ಮಡಿಕೇರಿ, ನ. 17: ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೋರ್ವರನ್ನು ಕತ್ತಿಯಿಂದ ಕಡಿದು ಹತ್ಯೆ ಮಾಡಲು ಯತ್ನಿಸಿದ ಆರೋಪಿಗೆ ಇಲ್ಲಿನ ನ್ಯಾಯಾಲಯ ದಂಡ ಸಹಿತ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಕಳೆದ ತಾ. 14.1.2018 ರಂದು ಮರಗೋಡು ಗ್ರಾಮದ ಕೂಲಿ ಕಾರ್ಮಿಕ ರಘು ಎಂಬಾತ ಅದೇ ಗ್ರಾಮದ ನಿವಾಸಿ ಜೆ.ಎನ್. ರಮೇಶ್ ಎಂಬವರನ್ನು ದಾರಿ ತಡೆದು ತಲೆ ಭಾಗಕ್ಕೆ ಕತ್ತಿಯಿಂದ ಕಡಿದು ಹತ್ಯೆಗೆ ಯತ್ನಿಸಿದ್ದ ಬಗ್ಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಮೊಕದ್ದಮೆ ದಾಖಲಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ಕುರಿತು ವಿಚಾರಣೆ ನಡೆಸಿದ 1ನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಡಿ. ಪವನೇಶ್ ಅವರು ಆರೋಪಿಯ ಮೇಲಿನ ಆರೋಪ ಸಾಬೀತಾಗಿರುವದರಿಂದ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ದಾರಿ ಅಡ್ಡಗಟ್ಟಿದಕ್ಕಾಗಿ 1 ತಿಂಗಳ ಸಜೆ ಮತ್ತು ರೂ. 500 ದಂಡ, ಕತ್ತಿಯಿಂದ ಕಡಿದು ಗಾಯಗೊಳಿಸಿದಕ್ಕಾಗಿ 7 ವರ್ಷಗಳ ಕಠಿಣ ಸಜೆ ಹಾಗೂ ರೂ. 7 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಪಾವತಿಯಾಗುವ ದಂಡದಲ್ಲಿ ರೂ. 5 ಸಾವಿರವನ್ನು ಗಾಯಾಳು ರಮೇಶನಿಗೆ ಪರಿಹಾರವಾಗಿ ನೀಡುವಂತೆ ತೀರ್ಪಿನಲ್ಲಿ ಆದೇಶಿಸಿದ್ದಾರೆ.

ಸರಕಾರದ ಪರ ಸರಕಾರಿ ಅಭಿಯೋಜಕಿ ಎಂ. ಕೃಷ್ಣವೇಣಿ ವಾದ ಮಂಡಿಸಿದರು.