ಭಾಗಮಂಡಲ, ನ. 16: ಭಾಗಮಂಡಲದಲ್ಲಿ ಕಸ ವಿಲೇವಾರಿ ಮಾಡಲು ಜಾಗವೇ ಇಲ್ಲ. ಭಾಗಮಂಡಲ - ತಲಕಾವೇರಿ ಕ್ಷೇತ್ರಕ್ಕೆ ಇತ್ತೀಚೆಗೆ ಗಾಂಧಿ ಪುರಸ್ಕಾರ ದೊರೆತಿದ್ದು, ಕಸದ ಮುಕ್ತಿಗೆ ಪರಿಹಾರ ಪಡೆಯಲು ಪರದಾಡುವಂತಾಗಿದೆ. ಸಾವಿರಾರು ಭಕ್ತರು ಕ್ಷೇತ್ರಕ್ಕೆ ಆಗಮಿಸುತ್ತಿದ್ದಾರೆ. ಭಕ್ತರ ಕಣ್ಣಿಗೆ ಕಸದ ರಾಶಿ ಎದ್ದು ಕಾಣುತ್ತಿದೆ. ಕ್ಷೇತ್ರದ ಭಾಗಮಂಡಲದಲ್ಲಿ ಕಸದ ರಾಶಿ ತುಂಬಿ ತುಳುಕುತ್ತಿದ್ದು, ಕಸ ವಿಲೇವಾರಿ ಮಾಡಲು ಪಂಚಾಯಿತಿಗೆ ಭಾಗಮಂಡಲದ ಸರ್ಕಾರಿ ಆಸ್ಪತ್ರೆಯ ಹಿಂಭಾಗದ ಪೈಸಾರಿ ಜಾಗದಲ್ಲಿ ಜಾಗ ನಿಗದಿಪಡಿಸಿ ಕಸ ಸುರಿಯಲಾಗುತ್ತಿತ್ತು. ಹಲವು ವರ್ಷಗಳಿಂದ ಟನ್‍ಗಟ್ಟಲೆ ಕಸದ ರಾಶಿ ತುಂಬಿದ್ದು, ಪ್ರತಿವರ್ಷ ಕಸವನ್ನು ಮಣ್ಣಿನಿಂದ ಮುಚ್ಚಿ ಹಾಕಲಾಗುತ್ತಿತ್ತು. ಸರ್ಕಾರದಿಂದ ಕಸ ವಿಲೇವಾರಿ ಘಟಕ ನಿರ್ಮಿಸಲು ಹಣ ಮಂಜೂರಾದರೂ ಕಸದಿಂದ ಸಂಪೂರ್ಣ ಮುಕ್ತಿ ಪಡೆಯಲು ಸಾಧ್ಯವಾಗಿಲ್ಲ. ತಣ್ಣಿಮಾನಿಯಲ್ಲಿ ಒಂದು ವರ್ಷದ ಹಿಂದೆ ಕಸ ವಿಲೇವಾರಿ ಘಟಕಕ್ಕೆ ಭೂಮಿ ಪೂಜೆ ನೆರವೇರಿತ್ತು. ಕಾಮಗಾರಿ ಆರಂಭದ ವೇಳೆಗೆ ಅರಣ್ಯ ಇಲಾಖೆ ತಡೆಯೊಡ್ಡಿತ್ತು. ವನ್ಯಜೀವಿಗಳ ರಕ್ಷಣೆಯ ಹಿನ್ನೆಲೆಯಲ್ಲಿ ಮತ್ತೆ ತಡೆಯಾಗಿದ್ದು, ಆ ಸ್ಥಳವನ್ನು ಕೈಬಿಡಲಾಗಿತ್ತು, ಆನಂತರ ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್ ಅವರೊಂದಿಗೆ ಗ್ರಾಮ ಪಂಚಾಯಿತಿ ಸದಸ್ಯರು ಮನವಿ ಮಾಡಿದ್ದು ಕೋರಂಗಾಲದಲ್ಲಿ ಜಾಗ ಗುರುತಿಸಲಾಯಿತು. ಆದರೆ ಆ ಸ್ಥಳದ ಆಸುಪಾಸಿನಲ್ಲಿ ಬಹಳಷ್ಟು ಮನೆಗಳಿದ್ದು, ಕಾವೇರಿ ನದಿಯೂ ಹರಿಯುತ್ತಿರುವದರಿಂದ ಸಾರ್ವಜನಿಕರು ತಡೆಯೊಡ್ಡಿದ್ದಾರೆ.