ಮಡಿಕೇರಿ, ನ. 14: ಕೊಡಗು ಜಿಲ್ಲಾ ಪತ್ರಕರ್ತರ ಸಂಘದ 2018-21 ನೇ ನೂತನ ಆಡಳಿತ ಮಂಡಳಿಯ ಪದಗ್ರಹಣ ಹಾಗೂ ಸಂಘದ ಕಾರ್ಯಕ್ರಮಗಳಿಗೆ ಚಾಲನೆ ಸಮಾರಂಭ ತಾ. 16 ರಂದು ನಡೆಯಲಿದೆ. ಪತ್ರಿಕಾಭವನದಲ್ಲಿ ಅಂದು 11 ಗಂಟೆಗೆ ಸಂಘದ ಅಧ್ಯಕ್ಷೆ ಸವಿತಾ ರೈ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ರಾಜ್ಯ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಉದ್ಘಾಟಿಸಲಿದ್ದಾರೆ.

ಸಂಘದ ಮಾಜಿ ಅಧ್ಯಕ್ಷರು ಹಾಗೂ ‘ಶಕ್ತಿ’ ಪ್ರಧಾನ ಸಂಪಾದಕರಾದ ಜಿ. ರಾಜೇಂದ್ರ ಅವರು ನೂತನ ಪದಾಧಿಕಾರಿಗಳು ಹಾಗೂ ನಿರ್ದೇಶಕರುಗಳಿಗೆ ಪ್ರತಿಜ್ಞಾ ವಿಧಿ ಬೋಧನೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್, ರಾಜ್ಯ ಸಂಘದ ಉಪಾಧ್ಯಕ್ಷ ಮತ್ತಿಕೆರೆ ಜಯರಾಂ ಆಗಮಿಸಲಿದ್ದಾರೆ. ಕಾಂಗ್ರೆಸ್ ಮುಖಂಡ ನಾಪಂಡ ಮುತ್ತಪ್ಪ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಜಿಲ್ಲಾ ಪತ್ರಕರ್ತರ ಸಂಘದ ನಿರ್ಗಮಿತ ಅಧ್ಯಕ್ಷರು ಹಾಗೂ ರಾಜ್ಯ ಸಮಿತಿ ನಿರ್ದೇಶಕ ಅಜ್ಜಮಾಡ ರಮೇಶ್ ಕುಟ್ಟಪ್ಪ ಗೌರವ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದೆ. ಇದೇ ಸಂದರ್ಭ ಸಂತ್ರಸ್ತ ಪತ್ರಕರ್ತರಿಗಾಗಿ ರಾಜ್ಯ ಸಂಘದಿಂದ ಜಿಲ್ಲಾ ಸಂಘಕ್ಕೆ ನೀಡುವ ಪರಿಹಾರ ವಿತರಣೆ ಕಾರ್ಯಕ್ರಮ ನಡೆಯಲಿದೆ. ಮಹಿಳಾ ಸಂಘದ ಉದ್ಘಾಟನೆ ಹಾಗೂ ಸನ್ಮಾನ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಬಾಚರಣಿಯಂಡ ಅನು ಕಾರ್ಯಪ್ಪ ತಿಳಿಸಿದ್ದಾರೆ.