ಮಡಿಕೇರಿ, ನ. 17: ಮಕ್ಕಳ ಹಕ್ಕು ಮತ್ತು ಅದರ ಬಳಕೆ ಬಗ್ಗೆ ತಿಳಿದುಕೊಳ್ಳುವದು ಪ್ರತಿ ಮಕ್ಕಳ ಕರ್ತವ್ಯವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಗಾಯತ್ರಿ ಅವರು ತಿಳಿಸಿದರು.
ನಗರದ ಸರ್ಕಾರಿ ಬಾಲಕಿಯರ ಬಾಲ ಮಂದಿರದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ನಿಗಾ ಕೇಂದ್ರ ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಕೊಡಗು ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ಕೊಡಗು ಜಿಲ್ಲಾ ಮಟ್ಟದ ಮಕ್ಕಳ ಹಕ್ಕುಗಳ ಸಂಸತ್ 2018 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು 6 ರಿಂದ 18 ವಯಸ್ಸಿನ ಮಕ್ಕಳಿಗೆ ಸರ್ಕಾರವು ವಿದ್ಯಾಭ್ಯಾಸಕ್ಕೆ ಎಲ್ಲಾ ರೀತಿಯ ನೆರವು ನೀಡುತ್ತಿದ್ದು, ಇದರೊಂದಿಗೆ ಮಕ್ಕಳ ರಕ್ಷಣೆಗಾಗಿ ಹಲವು ರೀತಿಯ ಕಾನೂನುಗಳನ್ನು ರೂಪಿಸಿದ್ದು, ಇದನ್ನು ತಿಳಿದುಕೊಳ್ಳುವದು ಪ್ರತಿ ಮಕ್ಕಳ ಕರ್ತವ್ಯವಾಗಿದೆ. ಅದೇ ರೀತಿಯಲ್ಲಿ ಅವಶ್ಯವಿದ್ದಾಗ ಮಕ್ಕಳ ಹಕ್ಕುಗಳನ್ನು ಮಕ್ಕಳು ಬಳಸಿಕೊಳ್ಳುವದು ಅತಿ ಮುಖ್ಯವಾಗಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಮಕ್ಕಳ ಸಂಸತ್ ಕಾರ್ಯಗಾರದಿಂದ ಮಕ್ಕಳ ಹಕ್ಕುಗಳ ಕುರಿತು ಹೆಚ್ಚಿನ ಮಾಹಿತಿಯನ್ನು ಪಡೆಯಲು ಸಹಕಾರಿಯಾಗಿದ್ದು, ಮಕ್ಕಳು ಇದರ ಸದುಪಯೋಗ ಪಡೆದುಕೊಂಡರೆ ಜಿಲ್ಲೆಯನ್ನು ರಾಜ್ಯ ಮಟ್ಟದಲ್ಲಿ ಪ್ರತಿನಿಧಿಸಲು ಉತ್ತಮ ವೇದಿಕೆಯಾಗಿದೆ ಎಂದು ಅವರು ಕರೆ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಮಕ್ಕಳ ಕಲ್ಯಾಣಾಧಿಕಾರಿ ಮಮ್ತಾಜ್ ಅವರು ಮಕ್ಕಳ ಸಮಸ್ಯೆಗೆ ಸ್ಪಂದನೆ ದೊರಕಿಸುವ ನಿಟ್ಟಿನಲ್ಲಿ ಈ ಕಾರ್ಯಾಗಾರವು ಬಹುಮುಖ್ಯ ಪಾತ್ರವಹಿಸುತ್ತಿದ್ದು ಇದನ್ನು ಸದುಪಯೋಗ ಪಡಿಸಿಕೊಳ್ಳವಂತೆ ಮಕ್ಕಳಿಗೆ ತಿಳಿಸಿದರು.
ಮಕ್ಕಳ ಕಲ್ಯಾಣ ಸಮಿತಿಯ ರಾಜ್ಯ ಮಕ್ಕಳ ಕಲ್ಯಾಣ ಸಮಿತಿಯ ಸzಸ್ಯೆ ಲಕ್ಷ್ಮಿ ಪ್ರಸನ್ನ ಅವರು ಮಕ್ಕಳ ಹಕ್ಕುಗಳ ಸಂಸತ್ ಕಾರ್ಯಾಗಾರವನ್ನು ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಶಾಲೆಯ ಮಕ್ಕಳು, ಶಿಕ್ಷಕರು ಇತರರು ಇದ್ದರು.