ಮಡಿಕೇರಿ, ನ. 11: ವಾರಾಂತ್ಯದಲ್ಲಿ ಜನಭರಿತವಾಗಿ ವಾಹನ ದಟ್ಟಣೆ ಹಾಗೂ ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದ ಮಂಜಿನ ನಗರಿಗೆ ಈ ಬಾರಿಯ ದೀಪಾವಳಿ ಹಬ್ಬದ ಸಂಭ್ರಮವೂ ಹೆಚ್ಚಿನ ಕಳೆ ತರದೆ ನೀರಸವಾಗಿತ್ತು.
ಪ್ರಸಕ್ತ ವರ್ಷ ನವೆಂಬರ್ 6ರಂದು ನರಕಚತುರ್ದಶಿ ಪ್ರಯುಕ್ತ ರಜೆ ತಾ.8ರಂದು ಬಲಿಪಾಡ್ಯಮಿ ಪ್ರಯುಕ್ತ ಹಾಗೂ ನವೆಂಬರ್ 10ರಂದು ಎರಡನೆಯ ಶನಿವಾರದ ರಜೆ ಈ ವರ್ಷ ಬಂದಿತ್ತು.
ಆದರೆ ಪ್ರಾಕೃತಿಕ ವಿಕೋಪದಿಂದ ನಲುಗಿರುವ ಜಿಲ್ಲೆಯಲ್ಲಿ ಈ ಬಾರಿ ದೀಪಾವಳಿಯ ಸಡಗರವೂ ಕಂಡುಬಾರಲಿಲ್ಲ. ಅಲ್ಲೋ... ಇಲ್ಲೋ... ಒಂದೆರಡು ಸಿಡಿಮದ್ದಿನ ಶಬ್ದಗಳು ಕೇಳಿಬಂದವೇ ವಿನಃ ಇದೇ ಸಂದರ್ಭದಲ್ಲಿ ಎದುರಾದ ಟಿಪ್ಪು ಜಯಂತಿಯ ವಿವಾದದ ಆಚರಣೆಯ ಪರಿಯಿಂದಾಗಿ ಮಡಿಕೇರಿ ನಗರದಲ್ಲಿ ಪಟಾಕಿಯ ಶಬ್ದಕ್ಕಿಂತಲೂ ಪೊಲೀಸರು, ರ್ಯಾಪಿಡ್ ಆಕ್ಷನ್ ಫೋರ್ಸ್ನ ಸಿಬ್ಬಂದಿಗಳ ಬೂಟುಗಾಲಿನ ಶಬ್ದ ಪೊಲೀಸ್ ಎಚ್ಚರಿಕೆಯ ಸೈರನ್ಗಳೇ ಹೆಚ್ಚಾಗಿ ಕೇಳಿಬಂದಂತಿತ್ತು.
ಟಿಪ್ಪು ಜಯಂತಿಯ ವಿವಾದ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಮದ್ಯ ಮಾರಾಟದ ನಿಷೇಧ, ಸೆಕ್ಷನ್ 144ರಂತೆ ನಿಷೇಧಾಜ್ಞೆ ಜಾರಿಯಂತಹ ಕಾನೂನು ನಿರ್ಬಂಧಗಳೂ ಮೊದಲೇ ಪ್ರಾಕೃತಿಕ ವಿಕೋಪದಿಂದ ನಲುಗಿರುವ ಇಲ್ಲಿನ ಜನತೆಯನ್ನು ಮತ್ತಷ್ಟು ಕಂಗೆಡಿಸುವಂತೆ ಮಾಡಿತ್ತು. ಕೊಡಗಿನಲ್ಲಿ ಟಿಪ್ಪು ಜಯಂತಿಗೆ ವ್ಯಕ್ತಗೊಳ್ಳುತ್ತಿದ್ದ ಸಾರ್ವತ್ರಿಕ ವಿರೋಧ ಗಳು... ಪರವಾದ ಹೇಳಿಕೆಗಳು ರಾಜ್ಯಮಟ್ಟದಲ್ಲಿ ದಿನಂಪ್ರತಿ ಪ್ರಚಾರವಾಗುತ್ತಿದ್ದ ಕಾರಣಗಳಿಂದಾಗಿ ಈ ವಾರದಲ್ಲಿ ಹೆಚ್ಚು ರಜೆಗಳಿದ್ದರೂ ಎರಡನೇ ಶನಿವಾರ, ಭಾನುವಾರದ ರಜೆ ಒಟ್ಟಿಗೇ ಇದ್ದರೂ ನಿರೀಕ್ಷಿತ ಪ್ರಮಾಣದ ಪ್ರವಾಸಿಗರು ಇತ್ತ ತಲೆ ಹಾಕುವ ಕೆಲಸಕ್ಕೆ ಮುಂದಾಗಲಿಲ್ಲ. ಮಡಿಕೇರಿ ನಗರದ ಜನರು ಕೂಡ ಹೆಚ್ಚಾಗಿ ಮನೆ ಬಿಟ್ಟು ಆಗಮಿಸಿರಲಿಲ್ಲ. ವಾರದ ಸಂತೆಗಳು ರದ್ದಾಗಿದ್ದವು. ಖಾಸಗಿ ಬಸ್ಗಳು ಸಂಚಾರ ಸ್ಥಗಿತಗೊಳಿಸಿದ್ದು, ಸ್ವಯಂಪ್ರೇರಿತ ಬಂದ್ನ ಕರೆ ಇತ್ಯಾದಿ ಕಾರಣಗ ಳಿಂದಾಗಿ ಸಾರ್ವಜನಿಕರಿ ಗಿಂತ ಸಮವಸ್ತ್ರಧಾರಿ ಪೊಲೀಸರು..., ಪೊಲೀಸ್ ವಾಹನಗಳ ಓಡಾಟವೇ ಹೆಚ್ಚಾಗಿದ್ದಂತೆ ಗೋಚರವಾಯಿತು. ತಾ.9 ಹಾಗೂ 10ರಂದು ಮದ್ಯ ಮಾರಾಟ ಬಂದ್, ತಾ. 9ರ ಸಂಜೆಯಿಂದ ತಾ. 11ರ ಬೆಳಿಗ್ಗೆಯ ತನಕದ ನಿಷೇಧಾಜ್ಞೆಯಿಂದಾಗಿ ಮುಚ್ಚಲ್ಪಟ್ಟ ಬಹುತೇಕ ಅಂಗಡಿ - ಮುಂಗಟ್ಟುಗಳು ಭಾನುವಾರವಾದ ತಾ. 11ರಂದೂ ತೆರೆಯಲ್ಪಟ್ಟಿರಲಿಲ್ಲ. ಎಲ್ಲೆಡೆ ಎಲ್ಲವೂ ನೀರಸ. -ಶಶಿ