ಮಡಿಕೇರಿ, ನ. 13: ಹತ್ತಿಪ್ಪತ್ತು ವರ್ಷಗಳ ಹಿಂದಿನ ಮಡಿಕೇರಿ ನಗರದ ಚಿತ್ರಣವನ್ನು ಮೆಲುಕು ಹಾಕಿದರೆ ಕಣ್ಮುಂದೆ ಹಸಿರು ಗಿರಿ - ಕಂದರಗಳಿಂದ ಕೂಡಿದ ಸುಂದರ ಸಾಲುಗಳು ಹಾದು ಹೋಗುತ್ತವೆ. ಸುತ್ತಲೂ ಬೆಟ್ಟ - ಗುಡ್ಡಗಳಿಂದ ಕೂಡಿ ನಡುವಲ್ಲಿ ತಳಭಾಗದಲ್ಲಿ ಪಟ್ಟಣವಿರುವ ಮಂಜಿನ ನಗರಿ ಮಡಿಕೇರಿ ಕಂಗೊಳಿಸುತ್ತಿತ್ತು., ನಾಗರಿಕತೆಯ ನಾಗಾಲೋಟದಲ್ಲಿ ಜನಸಂಖ್ಯೆ ಹೆಚ್ಚಾದಂತೆ ಅಭಿವೃದ್ಧಿ ಕಾರ್ಯಗಳೊಂದಿಗೆ ಮನೆ, ಮಠ, ಕಟ್ಟಡಗಳು ತಲೆಯೆತ್ತುತ್ತಾ ಸಮತಟ್ಟಾದ ಜಾಗಗಳೆಲ್ಲವೂ ಭರ್ತಿಯಾದ ಬಳಿಕ ಬೆಟ್ಟ - ಗುಡ್ಡಗಳಲ್ಲೇ ಜನರು ಆಶ್ರಯ ಕಂಡುಕೊಂಡರು. ಅಭಿವೃದ್ಧಿ ಹೊಂದಬೇಕಾದರೆ ಸಮಸ್ಯೆಗಳೂ ಅಷ್ಟೇ ವೇಗವಾಗಿ ಬೆಳೆಯುವಂತೆ ಮಂಜಿನ ನಗರಿಯಲ್ಲೂ ರಸ್ತೆ, ಕುಡಿಯುವ ನೀರು, ಚರಂಡಿ ಸಮಸ್ಯೆಗಳು ಆವರಿಸಿಕೊಂಡಿವೆ. ಅದರಲ್ಲೂ ಕಸದ ಸಮಸ್ಯೆ ತೀವ್ರವಾಗಿದ್ದು, ಬೆಟ್ಟದಂತೆ ಬೆಳೆದು ನಿಂತಿದೆ.

ಕಸದ ಗುಡ್ಡ...

ಇತ್ತೀಚಿನ ವರ್ಷಗಳವರೆಗೂ ಮಡಿಕೇರಿಗೆ ಆಗಮಿಸಿದವರಿಗೆ ಎತ್ತರದಲ್ಲಿ ಕಾಣುತ್ತಿದ್ದುದು ಸ್ವಾಗತ ಬೆಟ್ಟ, ನಂತರದಲ್ಲಿ ಕರ್ಣಂಗೇರಿ ಉಕ್ಕುಡ, ಆನಂತರದಲ್ಲಿ ಸ್ವೀವರ್ಟ್ ಹಿಲ್.., ಆದರೆ ಇದೀಗ ಯಾವದೇ ದಿಕ್ಕಿನಿಂದಲೂ ಕಣ್ಣು ಹಾಯಿಸಿದರೂ ಕಣ್ಣಿಗೆ ರಾಚುವದು ಸ್ವೀವರ್ಟ್ ಹಿಲ್ ಬಳಿ ಹೊಸದಾಗಿ ಬೆಳೆಯುತ್ತಿರುವ ‘ಕಸದ ಗುಡ್ಡ..!’

ಮಡಿಕೇರಿ ನಗರ ವ್ಯಾಪ್ತಿಯ ಕಸ, ತ್ಯಾಜ್ಯಗಳನ್ನು ವಿಲೇವಾರಿ ಮಾಡುವ ಸಂಬಂಧ ಸ್ವೀವರ್ಟ್ ಹಿಲ್ ಬಳಿ ಗುಡ್ಡದ ಮೇಲೆ ಗುರುತಿಸಲಾಗಿರುವ ಜಾಗದಲ್ಲಿ ಇದೀಗ ಕಸದ ರಾಶಿ ಬೆಳೆಯುತ್ತಿದ್ದು, ಇದೀಗ ಇದು ದೊಡ್ಡ ಬೆಟ್ಟದಂತಾಗಿದ್ದು, ಎಲ್ಲೆಲ್ಲೂ ದುರ್ಗಂಧ ಬೀರುತ್ತಿದೆ. ಈ ಹಿಂದೆ ದಿ. ಎಂ.ಎಂ. ನಾಣಯ್ಯ ಅವರು ಉಸ್ತುವಾರಿ ಸಚಿವರಾಗಿದ್ದ ಸಂದರ್ಭದಲ್ಲಿ ಅಂದಿನ ಪುರಸಭೆ ವತಿಯಿಂದ ನಗರದ ಹೊರ ವಲಯದಲ್ಲಿರುವ ಸಾಮಾಜಿಕ ಅರಣ್ಯ ಪ್ರದೇಶದ 6 ಎಕರೆ ಜಾಗವನ್ನು ಕಸವಿಲೇವಾರಿಗೆ ಗುರುತಿಸಲಾಗಿತ್ತು. ಆದರೆ ಆ ಸಂದರ್ಭದಲ್ಲಿ ಮಡಿಕೇರಿ ಇಷ್ಟೊಂದು ಕ್ಷಿಪ್ರಗತಿಯಲ್ಲಿ ಬೆಳವಣಿಗೆ ಯಾಗಲಿದೆ ಎನ್ನುವದಾಗಲೀ, ಇಲ್ಲಿಗೆ ಇಷ್ಟೊಂದು ಪ್ರಮಾಣದಲ್ಲಿ ಪ್ರವಾಸಿಗರು ಬರುತ್ತಾರೆಂಬದಾಗಲೀ ಅರಿವು ಇರಲಿಲ್ಲ. ಇದೀಗ ಪುಟ್ಟ ಪಟ್ಟಣದಲ್ಲಿ ಜನಸಾಂದ್ರತೆಯೊಂದಿಗೆ ತ್ಯಾಜ್ಯಗಳ ಸಾಂದ್ರತೆಯೂ ಹೆಚ್ಚಾಗಿ ಸಮಸ್ಯೆ ಉಲ್ಬಣಗೊಂಡಿದೆ.

ಬಿಗಡಾಯಿಸಿದ ಸಮಸ್ಯೆ

ಗುರುತಿಸಲಾಗಿರುವ ಜಾಗದಲ್ಲಿ ಕಸದ ರಾಶಿ ಬೆಳೆಯುತ್ತಿದ್ದಂತೆ ನೂತನ ಮಾರ್ಗೋಪಾಯ ಕಂಡುಕೊಂಡ ನಗರಸಭೆ ಕಸ ವಿಂಗಡಣಾ ಹಾಗೂ ಸಂಸ್ಕರಣಾ ಘಟಕ ಸ್ಥಾಪನೆ ಮಾಡಿ ಆ ಮೂಲಕ ಕಸದಿಂದ ಗೊಬ್ಬರ ತಯಾರಿಸುವ ಯಂತ್ರೋಪಕರಣ ಗಳನ್ನು ಅಳವಡಿಸಿತು. ನಗರದಾ ದ್ಯಂತ ಅಲ್ಲಲ್ಲಿ ಇರಿಸಲಾಗಿದ್ದ ಕಸದ ತೊಟ್ಟಿಗಳನ್ನು ತೆರವುಗೊಳಿಸಿ, ವಾಹನಗಳ ಮೂಲಕ ಮನೆ - ಮನೆ ಯಿಂದ ಕಸ ಸಂಗ್ರಹಣೆ ಮಾಡುವ ಯೋಜನೆ ಹಮ್ಮಿಕೊಳ್ಳಲಾಯಿತು. ಒಣಕಸ ಹಾಗೂ ಹಸಿ ಕಸ ಬೇರ್ಪಡಿಸಿ, ಸಂಗ್ರಹಿಸುವ ಕಾರ್ಯ ಆರಂಭಗೊಂಡಿತು. ಆರಂಭದಲ್ಲಿ ಈ ಕಾರ್ಯ ಸ್ವಲ್ಪ ಮಟ್ಟಿಗೆ ಯಥಾವತ್ತಾಗಿ ನಡೆಯಿತಾದರೂ ನಂತರದಲ್ಲಿ ಎಲ್ಲವೂ ವಿಫಲವಾಯಿತು.

(ಮೊದಲ ಪುಟದಿಂದ) ಮನೆಯಲ್ಲಿ ನಾಗರಿಕರು ಕಸಗಳನ್ನು ಬೇರ್ಪಡಿಸಿಕೊಟ್ಟರೂ ಕಸ ವಿಲೇವಾರಿ ಜಾಗಕ್ಕೆ ಕೊಂಡೊಯ್ಯುವ ವಾಹನಗಳಲ್ಲಿದ್ದ ಎಲ್ಲ ಕಸವನ್ನು ಒಟ್ಟಿಗೆ ಸುರಿಯಲಾಯಿತು. ಇದರಿಂದಾಗಿ ಕಸದ ರಾಶಿಯೂ ಬೆಳೆಯಿತು. ಇತ್ತ ವಿಂಗಡಣೆ ಹಾಗೂ ಸಂಸ್ಕರಣಾ ಘಟಕಗಳು ಕಾರ್ಯನಿರ್ವಹಿಸದೆ ತುಕ್ಕು ಹಿಡಿದವು. ಮಳೆಗಾಲದಲ್ಲಿ ಯಾವದೇ ವಾಸನೆ, ನೊಣಗಳು ಕಾಣಸಿ ಗುವದಿಲ್ಲ. ಆದರೆ ಬೇಸಿಗೆ ಬಂತೆಂದರೆ ದುರ್ನಾತ ಹಾಗೂ ನೊಣಗಳ ಹಾವಳಿ ಹೇಳತೀರದಾಗಿದೆ.

ಬಾಗಿಲು ತೆರೆಯುವಂತಿಲ್ಲ...

ಇದೀಗ ಮಳೆಗಾಲ ಮುಗಿದಿದೆ, ಚಳಿಗಾಲ ಆರಂಭಗೊಂಡಿದ್ದರೂ ಬಿಸಿಲ ಬೇಗೆ ತಾಕುತ್ತಿದೆ, ಗಾಳಿಯೂ ಬೀಸುತ್ತಿದೆ, ಮಳೆಗಾಲದಲ್ಲಿ ಕರಗಿದ ಕಸದ ರಾಶಿಯಲ್ಲಿ ಉತ್ಪತ್ತ್ತಿಯಾಗಿರುವ ನೊಣಗಳು ಇದೀಗ ಎಲ್ಲೆಂದರಲ್ಲಿ ಹಾರಾಡುತ್ತಿವೆ. ಕಸ ವಿಂಗಡಣೆಯಾಗದೆ ಹಸಿ ಕಸ ತ್ಯಾಜ್ಯಗಳು ಕೊಳೆತು ಹೇಸಿಗೆ ಹುಟ್ಟಿಸುವ ನೀಲಿ ಬಣ್ಣದ ದೊಡ್ಡ ಗಾತ್ರದ ನೊಣಗಳು ಉತ್ಪತ್ತಿಯಾಗಿವೆ. ಬೆಟ್ಟದ ಮೇಲೆ ಹಾರಾಡುತ್ತಾ ನಗರದತ್ತ ನುಸುಳುತ್ತಿವೆ.

ಇತ್ತ ಬೆಟ್ಟದ ಮೇಲೆರ ಕಸದ ರಾಶಿ ಹೆಚ್ಚಾಗುತ್ತಿದ್ದಂತೆ ನಗರಸಭೆ ವತಿಯಿಂದ ಕಸದ ರಾಶಿಯನ್ನು ಎಸ್ಕಾವೇಟರ್ ಮೂಲಕ ಬೆಟ್ಟದಿಂದ ತಳ್ಳಿಬಿಡಲಾಗುತ್ತಿದೆ. ಇದರಿಂದಾಗಿ ಕಸದ ರಾಶಿ ಇಳಿಜಾರಿನಲ್ಲಿ ಜಾರುತ್ತಿದ್ದು, ಇದರೊಂದಿಗೆ ನೊಣಗಳು ಹಾರಿ ಬರುತ್ತಿವೆ. ಈಗಾಗಲೇ ಸುಬ್ರಹ್ಮಣ್ಯ ನಗರಕ್ಕಾಗಿ ಐಟಿಐ ಜಂಕ್ಷನ್‍ವರೆಗೆ ನೊಣಗಳು ತಲಪಿದ್ದರೆ ಇತ್ತ ರಾಜಾಸೀಟ್‍ವರೆಗೆ ತಮ್ಮ ರೆಕ್ಕೆ ಬಿರಿದಿವೆ. ಇನ್ನು ನಗರದೊಳಕ್ಕೆ ಹಾರಾಡಲು ಮಾತ್ರ ಬಾಕಿ ಉಳಿದಿವೆ.

ಅದರಲ್ಲೂ ಹೆಚ್ಚಿನ ಸಮಸ್ಯೆ ಅನುಭವಿಸುತ್ತಿರುವವರು ಸುಬ್ರಹ್ಮಣ್ಯ ನಗರದವರು. ಈ ಕಸವಿಲೇವಾರಿ ಘಟಕಕ್ಕೆ ತೀರಾ ಹತ್ತಿರವಿರುವ ಈ ಬಡಾವಣೆಗೆ ಯುದ್ಧಭೂಮಿಯಲ್ಲಿ ಸೈನಿಕರು ನುಗ್ಗುವಂತೆ ನೊಣಗಳು ನುಸುಳುತ್ತಿವೆ. ಇಲ್ಲಿನ ನಿವಾಸಿಗಳು ಮನೆಯ ಬಾಗಿಲು ತೆರೆಯುವಂತಿಲ್ಲ; ಒಂದು ವೇಳೆ ತೆರೆದರೆ ಮತ್ತೆ ನೊಣ ಹಿಡಿಯುವದೇ ಕೆಲಸವಾಗಲಿದೆ. ಸಾರಿಗೆ ಒಗ್ಗರಣೆ, ತಿಂಡಿ, ಮೀನು, ಮಾಂಸ ಖಾದ್ಯ ಮಾಡಬೇಕೆಂದರೆ ಮನೆಯ ಬಾಗಿಲು, ಕಿಟಕಿಗಳು ಮುಚ್ಚಿ, ತಿನಿಸುಗಳನ್ನು ಮಾಡಿ, ತಿಂದ ಬಳಿಕವಷ್ಟೇ ಬಾಗಿಲು ತೆರೆಯುವಂತಹ ಪರಿಸ್ಥಿತಿ ಇಲ್ಲಿದೆ. ಇನ್ನೂ ಪುಟ್ಟ ಮಕ್ಕಳ ಕೈಯಲ್ಲಂತೂ ಯಾವದೇ ತಿಂಡಿ, ತಿನಿಸುಗಳನ್ನು ಕೊಡುವಂತಿಲ್ಲ. ತಿಂಡಿ ಹಿಡಿದ ಕೂಡಲೇ ಒಮ್ಮೆಲೆ ನೊಣಗಳು ಮುತ್ತಿಕೊಂಡು ಬಿಡುತ್ತವೆ.

ಅದೂ ಅಲ್ಲದೆ, ಬೆಟ್ಟದ ಮೇಲೆ ನೊಣಗಳ ನಿಯಂತ್ರಣಕ್ಕೆ ವಿಷಯುಕ್ತ ಔಷಧಿಗಳನ್ನು ಸಿಂಪಡಿಸಲಾಗುತ್ತಿದ್ದು, ಈ ಔಷಧಿಗಳ ಮೇಲೆ ಕುಳಿತ ನೊಣಗಳು ಹಾರಿ ಬಂದು ಇಲ್ಲಿನ ನಿವಾಸಿಗಳ ಆಹಾರದ ಮೇಲೆ ಕುಳಿತುಕೊಳ್ಳುತ್ತವೆ. ಒಂದು ರೀತಿಯಲ್ಲಿ ಅಸಹನೀಯ ಬದುಕು ಇಲ್ಲಿನವರದ್ದಾಗಿದೆ.

ನಗರಸಭೆ ವಿರುದ್ಧ ಆಕ್ರೋಶ

ಹಲವು ವರ್ಷಗಳಿಂದ ಕಸ ಹಾಗೂ ನೊಣಗಳ ಸಮಸ್ಯೆ ಇದ್ದರೂ ಸೂಕ್ತ ಪರಿಹಾರ ಕೈಗೊಳ್ಳದ ಬಗ್ಗೆ ಸುಬ್ರಹ್ಮಣ್ಯನಗರ ನಿವಾಸಿಗಳು ನಗರಸಭೆ ವಿರುದ್ಧ ಆಕ್ರೋಶಗೊಂಡು ಇಂದು ನಗರಸಭಾ ಕಚೇರಿಗೆ ತೆರಳಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಆಯುಕ್ತರನ್ನು ಭೇಟಿ ಮಾಡಿ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳುವಂತೆ ಆಗ್ರಹಪಡಿಸಿದ ಪ್ರಸಂಗ ಎದುರಾಯಿತು. ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಅವರನ್ನು ಭೇಟಿ ಮಾಡಿದ ಸಂದರ್ಭ ಅಧ್ಯಕ್ಷರು ಆಯುಕ್ತ ರಮೇಶ್ ಅವರನ್ನು ತಮ್ಮ ಕಚೇರಿಗೆ ಬರಮಾಡಿ ಕೊಂಡು ಸಮಸ್ಯೆ ಪರಿಹಾರಕ್ಕೆ ಕೈಗೊಳ್ಳಲಾಗಿರುವ ಕ್ರಮದ ಬಗ್ಗೆ ಮಾಹಿತಿ ನೀಡುವಂತೆ ಕೋರಿದರು. ಈ ಸಂದರ್ಭದಲ್ಲಿ ಆಯುಕ್ತ ರಮೇಶ್ ಅವರು, ಈಗಾಗಲೇ ಮೈಸೂರಿನಿಂದ ತಜ್ಞರನ್ನು ಕರೆಸಿದ್ದೇವೆ. ಸಮಸ್ಯೆ ಬಗೆಹರಿಯಲಿದೆ ಎಂದು ಹೇಳಿ ತಜ್ಞರನ್ನು ಕಚೇರಿಗೆ ಬರಮಾಡಿ ಕೊಂಡರು.

ವಿಂಗಡಣೆ ಆಗಬೇಕು

ನಂತರ ಅಧ್ಯಕ್ಷ, ಉಪಾಧ್ಯಕ್ಷರು, ಸ್ಥಾಯಿ ಸಮಿತಿ ಅಧ್ಯಕ್ಷರು, ಸದಸ್ಯರುಗಳಾದಿಯಾಗಿ ಅಧಿಕಾರಿಗಳು ತಜ್ಞರು ಕಸ ವಿಲೇವಾರಿ ಘಟಕಕ್ಕೆ ಭೇಟಿ ನೀಡಿದರು. ಜಾಗ ಪರಿಶೀಲನೆ ಮಾಡಿದ ಮೈಸೂರಿನ ಜೆಎಂಎಸ್ ಬಯೋಟೆಕ್‍ನ ವ್ಯವಸ್ಥಾಪಕ ನಿರ್ದೇಶಕ ಡಾ. ಪ್ರಕಾಶ್ ಎಂ. ಕುಲಕರ್ಣಿ ಅವರು, ಮಡಿಕೇರಿಯಲ್ಲಿ ಉತ್ಪತ್ತಿಯಾಗುತ್ತಿರುವ ಕಸ ದೊಡ್ಡದೇನಲ್ಲ, ಪ್ರವಾಸಿ ಕೇಂದ್ರವೂ ಆಗಿರುವದರಿಂದ ಒಮ್ಮೊಮ್ಮೆ ಹೆಚ್ಚು ಕಡಿಮೆಯಾಗಬಹುದು, ಆದರೆ ಕಸ ವಿಂಗಡಣೆ ಮಾಡದಿದ್ದರೆ ಯಾವದೇ ಫಲಿತಾಂಶ ಬರುವದಿಲ್ಲ. ನಗರದಲ್ಲಿರುವ ಕಲ್ಯಾಣ ಮಂಟಪಗಳು, ಲಾಡ್ಜ್‍ಗಳು, ಮಾಂಸ ಮಾರುಕಟ್ಟೆಗಳು ಇರುವ ಪ್ರದೇಶಗಳಲ್ಲಿ ಕಸ ನಿರ್ವಹಣೆ ಘಟಕ ಸ್ಥಾಪನೆ ಮಾಡಬೇಕು; ಇಂತಿಷ್ಟು ಶುಲ್ಕದೊಂದಿಗೆ ಅಲ್ಲಿಯೇ ನಿರ್ವಹಣೆ ಮಾಡುವ ವ್ಯವಸ್ಥೆಯಾಗಬೇಕು ಎಂದು ಹೇಳಿದರು. ಅಲ್ಲದೆ ಪ್ರಸ್ತುತ ಬೆಟ್ಟದ ಮೇಲಿರುವ ಈ ಜಾಗ ಕಸ ವಿಲೇವಾರಿಗೆ ಸೂಕ್ತವಾದುದಲ್ಲ. ಸಮತಟ್ಟದ ಪ್ರದೇಶದಲ್ಲಿ 1 ರಿಂದ 2 ಎಕರೆ ಜಾಗ ಒದಗಿಸಿಕೊಟ್ಟಲ್ಲಿ ಅಲ್ಲಿಯೇ ಸಮರ್ಪಕವಾದ ವೈಜ್ಞಾನಿಕ ರೀತಿಯ ವಿಲೇ ಘಟಕ ನಿರ್ಮಿಸಿ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳಬಹುದೆಂದು ಸಲಹೆಯಿತ್ತರು.

ಈ ಜಾಗದ ಸಂಪೂರ್ಣ ಪರಿಶೀಲನೆ ಮಾಡಿ ಯಾವ ರೀತಿಯಲ್ಲಿ ಪರಿಹಾರ ಮಾಡಬಹು ದೆಂದು ಒಂದು ವಾರದೊಳಗೆ ಮಾಹಿತಿ ನೀಡಲಾಗುವದು. ಸದ್ಯಕ್ಕೆ ವಾಸನೆ ತೊಲಗಿಸಿ, ನೊಣಗಳ ನಿಯಂತ್ರಣ ಮಾಡಲಾಗುವದೆಂದು ಅವರು ಭರವಸೆ ನೀಡಿದರು. ಕಸಗಳು ಪ್ಲಾಸ್ಟಿಕ್‍ಗಳು ಕೆಳಗಡೆ ಜಾರದಂತೆ ಸುತ್ತಲೂ ಬಿದಿರು ನೆಡುವಂತೆ ಸಲಹೆ ಮಾಡಿದರು.

ಇದಕ್ಕೂ ಮುನ್ನ ಸುಬ್ರಹ್ಮಣ್ಯ ನಗರ ನಿವಾಸಿಗಳು ನಗರಸಭಾ ಉಪಾಧ್ಯಕ್ಷ ಟಿ.ಎಸ್. ಪ್ರಕಾಶ್, ಸ್ಥಾಯಿ ಸಮಿತಿ ಅಧ್ಯಕ್ಷ ಪಿ.ಟಿ. ಉಣ್ಣಿಕೃಷ್ಣ, ಸದಸ್ಯ ನಂದಕುಮಾರ್ ಅವರುಗಳನ್ನು ಭೇಟಿ ಮಾಡಿ ಸಮಸ್ಯೆಗಳ ಕುರಿತು ಮನವಿ ಸಲ್ಲಿಸಿದರು. ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳುವದಾಗಿ ಸದಸ್ಯ ನಂದಕುಮಾರ್ ಕೂಡ ಭರವಸೆ ನೀಡಿದರು. ಸುಬ್ರಹ್ಮಣ್ಯ ನಗರ ನಿವಾಸಿಗಳಾದ ಕಾಳಚಂಡ ಅಪ್ಪಣ್ಣ, ಅರೆಯಡ ರಮೇಶ್, ಮುಕ್ಕಾಟಿ ಸತೀಶ್ ಪೂಣಚ್ಚ, ನಾಟೋಳಂಡ ಪ್ರಕಾಶ್, ಮಿಟ್ಟು, ಮಲಚಿರ ಕಾರ್ಯಪ್ಪ, ನಾಗೇಶ್, ಶಂಭು, ಮುಕ್ಕಾಟಿ ಗಿರೀಶ್, ಬೊಮ್ಮಂಡ ಗಣೇಶ್, ಡಾ. ಪ್ರಕಾಶ್ ಅವರ ಸಹಾಯಕ ಮನೋಜ್ ಪಾಟೀಲ್, ನಗರಸಭಾ ಸದಸ್ಯ ಕೆ.ಎಸ್. ಪ್ರಕಾಶ್, ಅಭಿಯಂತರ ರಾದ ವನಿತಾ, ನಾಗರಾಜು ಇನ್ನಿತರಿದ್ದರು.

- ವರದಿ : ಕುಡೆಕಲ್ ಸಂತೋಷ್