ಮಡಿಕೇರಿ, ನ. 17: ಮಡಿಕೇರಿ ನಗರಸಭೆಯ ಕಾರ್ಯವೈಖರಿಗೆ ಕನ್ನಡಿ ಹಿಡಿದಂತೆ ಕಾವೇರಿ ಕಲಾಕ್ಷೇತ್ರಕ್ಕೆ ಹೊಂದಿಕೊಂಡಿರುವ ಸುಲಭ ಶೌಚಾಲಯ ಗಬ್ಬೆದ್ದು ದುರ್ನಾತ ಬೀರತೊಡಗಿದೆ. ಈ ಶೌಚಾಲಯದೊಳಗೆ ಸಾರ್ವಜನಿಕರು ಕಾಲಿಡಲು ಸಾಧ್ಯವಾಗದಷ್ಟು ಕೆಟ್ಟ ವಾತಾವರಣ ಎದುರಾಗಿದೆ.
ದಸರಾ ವೇಳೆಯೇ ಸಾರ್ವಜನಿಕ ದೂರುಗಳಿದ್ದು, ಇದುವರೆಗೆ ಯಾರೊಬ್ಬರೂ ಜವಾಬ್ದಾರಿಯಿಂದ ಉತ್ತರಿಸುತ್ತಿಲ್ಲ. ಅನೇಕ ಮಹಿಳೆಯರ ಸಹಿತ ಖುದ್ದಾಗಿ ಸಾರ್ವಜನಿಕರು ನಗರಸಭಾ ಅಧ್ಯಕ್ಷರಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲವೆಂದು ನೊಂದ ಮಹಿಳೆಯರೇ ‘ಶಕ್ತಿ’ಯೊಂದಿಗೆ ಅವ್ಯವಸ್ಥೆಯತ್ತ ಬೊಟ್ಟು ಮಾಡಿದ್ದಾರೆ.
ನಗರಸಭೆಯೊಳಗಿನ ಗುಂಪುಗಾರಿಕೆಯಿಂದಾಗಿ ಸಾರ್ವಜನಿಕ ಕೆಲಸಗಳಿರಲಿ, ಕನಿಷ್ಟ ಕಚೇರಿ ಆವರಣದಲ್ಲೇ ಇರುವ ಹಾಗೂ ಸಾರ್ವಜನಿಕರು ಹಣ ತೆತ್ತು ಬಳಸುತ್ತಿರುವ ಶೌಚಾಲಯ ಕೂಡ ನಿರ್ವಹಣೆಯಿಲ್ಲದೆ ವಾಕರಿಕೆ ಭರಿಸುತ್ತಿದೆ.
ಈ ಬಗ್ಗೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಅವರನ್ನು ‘ಶಕ್ತಿ’ ಸಂಪರ್ಕಿಸಿದಾಗ ತುರ್ತು ಸ್ವಚ್ಛಗೊಳಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. - ಚಿತ್ರ - ವರದಿ : ಟಿಜಿಎಸ್