ವೀರಾಜಪೇಟೆ, ನ. 11: ಅಂತರರಾಷ್ಟ್ರೀಯ ಸೇವಾ ಸಂಸ್ಥೆ ರೋಟರಿ ತನ್ನದೇ ಆದ ರೀತಿಯಲ್ಲಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದು, ಸಂಸ್ಥೆಯ “ಸ್ಫೂರ್ತಿ” ಯೋಜನೆಯಂತೆ ಕೊಡಗಿನಲ್ಲಿ ಆಯ್ದ ಅಂಗನವಾಡಿಗಳನ್ನು ದತ್ತು ತೆಗೆದುಕೊಂಡು ಹೆಣ್ಣು ಮಕ್ಕಳ ಕಲ್ಯಾಣಾಭಿವೃದ್ಧಿಗೆ ಒತ್ತು ಕೊಡಲಾಗುವದು ಎಂದು ರೋಟರಿಯ ಜಿಲ್ಲಾ ಗವರ್ನರ್ ಪಿ. ರೋಹಿನಾಥ್ ಹೇಳಿದರು.

ವೀರಾಜಪೇಟೆ ರೋಟರಿ ಕ್ಲಬ್ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ರೋಹಿನಾಥ್, ಅಗತ್ಯವಿರುವ ಎಲ್ಲ ಶಾಲೆಗಳಿಗೆ ಶುದ್ಧ ಕುಡಿಯುವ ನೀರಿನ ಸೌಲಭ್ಯ ಒದಗಿಸಲು ಪೂರ್ವ ಸಿದ್ಧತೆ ನಡೆದಿದೆ. ಕಳೆದ ಮೂರು ತಿಂಗಳ ಹಿಂದೆ ಉತ್ತರ ಕೊಡಗಿನ ಕೆಲವು ಭಾಗಗಳು ಪ್ರಕೃತಿ ವಿಕೋಪಕ್ಕೆ ತುತ್ತಾಗಿ ಸಹಸ್ರಾರು ಮಂದಿ ಮನೆ-ಮಠ ಕಳೆದುಕೊಂಡು ನಿರ್ಗತಿಕರಾಗಿದ್ದಾರೆ. ಇವರಲ್ಲಿ ಕೆಲವರಿಗೆ ಮನೆ ಕಟ್ಟಿಕೊಡಲು ರೋಟರಿಯ ಗ್ಲೋಬಲ್ ಘಟಕ ಸಿದ್ಧತೆ ಕೈಗೊಂಡಿರುವದಾಗಿ ತಿಳಿಸಿದರು.

ಸಭೆಯನ್ನುದ್ದೇಶಿಸಿ ಅಸಿಸ್ಟೆಂಟ್ ಗವರ್ನರ್ ರೋ. ಧರ್ಮಪುರ ನಾರಾಯಣ್ ಹಾಗೂ ಜೋನಲ್ ಲೆ. ದೇಚಮ್ಮ ಮಾತನಾಡಿದರು. ರೋಟರಿ ಕ್ಲಬ್ ಅಧ್ಯಕ್ಷ ಎಂ.ಎಸ್. ರವಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕ್ಲಬ್ ಕಾರ್ಯದರ್ಶಿ ಬಿ.ಜಿ. ಚೇತನ್ ಮುತ್ತಣ್ಣ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.