ವಿಶ್ವ ಮಟ್ಟದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ತನ್ನ ಸ್ವಂತಿಕೆ ಯಿಂದ ಅತಿ ದೊಡ್ಡ ಸ್ವಯಂ ಸೇವಾ ಸಂಘಟನೆಯೆಂಬ ಹೆಗ್ಗಳಿಕೆ ಪಡೆದಿದೆ. ಭಾರತ ಮಾತ್ರವಲ್ಲದೆ ವಿಶ್ವ ರಾಷ್ಟ್ರಗಳ ಎಲ್ಲೆಲ್ಲಿ ಹಿಂದೂಗಳು ನೆಲೆಸಿದ್ದಾರೆಯೇ ಅಲ್ಲೆಲ್ಲ ಸಂಘವು ವಿಭಿನ್ನ ಹೆಸರು ಗಳಿಂದ ತನ್ನ ಚಟುವಟಿಕೆಗಳಲ್ಲಿ ನಿರತವಾಗಿದೆ. ಪ್ರಮುಖವಾಗಿ ವ್ಯಕ್ತಿ, ಕುಟುಂಬ, ಸಮಾಜ, ರಾಷ್ಟ್ರ ಹಾಗೂ ವಿಶ್ವ ಬಂಧುತ್ವದ ಬೆಸುಗೆಯಾಗಿ ‘‘ಲೋಕಾ ಸಮಸ್ತ ಸುಖಿನೋ ಭವಂತು’’ ಎಂಬ ಧ್ಯೇಯ ಪಥದಲ್ಲಿ ಸಂಘಕಾರ್ಯ ಸಾಗಿದೆ.

1925ರಲ್ಲಿ ಮಹಾರಾಷ್ಟ್ರದ ನಾಗಪುರದಲ್ಲಿ ಹುಟ್ಟು ಸ್ವಾತಂತ್ರ್ಯ ಹೋರಾಟಗಾರ, ಲೋಕಮಾನ್ಯ ಬಾಲಗಂಗಾಧರ ತಿಲಕರ ಕಟ್ಟಾಳುವಾಗಿದ್ದ ಡಾ. ಕೇಶವ ಬಿಲಿರಾಂ ಹೆಡ್ಗೇವಾರ್ ಸಂಘವನ್ನು ಪ್ರಾರಂಭಿಸಿದರು. ನಾಗಪುರದ ಮೋಹಿತೆವಾಡ (ನೀಲಸಿಟಿ) ಶಾಲಾ ಆವರಣದಲ್ಲಿ ವಿಜಯ ದಶಮಿಯಂದು ಹತ್ತಾರು ತರುಣರ ಉಪಸ್ಥಿತಿಯಲ್ಲಿ ಆರಂಭಗೊಂಡ ಸಂಘಟನೆ ಇಂದು ತನ್ನ ಚಿಂತನ-ಮಂಥನ ಹಾಗೂ ಕಾರ್ಯ ಕ್ಷಮತೆಯಿಂದ ವಿಶ್ವದ ಆಗು-ಹೋಗುಗಳಲ್ಲಿ ತನ್ನ ಛಾಪು ಮೂಡಿಸುವಂತಾಗಿದೆ.

ರಾಷ್ಟ್ರ, ಧರ್ಮ, ಸಂಸ್ಕøತಿ, ಹಿಂದುತ್ವದ ಆಳ ಅಧ್ಯಯನದೊಂದಿಗೆ ಭಾರತೀಯ ಜೀವನ ಮೌಲ್ಯಗಳ ಪಥದಲ್ಲಿ ಸಂಘಟಿತ ಸ್ವರೂಪವನ್ನು ಪಡೆದುಕೊಂಡಿದೆ. ವಿಶೇಷವಾಗಿ ಇಂದಿನ ಭಾರತದ ಆಗು-ಹೋಗುಗಳಲ್ಲಿ ಸಂಘದ ಸ್ವಯಂ ಸೇವಕರು ನಿರ್ಣಾಯಕ ಪಾತ್ರವಹಿಸುತ್ತಿರುವದು ದೃಢಪಟ್ಟಿದೆ.

ಕೊಡಗಿನಲ್ಲಿ ಹೆಜ್ಜೆ : ಆರು ದಶಕಗಳ ಹಿಂದೆ ಅಪ್ಪಟ ದೇಶ ಭಕ್ತರ ನಾಡು ಕೊಡಗಿನಲ್ಲಿ ಸಂಘ ಪ್ರವೇಶಿಸುವಂತಾಯಿತು. ಆರೆಸ್ಸೆಸ್ ಸಂಸ್ಥಾಪಕ ಡಾ. ಹೆಡ್ಗೇವಾರ್ ಸಹವರ್ತಿ ಯಾ. ಕೃ. ಜೋಷಿ ಅವರು ಕರ್ನಾಟಕದಲ್ಲಿ ಸಂಘ ಕಾರ್ಯ ಆರಂಭಿಸಿದವರು. 1940ರ ದಶಕದಲ್ಲಿ ಕರುನಾಡಿನಲ್ಲಿ ಸಂಘದ ಚಟುವಟಿಕೆ ಆರಂಭಗೊಂಡರೆ 1950ರ ಬಳಿಕ ಮೆಲ್ಲನೆ ಕೊಡಗಿನಲ್ಲಿ ಹೆಜ್ಜೆ ಇರಿಸವಂತಾಯಿತು.

ಅನಂತರದ ವರ್ಷಗಳಲ್ಲಿ ಬೆಂಗಳೂರಿನ ತರುಣ, ಇಂದಿನ ಹಿರಿಯ ಸ್ವಯಂ ಸೇವಕ ಕೃ. ನರಹರಿ, ಮಂಗಳೂರು ಮೂಲದ ವಿನಾಯಕ ಶೆಣೈ, ಶಿವರಾಂ ಮುಂತಾದವರ ಪ್ರಯತ್ನದಿಂದ ದಕ್ಷಿಣ ಕನ್ನಡ, ಕೊಡಗಿನಲ್ಲಿ ಸಂಘ ಕಾರ್ಯ ಪಸರಿಸುವಂತಾಯಿತು. 1964ರ ಕಾಲಘಟ್ಟದಲ್ಲಿ ವೀರಾಜಪೇಟೆ ಕ್ಷೇತ್ರದಿಂದ ಜನ ಶಂಘದ ಶಾಸಕರಾಗಿ ಲೋಕಯ್ಯ ನಾಯಕ್ ಗೆಲುವು ಸಾಧಿಸಿದ್ದು, ಸಂಘ ಶಕ್ತಿಯಿಂದಲೇ ಎನ್ನುವದು ನಿರ್ವಿವಾದ ಸಂಗತಿ.

ಸುಂಟಿಕೊಪ್ಪ ಬಳಿಯ ನಾಕೂರುವಿನಲ್ಲಿ ದಕ್ಷಿಣ ಕನ್ನಡ ಮೂಲದ ಸೋಮಪ್ಪ ಎಂಬವರು ಶಾಖಾ ಚಟುವಟಿಕೆ ಆರಂಭಿಸಿದ್ದು, ಆ ಕಾಲಘಟ್ಟದಲ್ಲಿ ಅಂದಿನ ಸಂಘದ ಸರಸಂಘ ಚಾಲಕರಾಗಿದ್ದ ಮಾಧವ ಸದಾಶಿವ ಗೋಳ್ವಳ್‍ಕರ್ (ಗುರೂಜಿ) ಕೊಡಗು ಪ್ರವಾಸ ಹಮ್ಮಿಕೊಂಡು ಸಂಘ ಕಾರ್ಯಕ್ಕೆ ವೇಗ ನೀಡಿದ್ದರು. ಗುಂಡುಗುಟ್ಟಿ ಗೋಪಾಲಕೃಷ್ಣ ಗುರೂಜಿ ಅವರನ್ನು ಮೈಸೂರಿನಿಂದ ತಮ್ಮ ಕಾರಿನಲ್ಲಿ ಮಡಿಕೇರಿಗೆ ಕರೆ ತಂದಿದ್ದರು. ಗುರೂಜಿ ಮಡಿಕೇರಿ ಪಾಂಡಂಡ ಭವನದ ದಿ. ಚಂಗಪ್ಪ ನಿವಾಸದಲ್ಲಿ ಉಳಿದು ಕೊಂಡಿದ್ದರು.

ಆ ವೇಳೆಗೆ ಕೊಡಗಿನಲ್ಲಿ ಸಂಘಕಾರ್ಯಕ್ಕೆ ವೇಗ ಲಭಿಸಿದ್ದು, ಕೊಡಗು ಜಿಲ್ಲಾ ಸಂಘಚಾಲಕರಾಗಿ ಉದ್ಯಮಿ ಸಿ. ವಿ. ಸದಾಶಿವರಾವ್ ಬಹು ವರ್ಷಗಳ ಕಾಲ (ಜೀವಿತಾವಧಿ) ಆ ಹೊಣೆಗಾರಿಕೆ ನಿರ್ವಹಿಸಿದರು. ಅನಂತರದಲ್ಲಿ ಮಚ್ಚಾರಂಡ ಮಣಿ ಕಾರ್ಯಪ್ಪ ಮುಂದುವರಿದಿದ್ದರು. ವರ್ಷಗಳು ಉರುಳಿದಂತೆ ಕೊಡಗಿನ ಗ್ರಾಮ-ಗ್ರಾಮಗಳಿಗೆ ಸಂಘ ಕಾರ್ಯ ವಿಸ್ತಾರಗೊಂಡು ಪ್ರತಿ ಹಳ್ಳಿಗೂ ಶಾಖಾ ಚಟುವಟಿಕೆ ತಲಪುವಂತಾಯಿತು. ಪರಿಣಾಮ ತುರ್ತು ಪರಿಸ್ಥಿತಿ ಸಂದರ್ಭ ಕೊಡಗಿನಲ್ಲಿ ಅನೇಕ ಹಿರಿಯರು ಜೈಲು ಸೇರಿದ್ದಲ್ಲದೆ, ರಾಷ್ಟ್ರಮಟ್ಟದಲ್ಲೂ ಈ ನಾಡಿನ ಸಂಘಶಕ್ತಿ ಗುರುತಿಸುವಂತಾಯಿತು. ದಕ್ಷಿಣ ಕೊಡಗಿನಿಂದ ಅಂದು ಚಿರಿಯಪಂಡ ಕುಶಾಲಪ್ಪ, ಅಡ್ಡಂಡ ಕಾಶಿ, ಮನೆಯಪಂಡ ನಂಜಪ್ಪ ಮುಂತಾದ ಅನೇಕ ಹಿರಿಯರು ಸಂಘ ಕಾರ್ಯದಲ್ಲಿ ಗುರುತಿಸಿಕೊಂಡಿದ್ದರು. ಅಂದಿನ ಹಿರಿಯರ ಸಹಿತ ಇಂದಿನ ಕಾಲಮಾನದಲ್ಲಿ ಅನೇಕರು ಈ ರಾಷ್ಟ್ರ ಕಾರ್ಯವನ್ನು ತಮ್ಮ ಧ್ಯೇಯವಾಗಿಸಿಕೊಂಡು ಬಂದವರಿದ್ದಾರೆ.

1970ರ ದಶಕದಲ್ಲಿ ತೃತೀಯ ಸರಸಂಘ ಚಾಲಕರಾಗಿದ್ದ ಬಾಳಾ ಸಾಹೇಬ್ (ಮಧುಕರ ದತ್ತಾತ್ರೇಯ ದೇವರಸ್) ಸೇರಿದಂತೆ ಹಿರಿಯ ಚೇತನಗಳಾದ ದಿ. ಯಾದವ್‍ರಾವ್ ಜೋಶಿ, ಹೋ. ವೇ. ಶೇಷಾದ್ರಿ ಮುಂತಾದವರು ಈ ನಾಡಿನ ಕಿರಿಯರಿಗೆ ಮಾರ್ಗದರ್ಶನ ನೀಡಿದ್ದಾರೆ.

ಸಾಲು ಸಾಲು ಪ್ರಚಾರಕರು : ಕೊಡಗಿನಲ್ಲಿ ಸಂಘ ಕಾರ್ಯಕ್ಕೆ ವೇಗ ನೀಡುವ ದಿಸೆಯಲ್ಲಿ ಪೂರ್ಣ ಸಮಯ ನೀಡಿ ಏನೊಂದೂ ಪ್ರತಿಫಲ ಅಪೇಕ್ಷಿಸದೆ ಕಾರ್ಯ ಮಾಡಿದ ಪ್ರಚಾರಕರು ಗಳಲ್ಲಿ ಕೃ. ನರಹರಿ, ಪುಟ್ಟು ಶ್ರೀನಿವಾಸ್, ಕಾಶೀರಾವ್, ಸು. ರಾಮಣ್ಣ, ಪಾಂಡುರಂಗ, ಶ್ರೀನಿವಾಸ್, ವಾಸುದೇವ್, ಜಗದೀಶ್‍ಕಾರಂತ್, ವೆಂಕಟೇಶ ಕುಂಟೆ, ಅಂಬಾಪ್ರಸಾದ್, ಮೊಣ್ಣಪ್ಪ, ಮಧುಸೂಧನ್, ಮೃತ್ಯುಂಜಯ ಸೇರಿದಂತೆ ಇತ್ತೀಚಿನ ವರ್ಷಗಳಲ್ಲಿ ಇನ್ನು ಅನೇಕರು ಕೊಡಗಿನಲ್ಲಿ ಸಂಘಕಾರ್ಯಕ್ಕೆ ವೇಗ ನೀಡುತ್ತಾ ಬಂದವರಿದ್ದಾರೆ.

ಹೊಸತನ-ಹುರುಪು : ಪ್ರಸಕ್ತ ಕೊಡಗಿನಲ್ಲಿ ಸಂಘ ಕಾರ್ಯಕ್ಕೆ ಹೊಸ ಆಯಾಮದೊಂದಿಗೆ ಸ್ವಯಂಸೇವಕರಲ್ಲಿ ಸ್ಫೂರ್ತಿ ತುಂಬುವ ದಿಸೆಯಲ್ಲಿ ಇದೇ ತಾ. 17 ರಂದು ದಕ್ಷಿಣ ಕೊಡಗಿನ ಹಾತೂರುವಿಗೆ, ಸಂಘದ ಅಖಿಲ ಭಾರತ ಸಹ ಸರ ಕಾರ್ಯವಾಹ ಮುಕುಂದ್ ಅವರು ಆಗಮಿಸುತ್ತಿದ್ದಾರೆ. ಅಂದು ಬೆಳಿಗ್ಗೆ 10-30 ಗಂಟೆಗೆ ಜಿಲ್ಲೆಯ ಬೆಳೆಗಾರ ಪ್ರಮುಖರೊಂದಿಗೆ ಖಾಸಗಿ ಬಂಗಲೆಯೊಂದರಲ್ಲಿ ಸಂವಾದ ಏರ್ಪಡಿಸಲಾಗಿದೆ. ಮಧ್ಯಾಹ್ನದ ಭೋಜನ ಬಳಿಕ ಹಾತೂರು ಶಾಲಾ ಮೈದಾನದಲ್ಲಿ ಆರೆಸ್ಸೆಸ್ ಸ್ವಯಂಸೇವಕರ ಸಾಂಘಿಕ್ (ಸಮ್ಮಿಲನ) ನಡೆಯಲಿದೆ. 4.30ಕ್ಕೆ ಸಂಘದ ಸಹಕಾರ್ಯವಾಹ ಮುಕುಂದ್ ಅವರು ಬೌದ್ಧಿಕ್ ನೀಡಲಿದ್ದಾರೆ. ಕೊಡಗು ಜಿಲ್ಲಾ ಸಂಘಚಾಲಕ್ ಚಕ್ಕೇರ ಮನು ಕಾವೇರಪ್ಪ ಸೇರಿದಂತೆ ಸಂಘದ ಹಿರಿಯ ಕೆಲವರು ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ ಎಂದು ಮೂಲಗಳಿಂದ ಗೊತ್ತಾಗಿದೆ.