ಮಡಿಕೇರಿ, ನ. 15: ಸುಮಾರು 8 ತಿಂಗಳ ಹಿಂದೆ ಪರಿಶಿಷ್ಟ ಪಂಗಡದ ವ್ಯಕ್ತಿಯೋರ್ವ ಕೊಲೆಗೀಡಾದ ಶಂಕಿತ ಪ್ರಕರಣವೊಂದರ ಸಂಬಂಧ, ಮೃತರ ಪತ್ನಿಗೆ ಸಮಾಜ ಕಲ್ಯಾಣ ಇಲಾಖೆ ಯಿಂದ ಮಾನವೀಯ ನೆಲೆಯಲ್ಲಿ ತುರ್ತಾಗಿ ನೀಡಬೇಕಿದ್ದ ರೂ. 4.25 ಲಕ್ಷ ಮೊತ್ತದ ಮೊದಲ ಕಂತಿನ ಪರಿಹಾರವನ್ನು ಸಕಾಲದಲ್ಲಿ ಪಾವತಿಸಿದೇ ಲಂಚಕ್ಕಾಗಿ ಬೇಡಿಕೆ ಇಡುವÀದರೊಂದಿಗೆ, ಇಂದು ನಗದು ರೂ. 20 ಸಾವಿರ ಲಂಚ ಸ್ವೀಕರಿಸುವ ವೇಳೆ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಮಾಯದೇವಿ ಗಲಗಲಿ ಲೋಕಾಯುಕ್ತ ಬಲೆಗೆ ಕಚೇರಿಯಲ್ಲೇ ಸಿಕ್ಕಿಬಿದ್ದಿದ್ದಾರೆ. ಇವರೊಂದಿಗೆ ಕಚೇರಿ ಸಿಬ್ಬಂದಿಗಳಾದ ಕೆ.ಬಿ. ಮೋಹನ್ ಹಾಗೂ ಗೌಡಪ್ಪ ತೇಲಿ ಎಂಬವರನ್ನು ಕೂಡ ಲೋಕಾಯುಕ್ತ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ.ಕಳೆದ ಮಾರ್ಚ್ 24 ರಂದು ಮೇಕೇರಿಯ ಶಕ್ತಿ ನಗರ ನಿವಾಸಿ, ಗಣೇಶ್ ಎಂಬವರು ಮೂರ್ನಾಡು ಬಳಿಯ
ಬಲಮುರಿಯ
ನಿವಾಸಿ
ಸೂರಜ್
ಎಂಬವರ
ಲಾರಿ ಚಾಲಕ ನಾಗಿದ್ದು, ಮಾಲೀಕನೊಂದಿಗೆ ವೇತನ ಸಂಬಂಧ ಕಲಹ ನಡೆದು ಕೊಲೆ ಗೀಡಾದ ಶಂಕೆಯೊಂದಿಗೆ ಕಾವೇರಿ ಹೊಳೆಯಲ್ಲಿ ಗಣೇಶ್ ಶವ ಪತ್ತೆ ಯಾಗಿತ್ತು. ಈ ಬಗ್ಗೆ ನಾಪೋಕ್ಲು ಠಾಣೆಯಲ್ಲಿ ಮೃತನ ಅತ್ತೆ ಕಮಲ ಎಂಬವರು ತಾ. 26.3.2018 ರಂದು ದೂರು ನೀಡಿದ್ದರು. ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಶಂಕಿತ ಪ್ರಕರಣದ ಮೊಕದ್ದಮೆ ಸಹಿತ ಡಿವೈಎಸ್‍ಪಿ ಕೆ.ಎಸ್. ಸುಂದರ್‍ರಾಜ್ ನೇತೃತ್ವದಲ್ಲಿ ತನಿಖೆಯೊಂದಿಗೆ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಕೆಯಾಗಿದೆ.
ಮೃತ ಗಣೇಶ್ ಪರಿಶಿಷ್ಟ ಪಂಗಡಕ್ಕೆ ಸೇರಿರುವ ಹಿನ್ನೆಲೆಯಲ್ಲಿ ಈ ಕುಟುಂಬಕ್ಕೆ ರೂ. 4.25 ಲಕ್ಷ ಮೊತ್ತದ ಮೊದಲ ಕಂತಿನ ಪರಿಹಾರವನ್ನು ಪೊಲೀಸ್ ವರದಿ ಆಧಾರಿಸಿ ಸಮಾಜ ಕಲ್ಯಾಣ ಇಲಾಖೆಯಿಂದ ತುರ್ತಾಗಿ ಮೃತನ ಪತ್ನಿ ನಳಿನಾಕ್ಷಿ ಎಂಬವರಿಗೆ ನೀಡ ಬೇಕಿತ್ತು. ಆದರೆ ನತದೃಷ್ಟೆಗೆ ಪರಿಹಾರ ಕಲ್ಪಿಸದ ಅಧಿಕಾರಿ ಮಾಯದೇವಿ ಗಲಗಲಿ ಆರಂಭಿಕವಾಗಿ ರೂ. 40 ಸಾವಿರಕ್ಕೆ ಬೇಡಿಕೆ ಇರಿಸಿದಲ್ಲದ್ದೆ, ಅನಂತರದಲ್ಲಿ ರೂ. 25 ಸಾವಿರಕ್ಕೆ ಸಮ್ಮತಿಸಿದಾಗಿ ಮಾಹಿತಿ ಲಭಿಸಿದೆ.
(ಮೊದಲ ಪುಟದಿಂದ) ಈ ಸಂಬಂಧ ದೂರುದಾರಳಾದ ನಳಿನಾಕ್ಷಿಯೊಂದಿಗೆ ಆರೋಪಿತ ಅಧಿಕಾರಿ ಮೊಬೈಲ್ ಮೂಲಕ ಲಂಚದ ಹಣಕ್ಕಾಗಿ ನಡೆಸಿರುವ ಸಂಭಾಷಣೆ ಇತ್ಯಾದಿಯನ್ನು ಲೋಕಾಯುಕ್ತ ಅಧಿಕಾರಿಗಳು ಕಲೆ ಹಾಕುವದರೊಂದಿಗೆ ಇಂದು ಸಂಜೆ ಲಂಚ ಸ್ವೀಕರಿಸುವ ಸಂದರ್ಭ ಹಠಾತ್ ಧಾಳಿ ನಡೆಸಿದ್ದಾರೆ.
ಆ ವೇಳೆಗೆ ಕಚೇರಿಯ ಸಿಬ್ಬಂದಿ ಮೂಲಕ ದೂರುದಾರಳಾದ ನಳಿನಾಕ್ಷಿಯಿಂದ ನಗದು ರೂ. 20 ಸಾವಿರ ಪಡೆಯುತ್ತಿದ್ದ ಬೆನ್ನಲ್ಲೇ ಲೋಕಾಯುಕ್ತ ಡಿವೈಎಸ್‍ಪಿ ಪೂರ್ಣಚಂದ್ರ ತೇಜಸ್ವಿ ಹಾಗೂ ಸಿಬ್ಬಂದಿಗಳು ಬಲೆ ಬೀಸಿ ಆರೋಪಿತ ಅಧಿಕಾರಿ ಸಹಿತ ಇನ್ನಿಬ್ಬರನ್ನು ವಶಕ್ಕೆ ಪಡೆದಿದ್ದಾರೆ. ರಾತ್ರಿ ಬಹುಹೊತ್ತಿನವರೆಗೂ ಈ ಸಂಬಂಧ ತನಿಖೆ ಮುಂದುವರಿಸಿದ ಅಧಿಕಾರಿಗಳು ಆರೋಪಿತರ ಹೇಳಿಕೆ ಸಹಿತ ಸಾಕ್ಷ್ಯ ಪಡೆದಿದ್ದಾರೆ.
ಮೈಸೂರು ಲೋಕಾಯುಕ್ತ ಅಧೀಕ್ಷಕ ಶೇಖರ್ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ಸಂದರ್ಭ ಇನ್ಸ್‍ಪೆಕ್ಟರ್ ಶೇಖರ್, ಸಿಬ್ಬಂದಿಗಳಾದ ಲೋಹಿತ್, ದೀಪಿಕಾ, ದಿನೇಶ್, ರಾಜೇಶ್, ಮೋಹನ್, ಸುರೇಶ್, ಸಜನ್, ಪ್ರವೀಣ್ ಮೊದಲಾದವರು ಪಾಲ್ಗೊಂಡಿದ್ದರು.