ಆಲೂರು-ಸಿದ್ದಾಪುರ, ನ. 17: ‘ಗರ್ಭಿಣಿ ಸ್ತ್ರೀಯರು ಮತ್ತು ತಾಯಿಂದಿರು ಆರೋಗ್ಯದ ಬಗ್ಗೆ ಕಾಳಜಿ ಹಾಗೂ ಸಾಂಕ್ರಾಮಿಕ ರೋಗ ಹರಡದಂತೆ ಸ್ವಚ್ಛತೆ ಕಾಪಾಡಿಕೊಂಡರೆ ತಾಯಿ ಮತ್ತು ಶಿಶು ಮರಣವನ್ನು ತಡೆಗಟ್ಟಲು ಸಾಧ್ಯವಾಗುತ್ತದೆ ಎಂದು ಕ್ಷೇತ್ರ ಆರೋಗ್ಯಾಧಿಕಾರಿ ಟಿ.ಕೆ. ಮಂಜುಳ ಅಭಿಪ್ರಾಯಪಟ್ಟರು. ಮಾದ್ರೆ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮೀಕ ಶಾಲೆಯಲ್ಲಿ ಜಿಲ್ಲಾ ಪಂಚಾಯತ್ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಕೊಡ್ಲಿಪೇಟೆ ವತಿಯಿಂದ ಆಯೋಜಿಸಿದ ತಾಯಿ ಮತ್ತು ಶಿಶು ಮರಣದ ಕುರಿತು ಅಂಗನವಾಡಿ ಮಕ್ಕಳ ಪೋಷಕರಿಗೆ ಮಾಹಿತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಗರ್ಭಿಣಿ ಸ್ತ್ರೀಯರು ಮತ್ತು ತಾಯಿಂದಿರು ಸ್ವಚ್ಛತೆಯನ್ನು ಕಾಪಾಡಿಕೊಂಡು ಸಾಂಕ್ರಾಮಿಕ ರೋಗ ಹರಡುವ ಸೊಳ್ಳೆಗಳಿಂದ ರಕ್ಷಣೆ ಪಡೆಯಲು ಸೊಳ್ಳೆ ಪರದೆಯನ್ನು ಅಳವಡಿಸಿಕೊಳ್ಳಬೇಕು, ತಾಯಿಂದಿರು ಮಗುವಿಗೆ ಎದೆಹಾಲನ್ನು ಮಾತ್ರ ಕುಡಿಸಬೇಕು, ತಾಯಿ ಎದೆಹಾಲಿನಲ್ಲಿ ಪೌಷ್ಟಿಕಾಂಶ ಇರುವದರಿಂದ ಮಗು ಸಧೃಢವಾಗಿ ಬೆಳೆಯುತ್ತದೆ, ಇದರ ಜೊತೆಯಲ್ಲಿ ತಾಯಿಂದಿರು ಹತ್ತಿರದ ಆರೋಗ್ಯ ಕಾರ್ಯಕರ್ತೆಯರಿಂದ ತಮ್ಮ ಮತ್ತು ಮಗುವಿನ ಆರೋಗ್ಯದ ಬಗ್ಗೆ ಸಲಹೆ, ಮಾಹಿತಿಗಳನ್ನು ಪಡೆದು ಪಾಲನೆ ಮಾಡಿದರೆ ಶಿಶು ಮರಣವನ್ನು ಸಂಪೂರ್ಣವಾಗಿ ತಡೆಗಟ್ಟಬಹು ದೆಂದರು. ಮಾದ್ರೆ ಕಿರಿಯ ಪ್ರಾಥಮೀಕ ಶಾಲೆಯ ಮುಖ್ಯ ಶಿಕ್ಷಕ ಪುಟ್ಟರಾಜು ಮಾತನಾಡಿ, ತಾಯಿ ತನ್ನ ಮಗುವನ್ನು ಆರೋಗ್ಯವಾಗಿ ಬೆಳೆಸಿದರೆ ಮುಂದೆ ಮಗು ಆರೋಗ್ಯವಂತ ಮಕ್ಕಳಾಗಿ ಬೆಳೆಯುತ್ತಾರೆ. ಸರಕಾರ ಗರ್ಭಿಣಿ ಸ್ತ್ರೀಯರು, ತಾಯಿ ಮತ್ತು ಮಗುವಿನ ಶ್ರೇಯೋಭಿವೃದ್ದಿಗಾಗಿ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಿದೆ, ಆರೋಗ್ಯ ಇಲಾಖೆಯೂ ಹೆಚ್ಚಿನ ಶ್ರಮವಹಿಸುತ್ತಿದೆ, ಈ ನಿಟ್ಟಿನಲ್ಲಿ ಪಲಾನುಭವಿಗಳು ಆರೋಗ್ಯ ಇಲಾಖೆಯ ಕಾರ್ಯಕರ್ತೆಯರು, ವೈದ್ಯರು, ಅಂಗನವಾಡಿ ಕಾರ್ಯಕರ್ತೆ ಯರು, ಆಶಾ ಕಾರ್ಯಕರ್ತೆಯರು ಮುಂತಾದವರಿಂದ ಮಾರ್ಗದರ್ಶನ, ಸಲಹೆಗಳನ್ನು ಪಡೆದುಕೊಳ್ಳಬೇಕು ಎಂದರು.

ಆರೋಗ್ಯ ಸಹಾಯಕಿ ಸರಸ್ವತಿ ಮಾತನಾಡಿ, ಕೆಲವು ವರ್ಷಗಳ ಹಿಂದೆ ತಾಯಿ ಮತ್ತು ಶಿಶು ಮರಣಗಳು ಹೆಚ್ಚಾಗುತ್ತಿದ್ದವು, ಆದರೆ ಇತ್ತೀಚೆನ ವರ್ಷಗಳಲ್ಲಿ ಸರಕಾರ ಮತ್ತು ಆರೋಗ್ಯ ಇಲಾಖೆ ಇದರ ನಿಯಂತ್ರಣಕ್ಕಾಗಿ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದೆ ಎಂದರು.

ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತೆ ಸೌಮ್ಯ,ಸ್ಥಳಿಯ ಸ್ತ್ರಿ ಶಕ್ತಿ ಸಂಘದ ಸದಸ್ಯರು ಮತ್ತು ಶಾಲಾ ಶಿಕ್ಷಕರು,ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕರುಗಳಿದ್ದರು.