ಕುಶಾಲನಗರ, ನ. 13: ಕುಶಾಲನಗರ ಸಮೀಪದ ಹುದುಗೂರು ಬಳಿ ದುಷ್ಕರ್ಮಿಗಳಿಂದ ಯುವಕನೊಬ್ಬನ ಮೇಲೆ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ಆರೋಪಿಗಳ ಪತ್ತೆಗೆ ಬಿರುಸಿನ ಕಾರ್ಯಾಚರಣೆ ನಡೆಸುತ್ತಿದೆ. ಇಬ್ಬರು ಹೆಲ್ಮೆಟ್ ಧರಿಸಿದ ದುಷ್ಕರ್ಮಿಗಳು ಹುದುಗೂರು ಬಳಿ ಹಾರಂಗಿ ನಾಲೆ ವ್ಯಾಪ್ತಿಯಲ್ಲಿ ಕಿರಣ ಎಂಬಾತನಿಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದು ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಘಟನೆಗೆ ಸಂಬಂಧಿಸಿದಂತೆ ಮೊಕದ್ದಮೆ ದಾಖಲಾಗಿದೆ. ಕುಶಾಲನಗರ ಡಿವೈಎಸ್ಪಿ ಮುರಳೀಧರ್ ಅವರ ಮಾರ್ಗದರ್ಶನದಲ್ಲಿ ಆರೋಪಿಗಳ ಪತ್ತೆಗೆ ಮೂರು ತಂಡಗಳನ್ನು ನಿಯೋಜಿಸಲಾಗಿದೆ. ಈ ಮೂಲಕ ಸಂಶಯಾಸ್ಪದ ವ್ಯಕ್ತಿಗಳನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಗೆ ಒಳಪಡಿಸಲಾಗಿದೆ. ಕಾರೊಂದರಲ್ಲಿ ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದ ಅಮ್ಮತ್ತಿಯ
(ಮೊದಲ ಪುಟದಿಂದ) ಇಬ್ಬರು ವ್ಯಕ್ತಿಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿ ಹೇಳಿಕೆ ನಂತರ ಬಿಡುಗಡೆಗೊಳಿಸಿರುವದಾಗಿ ತಿಳಿದುಬಂದಿದೆ. ಘಟನಾ ಸಂದರ್ಭ ಸ್ಥಳ ವ್ಯಾಪ್ತಿಯಲ್ಲಿ ದೂರವಾಣಿ ಸಂಪರ್ಕಗಳ ಬಗ್ಗೆ ಕಾಲ್ ಡಿಟೇಲ್ಸ್ ಸೇರಿದಂತೆ ಹಲವು ಮಾಹಿತಿಗಳು ಇನ್ನಷ್ಟೇ ತನಿಖಾ ತಂಡದ ಕೈಸೇರಬೇಕಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಅಪರಾಧ ಪತ್ತೆದಳ ಕೂಡ ಆರೋಪಿಗಳ ಸುಳಿವಿಗಾಗಿ ಕಾರ್ಯಾಚರಣೆ ಕೈಗೊಂಡಿದೆ. ಇತ್ತ ಗಾಯಾಳು ಕಿರಣ ಚೇತರಿಸಿಕೊಂಡಿದ್ದು ಆತನ ಹೇಳಿಕೆಯಂತೆ ಎಲ್ಲಾ ಆಯಾಮಗಳಲ್ಲಿ ದುಷ್ಕರ್ಮಿಗಳ ಪತ್ತೆ ಕಾರ್ಯ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. -ಸಿಂಚು