ಮಡಿಕೇರಿ, ನ. 15: ಹಲವು ತಿಂಗಳುಗಳಿಂದ ಅಸ್ವಸ್ತರಾಗಿದ್ದು, ಮೈಸೂರು ಜೆ.ಎಸ್.ಎಸ್. ಆಸ್ಪತ್ರೆಯಲ್ಲಿ ಶುಶ್ರೂಷೆ ಪಡೆಯುತ್ತಿದ್ದ ರಾಮಕೃಷ್ಣ ಮಠದ ಹಿರಿಯ ಸನ್ಯಾಸಿ ಜಗದಾತ್ಮಾನಂದಜೀ ಇಂದು ಸಂಜೆ 7.20ಕ್ಕೆ ಶರೀರ ತ್ಯಜಿಸಿದರು. ಎಂಭತ್ತೊಂಭತ್ತು ವಯಸ್ಸಿನಲ್ಲೂ ಆಧ್ಯಾತ್ಮ ಲಹರಿ, ಹಾಸ್ಯ ಚಟಾಕಿ, ಸ್ಪೂರ್ತಿದಾಯಕ ಮಾತುಗಳಲ್ಲಿ ಇತರರನ್ನು ಹುರಿದುಂಬಿಸುತ್ತಿದ್ದ ಅವರು ಕೆಲವು ತಿಂಗಳುಗಳಿಂದ ವೆಂಟಿಲೇಟರ್ ಸಹಾಯದಲ್ಲಿ ಉಸಿರು ನಿಲ್ಲಿಸಿಕೊಂಡಿದ್ದರು.

(ಮೊದಲ ಪುಟದಿಂದ) ತಿಂಗಳಿನಿಂದ ಐ.ಸಿ.ಯು.ನಲ್ಲಿ ಇದ್ದ ಅವರನ್ನು ಇಂದು ಕೋಣೆಗೆ ತರಲಾಗಿದ್ದಿತು. ಪೊನ್ನಂಪೇಟೆ ಶ್ರೀ ರಾಮಕೃಷ್ಣ ಶಾರದಾ ಆಶ್ರಮದ ಅಧ್ಯಕ್ಷ ಶ್ರೀ ಬೋಧಸ್ವರೂಪಾನಂದರಿಗೆ ಆಶೀರ್ವಾದ ಮಾಡಿ, ಹಲವು ತಿಂಗಳ ಬಳಿಕ ಮಾತನಾಡಿದ ಅವರು, ತಾನಿನ್ನು ಗುಣಮುಖ ನಾಗಲಿಕ್ಕಿಲ್ಲ ಎಂದು ಹೇಳಿದರು.

ಶ್ರೀ ಜಗದಾತ್ಮಾನಂದರು ದೇಶದ ವಿವಿಧೆಡೆ, ಹಾಗೂ ಸಿಂಗಾಪುರ, ಶಿಲಾಂಗ್ ರಾಮಕೃಷ್ಣ ಆಶ್ರಮಗಳಲ್ಲಿ ಆಧ್ಯಾತ್ಮಿಕ ಸೇವೆ ಸಲ್ಲಿಸಿದ್ದು, ಸಹಸ್ರಾರು ಅನುಯಾಯಿಗಳನ್ನು ಹೊಂದಿದ್ದಾರೆ.

ಅವರ ಉಪನ್ಯಾಸಗಳಿಗೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಪಾಲುಗೊಳ್ಳುತ್ತಿದ್ದರು. ಅವರು ಬರೆದ ‘ಬದುಕಲು ಕಲಿಯಿರಿ’ ಎಂಬ ಪುಸ್ತಕ ಸಮಾಜದಲ್ಲಿ ಗಣನೀಯ ಪರಿಣಾಮ ಬೀರಿದೆ. ಯುವ ಜನತೆ ಸಾರ್ಥಕ ಬದುಕು ರೂಪಿಸಿಕೊಳ್ಳಲು ಸ್ಪೂರ್ತಿ ದಾಯಕ ಕಥೆಗಳು, ಉದಾಹರಣೆ ಗಳು, ಪರಿಹಾರಗಳೊಂದಿಗೆ ಬಿಡುಗಡೆಗೊಂಡ ‘ಬದುಕಲು ಕಲಿಯಿರಿ’ ಪುಸ್ತಕ ಮೂರು ಲಕ್ಷ ಪ್ರತಿ ಮರು ಮುದ್ರಣವಾಗುವದರೊಂದಿಗೆ ದಾಖಲೆ ರೂಪಿಸಿದೆ. ಇದೇ ಪುಸ್ತಕ ದೇಶದ ಇತರ ಹತ್ತು ಭಾಷೆಗಳಿಗೆ ಭಾಷಾಂತರಗೊಂಡಿರುವದು ಮತ್ತೊಂದು ವಿಶೇಷ. ಪುಸ್ತಕ ಓದಿ ಉತ್ತೇಜಿತರಾದ ವಿದ್ಯಾರ್ಥಿಗಳು, ಹಿರಿಯರು, ಮಹಿಳೆಯರು ಇವರನ್ನು ಮುಖತಃ ಭೇಟಿ ಆಗಲು ದೇಶದ ವಿವಿಧೆಡೆಯಿಂದ ಹುಡುಕಿ ಬರುತ್ತಿದ್ದರು.

ಶ್ರೀ ಜಗತಾದ್ಮಾನಂದರು ಪೊನ್ನಂಪೇಟೆಯ ಆಶ್ರಮ ಅಧ್ಯಕ್ಷರಾಗಿದ್ದಾಗ ಶ್ರೀ ರಾಮಕೃಷ್ಣ ವಿಶ್ವ ಬಾವೈಕ್ಯ ಮಂದಿರ ನಿರ್ಮಾಣ ಮಾಡಿ ಮತ್ತೊಂದು ದಾಖಲೆ ನಿರ್ಮಿಸಿದರು. ದೇಶ ವಿದೇಶಗಳಿಂದ ಮಠದ ಅಭಿಮಾನಿಗಳು, ಸಂತರು, ಭಕ್ತರು 2009ರಲ್ಲಿ ದೇವಾಲಯ ಉದ್ಘಾಟನೆಯಲ್ಲಿ ಭಾಗವಹಿಸಿದ್ದರು.

ಕೆಲವು ವರುಷಗಳಿಂದ ಗಂಟಲು ಕ್ಯಾನ್ಸರ್‍ನಿಂದ ಬಳಲುತ್ತಿದ್ದ ಅವರು, ಆಶ್ರಮದಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದರು. ಈಗಿನ ಅಧ್ಯಕ್ಷ ಬೋಧಸ್ವರೂಪಾನಂದರು ಮತ್ತು ಇತರ ಸನ್ಯಾಸಿಗಳು ಸ್ವಾಮಿಜಿಯನ್ನು ಮಕ್ಕಳಿಗೆ ಆರೈಕೆ ಮಾಡುವಂತೆ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು.

ಜಗದಾತ್ಮಾನಂದರು ಎಲ್ಲ ಧರ್ಮಗಳ ಸಾರಗಳನ್ನು ಅಭ್ಯಸಿಸಿದ್ದು, ಹಿಂದೂ ಧರ್ಮವನ್ನು ಕೊಂಡಾಡು ತ್ತಿದ್ದರು. ಸಮಾಜದಲ್ಲಿ ಧಾರ್ಮಿಕತೆ, ಸಂಸ್ಕøತಿ, ಆಧ್ಯಾತ್ಮಿಕತೆ ಕುಸಿಯುತ್ತಿರುವ ಕುರಿತು ದುಃಖಿಸುತ್ತಿದ್ದರು.

ದಕ್ಷಿಣ ಕನ್ನಡ ಜಿಲ್ಲೆಯವರಾದ ಸ್ವಾಮೀಜಿ ಹಿರಿಯ ಸನ್ಯಾಸಿ ಯತೀಶ್ವರಾನಂದರಿಂದ ತಾರುಣ್ಯ ದಲ್ಲೇ ದೀಕ್ಷೆ ಪಡೆದು ಸನ್ಯಾಸ ಆರಂಭಿಸಿದರು. ಅವರ ಸಾಹಿತ್ಯ ಸೇವೆಗೆ 2004ರಲ್ಲಿ ಆರ್ಯ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.-ಅನಂತ್