ನು ತುಳಸಿ ವಿವಾಹ ಎಂದು ಕರೆಯುತ್ತಾರೆ. ತುಳಸಿ ಗಿಡಕ್ಕೆ ವಿವಾಹವೆಂದರೆ ಮಳೆಗಾಲ ಮುಗಿದು ಚಳಿಗಾಲದಲ್ಲಿ ಹಿಂದೂ ಮದುವೆಗಳು ಆರಂಭವಾಗುವ ಸಮಯವೆಂದರ್ಥ.

ಆಚರಣೆ ವಿಧಾನ: ತುಳಸಿ ಕಟ್ಟೆಯನ್ನು ರಂಗೋಲಿ, ಹೂವು, ಮಾವಿನ ಎಲೆಗಳಿಂದ ಅಲಂಕರಿಸಿ ವಿಷ್ಣುವಿನ ಅವತಾರ ಕೃಷ್ಣನ ಮೂರ್ತಿಯನ್ನಿರಿಸಿ ಪೂಜಿಸಲಾಗುತ್ತದೆ. ದೀಪಾವಳಿ ಸಮಯದಲ್ಲಿ ಇದ್ದ ಸಂಭ್ರಮವೇ ಈ ತುಳಸಿ ವಿವಾಹ ಸಮಯದಲ್ಲಿಯೂ ಇರುತ್ತದೆ. ತುಳಸಿ ಗಿಡದೊಂದಿಗೆ ಬೆಟ್ಟದ ನೆಲ್ಲಿಕಾಯಿ ಗಿಡವನ್ನು ನೆಟ್ಟು ಪೂಜಿಸುವ ರೂಢಿ ಇದೆ. ದೀಪದಿಂದ ಗಿಡದ ಸುತ್ತ ಅಲಂಕರಿಸಲಾಗುತ್ತದೆ.

ತುಳಸಿ ಗಿಡದ ವಿವಾಹವು ಹಿಂದೂ ಪದ್ದತಿಯ ಮದುವೆಯ ಸಂಕೇತವಾಗಿರುವುದರಿಂದ ಹಿಂದೂಗಳ ಮನೆಗಳಲ್ಲಿ, ದೇವಾಲಯಗಳಲ್ಲಿ ಈ ಆಚರಣೆ ನಡೆಸಲಾಗುತ್ತದೆ. ಆ ದಿನ ಪೂಜೆಯಲ್ಲಿ ಪಾಲ್ಗೊಳ್ಳುವವರು ಉಪವಾಸ ಕೈಗೊಳ್ಳುತ್ತಾರೆ. ತುಳಸಿ ಗಿಡದ ಸುತ್ತಲೂ ಮದುವೆ ಮಂಟಪ ನಿರ್ಮಿಸುತ್ತಾರೆ. ಇದಕ್ಕೆ ತುಳಸಿ ಬೃಂದಾವನವೆಂದು ಹೆಸರು. ವೃಂದಾಳ ಆತ್ಮವು ರಾತ್ರಿಯಿಡೀ ಇದ್ದು ಮರುದಿನ ಬೆಳಿಗ್ಗೆ ಹೊರಟುಹೋಗುತ್ತದೆ ಎಂಬ ನಂಬಿಕೆಯಿದೆ.

ಹೆಂಗಳೆಯರು ತುಳಸಿ ಗಿಡವನ್ನು ಮದುವಣಗಿತ್ತಿಯಂತೆ ಸಿಂಗರಿಸುತ್ತಾರೆ. ವಿಷ್ಣುವಿನ ಅಥವಾ ಅವನ ಅವತಾರವಾದ ಕೃಷ್ಣ, ರಾಮನ ಫೋಟೋವನ್ನು ಇಲ್ಲವೇ ಸಾಲಿಗ್ರಾಮ ಕಲ್ಲನ್ನು ತುಳಸಿ ಗಿಡದ ಪಕ್ಕ ಇಟ್ಟು ಇಬ್ಬರನ್ನೂ ಸ್ನಾನ ಮಾಡಿಸಿ ಶುಭ್ರ ಬಟ್ಟೆ ತೊಡಿಸಿ ಹೂವು, ಹಣ್ಣುಗಳಿಂದ ಅಲಂಕರಿಸುತ್ತಾರೆ. ವಿಷ್ಣುವಿನ ಭಾವಚಿತ್ರ ಹಾಗೂ ತುಳಸಿ ಗಿಡಕ್ಕೆ ಹತ್ತಿಯಿಂದ ತಯಾರಿಸಿದ ಮಾಲೆಯನ್ನು ತೊಡಿಸಿ ಮದುವೆಯ ಶಾಸ್ತ್ರ ಮಾಡಲಾಗುತ್ತದೆ. ಹಿಂದೂ ವಿವಾಹ ಪದ್ಧತಿಯಲ್ಲಿ ನಡೆಯುವ ಆಚರಣೆಯಂತೆಯೇ ವಿಷ್ಣು-ತುಳಸಿ ವಿವಾಹವನ್ನು ಭಕ್ತರು ಆಚರಿಸುತ್ತಾರೆ. ಆಚರಣೆ ವಿಧಾನ ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರುತ್ತದೆ.

ಮದುವೆ ನಡೆಸುವವರು, ಕಾರ್ಯಕ್ರಮಕ್ಕೆ ಬಂದವರು ಅಲ್ಲಿ ಸೇರಿರುತ್ತಾರೆ. ಮದುವೆಯನ್ನು ನೋಡಿ ಬಾಯ್ತುಂಬ ಹರಸುತ್ತಾರೆ. ವಧೂ-ವರರಿಗೆ ಉಡುಗೊರೆ ನೀಡುವ ಸಂಕೇತವಾಗಿ ಪೂಜೆ ಏರ್ಪಡಿಸಿದ ಮನೆಯ ಹುಡುಗಿಯರಿಗೆ, ಮಹಿಳೆಯರಿಗೆ, ಪುರುಷರಿಗೆ ಅತಿಥಿಗಳು ಉಡುಗೊರೆ ಕೊಡುತ್ತಾರೆ. ನಂತರ ಭೋಜನ ಮುಗಿಸಿ ಮನೆಗೆ ತೆರಳುತ್ತಾರೆ. ಅನೇಕ ಸಂಪ್ರದಾಯ, ಆಚರಣೆಗಳನ್ನು ಹೊಂದಿರುತ್ತದೆ.

ತುಳಸಿ ಗಿಡ ಉತ್ತಮ ಔಷಧೀಯ ಗುಣವುಳ್ಳದ್ದು. ಮನೆಯ ಸುತ್ತಮುತ್ತ ತುಳಸಿ ಗಿಡ ಬೆಳೆಸಿದರೆ ಸೋಂಕು, ಕ್ರಿಮಿ ಕೀಟಗಳು, ರೋಗ-ರುಜಿನಗಳು ಬರುವ ಸಾಧ್ಯತೆ ಕಡಿಮೆ ಎನ್ನುತ್ತಾರೆ.

ಮಳೆಗಾಲ, ಚಳಿಗಾಲದಲ್ಲಿ ತುಳಸಿ ಎಲೆಯನ್ನು ಕಾಳುಮೆಣಸು ಜೊತೆ ಸೇರಿಸಿ ಕಷಾಯ ಮಾಡಿ ಕುಡಿದರೆ ಶೀತ ತಲೆನೋವು, ಜ್ವರ, ಕಫ ಒಂದೆರಡು ದಿನಗಳಲ್ಲಿ ಮಾಯವಾಗಿಬಿಡುತ್ತದೆ. ಚಿಕ್ಕ ಮಕ್ಕಳು ಹೊಟ್ಟೆ ನೋವು ಎಂದು ಅಳುತ್ತಿದ್ದರೆ ತುಳಸಿ ಎಲೆಯನ್ನು ಚೆನ್ನಾಗಿ ಅರೆದು ರಸ ಹಿಂಡಿ ಒಂದು ಕಲ್ಲು ಉಪ್ಪು ಬೆರೆಸಿ ಒಂದೆರಡು ಚಮಚ ಕುಡಿಸಿ ನೋಡಿ; ಕೆಲವೇ ಹೊತ್ತಿನಲ್ಲಿ ನೋವು ಉಪಶಮನವಾಗುತ್ತದೆ. ತುಳಸಿ ಎಲೆ ಅಲರ್ಜಿ ಶಮನಕಾರಿಯೂ ಹೌದು.

(ಆಧಾರ)