ಕೂಡಿಗೆ, ನ. 13 : ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಸಮೀಪದ ಕಾಳಿದೇವನ ಹೊಸೂರು ಗ್ರಾಮದಲ್ಲಿರುವ ಬಡಕುಟುಂಬ ವೊಂದು ಕಳೆದ 23 ವರ್ಷಗಳ ಹಿಂದೆ ಕಾಳಿದೇವನ ಹೊಸೂರು ಗ್ರಾಮದಲ್ಲಿ ಒಂದು ಎಕರೆ ಪೈಸಾರಿ ಜಾಗದಲ್ಲಿ ವಾಸವಿರುವ ಆರ್ಮುಗಂ ಅವರು 1996-97ನೇ ಸಾಲಿನಲ್ಲಿ ಅಕ್ರಮ ಸಕ್ರಮಕ್ಕೆ ಅರ್ಜಿ ಸಲ್ಲಿಸಿದ್ದರು. ಅಂದಿನಿಂದ ಇಂದಿನವರೆಗೆ ಅಕ್ರಮ ಸಕ್ರಮದ ಹಕ್ಕು ಪತ್ರದ ಭಾಗ್ಯ ದೊರೆತಿಲ್ಲ. 80 ವರ್ಷ ಪ್ರಾಯದ ಆರ್ಮುಗಂ ಮತ್ತು ಅವರ ಪತ್ನಿ ನಂಜಮ್ಮ ಅವರು ಕಾಳಿದೇವನ ಹೊಸೂರು ಗ್ರಾಮದಲ್ಲಿ ಗುಡಿಸಲಿನಲ್ಲಿ ವಾಸವಿದ್ದರು. ನಂತರ ಗ್ರಾಮ ಪಂಚಾಯ್ತಿ ವತಿಯಿಂದ ಕಳೆದ 10 ವರ್ಷಗಳ ಹಿಂದೆ ನಿರ್ಮಿಸಿಕೊಟ್ಟ ಆಶ್ರಯ ಮನೆಯಲ್ಲಿ ವಾಸವಿದ್ದಾರೆ. ಇದೀಗ ವರ್ಷಗಳು ಕಳೆದಂತೆ ಮನೆಯು ಬೀಳುವ ಹಂತದಲ್ಲಿದೆ. ಈ ವೃದ್ಧರಿಗೆ ಇದ್ದ ಒಬ್ಬ ಮಗನೂ ಅನಾರೋಗ್ಯದಿಂದ 5 ವರ್ಷದ ಹಿಂದೆ ಮೃತಪಟ್ಟಿದ್ದು, ಈ ವೃದ್ಧರು ತಮ್ಮ ಜೀವನ ಸಾಗಿಸಲು ಮಾಸಾಶನ (500 ರೂ) ವನ್ನೇ ನಂಬಿದ್ದಾರೆ. ಇರುವ ಒಂದು ಎಕರೆ ಜಾಗದಲ್ಲಿ ವ್ಯವಸಾಯ ಮಾಡಲು ಹೊರಟರೆ ಹಣದ ಕೊರತೆಯ ನಡುವೆಯೂ ಇತ್ತ ಬೆಳೆ ಬಂದರೂ ಆ ಬೆಳೆ ಕಾಡಾನೆಗಳ ಪಾಲಾಗುತ್ತದೆ. ಇಲ್ಲವೆ, ಮಳೆಯಿಲ್ಲದೆ ಬೆಳೆಯೂ ಬರುವದಿಲ್ಲ. 20 ವರ್ಷದಿಂದ

(ಮೊದಲ ಪುಟದಿಂದ) ಈ ವೃದ್ಧರು ಇರುವ ಜಾಗಕ್ಕೆ ಹಕ್ಕು ಪತ್ರ ಸಿಕ್ಕಿದ್ದಲ್ಲಿ ಸ್ಥಳೀಯ ಸಹಕಾರ ಸಂಘಗಳ ಮೂಲಕ ಸಾಲ ಪಡೆಯಲು ಅನುಕೂಲವಾಗುತ್ತದೆ. ಇದರಿಂದ ತಮ್ಮ ಜೀವನ ಸಾಗಿಸಲು ಆಗುತ್ತದೆ.

ಈ ಗ್ರಾಮಕ್ಕೆ ಹೊಂದಿಕೊಂಡಂತೆ ಇರುವ ಇನ್ನೂ ನಾಲ್ಕೈದು ಕುಟುಂಬಗಳಾದ ಸೈಯದ್, ಜವರೇಗೌಡ, ಹುದುಗೂರು ಗ್ರಾಮದ ಕೆಲವು ಕುಟುಂಬಗಳಾದ ಅಯ್ಯಪ್ಪ, ಚಂಗಪ್ಪ, ಜಾನಮ್ಮ ಅವರು ಹಾರಂಗಿ ಮುಳುಗಡೆ ಪ್ರದೇಶದಿಂದ ಬದಲಿ ಜಾಗದಲ್ಲಿ ವಾಸವಿರುವ ಇವರಿಗೂ ಹಕ್ಕು ಪತ್ರ ಇಲ್ಲದಂತಾಗಿದೆ.

ಕಳೆದ ಐದು ವರ್ಷಗಳ ಹಿಂದೆ ಆರ್ಮುಗಂ ಅವರ ಜಾಗಕ್ಕೆ ಭೂಮಾಪನ ಇಲಾಖೆಯವರು ಸರ್ವೇ ನಡೆಸಿದರೂ ಇದುವರೆಗೂ ಸರ್ವೇಯ ಕಡತಗಳು ಕಂದಾಯ ಮತ್ತು ಸರ್ವೆ ಇಲಾಖೆಯಲ್ಲಿ ಇವೆ ಎಂದು ವೃದ್ಧರಿಗೆ ಹಾರಿಕೆಯ ಉತ್ತರಗಳನ್ನು ಅಧಿಕಾರಿಗಳು ನೀಡುತ್ತಿರುವದು ಎಷ್ಟರ ಮಟ್ಟಿಗೆ ಸರಿಯಾಗಿದೆ. ಈ ಕಡತಗಳ ಹಿಂದೆ ಸ್ಥಳೀಯ ಸದಸ್ಯರೋರ್ವರು ಓಡಾಡಿದರೂ ಮುಂದಿನ ಅಕ್ರಮ ಸಕ್ರಮ ಸಭೆಗೆ ಮತ್ತು ಜಾಗದ ಪರಿವರ್ತನೆಗೆ ಕ್ರಮತೆಗೆದುಕೊಳ್ಳುತ್ತೇವೆÉ ಎಂದು ಹೇಳುತ್ತಿದ್ದಾರೆ ವಿನಃ ಇದುವರೆಗೂ ಯಾವದೇ ಕ್ರಮ ಕೈಗೊಂಡಿಲ್ಲ.

ಜಾಗದ ಹಕ್ಕು ಪತ್ರಕ್ಕಾಗಿ 23 ವರ್ಷಗಳಿಂದಲೂ ತಿಂಗಳಿಗೊಮ್ಮೆ ತಾಲೂಕು ಕಚೇರಿಗೆ ಅಲೆದಾಡಿದರೂ ಅಧಿಕಾರಿಗಳು ಹಕ್ಕು ಪತ್ರವನ್ನು ನೀಡಿಲ್ಲ. ಪ್ರತಿ ಬಾರಿಯೂ ಕಡತಗಳನ್ನು ಪರಿಶೀಲಿಸಲಾಗುತ್ತದೆ ಎಂದು ಹಾರಿಕೆ ಉತ್ತರಗಳನ್ನೇ ನೀಡುತ್ತಿದ್ದಾರೆಯೇ ವಿನಃ 23 ವರ್ಷ ಕಳೆದರೂ ಇನ್ನು ಹಕ್ಕು ಪತ್ರ ನನ್ನ ಕೈಸೇರಿಲ್ಲ. 40 ವರ್ಷಗಳಿಂದ ಕಾಳಿದೇವನ ಹೊಸೂರಿನಲ್ಲಿ ಪೈಸಾರಿ ಜಾಗದಲ್ಲಿ ಗುಡಿಸಲು ಕಟ್ಟಿಕೊಂಡು ಜೀವನ ಸಾಗಿಸುತ್ತಿದ್ದ ನಮಗೆ ಈ ಪ್ರಾಯದಲ್ಲಿ ಹಕ್ಕು ಪತ್ರ ಸಿಕ್ಕಿದರೆ ನನ್ನ ಜಮೀನು ಎಂಬ ತೃಪ್ತಿ ನನಗೆ ದೊರಕುತ್ತದೆ. 80 ವರ್ಷ ಪ್ರಾಯದ ನಾನು ಎಲ್ಲಾ ಚುನಾವಣೆಗಳಲ್ಲಿಯೂ ಎರಡು ಕಿ.ಮೀ ನಡೆದುಕೊಂಡು ಹೋಗಿ ಮತ ಚಲಾಯಿಸುತ್ತೇನೆ. ಆದರೂ ಜನಪ್ರತಿನಿಧಿಗಳು ಬಡ ಕುಟುಂಬದ ನಮಗೆ ಯಾವದೇ ರೀತಿಯ ಅನುಕೂಲ ಮಾಡುತ್ತಿಲ್ಲ. ಈ ವಯಸ್ಸಿನಲ್ಲಿ ನಾನು ಪ್ರತಿ ತಿಂಗಳು ಹೋದರೂ ಹಕ್ಕು ಪತ್ರ ನೀಡಿಲ್ಲ. ಹಕ್ಕು ಪತ್ರ ನೀಡುವವರೆಗೂ ತಾಲೂಕು ಕಚೇರಿಗೆ ಅಲೆಯುತ್ತೇನೆ. ಜನಪ್ರತಿನಿಧಿಗಳು ಗಮನಹರಿಸಿ ಹಕ್ಕು ಪತ್ರವನ್ನು ಕೊಡಿಸಬೇಕು ಎಂದು ಆರ್ಮುಗಂ ದಂಪತಿಗಳು ಈ ಮೂಲಕ ಒತ್ತಾಯಿಸಿದ್ದಾರೆ.