ಗೋಣಿಕೊಪ್ಪ ವರದಿ, ನ. 12: ಪೊನ್ನಂಪೇಟೆ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಹಾಕಿಕೂರ್ಗ್ ವತಿಯಿಂದ ಆರಂಭಗೊಂಡ ಬಿ. ಡಿವಿಜûನ್ ಹಾಕಿ ಲೀಗ್‍ನ ಮೊದಲ ದಿನ 3 ತಂಡಗಳು ಗೆಲುವು ಪಡೆದುಕೊಂಡಿದೆ. ಒಂದು ಪಂದ್ಯ ರೋಚಕ ಡ್ರಾ ಫಲಿತಾಂಶ ನೀಡಿದೆ.
ಕೆಎಸ್‍ಸಿವಿ ಹಾಗೂ ಬೇತು ತಂಡಗಳ ನಡುವಿನ ಪಂದ್ಯ ಡ್ರಾ ಮೂಲಕ ಅಂತ್ಯವಾಯಿತು. ಉಳಿದಂತೆ ಕೋಣನಕಟ್ಟೆ ಇಲೆವೆನ್, ಅಮ್ಮತ್ತಿ ಸ್ಪೋಟ್ರ್ಸ್ ಕ್ಲಬ್, ಟಾಟಾ ತಂಡಗಳು ಜಯ ಗಳಿಸಿದವು.
ಕೆಎಸ್‍ಸಿವಿ ಹಾಗೂ ಬೇತು ತಂಡಗಳ ನಡುವಿನ ಪಂದ್ಯ 2-2 ಗೋಲುಗಳಿಂದ ಡ್ರಾದಲ್ಲಿ ಅಂತ್ಯವಾಯಿತು. ಕೆಎಸ್‍ಸಿವಿ ಪರ 5ರಲ್ಲಿ ಸುದರ್ಶನ್, 24ರಲ್ಲಿ ಬೋಸ್, ಬೇತು ಪರ 21, 33ನೇ ನಿಮಿಷಗಳಲ್ಲಿ 2 ಗೋಲು ಹೊಡೆದರು.
ಕೋಣನಕಟ್ಟೆ ಇಲೆವೆನ್ ತಂಡವು ಡ್ರಿಬ್ಲಸ್ ವಿರುದ್ದ 2-0 ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು. ಕೋಣನಕಟ್ಟೆ ಪರ 16ನೇ ನಿಮಿಷದಲ್ಲಿ ಅಯ್ಯಪ್ಪ, 42 ನಿಮಿಷದಲ್ಲಿ ದೀಪಕ್ ಗೋಲು ಹೊಡೆದರು.
ಅಮ್ಮತ್ತಿ ತಂಡವು ಕಿರುಗೂರು ತಂಡವನ್ನು 4-0 ಗೋಲುಗಳ ಅಂತರದಲ್ಲಿ ಮಣಿಸಿತು. ಅಮ್ಮತ್ತಿ ಪರ ಮುಕೇಶ್ 3, 15, 29ನೇ ನಿಮಿಷಗಳಲ್ಲಿ ಮೂರು ಗೋಲು ಹೊಡೆದು ಹ್ಯಾಟ್ರಿಕ್ ಸಾಧನೆ ಮಾಡಿದರು. 49 ನಿಮಿಷದಲ್ಲಿ ರಾಘವೇಂದ್ರ 1 ಗೋಲು ಹೊಡೆದು ಗೆಲುವಿನ ಅಂತರ ಹೆಚ್ಚಿಸಿದರು.
ಟಾಟಾ ತಂಡವು ಗುಂಡಿಯತ್ ಅಯ್ಯಪ್ಪ ತಂಡವನ್ನು 4-0 ಗೋಲುಗಳಿಂದ ಸೋಲಿಸಿತು. 10ರಲ್ಲಿ ಧವನ್, 15ರಲ್ಲಿ ದಿಲನ್, 18 ಕ್ಕೆ ಗಣಪತಿ, 31ರಲ್ಲಿ ಶಿರಾಗ್ ತಲಾ ಒಂದೊಂದು ಗೋಲು ಬಾರಿಸಿದರು.