ಕೂಡಿಗೆ, ನ. 12: ಕೂಡಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹುದುಗೂರು ಗ್ರಾಮದಲ್ಲಿ ಕಳೆದ ಒಂದು ವಾರದಿಂದಲೂ ಕಾಡಾನೆಗಳ ದಾಂಧಲೆ ಹೆಚ್ಚಾಗಿದ್ದು, ರೈತರ ಭತ್ತದ ಬೆಳೆಗೆ ಭಾರೀ ನಷ್ಟವುಂಟಾಗಿದೆ.
ಆನೆಕಾಡು ವ್ಯಾಪ್ತಿಗೆ ಹೊಂದಿಕೊಂಡಂತಿರುವ ಬೆಂಡೆಬೆಟ್ಟ ಅರಣ್ಯ ಪ್ರದೇಶದಿಂದ ಹಾರಂಗಿ ನದಿಯನ್ನು ದಾಟಿ ಮುಖ್ಯರಸ್ತೆಯ ಮೂಲಕ ಹಾರಂಗಿ ನದಿಯ ಪ್ರದೇಶಕ್ಕೆ ಹೊಂದಿಕೊಂಡಂತಿರುವ ಹುದುಗೂರು ಗ್ರಾಮಕ್ಕೆ ಧಾಳಿ ನಡೆಸಿ, ರೈತರು ಬೆಳೆದಿದ್ದ ಪ್ರಕೃತಿ ವಿಕೋಪಕ್ಕೆ ತುತ್ತಾಗಿ ಅಳಿದುಳಿದ ಭತ್ತದ ಬೆಳೆಯನ್ನು ಕಾಡಾನೆಗಳು ತಿಂದು, ತುಳಿದು ನಷ್ಟ ಪಡಿಸಿವೆ.
ಬೆಂಡೆಬೆಟ್ಟದಿಂದ ನೇರವಾಗಿ ಹುದುಗೂರು ಗ್ರಾಮದ ಮುಖ್ಯರಸ್ತೆಯಲ್ಲಿ ಸಾಗಿ ಈ ವ್ಯಾಪ್ತಿಯ ಹತ್ತಕ್ಕು ಅಧಿಕ ರೈತರ ಜಮೀನುಗಳಿಗೆ ಕಳೆದ ಒಂದು ವಾರದಿಂದ ಅರಣ್ಯ ಇಲಾಖೆಯವರ ಕಣ್ಣು ತಪ್ಪಿಸಿ ಬೇರೆ ಬೇರೆ ದಾರಿಗಳ ಮೂಲಕ ಕಾಡಾನೆ ಹಿಂಡು ಧಾಳಿ ನಡೆಸುತ್ತಿದೆ.
ರೈತರಾದ ಶಿವಣ್ಣ, ಗಿರೀಶ್, ನಾರಾಯಣ್, ಕಾಳೇಗೌಡ, ಪ್ರೇಮಲೀಲಾ, ಜಯಣ್ಣ, ಕುಮಾರ್, ನಾಗರಾಜು ಸೇರಿದಂತೆ ಅನೇಕ ರೈತರ ಭತ್ತದ ಗದ್ದೆಗಳಿಗೆ ಧಾಳಿ ನಡೆಸಿವೆ. ರೈತರು ನೀಡಿದ ದೂರಿನನ್ವಯ ಅರಣ್ಯ ಇಲಾಖೆಯವರು ಬೆಂಡೆಬೆಟ್ಟ ವಿಭಾಗದಲ್ಲಿ ಕಾಯುತ್ತಿದ್ದರೆ, ಇತ್ತ ಹುದುಗೂರು ಮೀಸಲು ಅರಣ್ಯ ಪ್ರದೇಶದಿಂದಲೂ ಕಾಡಾನೆಗಳು ಧಾಳಿ ಮಾಡಿವೆ. ಇದರಿಂದ ಇಲ್ಲಿನ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಅರಣ್ಯ ಇಲಾಖೆಯವರು ತಕ್ಷಣ ಕಾಡಾನೆಗಳ ಧಾಳಿ ನಿಯಂತ್ರಿಸಲು ಕ್ರಮಕೈಗೊಳ್ಳಬೇಕು ಎಂದು ರೈತರು ಒತ್ತಾಯಿಸಿದ್ದಾರೆ.