ಹಿಂದಿನಿಂದಲೂ ತಾಯಿಯ ಹಾಲೇ ಮಗುವಿಗೆ ಸರ್ವೋತ್ತಮ ಅಂಥ ಹೇಳುತ್ತಲೇ ಬಂದಿದ್ದೇವೆ. ಆದರೂ ಹಲವು ಕಾರಣಗಳಿಗೆ ಮತ್ತು ಮಕ್ಕಳ ತಾಯಂದಿರಲ್ಲಿರುವ ತಪ್ಪು ಕಲ್ಪನೆಗಳಿಂದಾಗಿ ಮಗುವಿಗೆ ಹಾಲು ನೀಡದೆ ಬಹುಬೇಗ ಹಾಲು ಮರೆಸುವುದು ನಡೆಯುತ್ತಲೇ ಬರುತ್ತಿದೆ. ಹೀಗಾಗಿ ಜಾಥಾ, ಶಿಬಿರ, ಪತ್ರಿಕಾ ಪ್ರಕಟಣೆ, ಜಾಹೀರಾತುಗಳ ಮೂಲಕ ಮಕ್ಕಳಿಗೆ ಎದೆಹಾಲನ್ನು ಕುಡಿಸಿ ಎಂದು ಹೇಳುವ ಸ್ಥಿತಿಗೆ ಬಂದು ತಲುಪುವಂತಾಗಿದೆ. ಇಷ್ಟಕ್ಕೂ ಮಗುವಿಗೆ ತಾಯಿಯ ಹಾಲನ್ನೇ ಏಕೆ ಉಣಿಸಬೇಕು ಅದರ ಪ್ರಾಮುಖ್ಯತೆ ಏನು ಎಂಬುದು ಒಂದು ಕಡೆಯಾದರೆ ಹಾಲುಣಿಸಿದರೆ ತಾಯಿಯ ಸೌಂದರ್ಯ ಹಾಳಾಗುತ್ತದೆ ಇನ್ನು ಏನೇನೋ ತಪ್ಪು ಕಲ್ಪನೆಗಳು ಕೂಡ ಕೆಲವರು ಮಕ್ಕಳಿಗೆ ಹಾಲು ಕೊಡಿಸುವಲ್ಲಿ ಹಿಂದೇಟು ಹಾಕಲು ಕಾರಣವಾಗುತ್ತಿದೆ.
ಆಧುನಿಕತೆಯ ಭರದಲ್ಲಿ ತಮಗೆ ಗೊತ್ತಿಲ್ಲದ ವಿಚಾರಗಳ ಬಗೆಗಿನ ತಪ್ಪು ಕಲ್ಪನೆಗಳಿಂದಾಗಿ ಪೋಷಕಾಂಶಯುಕ್ತ ಹಾಲನ್ನು ಸೇವಿಸಬೇಕಾದ ಮಕ್ಕಳು ಅದರರಿಂದ ವಂಚಿತರಾಗಿ ಆರೋಗ್ಯ ಕುಂಠಿತಗೊಂಡು ಸಾವಿನಂಚಿಗೆ ತಲುಪುತ್ತಿವೆ. ಹೀಗಾಗಿ ಹಾಲುಣಿಸುವ ಬಗ್ಗೆ ಅರಿವು ಮೂಡಿಸುವ ಕಾರ್ಯಗಳನ್ನು ವಿಶ್ವದಾದ್ಯಂತ ಮಾಡಲಾಗುತ್ತಿದೆ.
ವೈದ್ಯಲೋಕದಲ್ಲಿ ಹುಟ್ಟಿದ ಮಗುವಿಗೆ ತಾಯಿಯ ಹಾಲು ಪೋಷಣೆಯ ಪ್ರಾಥಮಿಕ ಮೂಲವಾಗಿರುವುದರಿಂದ ಹಾಲುಣಿಸುವುದನ್ನು ಮಗುವಿನ ಜೀವನದ ಆರಂಭದ ಅವಧಿ ಎಂದೇ ಹೇಳಲಾಗುತ್ತದೆ. ಏಕೆಂದರೆ ಎದೆಹಾಲು ಮಗುವಿಗೆ ಸುರಕ್ಷಿತ, ಪೋಷಣೆ ಮತ್ತು ಆರೋಗ್ಯದ ಅಭಿವೃದ್ಧಿಯನ್ನು ಖಾತರಿಪಡಿಸುತ್ತದೆ. ಇದೊಂದು ರೀತಿಯ ನೈಸರ್ಗಿಕ ಆಹಾರವಾಗಿರುವುದರಿಂದ ಮಗುವಿಗೆ ಸುಲಭವಾಗಿ ಜೀರ್ಣ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.
ವೈದ್ಯರ ಪ್ರಕಾರ ಮಗು ಹುಟ್ಟಿದ ಅರ್ಧ ಗಂಟೆಯೊಳಗೆ ಹಾಲು ಕುಡಿಸಬೇಕು. ಒಂದು ವೇಳೆ ಸಿಸೇರಿಯನ್ ಮೂಲಕ ಮಗುಹುಟ್ಟಿದ್ದರೆ ನಾಲ್ಕು ಗಂಟೆ ಅವಧಿಯಲ್ಲಿ ಹಾಲುಣಿಸಬೇಕಂತೆ. ಜೇನುತುಪ್ಪ, ಗ್ಲೂಕೋಸ್, ಸಕ್ಕರೆ ಬೆರೆಸಿದ ನೀರು ನೀಡುವುದನ್ನು ತಪ್ಪಿಸಿ ಹಾಲನ್ನು ನೀಡಬೇಕು.
ತಾಯಿಯ ಎದೆಯಿಂದ ಮೊದಲ ಬಾರಿಗೆ ಬರುವ ಹಾಲು ರೋಗನಿರೋಧಕವಾಗಿರುತ್ತದೆ ಮತ್ತು ಇದರಲ್ಲಿ ಪ್ರೊಟೀನ್, ಖನಿಜಾಂಶ, ವಿಟಮಿನ್ ಇಷ್ಟೇ ಅಲ್ಲ ವಿಟಮಿನ್ ಎ, ಆ್ಯಂಟಿಬಾಡಿಗಳು, ಸೋಂಕು ನಿರೋಧಕಗಳು ಜಾಸ್ತಿ ಇರುತ್ತದೆ. ಮೂರು ದಿನಗಳ ಕಾಲ ಬರುವ ಹಾಲು ಗಾಢಹಳದಿ ಬಣ್ಣದಲ್ಲಿರುತ್ತದೆ. ಹೀಗಾಗಿ ಇದನ್ನು ಅಔಐಔSಖಿಖUಒ ಎಂದು ಕರೆಯಲಾಗುತ್ತದೆ. ಇದರಲ್ಲಿ ವಿರೇಚಕ (ಐಚಿxಚಿಣive) ಗುಣವಿರುವುದರಿಂದ ಮಗುವಿನ ಆರೋಗ್ಯದ ದೃಷ್ಟಿಯಿಂದ ಸರ್ವೋತ್ತಮವಾಗಿರುತ್ತದೆ. ಆದ್ದರಿಂದ ತಪ್ಪದೆ ನೀಡಬೇಕಾಗುತ್ತದೆ.
ಮಗುವಿಗೆ ಆರು ತಿಂಗಳು ತುಂಬುವವರೆಗೂ ವಿಟಮಿನ್, ಖನಿಜಾಂಶ ಅಥವಾ ಔಷಧಿಗಳಂತಹ ಡ್ರಾಪ್‍ಗಳನ್ನು ಹೊರತು ಪಡಿಸಿ ವೈದ್ಯರ ಸಲಹೆ ಇಲ್ಲದೆ ಯಾವುದೇ ರೀತಿಯ ಘನ ಅಥವಾ ದ್ರವ ರೂಪದ ಪದಾರ್ಥಗಳನ್ನು ನೀಡಬಾರದು. ಏಕೆಂದರೆ ಈ ರೀತಿಯ ಆಹಾರವನ್ನು ನೀಡುವುದರಿಂದ ಮಗು ಹಾಲು ಸೇವನೆಯನ್ನು ಕಡಿಮೆ ಮಾಡುವ ಸಾಧ್ಯತೆ ಹೆಚ್ಚಿರುತ್ತದೆ. ಪರಿಣಾಮ ಮಗುವಿನ ಆರೋಗ್ಯ ಕುಂಠಿತವಾಗಿ ಬಿಡುತ್ತದೆ.
ಮಗುವಿಗೆ ಆರು ತಿಂಗಳ ಕಾಲ ಕಡ್ಡಾಯವಾಗಿ ಹಾಲನ್ನು ಮಾತ್ರ ನೀಡಬೇಕು. ಆ ನಂತರ ವೈದ್ಯರ ಸಲಹೆ ಪಡೆದು ಪೂರಕ ಆಹಾರಗಳನ್ನು ನೀಡಲು ಶುರುಮಾಡಬಹುದು. ಮಗುವಿಗೆ ಎರಡು ವರ್ಷಗಳ ಕಾಲ ಹಾಲುಣಿಸಲು ಅಡ್ಡಿಯಿಲ್ಲ.
ವೈದ್ಯರ ಪ್ರಕಾರ ಮಗು ಆಗಾಗ ಹಾಲನ್ನು ಹೀರಿಕೊಳ್ಳುವುದು, ಸ್ತನದಲ್ಲಿ ಹಾಲು ಸಂಪೂರ್ಣ ಖಾಲಿಯಾದ ಅನುಭವ ಇದೆಲ್ಲವೂ ಯಶಸ್ವಿ ಹಾಲುಣಿಸುವಿಕೆಯ ಅಂಶಗಳಂತೆ. ಇನ್ನು ಅನಾರೋಗ್ಯದಿಂದ ಬಳಲುವ ಅಥವಾ ಔಷಧಿ ಸೇವಿಸುವ ತಾಯಂದಿರು ವೈದ್ಯರು ಹಾಲು ನೀಡಬಾರದು ಎಂದು ಹೇಳುವ ತನಕ ಹಾಲುಣಿಸುವುದನ್ನು ನಿಲ್ಲಿಸಬಾರದು. ಒಂದು ವೇಳೆ ತಾತ್ಕಾಲಿಕವಾಗಿ ಹಾಲುಣಿಸುವುದನ್ನು ನಿಲ್ಲಿಸಿದ್ದರೆ ಮತ್ತೆ ವೈದ್ಯರ ಸಲಹೆ ಮೇರೆಗೆ ಹಾಲುಣಿಸುವುದನ್ನು ಮುಂದುವರೆಸಬಹುದು.
ಬಿಟ್ಟಿ ಸಲಹೆಗಳಿಗೆ ಕಿವಿಗೊಡ ಬಾರದು : ಹಾಲುಣಿಸುವ ಅನೇಕ ಮಹಿಳೆಯರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹಾಲು ಉತ್ಪತ್ತಿಯಾಗುವುದಿಲ್ಲ ಎಂಬ ಮಾತುಗಳಿವೆ. ಆದರೆ ಆಧುನಿಕ ವೈದ್ಯಲೋಕ ಇದನ್ನು ಒಪ್ಪುವುದಿಲ್ಲ. ಅವರ ಪ್ರಕಾರ ಮಹಿಳೆಯರು ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದ ಹಾಲನ್ನು ಉತ್ಪಾದಿಸುತ್ತಾರೆ. ಬಹುಪಾಲು ಶಿಶುಗಳು ನಿಧಾನವಾಗಿ ತೂಕಗಳಿಸುವ ಅಥವಾ ಕಳೆದುಕೊಳ್ಳುತ್ತವೆ. ಇದಕ್ಕೆ ಸಾಕಷ್ಟು ಹಾಲು ಇಲ್ಲ ಎಂಬುದಲ್ಲ. ಬದಲಿಗೆ ತಾಯಿ ಬಳಿಯಿರುವ ಹಾಲು ಮಗುವಿಗೆ ಸಮರ್ಪಕವಾಗಿ ದೊರಕುತ್ತಿಲ್ಲ ಎನ್ನುವುದೇ ಮುಖ್ಯ ಕಾರಣವಂತೆ.
ಇನ್ನು ಸ್ವಲ್ಪ ಮುಂದೆ ಹೋಗಿ ಹೇಳುವುದಾದರೆ ಮಕ್ಕಳು ತೂಕ ಕಳೆದುಕೊಳ್ಳಲು ತಾಯಿಹಾಲಿನ ಉತ್ಪಾದನೆ ಕಡಿಮೆಯಾಗಿರುವುದಲ್ಲ. ಬದಲಿಗೆ ಸರಿಯಾಗಿ ಸ್ತನಪಾನ ಮಾಡಿಸದಿರುವುದು, ವಿಳಂಬವಾಗಿ ಹಾಲುಣಿಸುವುದು, ಆಗಾಗ ಹಾಲುಣಿಸದಿರುವುದಂತೆ. ಹಾಲುಣಿಸುವ ತಾಯಂದಿರು ಸ್ತನದಲ್ಲಿ ಹಾಲು ತುಂಬಲು ಸಮಯ ನೀಡಬೇಕು ಎಂಬುದು ಸರಿಯಲ್ಲ. ಏಕೆಂದರೆ ಮಗು ಹಾಲುಕುಡಿಯುತ್ತಿದ್ದಂತೆಯೇ ಸ್ತನದಲ್ಲಿ ಹಾಲು ಉತ್ಪತ್ತಿಯಾಗುತ್ತಲೇ ಇರುತ್ತದೆ. ಹಾಗಾಗಿ ನಿರ್ದಿಷ್ಟ ಸಮಯವನ್ನು ಕಾಯುವ ಅಗತ್ಯವಿಲ್ಲ. ಹಾಲುಣಿಸುವ ತಾಯಂದಿರು ಗ್ಯಾಸ್ಟಿಕ್ ಉಂಟಾಗುವಂತಹ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ಮಗುವಿನ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ನಂಬಲಾಗುವುದಿಲ್ಲ. ಎದೆಹಾಲು ರಕ್ತದ ಹರಿವಿನಲ್ಲಿರುವ ಅಂಶಗಳಿಂದ ತಯಾರಾಗುತ್ತದೆ ಹೊರತು ಹೊಟ್ಟೆಯಲ್ಲಿರುವ ಪದಾರ್ಥಗಳಿಂದಲ್ಲ. ಆದ್ದರಿಂದ ಬಹುತೇಕ ಮಕ್ಕಳಿಗೆ ಯಾವುದೇ ತೊಂದರೆಯಾಗುವುದಿಲ್ಲ. ತಾಯಿ ಆಹಾರ ಪದ್ಧತಿಯನ್ನು ತ್ಯಜಿಸುವುದಕ್ಕಿಂತ ಸ್ತನಪಾನ ತಂತ್ರವನ್ನು ಬದಲಾಯಿಸಿಕೊಳ್ಳುವುದು ಉತ್ತಮ.
ಮಗುವಿಗೆ ಅತಿಸಾರ ಅಥವಾ ವಾಂತಿಯಾಗುತ್ತಿದ್ದರೆ ತಾಯಿ ಸ್ತನಪಾನ ನಿಲ್ಲಿಸುವ ಅಗತ್ಯವಿಲ್ಲ. ಮಗುವಿನ ಕರುಳು ಸೋಂಕಿಗೆ ಎದೆಹಾಲು ಅತ್ಯುತ್ತಮ ಆಹಾರ. ಸ್ವಲ್ಪ ಸಮಯದವರೆಗೂ ಇತರೆ ಗಟ್ಟಿ ಆಹಾರವನ್ನು ನಿಲ್ಲಿಸುವುದು ಒಳ್ಳೆಯದು. ಆದರೆ ಹಾಲುಕುಡಿಸುವುದನ್ನು ಮಾತ್ರ ನಿಲ್ಲಿಸದೆ ಮುಂದುವರೆಸಬೇಕು.
ರಾತ್ರಿವೇಳೆ ಹಾಲುಣಿಸುವುದು ಮುಖ್ಯವಲ್ಲ ಎನ್ನುವವರಿದ್ದಾರೆ. ಆದರೆ ಇದು ತಪ್ಪು ಕಲ್ಪನೆ. ಏಕೆಂದರೆ ಹಾಲು ಉತ್ಪಾದನೆಗೆ ಕಾರಣವಾದ ಹಾರ್ಮೋನ್‍ಗಳು ರಾತ್ರಿ ವೇಳೆಯಲ್ಲಿ ಗರಿಷ್ಠ ಪ್ರಮಾಣದಲ್ಲಿರುತ್ತವೆ. ಇವುಗಳ ಉತ್ಪಾದನೆಗಾಗಿ ರಾತ್ರಿ ವೇಳೆ ಸ್ತನಪಾನ ಮಾಡಿಸುವುದು ಅಗತ್ಯ.
ಹಾಲುಣಿಸುವಾಗ ಸ್ತನಗಳನ್ನು ಬದಲಾಯಿಸಬೇಕು ಎಂಬುದಾಗಿ ಕೆಲವರು ಹೇಳುತ್ತಾರೆ. ಆದರೆ ಅದನ್ನು ಒಪ್ಪಲು ಸಾಧ್ಯವಿಲ್ಲ. ಏಕೆಂದರೆ ಶಿಶು ಮೊದಲನೆಯ ಸ್ತನವನ್ನು ಪೂರ್ಣಗೊಳಿಸಲು ಅವಕಾಶ ನೀಡಬೇಕು. ಹಾಲುಣಿಸುವಾಗ ಬರುವ ಮೊದಲ ಹಾಲನ್ನು ಈoಡಿemiಟಞ ಎಂದು ಕರೆಯುತ್ತಾರೆ. ಇದು ನೀರಿನ ರೂಪದಲ್ಲಿದ್ದು, ಕೊಬ್ಬಿನ ಅಂಶ ಕಡಿಮೆ ಇರುತ್ತದೆಯಲ್ಲದೆ, ಮಗುವಿನ ದಾಹವನ್ನು ಕಡಿಮೆ ಮಾಡುತ್ತದೆ.
ಆ ನಂತರ ಬರುವ ಹಾಲು ಹೆಚ್ಚು ಕೊಬ್ಬಿನಾಂಶದಿಂದ ಕೂಡಿರುತ್ತದೆ. ಇದು ಮಗುವಿನ ಹಸಿವನ್ನು ಇಂಗಿಸುತ್ತದೆ. ದೇಹಕ್ಕೆ ಹೆಚ್ಚಿನ ಕ್ಯಾಲೋರಿಯನ್ನು ಒದಗಿಸುತ್ತದೆ. ಇದೆಲ್ಲಕ್ಕಿಂತ ಮಗುವಿಗೆ ಹಾಲುಣಿಸುವ ತಾಯಂದಿರು ಅವರಿವರು ಹೇಳುವ ಸಲಹೆಗಳನ್ನು ಕೇಳಿ ಸಮಸ್ಯೆಗಳನ್ನು ಸೃಷ್ಠಿಸಿಕೊಳ್ಳುವುದಕ್ಕಿಂತ ವೈದ್ಯರನ್ನು ಸಂಪರ್ಕಿಸಿ ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವುದು ತಮ್ಮ ಮತ್ತು ಮಗುವಿನ ಆರೋಗ್ಯದ ದೃಷ್ಠಿಯಿಂದ ಒಳ್ಳೆಯದು ಎಂಬುವುದನ್ನು ಮರೆಯಬಾರದು.
ತಾಯಿಯ ಆರೋಗ್ಯದ ಕಡೆಗೂ ಗಮನವಿರಲಿ : ಮಗುವಿಗೆ ಹಾಲುಣಿಸಿ ಪೋಷಣೆ ಮಾಡುವ ಕಾರ್ಯ ಅಷ್ಟು ಸುಲಭವಾದುದಲ್ಲ. ಇಂತಹ ಸಂದರ್ಭದಲ್ಲಿ ಮಗುವಿನ ಬಗ್ಗೆ ಎಷ್ಟು ಕಾಳಜಿ ಇರುತ್ತದೆಯೋ ಅಷ್ಟೇ ಕಾಳಜಿಯನ್ನು ತನ್ನ ಬಗ್ಗೆಯೂ ತಾಯಂದಿರು ವಹಿಸಬೇಕಾಗುತ್ತದೆ. ಏಕೆಂದರೆ ಮಗುವಿನ ಆರೋಗ್ಯ ತಾಯಿಯ ಆರೋಗ್ಯವನ್ನೇ ಅವಲಂಭಿಸಿರುತ್ತದೆ. ತಾಯಿ ಆರೋಗ್ಯವಾಗಿದ್ದರೆ ಮಾತ್ರ ಮಗುವನ್ನು ಆರೋಗ್ಯವಾಗಿರುವಂತೆ ನೋಡಿಕೊಳ್ಳಲು ಸಾಧ್ಯವಾಗುತ್ತದೆ.
ಹಾಲುಣಿಸುವ ಸಂದರ್ಭಗಳಲ್ಲಿ ತಾಯಿಗೆ ಅಗತ್ಯವಿರುವ ಪೌಷ್ಟಿಕಾಂಶಗಳಾದ ಪ್ರೊಟೀನ್, ಕೊಬ್ಬು, ಕ್ಯಾಲ್ಸಿಯಂ, ಕಬ್ಬಿಣಾಂಶ, ಅಗತ್ಯ ವಿಟಮಿನ್ ಇರುವ ಪೋಷಕಾಂಶಗಳು ಹೇರಳವಾಗಿರುವ ಆಹಾರಗಳನ್ನು ನೀಡಬೇಕಾಗುತ್ತದೆ. ಅಕ್ಕಿ, ರಾಗಿ. ಗೋಧಿ ಸೇರಿದಂತೆ ವಿವಿಧ ಧಾನ್ಯಗಳು, ಸಕ್ಕರೆಯ ಉತ್ಪನ್ನಗಳು, ಕಾಳುಕಡ್ಡಿಗಳಂತಹ ಹೆಚ್ಚಿನ ಕ್ಯಾಲೋರಿಯನ್ನು ತೆಗೆದುಕೊಳ್ಳಬೇಕು.
ಇದೆಲ್ಲದರ ನಡುವೆ ದ್ರವ ಆಹಾರದ ಪದಾರ್ಥಗಳಿಗೂ ಒತ್ತು ನೀಡಬೇಕು. ದಿನಕ್ಕೆ ಎರಡರಿಂದ ಮೂರು ಲೀಟರ್‍ನಷ್ಟಾದರೂ ನೀರು, ಸೂಪ್, ಜ್ಯೂಸ್, ಮಜ್ಜಿಗೆ ಹಾಲಿನಂತಹ ಪದಾರ್ಥಗಳನ್ನು ಸೇವಿಸಬೇಕು. ಇದರಿಂದ ಮಲಬದ್ಧತೆಯನ್ನು ದೂರವಿಡಲು ಸಾಧ್ಯವಾಗುತ್ತದೆ.
ಹಾಲುಣಿಸುವ ತಾಯಿ ಅಪೌಷ್ಟಿಕತೆಯಿಂದ ಬಳಲುತ್ತಿದ್ದರೆ ಮಗು ಆರೋಗ್ಯವಾಗಿ ಬೆಳೆಯಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಸಾಧ್ಯವಾದಷ್ಟು ಆರೋಗ್ಯದ ಬಗ್ಗೆ ಮತ್ತು ಆರೋಗ್ಯ ಕಾಪಾಡಿಕೊಳ್ಳಲು ಬೇಕಾದ ಆಹಾರದ ಬಗ್ಗೆ ಗಮನಹರಿಸಬೇಕು. ತಾವು ಆರೋಗ್ಯವಾಗಿರಬೇಕು ತಮ್ಮಿಂದಲೇ ಮತ್ತೊಂದು ಜೀವವೂ ಉಸಿರಾಡುತ್ತಿದೆ ಎಂಬುದನ್ನು ಮರೆಯಬಾರದು.
ಎದೆಹಾಲು ಕುಡಿಸುವುದರಿಂದ ಮಗುವಿನ ಮೆದುಳಿನ ಬೆಳವಣಿಗೆ ಮತ್ತು ದೀರ್ಘಾವಧಿಯ ಆರೋಗ್ಯ ಹೊಂದಲು ಸಹಾಯವಾಗುತ್ತದೆ. ಜತೆಗೆ ಸೋಂಕು ತಗಲುವ ಅಪಾಯ ಕಡಿಮೆಯಾಗುತ್ತದೆ. ಇಷ್ಟೇ ಅಲ್ಲದೆ ತಾಯಿಯಂದಿರ ಗರ್ಭಕೋಶದ ಪ್ರತ್ಯಾಕರ್ಷಣೆಗೂ ಸಹಕಾರಿಯಾಗುತ್ತದೆ. ಇದೆಲ್ಲದಕ್ಕಿಂತ ಹೆಚ್ಚಾಗಿ ಕೃತಕ ಹಾಲುಣಿಸುವಿಕೆಗೆ ಗುಡ್‍ಬೈ ಹೇಳಿ ಮಗುವಿಗೆ ಎದೆಹಾಲುಣಿಸಿದರೆ ತಾಯಿ ಮಗುವಿನ ಸಂಪರ್ಕ ಮತ್ತು ಬಾಂಧವ್ಯ ವೃದ್ಧಿಯಾಗುತ್ತದೆ ಎಂಬುದನ್ನು ಮರೆಯಬಾರದು.
?ಬಿ. ಎಂ. ಲವಕುಮಾರ್,
ಮೈಸೂರು.