ಮಡಿಕೇರಿ, ನ. 12: ಕೊಡಗು ಜಿಲ್ಲಾ ಮರಾಠ-ಮರಾಠಿ ಸಮಾಜ ಸೇವಾ ಸಂಘ ಹಾಗೂ ಕೊಡಗು ಜಿಲ್ಲಾ ಅಂಬಾಭವಾನಿ, ಯುವಕ-ಯುವತಿ ಕ್ರೀಡಾ ಮತ್ತು ಮನೋರಂಜನಾ ಸಂಘದ ವತಿಯಿಂದ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಮೈಸೂರು-ಬಂಟ್ವಾಳ ರಸ್ತೆ 275ರ ಇಕ್ಕೆಲಗಳಲ್ಲಿ ನೇತಾಜಿ ಯುವಕ ಸಂಘದಿಂದ ತಾಳತ್ತ್‍ಮನೆಯವರೆಗೆ ಸ್ವಚ್ಛತಾ ಕಾರ್ಯಕ್ರಮ ಭಾನುವಾರ ನಡೆಯಿತು. ಸ್ವಚ್ಛತಾ ಕಾರ್ಯಕ್ರಮಕ್ಕೂ ಮುಂಚಿತವಾಗಿ ಸಂಘದ ಕಚೇರಿಯಲ್ಲಿ ನಡೆದ ಕನ್ನಡ ರಾಜ್ಯೋತ್ಸವದ ಧ್ವಜಾರೋಹಣ ಕಾರ್ಯಕ್ರಮವನ್ನು ಸೋಮವಾರಪೇಟೆ ತಾಲೂಕಿನ ಸಂಘದ ಸಂಘಟನಾ ಕಾರ್ಯದರ್ಶಿ ಗುರುವಪ್ಪ ನೆರವೇರಿಸಿದರು. ಸಂಘದ ಉಪಾಧ್ಯಕ್ಷೆ ದೇವಕಿ ಜಿ.ಆರ್. ನಾಯ್ಕ್ ಮಾತನಾಡಿ, ಕನ್ನಡ ಭಾಷೆಗೆ ಬಹಳಷ್ಟು ಇತಿಹಾಸವಿದೆ. ಕನ್ನಡ ಭಾಷೆ ಒಂದು ಸುಂದರ ಭಾಷೆ. ಅದನ್ನು ಎಲ್ಲರೂ ಗೌರವಿಸಬೇಕು. ಇಂದು ವಿವಿಧ ಕಚೇರಿಗಳಲ್ಲಿ ಕನ್ನಡ ಭಾಷೆಯ ಬಳಕೆ ಮಾಡುವವರ ಸಂಖ್ಯೆ ಕಡಿಮೆಯಾಗಿದೆ. ಅಲ್ಲದೆ ಕನ್ನಡ ಭಾಷೆಯೊಂದಿಗೆ ಇತರ ಭಾಷೆ ಅವಶ್ಯಕತೆ ಇದೆ ಎಂದು ಇಂಗ್ಲಿಷ್ ಭಾಷೆಯ ಮೋರೆ ಹೋಗುವದು ಸರಿಯಲ್ಲ. ಇಂಗ್ಲಿಷ್ ಭಾಷೆಯನ್ನು ವ್ಯವಹಾರ ಜ್ಞಾನಕ್ಕಾಗಿ ಮಾತ್ರ ಕಲಿಯಬೇಕೆ ವಿನಃ ಕನ್ನಡ ಪದ ಬಳಕೆ ಮಾಡದೇ ಭಾಷೆಯನ್ನು ತುಳಿಯವ ಕೆಲಸವಾಗಬಾರದು. ಆದ್ದರಿಂದ ಕನ್ನಡ ಭಾಷೆಯನ್ನು ಪ್ರತಿಯೊಬ್ಬರು ಪ್ರೀತಿಸುವದರೊಂದಿಗೆ ಉಳಿಸಿ-ಬೆಳೆಸಲು ಕೈಜೋಡಿಸೋಣ ಎಂದರು.

ನಂತರ ನಡೆದ ಸ್ವಚ್ಛತಾ ಕಾರ್ಯಕ್ರಮಕ್ಕೆ ಸಂಘದ ಸ್ಥಾಪಕಾಧ್ಯಕ್ಷ ವಾಮನ ನಾಯ್ಕ್ ಚಾಲನೆ ನೀಡಿದರು. ಸಂಘದ ಕಚೇರಿಯಿಂದ ಆರಂಭವಾದ ಸ್ವಚ್ಛತಾ ಕಾರ್ಯ ಮಡಿಕೇರಿಯ ನೇತಾಜಿ ಯುವಕ ಸಂಘದವರೆಗೆ ಸಾಗಿತು. ಸುಮಾರು 20 ಚೀಲಕ್ಕೂ ಅಧಿಕ ಪ್ಲಾಸ್ಟಿಕ್ ತ್ಯಾಜ್ಯವನ್ನು ಹೆಕ್ಕಿದ ಸದಸ್ಯರು ಸಂಗ್ರಹಿಸಿದರು. ಸಂಘದ ಅಧ್ಯಕ್ಷ ಎಂ.ಎಂ. ಪರಮೇಶ್ವರ್ ಮಾತನಾಡಿ, ನಾವು ಹೇಗೆ ಸ್ವಚ್ಛವಾಗಿರುತ್ತೇವೆಯೋ ಅದೇ ರೀತಿ ಪರಿಸರವನ್ನು ಶುಚಿತ್ವದಿಂದ ಕಾಪಾಡಬೇಕು. ಈ ಹಿನ್ನೆಲೆ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಎಲ್ಲಾ ಸಂಘಟನೆಗಳು ತಮ್ಮತಮ್ಮ ಗ್ರಾಮಗಳಲ್ಲಿ ಇಂತಹ ಕಾರ್ಯಕ್ರಮ ಹಮ್ಮಿಕೊಂಡು ಪರಿಸರವನ್ನು ಶುಚಿಗೊಳಿಸುವ ಕಾರ್ಯಕ್ಕೆ ಮುಂದಾಗಬೇಕು ಎಂದು ಮನವಿ ಮಾಡಿದರು. ಮಧ್ಯಾಹ್ನದ ನಂತರ ನಡೆದ ತ್ರೈಮಾಸಿಕ ಸಭೆಯಲ್ಲಿ ಸಂಘದ ಸದಸ್ಯರಿಗೆ ಗುರುತಿನ ಚೀಟಿ ಹಂಚಿಕೆ ವಿಚಾರ ಹಾಗೂ ಸಭಾಭವನ ನಿರ್ಮಾಣದ ಕುರಿತು ಚರ್ಚೆಗಳು ನಡೆಯಿತು. ಅಲ್ಲದೆ ಪ್ರಸ್ತುತ ವರ್ಷದಲ್ಲಿ ಜಿಲ್ಲೆಯಲ್ಲಿ ಪ್ರಕೃತಿ ವಿಕೋಪದಿಂದ ಜನತೆ ನಲುಗಿದ ಪರಿಣಾಮವಾಗಿ 2019ರ ಕ್ರೀಡಾಕೂಟವನ್ನು ರದ್ದುಪಡಿಸುವಂತೆ ತೀರ್ಮಾನ ಕೈಗೊಳ್ಳಲಾಯಿತು. ಈ ಸಂದರ್ಭ ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಎಂ.ಟಿ. ಪವನ್, ಅಂಭಾಭವಾನಿ ಯುವಕ ಯುವತಿ ಕ್ರೀಡಾ ಮತ್ತು ಮನೋರಂಜನಾ ಸಂಘದ ಅಧ್ಯಕ್ಷ ಎಂ.ಎಸ್. ದಿವ್ಯಕುಮಾರ್, ಖಜಾಂಚಿ ಸಂಪತ್‍ಕುಮಾರ್, ಯುವಕ ಸಂಘದ ಕಾರ್ಯದರ್ಶಿ ಆದರ್ಶ್ ಅದ್ಕಲೇಗಾರ್, ಕಟ್ಟಡ ಸಮಿತಿ ಕಾರ್ಯದರ್ಶಿ ಎಂ.ಎಸ್. ಯೋಗೇಂದ್ರ, ಪ್ರಮುಖರಾದ ಎಂ.ಟಿ. ದೇವಪ್ಪ, ಕೋಶಾಧಿಕಾರಿ ಕಾಂತಿ ಯೋಗೇಂದ್ರ, ಯುವ ವೇದಿಕೆ ಸದಸ್ಯ ಎಂ.ಟಿ. ನವೀನ್, ಎಂ.ಎಸ್. ಗಣೇಶ್, ಮೋಹನ್‍ಕುಮಾರ್, ಹರೀಶ್ ಸೇರಿದಂತೆ ಸಂಘದ ಪದಾಧಿಕಾರಿಗಳು ಇದ್ದರು.