ಮಡಿಕೇರಿ, ನ. 12: ಟಿಪ್ಪು ಸುಲ್ತಾನರನ್ನು ಟೀಕಿಸುವ ಭರದಲ್ಲಿ ಪ್ರವಾದಿಯವರನ್ನು ಅವಹೇಳನ ಮಾಡಿರುವ ವ್ಯಕ್ತಿಯನ್ನು ಗಡಿಪಾರು ಮಾಡಬೇಕು ಎಂದು ಕೊಡಗು ಮುಸ್ಲಿಂ ಜಮಾಅತ್‍ಗಳ ಒಕ್ಕೂಟ ಒತ್ತಾಯಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಜಿ.ಹೆಚ್. ಮುಹಮ್ಮದ್ ಹನೀಫ್ ಅವರು, ಮುಸಲ್ಮಾನರ ಸರ್ವಶ್ರೇಷ್ಠ ಧರ್ಮಗ್ರಂಥವಾದ ಕುರಾನ್ ಹಾಗೂ ಪ್ರವಾದಿಯ ಸಂದೇಶಗಳು ಇಂದು ಅರಬ್ಬಿ ಮಾತ್ರವಲ್ಲದೆ ಹಲವಾರು ಭಾಷೆಗಳಲ್ಲಿ ಲಭ್ಯವಿದೆ. ಈ ಪವಿತ್ರ ಗ್ರಂಥದಲ್ಲಿ ಎಲ್ಲಿಯಾದರು ಪ್ರವಾದಿಯವರು ಅಸಹನೆಯ ಸಿದ್ಧಾಂತವನ್ನು ಬೋಧಿಸಿದ್ದನ್ನು ಸಂತೋಷ್ ತಮ್ಮಯ್ಯ ತೋರಿಸಿಕೊಡಲಿ ಎಂದು ಆಗ್ರಹಿಸಿದರು.
ರಾಜಕೀಯ ಕಾರಣಕ್ಕಾಗಿ ಜನರಲ್ಲಿ ಅಪನಂಬಿಕೆ, ಜನರಲ್ಲಿ ಅಶಾಂತಿ ಧರ್ಮಗಳ ನಡುವೆ ಕಂದಕ ಸೃಷ್ಟಿ ಮಾಡಲು ಪ್ರಯತ್ನಿಸುವದು ಸರಿಯಲ್ಲ. ಆದ್ದರಿಂದ ತಪ್ಪು ಸಂದೇಶವನ್ನು ಕೊಟ್ಟ ವ್ಯಕ್ತಿ ಹಾಗೂ ಪತ್ರಿಕೆಯ ವಿರುದ್ಧ ಕ್ರಮಕೈಗೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಲಾಗಿದೆಯೆಂದು ತಿಳಿಸಿದರು.
ಒಕ್ಕೂಟದ ಸದಸ್ಯ ಎಂ.ಎಂ. ಹಾರೂನ್ ಮಾತನಾಡಿ, ಪ್ರವಾದಿಗಳ ವಿರುದ್ಧ ಹೇಳಿಕೆ ನೀಡುವದು ಶಾಂತಿಯುತವಾದ ಕೊಡಗಿನಲ್ಲಿ ಅಶಾಂತಿ ಸೃಷ್ಟಿಸುವ ಉದ್ದೇಶದ್ದೇ ಆಗಿದೆಯೆಂದು ಅಭಿಪ್ರಾಯಿಸಿ, ಇಂತಹ ವ್ಯಕ್ತಿಗಳನ್ನು ಬಂಧಿಸುವ ಮೂಲಕ ಕಠಿಣ ಶಿಕ್ಷೆಗೆ ಒಳಪಡಿಸಿ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಕಾರ್ಯದರ್ಶಿ ಮೊಹಮ್ಮದ್ ಇಮ್ರಾನ್, ಸದಸ್ಯರಾದ ಎಂ.ಜಿ.ಯೂಸುಫ್, ಎಂ.ಎ.ನಜೀರ್ ಖುರೇಷಿ ಹಾಗೂ ಮೌಲಾನಾ ಅಬ್ದುಲ್ ಹಕೀಂ ಉಪಸ್ಥಿತರಿದ್ದರು.