ವೀರಾಜಪೇಟೆ, ನ. 17: ಮಕ್ಕಳು ಬಾಲ್ಯಾವಸ್ಥೆಯ ಸುಮಧುರ ಕ್ಷಣಗಳನ್ನು ಕಳೆಯುವಾಗ ಎಚ್ಚರಿಕೆ ವಹಿಸುವದು ಅಗತ್ಯ, ಮಕ್ಕಳಿಗಾಗಿ ವಿಶೇಷ ಕಾನೂನುಗಳಿವೆ ಅದನ್ನು ತಿಳಿದುಕೊಳ್ಳುವಂತಾಗಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಡಿ.ಆರ್. ಜಯಪ್ರ್ರಕಾಶ್ ಹೇಳಿದರು.
ವೀರಾಜಪೇಟೆ ತಾಲೂಕು ಕಾನೂನು ಸೇವೆಗಳ ಸಮಿತಿ ಮಕ್ಕಳ ಸಹಾಯವಾಣಿ 1098 ಇವರ ಸಂಯುಕ್ತ ಆಶ್ರಯದಲ್ಲಿ ‘ಚೈಲ್ಡ್ ಲೈನ್ ಸೇ ದೋಸ್ತಿ’ ಮತ್ತು ಬಾಲ್ಯಾವಸ್ಥೆ ಕಾನೂನುಗಳು ಹಾಗೂ ಮಕ್ಕಳ ನಿಗಾ ಕೇಂದ್ರಗಳ ಬಗ್ಗೆ ವೀರಾಜಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ನ್ಯಾಯಾಧೀಶ ಜಯಪ್ರಕಾಶ್ ಮಾತನಾಡಿ, ಮಕ್ಕಳ ಮೇಲೆ ದೌರ್ಜನ್ಯಗಳು ನಡೆದರೆ ಕೂಡಲೇ ಶಿಕ್ಷಕರಿಗೆ, ತಮ್ಮ ಪೋಷಕರಿಗೆ ಅಥವಾ ಪೊಲೀಸ್ ಠಾಣೆಗೆ ತಿಳಿಸುವಂತಾಗಬೇಕು. ಮಾನವ ಸಹಜ ಗುಣಗಳಾದಂತಹ ಅಪೇಕ್ಷೆಯಿಂದ ತಂದೆ-ತಾಯಿ ಮಕ್ಕಳನ್ನು ವಿದ್ಯೆ ಬುದ್ದಿ ಕಲಿಸಿ ದೊಡ್ಡವರನ್ನಾಗಿಸಿ ತಮಗೆ ಆಸರೆಯಾಗಲೆಂದು ಎಚ್ಚರಿಕೆಯಿಂದ ಬೆಳೆಸುತ್ತಾರೆ. ಅದನ್ನು ಅರಿತುಕೊಂಡು ಮಕ್ಕಳು ಹಿರಿಯರಿಗೆ ಗೌರವ ನೀಡುವದರೊಂದಿಗೆ ತಮ್ಮ ಗುರಿ ಮುಟ್ಟುವಂತಾಗಬೇಕು. ಮಕ್ಕಳಿಗಾಗಿಯೇ ಇರುವ ಕಾನೂನುಗಳನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ನಿರ್ದೇಶಕ ವಿ.ಎಸ್. ರಾಯ್ ಡೇವಿಡ್ ಮಾತನಾಡಿ, ಮಕ್ಕಳಿಗೆ ಯಾವದೇ ತೊಂದರೆಯಾದಲ್ಲಿ ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ದೂರು ದಾಖಲಿಸಬಹುದು. ಸಹಾಯವಾಣಿ ಸಂಖ್ಯೆ 1098 ನ್ನು ಸದುಪಯೋಗ ಪಡಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ತಿಳಿಸಿದರು. ವೇದಿಕೆಯಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಜ್ಯೋತಿ, ಮಕ್ಕಳ ಕಲ್ಯಾಣ ಜಿಲ್ಲಾ ಸಮಿತಿಯ ನಮಿತಾರಾವ್, ಮಕ್ಕಳ ಕಲ್ಯಾಣ ಸಮಿತಿಯ ಉಷಾ ಅಣ್ಣಯ್ಯ, ಮತ್ತು ಲತೀಫ್ ಮುಂತಾದವರು ಉಪಸ್ಥಿತರಿದ್ದರು.