ಸೋಮವಾರಪೇಟೆ, ನ. 11: ಇಲ್ಲಿನ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಮೂವರು ಸದಸ್ಯರುಗಳನ್ನು ವಾರ್ಡ್‍ನ ನಿವಾಸಿಗಳು ಸನ್ಮಾನಿಸಿದರು.

7ನೇ ವಾರ್ಡ್‍ನಿಂದ ಗೆಲವು ಸಾಧಿಸಿದ ಜೆಡಿಎಸ್‍ನ ಜೀವನ್, 9ನೇ ವಾರ್ಡ್‍ನ ಸದಸ್ಯೆ ಜೆಡಿಎಸ್‍ನ ನಾಗರತ್ನ, 8ನೇ ವಾರ್ಡ್‍ನ ಪಕ್ಷೇತರ ಸದಸ್ಯ ಶುಭಕರ್ ಅವರುಗಳನ್ನು, 7ನೇ ವಾರ್ಡ್‍ನ ನಿವಾಸಿಗಳು ಅಭಿನಂದಿಸಿ, ವಾರ್ಡ್‍ಗಳಿಗೆ ತುರ್ತು ಆಗಬೇಕಾದ ಕಾಮಗಾರಿಗಳ ಪಟ್ಟಿಯನ್ನು ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ನಿವೇಶನ ರಹಿತರ ಹೋರಾಟ ಸಮಿತಿಯ ಅಧ್ಯಕ್ಷ ಹೆಚ್.ಎ. ನಾಗರಾಜ್ ಮಾತನಾಡಿ, ಬಿಜೆಪಿ ನೇತೃತ್ವದ ಆಡಳಿತ ಮಂಡಳಿ 20 ವರ್ಷಗಳ ಕಾಲ ಆಡಳಿತ ನಡೆಸಿದೆ. ಆದರೆ ಪಟ್ಟಣ ಅಭಿವೃದ್ಧಿ ಕಂಡಿಲ್ಲ. ಈಗ ಮತದಾರರು ಬದಲಾವಣೆ ಬಯಸಿ ಕಾಂಗ್ರೆಸ್, ಜೆಡಿಎಸ್ ನೇತೃತ್ವದ ಮೈತ್ರಿಕೂಟಕ್ಕೆ ಮತಕೊಟ್ಟಿದ್ದಾರೆ. ಇದನ್ನು ಅರಿತು ಸದಸ್ಯರು ಉತ್ತಮ ಕೆಲಸ ಮಾಡಬೇಕೆಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಜೆಡಿಎಸ್ ಕ್ಷೇತ್ರ ಸಮಿತಿ ಅಧ್ಯಕ್ಷ ಹೆಚ್.ಆರ್. ಸುರೇಶ್, ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಎಸ್.ಎಂ. ಡಿಸಿಲ್ವಾ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿ.ಎ. ಲಾರೆನ್ಸ್, ಜೆಡಿಎಸ್ ನಗರಾಧ್ಯಕ್ಷ ಜಯಾನಂದ ಸೇರಿದಂತೆ ಇತರರು ಉಪಸ್ಥಿತರಿದ್ದರು.