ಮಡಿಕೇರಿ, ನ. 15: ಉಡುಪಿ ಪಲಿಮಾರು ಮಠದಿಂದ ಕೊಡಗಿನ ಮಕ್ಕಂದೂರು ವ್ಯಾಪ್ತಿಯ ಸಂತ್ರಸ್ತರಿಗಾಗಿ ಅಂದಾಜು ರೂ. 2 ಕೋಟಿ ವೆಚ್ಚದಲ್ಲಿ ಪುನರ್ವಸತಿಗೆ ಕೊಡುಗೆ ನೀಡಲು ಮುಂದಾಗಿರುವದಾಗಿ ಮಠದ ಅನುಯಾಯಿಗಳು ತಿಳಿಸಿದ್ದಾರೆ. ಇಂದು ಪತ್ರಿಕಾ ಭವನದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಪ್ರಹ್ಲಾದ್ ಆಚಾರ್ಯ ಮಾತನಾಡುತ್ತಾ, ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಅವರು ಸಂತ್ರಸ್ತರ ಪುನರ್ವಸತಿಗೆ ರೂ. 2 ಕೋಟಿ ಹೊಂದಿಸಲು ಒಲವು ತೋರಿರುವರಲ್ಲದೆ, ಈ ಸಂಬಂಧ ಕೊಡಗು ಜಿಲ್ಲಾಧಿಕಾರಿಗೆ ಪತ್ರ ಬರೆದಿರುವದಾಗಿ ವಿವರಿಸಿದರು.ಜಿಲ್ಲಾಡಳಿತ ಹಾಗೂ ಸರಕಾರದಿಂದ ಕಲ್ಪಿಸುವ ಪುನರ್ವಸತಿ ಯೋಜನೆಗೆ ಮಠದ ಸಹಯೋಗದಿಂದ ಸಮುದಾಯ ಭವನ, ಭಜನಾಮಂದಿರ, ಪಶು ಚಿಕಿತ್ಸಾಲಯ ಇತ್ಯಾದಿ ಸೇವಾರೂಪದಲ್ಲಿ ಕೊಡುಗೆ ನೀಡುವ ಇಂಗಿತ ವ್ಯಕ್ತಪಡಿಸಿದರು. ಅಲ್ಲದೆ ಅಂಗನವಾಡಿಗೂ ಕೊಡುಗೆ ಕಲ್ಪಿಸಲು ಬಯಸಿರುವದಾಗಿ ವಿವರಿಸಿದರು.

(ಮೊದಲ ಪುಟದಿಂದ) ಇನ್ನೋರ್ವ ಪ್ರತಿನಿಧಿ ಬಾಲಾಜಿ ರಾಘವೇಂದ್ರ ಆಚಾರ್ಯ ಮಾತನಾಡಿ, ಜಿಲ್ಲಾಡಳಿತ ಯಾವ ರೀತಿ ಸಹಯೋಗ ಬಯಸಿದರೂ, ಸ್ವಾಮೀಜಿಗಳ ಆಶಯದಂತೆ ಮಠದಿಂದ ನೆರವು ಒದಗಿಸುವ ಇಂಗಿತ ವ್ಯಕ್ತಪಡಿಸಿದರು. ಈ ಸಂಬಂಧ ಮುಳಿಯ ಕೇಶವ ಪ್ರಸಾದ್ ಮಾತನಾಡಿ, ಮಠದ ಪರ್ಯಾಯ ಪೀಠಾಧೀಶರು ಕೊಡಗಿನ ಸಂತ್ರಸ್ತರ ನೆರವಿಗೆ ಕಳಕಳಿ ಹೊಂದಿದ್ದು, ಸ್ವಯಂ ಸೇವಾ ಸಂಸ್ಥೆಗಳ ಜತೆಗೂಡಿ ಸೇವೆಗೆ ಮಠದಿಂದ

ಒಲವು ಹೊಂದಿರುವದಾಗಿ ವಿವರಿಸಿದರು. ಗುತ್ತಿಗೆದಾರ ರವೀಂದ್ರ ರೈ, ನರಿಕೊಂಬು ಪ್ರಕಾಶ್ ಕಾರಂತ್, ರಮೇಶ್ ರಾವ್ ಮುಂತಾದವರು ಈಗಾಗಲೇ ಮಠದ ಪ್ರತಿನಿಧಿಗಳ ಸಹಿತ ಕರ್ಣಂಗೇರಿಯ ನವಗ್ರಾಮ ಯೋಜನೆ ನಿವೇಶನ ಇತ್ಯಾದಿ ಪರಿಶೀಲಿಸಿರುವದಾಗಿಯೂ ಮಾಹಿತಿ ನೀಡಿದರು.

ಭವಿಷ್ಯದಲ್ಲಿ ಜಿಲ್ಲಾಧಿಕಾರಿಗಳ ಅಭಿಪ್ರಾಯ ಪಡೆದು ಮಠದ ಯೋಜನೆ ಅನುಷ್ಠಾನಕ್ಕೆ ಕ್ರಮವಹಿಸಲಾಗುವದು ಎಂದು ವಿವರಿಸಿದರು. ಸಂಬಂಧಿಸಿದ ಮೇಲಿನ ಪ್ರಮುಖರು ಗೋಷ್ಠಿಯಲ್ಲಿ ಹಾಜರಿದ್ದರು.