ಕೂಡಿಗೆ, ನ. 17: ಕೂಡಿಗೆಯ ಆಟೋ ಮಾಲೀಕರು ಮತ್ತು ಚಾಲಕರ ವತಿಯಿಂದ ಕೂಡಿಗೆ ಡೈರಿ ಸರ್ಕಲ್‍ನಲ್ಲಿ ನೂತನವಾಗಿ ಶ್ರೀ ಉದ್ಭವ ಸುಬ್ರಹ್ಮಣ್ಯ ಸ್ವಾಮಿ ಆಟೋ ನಿಲ್ದಾಣವನ್ನು ಉದ್ಘಾಟಿಸಲಾಯಿತು.
ಉದ್ಘಾಟನೆಯನ್ನು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ಎನ್. ರಾಜಾರಾವ್ ನೆರವೇರಿಸಿದರು. ನಂತರ ಮಾತನಾಡಿ, ಪ್ರತಿಯೊಬ್ಬರೂ ಕನ್ನಡ ಭಾಷಾಭಿಮಾನವನ್ನು ಬೆಳೆಸಿಕೊಂಡು ಕನ್ನಡಕ್ಕೆ ಹೆಚ್ಚು ಒತ್ತುಕೊಡುವ ದೃಷ್ಟಿಯಲ್ಲಿ ಆಡಳಿತದಲ್ಲಿಯೂ ಕನ್ನಡ ಬಳಕೆ ನಿಖರವಾಗಿ ಸಾಗಬೇಕು. ಕನ್ನಡ ನಾಡು ನುಡಿ ಉಳಿಸುವಲ್ಲಿ ಆಟೋ ಚಾಲಕರ ಪಾತ್ರವು ಮುಖ್ಯವಾಗಿದೆ. ಸಾರ್ವಜನಿಕ ಸೇವೆಗಳಲ್ಲಿ ಆಟೋ ಚಾಲಕರ ಸೇವೆ ಮಹತ್ವದ್ದಾಗಿರುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿದ ಕೂಡುಮಂಗಳೂರು ರಾಮೇಶ್ವರ ಸಹಕಾರ ಸಂಘದ ಅಧ್ಯಕ್ಷ ಕೆ.ಕೆ. ಹೇಮಂತ್‍ಕುಮಾರ್ ಮಾತನಾಡಿ, ಕನ್ನಡದ ನೆಲ-ಜಲ ಉಳಿದರೆ ಭಾಷೆ ಉಳಿದಂತೆ. ಭಾಷೆಯ ಉಳಿವಿಗೆ ಎಲ್ಲಾ ಸಂಘಟನೆಗಳು ತನ್ನದೆ ಆದ ಕಾರ್ಯಚಟುವಟಿಕೆಗಳನ್ನು ನಡೆಸುತ್ತ ಬಂದಲ್ಲಿ ನಾಡು ನುಡಿಯ ರಕ್ಷಣೆ ಆಗುತ್ತದೆ ಎಂದರು.
ಅಧ್ಯಕ್ಷತೆಯನ್ನು ಕುಶಾಲನಗರ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷ ವಿ.ಪಿ. ನಾಗೇಶ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕೂಡಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ರವಿಚಂದ್ರ, ಕೂಡಿಗೆ ಗ್ರಾಮ ಪಂಚಾಯಿತಿ ಸದಸ್ಯ ಟಿ.ಕೆ. ವಿಶ್ವನಾಥ್, ಕೂಡುಮಂಗಳೂರು ಗ್ರಾಮ ಪಂಚಾಯಿತಿ ಸದಸ್ಯೆ ಫಿಲೋಮಿನಾ, ಕರವೇ ಅಧ್ಯಕ್ಷ ಜಗದೀಶ್, ಕರವೇ ನಗರಾಧ್ಯಕ್ಷ ಅಣ್ಣಯ್ಯ, ಆಟೋ ಚಾಲಕರ ಸಂಘದ ಅಧ್ಯಕ್ಷ ಕಿಟ್ಟಿ, ದೊಡ್ಡತ್ತೂರಿನ ವಾಸು, ಶಿಕ್ಷಕರಾದ ಆನಂದ್, ನಾಗರಾಜ್, ಕೂಡಿಗೆ ಆಟೋ ಮಾಲೀಕರ ಮತ್ತು ಚಾಲಕರ ಮುಖ್ಯಸ್ಥ ಜಗನ್ನಾಥ್ ಸೇರಿದಂತೆ ಕೂಡಿಗೆ ಆಟೋ ಮಾಲೀಕರು ಮತ್ತು ಚಾಲಕರು ಇದ್ದರು. ಇದೇ ಸಂದರ್ಭ ಸುತ್ತಮುತ್ತಲ ಶಾಲೆಗಳ ಮಕ್ಕಳಿಗೆ ಲೇಖನಿ ಸಾಮಗ್ರಿಗಳನ್ನು ವಿತರಿಸಲಾಯಿತು.