ಶ್ರೀಮಂಗಲ, ನ. 14: ಕೊಡಗು ಜಿಲ್ಲೆಯ ಉತ್ತರ ಭಾಗದಲ್ಲಿ ಆಗಸ್ಟ್ ತಿಂಗಳಲ್ಲಿ ಸಂಭವಿಸಿದ ಪ್ರಾಕೃತಿಕ ದುರಂತವು ಮಾನವ ನಿರ್ಮಿತವಾಗಿದೆ. ಅದು ಕೊಡಗಿನಲ್ಲಿ ಉಂಟಾದ ಲಘು ಭೂಕಂಪನದಿಂದ ಉಂಟಾದ ಪರಿಣಾಮ ಅಲ್ಲ ಎಂದು ಸರ್ಕಾರಿ ಸೌಮ್ಯದ ವಿಜ್ಞಾನಿಗಳ ಅಧ್ಯಯನ ತಂಡ ಸರಕಾರಕ್ಕೆ ಸಲ್ಲಿಸಿರುವ ತನ್ನ ಎರಡನೇ ಮತ್ತು ಅಂತಿಮ ವರದಿಯಲ್ಲಿ ಉಲ್ಲೇಖಿಸಿದೆ. ಕೊಡಗಿನ ಪ್ರಾಕೃತಿಕ ದುರಂತ-ಭೂಕುಸಿತದ ಬಗ್ಗೆ ಅಧ್ಯಯನ ನಡೆಸಿರುವ ಭಾರತೀಯ ಭೌಗೋಳಿಕ ಸರ್ವೆ (ಜಿಎಸ್‍ಐ) ಸಂಸ್ಥೆಯ ವಿಜ್ಞಾನಿಗಳು ಈ ಬಗ್ಗೆ ಸರ್ಕಾರಕ್ಕೆ ಎರಡನೇ ಮತ್ತು ಅಂತಿಮ ವರದಿಯನ್ನು ಇತ್ತೀಚೆಗೆ ಸಲ್ಲಿಸಿದ್ದು, ಅದರಲ್ಲಿ ಈ ಬಗ್ಗೆ ಉಲ್ಲೇಖಿಸಿದೆ. ಇದೇ ಸಂಸ್ಥೆಯ ವಿಜ್ಞಾನಿಗಳ ತಂಡ ಆಗಸ್ಟ್ ನಲ್ಲಿ ತನ್ನ ಪ್ರಾಥಮಿಕ ವರದಿಯನ್ನು ಸಹ ಸಲ್ಲಿಸಿತ್ತು.

ಕೊಡಗು ಜಿಲ್ಲೆಯ ಭೂ ಕುಸಿತ ಪ್ರದೇಶಗಳಿಗೆ ಭೇಟಿ ನೀಡಿ ಈ ಬಗ್ಗೆ ಅಧ್ಯಯನ ಕೈಗೊಂಡಿದ್ದ ಜಿಎಸ್‍ಐ ಮತ್ತು ಬೆಂಗಳೂರಿನ ಭಾÀರತೀಯ ವಿಜ್ಞಾನ ಸಂಸ್ಥೆ(ಐಐಎಸ್‍ಸಿ)ಸಂಸ್ಥೆಯ ತಂಡಗಳು ಆಗಸ್ಟ್ ನಲ್ಲಿಯೇ ತಮ್ಮ ಪ್ರಾಥಮಿಕ ವರದಿಯಲ್ಲಿ ಕೊಡಗಿನ ಭೂಕುಸಿತವು ಮಾನವ ನಿರ್ಮಿತ ಎಂದು ವರದಿ ಸಲ್ಲಿಸಿದ್ದವು.

ಜೂನ್ ತಿಂಗಳ 09 ಮತ್ತ್ತು 10ನೇ ತಾರೀಕಿನಂದು ಮಡಿಕೇರಿ-ಕೊಯನಾಡು-ಸುಳ್ಯ ರಸ್ತೆ ವಿಭಾಗದಲ್ಲಿ ಮತ್ತು ವೀರಾಜಪೇಟೆ-ಮಾಕುಟ್ಟ ರಸ್ತೆಯಲ್ಲಿ ಉಂಟಾದ ಭೂಕುಸಿತ ಸ್ಥಳಗಳಿಗೆ ವಿಜ್ಞಾನಿಗಳ ತಂಡ ಭೇಟಿ ನೀಡಿ ಅಧ್ಯಯನ ನಡೆಸಿತ್ತು. ಈ ವ್ಯಾಪ್ತಿಯಲ್ಲಿ ಭೂಕುಸಿತವಾದ 8 ಜಾಗಗಳಿಗೆ ಜುಲೈ 24 ರಿಂದ 26 ರವರೆಗೆ ಭೇಟಿ ನೀಡಿದ ವಿಜ್ಞಾನಿಗಳ ತಂಡ ಕಾರಣಗಳನ್ನು ಗುರುತಿಸಿದ್ದು, ಇವುಗಳಲ್ಲಿ ಭೂಕುಸಿತಕ್ಕೆ ಸರಿಯಾದ ರಸ್ತೆ ನಿರ್ಮಾಣ ತಂತ್ರವನ್ನು ಅನುಸರಿಸದೇ ಇರುವದೆ ಕಾರಣವಾಗಿದೆ ಎಂದು ಉಲ್ಲೇಖಿಸಿದೆ.

ಎರಡನೇ ಭೂ ಕುಸಿತವು ಉತ್ತರ ಕೊಡಗು ವಿಭಾಗದಲ್ಲಿ ತಾ. 12ರಿಂದ ತಾ. 18 ಆಗಸ್ಟ್ ತಿಂಗಳಲ್ಲಿ ನಡೆದಿರುವದು.

(ಮೊದಲ ಪುಟದಿಂದ) ಈ ವ್ಯಾಪ್ತಿಯ 105 ಸ್ಥಳಗಳಲ್ಲಿ ಭಾರೀ ಭೂಕುಸಿತ ಉಂಟಾಗಿದೆ. ಭಾರೀ ಮಳೆ ಇಲ್ಲದಿದ್ದರೆ ಕಡಿದಾದ ಇಳಿಜಾರು ಜಾರಿಕೊಳ್ಳುವದಿಲ್ಲ. ಪ್ರಮುಖವಾಗಿ ನೈಸರ್ಗಿಕ ಇಳಿಜಾರುಗಳನ್ನು ತಿದ್ದುಪಡಿ ಮಾಡಿರುವದು ಮತ್ತು ರಸ್ತೆ ರಚನೆಗೆ ನೈಸರ್ಗಿಕ ಒಳಚರಂಡಿಗಳನ್ನು ತÀಡೆಯುವದು, ಮನೆಗಳು, ಹೊಟೇಲ್‍ಗಳು, ರೆಸಾರ್ಟ್‍ಗಳು, ಹೋಂಸ್ಟೇಗಳಂತಹ ಕಟ್ಟಡ ನಿರ್ಮಾಣದಿಂದ ಮತ್ತು ಪ್ಲಾಂಟೇಷನ್‍ಗಾಗಿ ಭೌಗೋಳಿಕ ಸ್ವರೂಪವನ್ನು ತಿದ್ದುಪಡಿ ಮಾಡಿರುವದು ಅತೀ ಹೆಚ್ಚು ಮಳೆಯಿಂದಾಗಿ ಭೂಕುಸಿತವನ್ನು ಪ್ರಚೋದಿಸಿದೆ ಎಂದು ವರದಿಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದೆ. ಜಿ.ಎಸ್.ಐ ವರದಿಯಲ್ಲಿ ಪುಟ ಸಂಖ್ಯೆ: 05 ರಿಂದ 46 ರವರೆಗೆ ಮತ್ತು ಅಧ್ಯಯನ 05 ಮತ್ತು 06 ರಲ್ಲಿ ಈ ಬಗ್ಗೆ ನಮೂದಿಸಿದೆ.

ಮಡಿಕೇರಿ ಮತ್ತು ಉತ್ತರ ಕೊಡಗು ವ್ಯಾಪ್ತಿಯಲ್ಲಿ ಜುಲೈ ತಿಂಗಳಲ್ಲಿ ಸಂಭವಿಸಿದ 3.4 ಪ್ರಮಾಣದ ಭೂಕಂಪದ ಕಾರಣದ ಬಗ್ಗೆಯು ವಿಜ್ಞಾನಿಗಳ ತಂಡ ಅಧ್ಯಯನ ನಡೆಸಿದ್ದು, ಪ್ರಾಕೃತಿಕ ಅನಾಹುತಗಳಿಗೆ ಭೂಕಂಪನದ ಪರಿಣಾಮ ತುಂಬಾ ದೂರದಲ್ಲಿದೆ ಎಂದು ಉಲ್ಲೇಖಿಸಿದೆ.

ಪರಿಹಾರ ಕ್ರಮ: ವರದಿಯಲ್ಲಿ ಪ್ರಾಕೃತಿಕ ವಿಕೋಪಕ್ಕೆ ತುತ್ತಾದ ಕೊಡಗಿನ ಪ್ರದೇಶ ಮತ್ತು ಅಲ್ಲಿನ ಜನ ಜೀವನ ಸುಸ್ಥಿತಿಗೆ ಬರಲು ಬಹಳ ಸಮಯ ತೆಗೆದುಕೊಳ್ಳುತ್ತದೆ. ಕೆಲವು ಪ್ರದೇಶಗಳನ್ನು ವಾಸ್ತವವಾಗಿ ಇಳಿಜಾರುಗಳನ್ನು ಸರಿಪಡಿಸಲು ಮತ್ತು ಸ್ಥಿರಗೊಳಿಸಲು ದಶಕಗಳ ಕಾಲ ತೆಗೆದುಕೊಳ್ಳಬಹುದು. ಭವಿಷ್ಯದಲ್ಲಿ ಅಂತಹ ವಿಪತ್ತು ಸಂಭವಿಸುವದನ್ನು ತಡೆಗಟ್ಟಲು ನಾವು ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ವರದಿ ಹೇಳಿದೆ. ಅವುಗಳಲ್ಲಿ ಮುಖ್ಯವಾಗಿ ಬೆಟ್ಟದ ಭೂ ಪ್ರದೇಶಗಳಲ್ಲಿ ಭೂಬಳಕೆಗಾಗಿ ಕಟ್ಟು ನಿಟ್ಟಿನ ಮಾರ್ಗ ಸೂಚಿ ಮತ್ತು ನಿಬಂಧನೆಗಳ ಅನುಷ್ಠಾನವಾಗಬೇಕು. ಭೂ ಪ್ರದೇಶಕ್ಕೆ ವಲಯ ನಿಯಮ ನಿಗದಿಯಾಗಿರಬೇಕು ಎಂದು ತಿಳಿಸಿದೆ.

ಎಲ್ಲಾ ನಿಯಮಗಳು ಭೂ ವಿಜ್ಞಾನಿ ಮತ್ತು ರಚನಾತ್ಮಕ ಇಂಜಿನಿಯರುಗಳ ಸ್ಪಷ್ಟೀಕರಣ ಹೊಂದಿರಬೇಕು. ಎಲ್ಲಾ ಲಂಬ ಇಳಿಜಾರುಗಳನ್ನು ತಡೆಯಬೇಕು. ಅನಿವಾರ್ಯವಾದರೆ ವೈಜ್ಞಾನಿಕ ಇಳಿಜಾರಿನ ಸ್ಥಿರತೆಗೆ ಪ್ರಾಮುಖ್ಯತೆ ನೀಡಬೇಕು. ಮಳೆನೀರಿನ ಸರಿಯಾದ ಚರಂಡಿಗಳನ್ನು ಖಾತ್ರಿ ಪಡಿಸಬೇಕು. ನೈಸರ್ಗಿಕ ಒಳಚರಂಡಿಗಳಿಗೆ ಅಡೆತಡೆ ತೆರವುಗೊಳಿಸಬೇಕು. ವೆಟಿವರ್ ಎಂಬ ಜಾತಿ ಹುಲ್ಲುಗಳನ್ನು ನೆಡುವ ಮೂಲಕ ಇಳಿಜಾರಿನ ಸ್ಥಿರತೆಯನ್ನು ಸುಧಾರಿಸಬೇಕು ಮತ್ತು ಭೂಕುಸಿತದ ಬಗ್ಗೆ ಜಾಗೃತಿ ಕಾರ್ಯಕ್ರಮ ನಡೆಸಬೇಕು ಎಂಬ ಬಗ್ಗೆ ವರದಿಯಲ್ಲಿ ಪರಿಹಾರ ಕ್ರಮಗಳನ್ನು ಸೂಚಿಸಿದೆ.

ಪ್ರತಿಕ್ರಿಯೆ: ಟಿ.ವಿ.ರಾಮಚಂದ್ರ (ವಿಜ್ಞಾನಿ), ಭಾರತೀಯ ವಿಜ್ಞಾನ ಸಂಸ್ಥೆ, (ಐ.ಐ.ಎಸ್.ಸಿ) ಬೆಂಗಳೂರು

ಯೋಜನೆಗಳ ಮೂಲಕ ಪ್ರಪಂಚದ ಅತ್ಯಂತ ಸೂಕ್ಷ್ಮವಾದ ಪರಿಸರ ಪ್ರದೇಶವನ್ನು ಸರಕಾರವು ಕೊಲ್ಲುತ್ತಿದೆ. ಪಶ್ಚಿಮ ಘಟ್ಟ ನಾಶದಲ್ಲಿ ವಿಶಾಲವಾದ ಬೌಗೋಳಿಕ ಪ್ರದೇಶದ ನೀರು ಮತ್ತು ಆಹಾರ ಭದ್ರತೆ ಮೇಲೆ ಪರಿಣಾಮ ಬೀರುತ್ತದೆ.

ವರದಿ : ಅಣ್ಣೀರ ಹರೀಶ್ ಮಾದಪ್ಪ