ಮಡಿಕೇರಿ, ನ. 15: ಕೊಡಗಿನ ಸುಗ್ಗಿ ಹಬ್ಬ ಎಂದೇ ಖ್ಯಾತಿವೆತ್ತಿರುವ ಜಿಲ್ಲೆಯಲ್ಲಿನ ಹಬ್ಬಗಳಲ್ಲಿ ಪ್ರಮುಖವಾಗಿರುವ ಧಾನ್ಯಲಕ್ಷ್ಮಿಯನ್ನು ಮನೆ ತುಂಬಿಸಿಕೊಳ್ಳುವ ಕಾರ್ಯಕ್ರಮ ಇನ್ನೇನು ಸಮೀಪಿಸುತ್ತಿದೆ. ಈ ಹುತ್ತರಿ ಹಬ್ಬಕ್ಕೆ ಸಂಬಂಧಿಸಿದಂತೆ ಕದಿರು ತೆಗೆಯುವ ದಿನಾಂಕ ನಿಗದಿ ಹಾಗೂ ಇತರ ಕಟ್ಟುಪಾಡುಗಳು ಶ್ರೀ ಇಗ್ಗುತಪ್ಪ ದೇಗುಲದಲ್ಲಿ ನಿಶ್ಚಯವಾಗಿರುತ್ತದೆ. ಅಮ್ಮಂಗೇರಿ ಜ್ಯೋತಿಷ್ಯರು ಈ ದಿನಾಂಕವನ್ನು ನಿಗದಿಪಡಿಸುತ್ತಾರೆ.ಆ ಪ್ರಕಾರ ರೋಹಿಣಿ ಶುಭ ನಕ್ಷತ್ರದಲ್ಲಿ ಕದಿರು ತೆಗೆಯುವದು ಸಂಪ್ರದಾಯವಾಗಿದೆ. ಆದರೆ ರೋಹಿನಿ ನಕ್ಷತ್ರದ ಅವಧಿಯ ಕಾರಣ ದಿಂದಾಗಿ ಕೆಲವು ವರ್ಷಗಳಿಂದ ಈಚೆಗೆ ಕದಿರು ತೆಗೆಯುವ ಸಂಪ್ರದಾಯದಲ್ಲಿ ಬದಲಾವಣೆ ಕಂಡುಬರುತ್ತಿರುವದು ಒಂದು ಬೆಳವಣಿಗೆಯಾಗಿದೆ.ಶ್ರೀ ಇಗ್ಗುತಪ್ಪ ದೇವಾಲಯದಲ್ಲಿ ರಾತ್ರಿ ನಿಗದಿತ ಸಮಯದಲ್ಲಿ ಕದಿರು ತೆಗೆದು ಬಳಿಕ ಅವರವರ ಮನೆಗಳಲ್ಲಿ ಕದಿರು ತೆಗೆಯಲಾಗುತ್ತದೆ. ಈ ಕ್ರಮ ಇಗ್ಗುತಪ್ಪ ದೇವಾಲಯ ವ್ಯಾಪ್ತಿಯೂ ಸೇರಿ ಬಹುತೇಕ ಕಡೆಗಳಲ್ಲಿ ಆಚರಿಸಲ್ಪಡುತ್ತಿದೆ. ಆದರೆ ದಕ್ಷಿಣ ಕೊಡಗಿನ ಹಲವು ಭಾಗಗಳಲ್ಲಿ ಬೆಳಿಗ್ಗೆ ಕದಿರು ತೆಗೆಯುವ ಸಂಪ್ರದಾಯವೂ ಹಲವಾರು ವರ್ಷಗಳಿಂದ ನಡೆದು ಕೊಂಡು ಬರುತ್ತಿದೆ. ಈ ವಿಭಾಗದಲ್ಲಿ ಅಲ್ಲಿನ ತಿರುನೆಲ್ಲಿ ಪೆಮ್ಮಯ್ಯ ದೇವರ ಸನ್ನಿಧಿಯ ಕಟ್ಟುಪಾಡಿನಂತೆ ಸಮಯ ನಿಶ್ಚಯವಾಗುತ್ತಿದೆ.

ಬಹುತೇಕ ಕಡೆಗಳಲ್ಲಿ ಆಯಾ ಊರು-ನಾಡಿನ ದೇವಾಲಯಗಳಲ್ಲಿ ಸಾಮೂಹಿಕವಾಗಿ ಅಲ್ಲಿನ ಜನರು ಸೇರಿ ಕದಿರು ತೆಗೆದು ದೇವರಿಗೆ ಅರ್ಪಿಸಿ ನಂತರ ಅವರವರ ಮನೆಗಳಲ್ಲಿ ಹಬ್ಬ ಆಚರಣೆ ಮಾಡುತ್ತಾರೆ. ಆದರೆ ರಾತ್ರಿ ಕದಿರು ತೆಗೆಯುವ ಕ್ರಮ ಹಾಗೂ ಹಗಲಿನ ವೇಳೆ ಕದಿರು ತೆಗೆಯುವ ಕೈಂಕರ್ಯ ಜರುಗುವದು ರೋಹಿಣಿ ನಕ್ಷತ್ರದಲ್ಲೇ ಎಂಬದು ಇಲ್ಲಿ ಗಮನಾರ್ಹ.

ಈ ಕಾರಣದಿಂದಲೇ ದಕ್ಷಿಣ ಕೊಡಗಿನಲ್ಲಿ ಹಗಲಿನಲ್ಲಿ ಕದಿರು ತೆಗೆಯುವವರು ಬಹುಶಃ ಶ್ರೀ ಇಗ್ಗುತಪ್ಪ ದೇವಾಲಯದಲ್ಲಿನ ಸಂಪ್ರದಾಯಕ್ಕೆ

(ಮೊದಲ ಪುಟದಿಂದ) ಮುಂಚಿತವಾಗಿ ಕದಿರು ತೆಗೆಯುವ ಪದ್ಧತಿ ಅನುಸರಿಸುತ್ತಿದ್ದುದು ಈ ಹಬ್ಬಕ್ಕೆ ಸಂಬಂಧಿಸಿದಂತೆ ಗೊಂದಲ ಗಳಿವೆಯೇ ಎಂಬ ಪ್ರಶ್ನೆಯನ್ನು ಇದರ ಅರಿವು ಇಲ್ಲದವರಲ್ಲಿ ಮೂಡಿಸುತ್ತದೆ.

ಬಹುತೇಕ ವರ್ಷಗಳಲ್ಲಿ ರೋಹಿಣಿ ನಕ್ಷತ್ರ ಆರಂಭಗೊಂಡು ಮರುದಿನ ಬೆಳಿಗ್ಗೆ ಮುನ್ನವೇ ಕೊನೆಗೊಳ್ಳುತ್ತದೆ. ಇಗ್ಗುತಪ್ಪ ದೇಗುಲದಲ್ಲಿ ರಾತ್ರಿ ಕದಿರು ತೆಗೆದರೂ ಮರುದಿನ ಬೆಳಿಗ್ಗೆ ತೆಗೆಯುವವರಿಗೆ ರೋಹಿನಿ ಶುಭ ನಕ್ಷತ್ರ ಲಭಿಸುತ್ತಿರಲಿಲ್ಲ. ಇದರಿಂದ ಮುಂಚಿತವಾಗಿ ಆಯಾ ವಿಭಾಗದಲ್ಲಿನ ಕಟ್ಟುಪಾಡಿನಂತೆ ಈ ಕ್ರಮ ಅನುಸರಿಸಲಾಗುತ್ತಿದೆ.

ಪ್ರಸಕ್ತ ವರ್ಷ... ಮರುದಿನವೂ ರೋಹಿಣಿ ನಕ್ಷತ್ರ

ದಕ್ಷಿಣ ಕೊಡಗಿನಲ್ಲಿ ಹಗಲಿನ ವೇಳೆಯಲ್ಲಿ ಕದಿರು ತೆಗೆಯುವವರಿಗೆ 2019ರ ಈ ವರ್ಷದಲ್ಲಿ ಇಗ್ಗುತಪ್ಪ ದೇವಾಲಯದಲ್ಲಿ ಕದಿರು ತೆಗೆಯುವ ದಿನಾಂಕದ ಮರುದಿನದಂದು ಬೆಳಿಗ್ಗೆಯೂ, ಈ ಬಾರಿ ರೋಹಿಣಿ ನಕ್ಷತ್ರ ಲಭ್ಯವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಳೆದ ವರ್ಷಗಳಂತೆ ಈ ಬಾರಿ ಹೆಚ್ಚು ಗೊಂದಲ ಉದ್ಭವಿಸುತ್ತಿಲ್ಲ ಎಂಬದು ವಿಶೇಷವಾಗಿದೆ.

ನವೆಂಬರ್ 23 ರಂದು ಸಂಜೆ 4.30 ರಿಂದ ಆರಂಭಗೊಳ್ಳುವ ರೋಹಿಣಿ ನಕ್ಷತ್ರ ತಾ. 24ರ ಸಂಜೆ 4 ಗಂಟೆಯ ತನಕವೂ ಪಂಚಾಂಗದ ಪ್ರಕಾರ ಮುಂದುವರಿಯುತ್ತಿದೆ. ಇದರಿಂದಾಗಿ ಹಗಲು ಕದಿರು ತೆಗೆಯುವ ಪದ್ಧತಿ ಅನುಸರಿಸುತ್ತಿರುವ ವರು ಈ ಬಾರಿ ತಾ. 24 ರಂದು ಬೆಳಿಗ್ಗೆಯೇ ಹಬ್ಬಾಚರಣೆಯ ನಿರ್ಧಾರಕ್ಕೆ ಬಂದಿದ್ದಾರೆ.

ದಕ್ಷಿಣ ಕೊಡಗಿನ ಎಲ್ಲಾ ಕಡೆಗಳಲ್ಲಿಯೂ ಬೆಳಿಗ್ಗೆ ಕದಿರು ತೆಗೆಯ ಲಾಗುವದಿಲ್ಲ. ಆದರೆ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಪದ್ಧತಿ ಮುಂದುವರಿಯುತ್ತಿದೆ. ಮುಗುಟಗೇರಿ, ಚಿಕ್ಕಮುಂಡೂರು, ತೂಚಮಕೇರಿ, ಬಲ್ಯಮುಂಡೂರು, ಕೋಟೂರು, ಬೆಕ್ಕೆಸೊಡ್ಲೂರು, ಕಾನೂರು, ಕೋತೂರು, ಕುಟ್ಟ, ನಾಲ್ಕೇರಿ, ಬಾಳೆಲೆ, ಶ್ರೀಮಂಗಲ, ಟಿ. ಶೆಟ್ಟಿಗೇರಿ, ಹರಿಹರ, ನೆಮ್ಮೆಲೆಯ ಕೆಲವು ಭಾಗಗಳಲ್ಲಿ ಸೇರಿದಂತೆ ಹಲವೆಡೆ ಬೆಳಿಗ್ಗೆ ಕದಿರು ತೆಗೆಯುವ ಕ್ರಮವಿದೆ.

ಇಲ್ಲಿಯೂ ಕೆಲವರು ಇತ್ತೀಚಿನ ದಿನಗಳಲ್ಲಿ ರಾತ್ರಿ ಕದಿರು ತೆಗೆಯುವ ಕ್ರಮ ಅನುಸರಿಸುವ ಬದಲಾವಣೆಯೂ ಕೆಲವೆಡೆಗಳಲ್ಲಿ ಕಂಡುಬರುತ್ತಿದೆ. ಆಯಾ ದೇವಾಲಯಗಳಲ್ಲಿ ಇದಕ್ಕೆಂದೇ ನಿರ್ದಿಷ್ಟ ಗದ್ದೆಗಳನ್ನು ನೆಡಲಾಗುತ್ತದೆ. ಇಲ್ಲಿ ಅರ್ಚಕರೇ ಕದಿರು ಕುಯ್ಯುವ ಸಂಪ್ರದಾಯವಿದೆ.

ತಾ. 23 ರಂದು...

ಪ್ರಸಕ್ತ ವರ್ಷ ಶ್ರೀ ಇಗ್ಗುತಪ್ಪ ದೇಗುಲದಲ್ಲಿ ಈಗಾಗಲೇ ನಿಶ್ಚಯವಾ ಗಿರುವಂತೆ ಇಗ್ಗುತಪ್ಪ ದೇವಳದಲ್ಲಿ ರಾತ್ರಿ 7.15ಕ್ಕೆ ನೆರೆಕಟ್ಟುವದು, 8.15ಕ್ಕೆ ಕದಿರು ತೆಗೆಯುವದು ಹಾಗೂ 9.30ಕ್ಕೆ ಭೋಜನಕ್ಕೆ ಸರಿಯಾದ ಸಮಯ ಎಂದು ಸಮಯ ನಿಗದಿಪಡಿ ಸಲಾಗಿದೆ.

ತಿರುನೆಲ್ಲಿ ಪೆಮ್ಮಯ್ಯ ಸನ್ನಿಧಿಯ ಕಟ್ಟುಪಾಡಿನಂತೆ ಹಗಲು ಕದಿರು ತೆಗೆಯುವವರು ತಾ. 24 ರಂದು ರೋಹಿಣಿ ನಕ್ಷತ್ರದಲ್ಲಿ ಕದಿರು ತೆಗೆಯಬಹುದು ಎಂದು ಮಾಚಿಮಾಡ ಕುಟುಂಬದ ಅಧ್ಯಕ್ಷರಾದ ಎಂ.ಕೆ. ಡಾಲಿ ಮಂದಣ್ಣ ಅವರು ಈಗಾಗಲೇ ಮಾಹಿತಿ ನೀಡಿದ್ದಾರೆ.