ಬೆಂಗಳೂರು, ನ. 12: ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಬಿಜೆಪಿಯ ಹಿರಿಯ ನಾಯಕ ಹಾಗೂ ಕೇಂದ್ರ ಸಚಿವ ಅನಂತ ಕುಮಾರ್ (59) ಅವರು ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಿಗ್ಗೆ ವಿಧಿವಶರಾದರು. ತೀವ್ರ ಅನಾರೋಗ್ಯದ ಕಾರಣದಿಂದಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ಬೆಳಗಿನ ಜಾವ ಸುಮಾರು 3 ಗಂಟೆ ಸಮಯದಲ್ಲಿ ಕೊನೆಯುಸಿರೆಳೆದಿದ್ದಾರೆ.ದಕ್ಷಿಣ ಬೆಂಗಳೂರು ಚುನಾವಣಾ ಕ್ಷೇತ್ರದಿಂದ ಬಿಜೆಪಿಯ ಅಭ್ಯರ್ಥಿಯಾಗಿ ಜಯಗಳಿಸಿ ಸಂಸದರಾಗಿ ಆಯ್ಕೆಯಾಗಿದ್ದರು. ಮೋದಿ ಸಚಿವ ಸಂಪುಟದಲ್ಲಿ ಕೇಂದ್ರ ರಸಗೊಬ್ಬರ ಹಾಗೂ ಸಂಸದೀಯ ವ್ಯವಹಾರಗಳ ಖಾತೆಯನ್ನು ಅನಂತ್ ಕುಮಾರ್ ಅವರು ನಿರ್ವಹಿಸುತ್ತಿದ್ದರು. ಅನಂತಕುಮಾರ್ ಅವರ ಪಾರ್ಥಿವ ಶರೀರವನ್ನು ಬಸವನಗುಡಿಯ ಅವರ ನಿವಾಸದಲ್ಲಿ ಇರಿಸಲಾಗಿದ್ದು,

ತಾ.13 ರಂದು (ಇಂದು) ಮಲ್ಲೇಶ್ವರಂ ರಾಜ್ಯ ಬಿಜೆಪಿ ಕಾರ್ಯಾಲಯದಲ್ಲಿ (ಜಗನ್ನಾಥ ಭವನ)ಪಕ್ಷದ ಕಾರ್ಯಕರ್ತರು ಮತ್ತು ಅಭಿಮಾನಿಗಳ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ಬೆಳಿಗ್ಗೆ 10 ಗಂಟೆಗೆ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸಾರ್ವಜನಿಕ ದರ್ಶನದ ಬಳಿಕ ಮಧ್ಯಾಹ್ನ 1ಗಂಟೆಗೆ ಚಾಮರಾಜಪೇಟೆ ಚಿತಾಗಾರದಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ.

ಅನಂತ್‍ಕುಮಾರ್ ಅವರ ನಿಧನ ಹಿನ್ನೆಲೆ ರಾಜ್ಯಾದ್ಯಂತ ಇಂದು ಸರ್ಕಾರಿ ರಜೆ ಘೋಷಿಸಲಾಗಿತ್ತು. 3 ದಿನಗಳ ಕಾಲ ಶೋಕಾಚರಣೆ ಘೋಷಿಸಲಾಗಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಸೇರಿದಂತೆ ಹಲವಾರು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಅನಂತ್‍ಕುಮಾರ್ ಅವರ ಪ್ರಾರ್ಥಿವ ಶರೀರ ದರ್ಶನಕ್ಕೆ ಪ್ರಧಾನಿ ನರೇಂದ್ರ ಮೋದಿ ತಾ. 13 ರಂದು (ಇಂದು) ಬೆಂಗಳೂರಿಗೆ ಆಗಮಿಸಲಿದ್ದಾರೆ.

ಅನಂತ್‍ಕುಮಾರ್ ನಿಧನದ ಹಿನ್ನೆಲೆಯಲ್ಲಿ ಇಂದು ಮಡಿಕೇರಿ ನಗರ ಬಿಜೆಪಿಯ ವತಿಯಿಂದ ಸಂತಾಪ ಸಭೆಯನ್ನು ಏರ್ಪಡಿಸಲಾಗಿತ್ತು.

(ಮೊದಲ ಪುಟದಿಂದ) ವಿಧಾನ ಪರಿಷತ್ ಸದಸÀ್ಯ ಸುನಿಲ್ ಸುಬ್ರಮಣಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಅರುಣ್ ಕುಮಾರ್, ನಗರಾಧ್ಯಕ್ಷ ಮಹೇಶ್ ಜೈನಿ, ಮನು ಮಂಜುನಾಥ್, ಪ್ರಧಾನ ಕಾರ್ಯದರ್ಶಿಗಳಾದ ಉಮೇಶ್, ಸುಬ್ರಮಣಿ, ಬಿ.ಕೆ. ಜಗದೀಶ್, ಅನಿತಾ ಪೂವಯ್ಯ, ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು. ಜೆಡಿಎಸ್ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ಅನಂತ್‍ಕುಮಾರ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಕುಶಾಲನಗರ ನಗರ ಬಿಜೆಪಿ ಸಂತಾಪ ಸಭೆ ನಡೆಸಿತು. ಬಿಜೆಪಿ ಕಚೇರಿಯಲ್ಲಿ ನಗರಾಧ್ಯಕ್ಷ ಕೆ.ಜಿ.ಮನು ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅನಂತಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮೌನಾಚರಣೆ ಮಾಡಲಾಯಿತು.

ಈ ಸಂದರ್ಭ ಉಪಾಧ್ಯಕ್ಷ ಬೋಸ್ ಮೊಣ್ಣಪ್ಪ, ಎಂ.ಡಿ.ಕೃಷ್ಣಪ್ಪ, ಶಿವಾಜಿರಾವ್, ಪಂಚಾಯ್ತಿ ಸದಸ್ಯರಾದ ಡಿ.ಕೆ.ತಿಮ್ಮಪ್ಪ, ಕೇಶವ, ಪ್ರಮುಖರಾದ ಎಂ.ವಿ.ನಾರಾಯಣ, ವಿ.ಎನ್.ವಸಂತಕುಮಾರ್, ಸದಾ ನಂದ, ವಿಜಯಕುಮಾರ್, ಪುಂಡರೀ ಕಾಕ್ಷ, ದೇವರಾಜ್, ಉಮಾಶಂಕರ್ ಮತ್ತಿತರರು ಇದ್ದರು.

ಅನಂತಕುಮಾರ್ ನಿಧನಕ್ಕೆ ಇಂದು ವೀರಾಜಪೇಟೆ ಶಾಸಕರ ಭವನದಲ್ಲಿ ಸಂತಾಪ ಸಭೆ ನಡೆಸಲಾಯಿತು. ವೀರಾಜಪೇಟೆ ನಗರ ಬಿಜೆಪಿ ಅಧ್ಯಕ್ಷ ಅನಿಲ್ ಮಂದಣ್ಣ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಪಟ್ರಪಂಡ ರಘುನಾಣಯ್ಯ, ತಾ.ಪಂ. ಅಧ್ಯಕ್ಷೆ ಬೊಳ್ಳಚಂಡ ಸ್ನಿತಾ ಪ್ರಕಾಶ್, ಜಿ.ಪಂ. ಸದಸ್ಯರಾದ ಮೂಕೊಂಡ ಶಶಿ ಸುಬ್ರಮಣಿ ಮತ್ತು ಅಚ್ಚಪಂಡ ಮಹೇಶ್ ಗಣಪತಿ, ತಾ.ಪಂ. ಸದಸ್ಯ ಬಿ.ಎಂ.ಗಣೇಶ್, ಪ.ಪಂ. ನ ನೂತನ ಸದಸ್ಯರಾದ ಸುನಿತಾ, ಯಶೋಧ, ಅನಿತಾ, ಹರ್ಷವರ್ಧನ, ಸುಭಾಷ್, ಸುಸ್ಮೀತಾ, ಪೂರ್ಣಿಮ, ಮಾಜಿ ಪಂ. ಅಧ್ಯಕ್ಷರಾದ ಕೂತಂಡ ಸಚಿನ್ ಮತ್ತು ಇ.ಸಿ. ಜೀವನ್, ಮಾಜಿ ಪಟ್ಟಣ ಪಂಚಾಯಿತಿ ಸದಸ್ಯ ಕುಮಾರ್, ರಾಜ್ಯ ಬಿಜೆಪಿ ಅಲ್ಪಸಂಖ್ಯಾತ ವಿಭಾಗದ ಕಾರ್ಯದರ್ಶಿ ಜೋಕಿಂ, ಪ್ರಮುಖ ರಾದ ಮಲ್ಲಂಡ ಮಧು ದೇವಯ್ಯ, ಹೇಮಂತ್, ಕುಂಬೆಯಂಡ ಗಣೇಶ್ ಮತ್ತಿತರರು ಉಪಸ್ಥಿತರಿದ್ದರು.

ಸೋಮವಾರಪೇಟೆ ಭಾರತೀಯ ಜನತಾ ಪಾರ್ಟಿಯ ಕಚೇರಿಯಲ್ಲಿ ಸಂತಾಪ ಸಭೆ ನಡೆಯಿತು. ಕೇಂದ್ರ ಸಚಿವ ಅನಂತ್‍ಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಮೌನಾಚರಿಸಲಾಯಿತು. ಈ ಸಂದರ್ಭ ಮಾತನಾಡಿದ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ವಿ.ಕೆ. ಲೋಕೇಶ್, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಸದಸ್ಯರಾದ ಬಿ.ಜೆ. ದೀಪಕ್, ತಾ.ಪಂ. ಉಪಾಧ್ಯಕ್ಷ ಅಭಿಮನ್ಯುಕುಮಾರ್, ಸದಸ್ಯೆ ತಂಗಮ್ಮ ಸೇರಿದಂತೆ ಪಕ್ಷದ ಕ್ಷೇತ್ರ ಸಮಿತಿ ಅಧ್ಯಕ್ಷ ಕುಮಾರಪ್ಪ, ಪ್ರಧಾನ ಕಾರ್ಯದರ್ಶಿ ಮನು ಕುಮಾರ್ ರೈ, ನಗರಾಧ್ಯಕ್ಷ ಸೋಮೇಶ್, ಯುವ ಮೋರ್ಚಾದ ಶರತ್‍ಚಂದ್ರ, ಪ್ರಮುಖರಾದ ವಿ.ಎಂ. ವಿಜಯ, ವಿಜಯಲಕ್ಷ್ಮೀ ಸುರೇಶ್, ಉಷಾ ತೇಜಸ್ವಿ, ದಾಕ್ಷಾಯಿಣಿ, ಕೊಮಾರಿ ಸತೀಶ್, ಹುಲ್ಲೂರಿಕೊಪ್ಪ ಚಂದ್ರ, ಪ.ಪಂ. ಸದಸ್ಯರಾದ ಬಿ.ಆರ್. ಮಹೇಶ್, ಪಿ.ಕೆ. ಚಂದ್ರು ಸೇರಿದಂತೆ ಇತರರು ಉಪಸ್ಥಿತರಿದ್ದರು.

ಸಂತಾಪ: ಕೇಂದ್ರ ಸಚಿವ ಅನಂತ್‍ಕುಮಾರ್ ನಿಧನಕ್ಕೆ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ಮಾಜೀ ಎಂಎಲ್‍ಸಿ ಎಸ್.ಜಿ. ಮೇದಪ್ಪ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬಿ.ಡಿ. ಮಂಜುನಾಥ್, ಚಿತ್ರದುರ್ಗ ಬೃಹನ್ಮಠದ ಪೀಠಾಧ್ಯಕ್ಷರಾದ ಶ್ರೀ ಡಾ.ಶಿವಮೂರ್ತಿ ಮುರುಘಾ ಶರಣರು, ಕಾಂಗ್ರೆಸ್ ಮುಖಂಡ ಕೆ.ಎ. ಯಾಕೂಬ್, ತಾಲೂಕು ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಮೋಹನ್ ಬೋಪಣ್ಣ ಅವರುಗಳು ಸಂತಾಪ ವ್ಯಕ್ತಪಡಿಸಿದ್ದಾರೆ.

ಅನಂತ್ ಕುಮಾರ್ ಅವರ ನಿಧನಕ್ಕೆ ಜಿಲ್ಲಾ ಬಿ.ಜೆ.ಪಿ. ವರ್ತಕರ ಪ್ರಕೋಷ್ಟದ ಅಧ್ಯಕ್ಷ ಕೆ.ಬಿ.ಗಿರೀಶ್ ಗಣಪತಿ ಹಾಗೂ ಕೆಪಿಸಿಸಿ ಕಾರ್ಯದರ್ಶಿ ಟಿ.ಎಂ. ಶಹೀದ್, ಮಾಜಿ ಎಂಎಲ್‍ಸಿ ಗಣೇಶ್ ಕಾರ್ಣಿಕ್, ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಬಿ.ಎಸ್. ಜೈರಾಂ ಹಾಗೂ ಪ್ರಧಾನ ಕಾರ್ಯದರ್ಶಿ ಯು.ಎಂ. ತೀರ್ಥಮಲ್ಲೇಶ್ ಸಂತಾಪ ಸೂಚಿಸಿದ್ದಾರೆ.

ಜಿಲ್ಲಾ ಕಾಂಗ್ರೆಸ್ ವತಿಯಿಂದ ನಗರದ ಹೊಟೇಲ್ ವ್ಯಾಲಿವ್ಯೂನಲ್ಲಿ ಅಧ್ಯಕ್ಷ ಶಿವು ಮಾದಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 2 ನಿಮಿಷಗಳ ಮೌನ ಪ್ರಾರ್ಥನೆ ಸಲ್ಲಿಸುವ ಮೂಲಕ ಅನಂತಕುಮಾರ್ ಅವರÀ ಆತ್ಮಕ್ಕೆ ಶಾಂತಿ ಕೋರಲಾಯಿತು. ಅಲ್ಲದೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಾಗಿ ವಿವಿಧ ಹುದ್ದೆಗಳಲ್ಲಿ ದುಡಿದು ಮೃತರಾದ ಹುದಿಕೇರಿಯ ಬಿ.ಲಕ್ಷ್ಮಣ, ಕರಿಕೆಯ ಕೆ.ಬಿ. ಚಿಣ್ಣಪ್ಪ, ಹಾಕತ್ತೂರು ಪಂಚಾಯಿತಿಯ ಮಾಜಿ ಅಧ್ಯಕ್ಷÀ ಹೆಚ್.ಸಿ.ಚಂಗಪ್ಪ (ಚಂಗಣ್ಣಿ) ಹಾಗೂ ಬಿಳುಗುಂದ ಗ್ರಾಮದ ಸುರೇಶ್ ಅವರುಗಳಿಗೂ ಪ್ರಮುಖರು ಸಂತಾಪ ಸೂಚಿಸಿದರು.

ಈ ಸಂದರ್ಭ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಕೆ.ಪಿ.ಸಿ.ಸಿ ಪದಾಧಿಕಾರಿಗಳಾದ ಸಿ.ಎಸ್.ಅರುಣ್ ಮಾಚಯ್ಯ, ಬಿ.ವಿ.ರಮೇಶ್, ಕೆ.ಪಿ.ಚಂದ್ರಕಲಾ, ನಟೇಶ್‍ಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಪಿ.ಸುರೇಶ್, ಬ್ಲಾಕ್ ಅಧ್ಯಕ್ಷರುಗಳು, ಡಿಸಿಸಿ ಪದಾಧಿಕಾರಿಗಳು, ಮುಂಚೂಣಿ ಘಟಕಗಳ ಅಧ್ಯಕ್ಷರು, ಚುನಾಯಿತ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

ಕೊಡಗು ಜಿಲ್ಲಾ ಬ್ರಾಹ್ಮಣ ಸಂಘಗಳ ಒಕ್ಕೂಟ ಹಾಗೂ ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿ ಕೇಂದ್ರ ಸಚಿವ ಅನಂತಕುಮಾರ್ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದೆ ಎಂದು ಅಧ್ಯಕ್ಷ ಎ. ಗೋಪಾಲಕೃಷ್ಣ ತಿಳಿಸಿದ್ದಾರೆ.

ಸುಂಟಿಕೊಪ್ಪ ಮಂಜುನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂದಿರದಲ್ಲಿ ಅನಂತಕುಮಾರ್ ಅವರ ನಿಧನಕ್ಕೆ ಸುಂಟಿಕೊಪ್ಪ ನಗರ ಬಿಜೆಪಿ ಅಧ್ಯಕ್ಷ ಪಿ.ಆರ್. ಸುನಿಲ್‍ಕುಮಾರ್ ನೇತೃತ್ವದಲ್ಲಿ ಸಂತಾಪ ಸಭೆ ನಡೆಯಿತು.

ಬಿಜೆಪಿ ನಗರ ಘಟಕದ ಪ್ರಧಾನ ಕಾರ್ಯದರ್ಶಿ ಬಿ.ಕೆ.ಪ್ರಶಾಂತ್ ಕುಮಾರ್, ಬಿಜೆಪಿ ಹಿರಿಯ ಮುಖಂಡ ಸಹದೇವ, ಬಿ.ಕೆ. ವಿಶ್ವನಾಥರೈ, ಕಾರ್ಯಕರ್ತರಾದ ಧನುಕಾವೇರಪ್ಪ, ನಾಗೇಶ ಪೂಜಾರಿ, ವಿನೋದ್, ಅಶೋಕ್ ಶೇಟ್, ವಿಘ್ನೇಶ, ಸಿ.ಸಿ.ಸುನೀಲ್, ಬಿ.ಎಂ ಸುರೇಶ (ಪುಟ್ಟ) ಶ್ರೀರಾಮ್, ಒಡಿಯಪ್ಪನ ಸುಧೀಶ ಇತರರು ಇದ್ದರು.