ಮಡಿಕೇರಿ, ನ. 12: ಇಲ್ಲಿಗೆ ಸಮೀಪದ ಮಕ್ಕಂದೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಸತತ ಮೂರನೇ ಬಾರಿಗೆ ಕೊಕ್ಕಲೆರ ಸುಜು ತಿಮ್ಮಯ್ಯ ಆಯ್ಕೆಯಾಗಿ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ. ಉಪಾಧ್ಯಕ್ಷರಾಗಿ ಅಣ್ಣೆಚ್ಚಿರ ಸತೀಶ್ ಸೋಮಣ್ಣ ಆಯ್ಕೆಯಾಗಿದ್ದಾರೆ.
ನೂತನ ಸಾಲಿಗೆ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಅಧಿಕಾರ ಸ್ವೀಕಾರ ಹಾಗೂ ಮತದಾರ ಸಹಕಾರಿಗಳಿಗೆ ಅಭಿನಂದನಾ ಸಮಾರಂಭ ಸಹಕಾರ ಸಂಘದ ಸಭಾಂಗಣದಲ್ಲಿ ನೆರವೇರಿತು.
ಈ ಸಂದರ್ಭದಲ್ಲಿ ಮಾತನಾಡಿದ ಸುಜು ತಿಮ್ಮಯ್ಯ ಅವರು ಈ ಹಿಂದೆ ತಾವು ಅಧಿಕಾರ ವಹಿಸಿಕೊಳ್ಳುವ ಸಂದರ್ಭದಲ್ಲಿ ಸಂಘದಲ್ಲಿ ರೂ. 25 ಲಕ್ಷದಷ್ಟು ಮಾತ್ರ ಸಾಲದ ವಹಿವಾಟು ಇದ್ದಿತು. ಇದೀಗ ಕಳೆದ ಅವಧಿ ಅಂತ್ಯಕ್ಕೆ ರೂ. 7.50 ಕೋಟಿಯಷ್ಟು ಸಾಲ ನೀಡಿದ್ದು, ಪೂರ್ಣ ಮೊತ್ತದ ಸಾಲ ವಸೂಲಾತಿ ಕೂಡ ಆಗಿರುವದಾಗಿ ತಿಳಿಸಿದರು.
ಕಳೆದ ವರ್ಷ ರೂ. 17.50 ಲಕ್ಷದಷ್ಟು ಲಾಭ ಗಳಿಸಲಾಗಿತ್ತು. ಮುಂದಿನ ಸಾಲಿಗೆ 25 ಲಕ್ಷದಷ್ಟು ಲಾಭಾಂಶದ ನಿರೀಕ್ಷೆಯಲ್ಲಿದ್ದೇವು. ಆದರೆ ಪ್ರಾಕೃತಿಕ ವಿಕೋಪದಿಂದ ಮಕ್ಕಂದೂರು ಗ್ರಾಮ ತತ್ತರಿಸಿದ್ದು, ಗುರಿ ತಲಪಬಹುದೆಂಬ ನಿರೀಕ್ಷೆಯೂ ಇರುವದಾಗಿ ಹೇಳಿದರು. ಸರಕಾರದ ಸಾಲ ಮನ್ನಾದಿಂದ ರೂ. 4.50 ಕೋಟಿ ಮೊತ್ತ ಮನ್ನಾ ಆಗಿದೆ. ಆದರೆ ಜಾಮೀನು, ಆಭರಣ ಸೇರಿದಂತೆ ಇತರ ವೈಯಕ್ತಿಕ ಸಾಲದ ಮೊತ್ತ ರೂ. 3.50 ಕೋಟಿಯಷ್ಟಿದ್ದು, ಸಾಲ ಪಡೆದವರು ಕನಿಷ್ಟ ಬಡ್ಡಿಯನ್ನಾದರೂ ಪಾವತಿಸಿ, ಹೆಚ್ಚಿನ ಹೊರೆಯನ್ನು ಕಡಿಮೆ ಮಾಡಿಕೊಳ್ಳುವಂತೆ ಮನವಿ ಮಾಡಿದರು. ಈ ಭಾಗದಲ್ಲಿ ಸಾಕಷ್ಟು ನಷ್ಟ ಸಂಭವಿಸಿದ್ದರೂ ದಾಖಲೆಗಳಿದ್ದಲ್ಲಿ ಕೃಷಿ ಸಾಲ ಒದಗಿಸಲಾಗುವದು. ಈ ಬಗ್ಗೆ ಯಾವದೇ ಆತಂಕ ಬೇಡವೆಂದರು. ಇದೇ ಸಂದರ್ಭದಲ್ಲಿ ಸದಸ್ಯರುಗಳು ಹಲವಾರು ವಿಚಾರಗಳ ಬಗ್ಗೆ ಚರ್ಚೆ ಮಾಡಿದರು.
ಈ ಸಂದರ್ಭ ನಿರ್ದೇಶಕರು ಗಳಾದ ಪಿ.ಎಂ. ಸುಲೋಚನ, ಉಕ್ಕೇರಂಡ ನೀಲಮ್ಮ, ಕನ್ನಿಕಂಡ ಶ್ಯಾಂ ಸುಬ್ಬಯ್ಯ, ಕೊಟ್ಟಕೇರಿಯನ ಪ್ರದೀಪ್, ಲಕ್ಕಪ್ಪನ ವಿಜೇತ್, ರಾಮಣ್ಣ ನಾಯಕ್ ಉಪಸ್ಥಿತರಿದ್ದರು. ನಿರ್ದೇಶಕಿ ಪಡೇಟ್ಟಿರ ಕವಿತಾ ಪ್ರಾರ್ಥಿಸಿದರೆ, ಉಪಾಧ್ಯಕ್ಷ ಸತೀಶ್ ವಂದಿಸಿದರು.