ವೀರಾಜಪೇಟೆ, ನ. 12: ವೀರಾಜಪೇಟೆ ಪಟ್ಟಣ ಪಂಚಾಯಿತಿಯ ಹದಿನೆಂಟು ಸ್ಥಾನಗಳ ಚುನಾವಣೆ ಮುಕ್ತಾಯಗೊಂಡಿದ್ದು, ಇನ್ನು ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಡೆಯಬೇಕಾಗಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ಎರಡು ಪಕ್ಷಗಳಿಗೂ ಬಹುಮತದ ಕೊರತೆ ಇರುವದರಿಂದ ಎರಡು ಪಕ್ಷಗಳು ಸ್ಪಷ್ಟ ಬಹುಮತಕ್ಕಾಗಿ ಆಂತರಿಕವಾಗಿ ಸೆಣಸಾಟ ನಡೆಸುತ್ತಿವೆ.
ಭಾರತೀಯ ಜನತಾ ಪಾರ್ಟಿಗೆ ಒಂದು ಸ್ಥಾನ ಕಡಿಮೆ ಇರುವದರಿಂದ ಮೂರು ಮಂದಿ ಪಕ್ಷೇತರರಲ್ಲಿ ಒಬ್ಬರನ್ನು ಆಪರೇಷನ್ ಕಮಲದ ಮೂಲಕ ಸೆಳೆದುಕೊಳ್ಳಲು ಶತಾಯ ಗತಾಯ ಪ್ರಯತ್ನ ನಡೆದಿದೆ. ವೀರಾಜಪೇಟೆ ಪಟ್ಟಣ ಪಂಚಾಯಿತಿಯ ಜೆ.ಡಿಎಸ್ ವಿರುದ್ಧ ಜಯ ಸಾಧಿಸಿರುವ ಪಕ್ಷೇತರ ಅಭ್ಯರ್ಥಿಯನ್ನು ಪಕ್ಷ ಸಂಪರ್ಕಿಸಿದ್ದು, ಇತರ ಆಮಿಷದೊಂದಿಗೆ ಸ್ಥಾಯಿ ಸಮಿತಿ ಪದವಿ ನೀಡುವ ಭರವಸೆಯನ್ನು ಒಡ್ಡಿದ್ದರೂ ಪಕ್ಷೇತರ ಅಭ್ಯರ್ಥಿ ಚಿಂತಿಸಲು ಕಾಲಾವಕಾಶ ಕೋರಿರುವದಾಗಿ ತಿಳಿದು ಬಂದಿದೆ.
ಭಾರತೀಯ ಜನತಾ ಪಾರ್ಟಿಯ ವೀರಾಜಪೇಟೆ ನಗರ ಸಮಿತಿ ಹಾಗೂ ಪಕ್ಷದ ಮುಖಂಡರುಗಳು ಲಾಟರಿ ಅದೃಷ್ಟ ಪರೀಕ್ಷೆಯ ಅಧಿಕಾರದಿಂದ ದೂರ ಸರಿಯಲಿದ್ದಾರೆ. ಹೇಗಾದರೂ ಮಾಡಿ ಅಧ್ಯಕ್ಷ - ಉಪಾಧ್ಯಕ್ಷ ಪದವಿಗಳ ಚುನಾವಣೆಯಲ್ಲಿ ಬಹುಮತ ಸಾಬೀತುಪಡಿಸಲು ಮುಂದಿನ ಪ್ರಯತ್ನದಲ್ಲಿದ್ದಾರೆ.
ಜೆ.ಡಿ.ಎಸ್. ಹೊಂದಾಣಿಕೆಯೊಂದಿಗೆ ಏಳು ಸ್ಥಾನಗಳನ್ನು ಹೊಂದಿರುವ ಕಾಂಗ್ರೆಸ್ ಪಕ್ಷ ಮೂವರು ಪಕ್ಷೇತರರ ಬೆಂಬಲ ಪಡೆಯಲು ಪ್ರಯತ್ನದಲ್ಲಿದ್ದರೂ ಇಬ್ಬರು ಪಕ್ಷೇತರರು ಬೆಂಬಲ ನೀಡಲು ಸಮ್ಮತಿಸಿದ್ದರೂ ಒಬ್ಬ ಪಕ್ಷೇತರ ಅಭ್ಯರ್ಥಿ ಬೆಂಬಲ ನೀಡಲು ಮೀನ - ಮೇಷ ಎಣಿಸುತ್ತಿದ್ದಾರೆ. ಪಕ್ಷದ ಪ್ರಮುಖರು ಈ ಪಕ್ಷೇತರ ಅಭ್ಯರ್ಥಿಗೆ ಎಲ್ಲ ಆಸೆ - ಆಮಿಷ ತೋರಿಸಿದರೂ ಈ ಅಭ್ಯರ್ಥಿಯಿಂದ ಅಂತಿಮ ತೀರ್ಮಾನ ಪಕ್ಷಕ್ಕೆ ದೊರೆಯದೆ ಪಕ್ಷದ ಹತ್ತು ಸಂಖ್ಯೆಯ ಬೆಂಬಲ ಇನ್ನು ಕಗ್ಗಂಟಾಗಿ ಉಳಿದಿದೆ. ಎರಡು ರಾಜಕೀಯ ಪಕ್ಷಗಳು ಹೈಕೋರ್ಟ್ ಆದೇಶದತ್ತ ಮುಖ ಮಾಡಿದ್ದಾರೆ. ಹೈಕೋರ್ಟ್ ರಾಜ್ಯ ಸರಕಾರ ಈಗಾಗಲೇ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿಯನ್ನು ಘೋಷಿಸಿದ್ದು, ಅಧ್ಯಕ್ಷ ಸ್ಥಾನಕ್ಕೆ ಬಿ.ಸಿ.ಎಂ.ಎ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆಯನ್ನು ಮೀಸಲಿರಿಸಿರುವದರಿಂದ ಇದಕ್ಕೆ ತಡೆಯಾಜ್ಞೆ ಕೋರಿ ಉಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿರುವ ರಿಟ್ ಅರ್ಜಿಯ ವಿಚಾರಣೆ ಮುಗಿದಿದ್ದು, ಅಂತಿಮ ತೀರ್ಪು ತಾ. 13ರಂದು (ಇಂದು) ನಿರ್ಧಾರವಾಗಲಿದೆ. ನಂತರ ಜಿಲ್ಲಾ ಚುನಾವಣಾಧಿಕಾರಿಯವರು ಚುನಾವಣೆಯ ದಿನಾಂಕವನ್ನು ನಿಗಧಿಪಡಿಸಿ ಆದೇಶ ಹೊರಡಿಸಬೇಕಾಗಿದೆ.
ಪಟ್ಟಣ ಪಂಚಾಯಿತಿಯ ಪ್ರತಿಷ್ಠಿತ ಚುನಾವಣೆಯಲ್ಲಿ ಒಟ್ಟು ಹದಿನೆಂಟು ಸ್ಥಾನಗಳ ಪೈಕಿ ಭಾರತೀಯ ಜನತಾ ಪಾರ್ಟಿ 8 ಸ್ಥಾನಗಳನ್ನು, ಕಾಂಗ್ರೆಸ್ ಪಕ್ಷ ಆರು ಸ್ಥಾನಗಳು, ಜೆಡಿಎಸ್ 1 ಸ್ಥಾನ ಮೂರು ಪಕ್ಷೇತರರು ಗೆಲವು ಸಾಧಿಸಿದ್ದಾರೆ. ಪಟ್ಟಣ ಪಂಚಾಯಿತಿಯಲ್ಲಿ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನ ಪಡೆಯಲು ಯಾವದೇ ರಾಜಕೀಯ ಪಕ್ಷಕ್ಕೆ ಕನಿಷ್ಟ ಹತ್ತು ಸ್ಥಾನಗಳ ಅಗತ್ಯವಿದೆ. ಈಗ ಭಾರತೀಯ ಜನತಾ ಪಾರ್ಟಿ 8 ಸ್ಥಾನಗಳೊಂದಿಗೆ ಸಂಸದರು, ಕ್ಷೇತ್ರದ ಶಾಸಕರು ಮತದಾನ ಮಾಡಿದರೆ ಒಟ್ಟು ಹತ್ತು ಮತಗಳು ಬಿಜೆಪಿ ಪರವಾಗಿ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳು ಲಭಿಸಲಿವೆ. ಇದೇ ರೀತಿಯಲ್ಲಿ ಕಾಂಗ್ರೆಸ್ ಪಕ್ಷ ಮೂವರು ಪಕ್ಷೇತರ ಬೆಂಬಲಿಗರೊಂದಿಗೆ ಚುನಾವಣೆಯಲ್ಲಿ ಹತ್ತು ಮತಗಳ ಪ್ರದರ್ಶನ ಮಾಡಿದರೆ ಎರಡು ಪಕ್ಷದವರಿಗೂ ಲಾಟರಿಯ ಅದೃಷ್ಟವೇ ಬಹುಮತವಾಗಿ ಪರಿಣಮಿಸಲಿದೆ. -ಡಿ.ಎಂ.ಆರ್.