ಸೋಮವಾರಪೇಟೆ, ನ.11: ಕನ್ನಡ ರಾಜ್ಯೋತ್ಸವ ಅಂಗವಾಗಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ತಾ. 17ರಂದು ಇಲ್ಲಿನ ಚನ್ನಬಸಪ್ಪ ಸಭಾಂಗಣದಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ಕಾರ್ಯಕ್ರಮದ ಸಂಚಾಲಕ ನ.ಲ. ವಿಜಯ ತಿಳಿಸಿದ್ದಾರೆ.
ತಾ. 17ರಂದು ಪೂರ್ವಾಹ್ನ 10.30ಕ್ಕೆ ಸ್ಪರ್ಧಾ ಕಾರ್ಯಕ್ರಮವನ್ನು 6ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷೆ ಜಲಾ ಕಾಳಪ್ಪ ಉದ್ಘಾಟಿಸಲಿದ್ದಾರೆ. ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸಾಹಿತ್ಯ ಕೃಷಿಯಲ್ಲಿ ವಿದ್ಯಾರ್ಥಿಗಳ ಪಾತ್ರ ವಿಷಯದ ಬಗ್ಗೆ ಪ್ರಬಂಧ ಸ್ಪರ್ಧೆ, ಸ್ಥಳದಲ್ಲೇ ಕರ್ನಾಟಕ ರಾಜ್ಯದ ನಕ್ಷೆ ಬಿಡಿಸುವ ಸ್ಪರ್ಧೆ, ಪ್ರೌಢಶಾಲೆ-ಕಾಲೇಜು ವಿದ್ಯಾರ್ಥಿಗಳಿಗೆ ಕನ್ನಡ ಆಶುಭಾಷಣ ಸ್ಪರ್ಧೆ, ವಿದ್ಯಾರ್ಥಿಗಳು-ಸಾರ್ವಜನಿಕರಿಗೆ ಭಾವಗೀತೆ ಗಾಯನ ಸ್ಪರ್ಧೆ ಸೇರಿದಂತೆ ಕಸಾಪ ಸದಸ್ಯರುಗಳಿಗೆ ವಿಶೇಷ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ತಾ.22ರಂದು ಸನ್ಮಾನ-ಬಹುಮಾನ ವಿತರಣೆ: ತಾ. 22ರಂದು ಅಪರಾಹ್ನ 3 ಗಂಟೆಗೆ ಸ್ಥಳೀಯ ಪತ್ರಿಕಾಭವನ ಸಭಾಂಗಣದಲ್ಲಿ ಸಾಧಕರಿಗೆ ಸನ್ಮಾನ ಮತ್ತು ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಲಿದೆ.
ಅಧ್ಯಕ್ಷತೆಯನ್ನು ತಾಲೂಕು ಕಸಾಪ ಅಧ್ಯಕ್ಷ ಎಸ್.ಡಿ. ವಿಜೇತ್ ವಹಿಸಲಿದ್ದು, ಬರಹಗಾರರಾದ ಕಿರಣ್ಕುಮಾರ್ ಅವರು ಉದ್ಘಾಟಿಸಲಿದ್ದಾರೆ. ಜಿಲ್ಲಾ ಕಸಾಪ ಅಧ್ಯಕ್ಷ ಲೋಕೇಶ್ ಸಾಗರ್, ವಲಯ ಅರಣ್ಯಾಧಿಕಾರಿ ಲಕ್ಷ್ಮೀಕಾಂತ್, ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜಯ್ಯ, ವಕೀಲರಾದ ಹೆಚ್.ಸಿ. ನಾಗೇಶ್ ಅವರುಗಳು ಭಾಗವಹಿಸಲಿದ್ದಾರೆ.
ಚಿತ್ರಕಲೆ ಮತ್ತು ಕ್ರೀಡಾ ಕ್ಷೇತ್ರದಿಂದ ಎಸ್. ಕೃತಿಕ, ಪತ್ರಿಕೋದ್ಯಮ ಕ್ಷೇತ್ರದಿಂದ ವಿಜಯ್ ಹಾನಗಲ್, ಜಾನಪದ ಕಲೆ-ಎಸ್.ಪಿ. ಕುಟ್ಟಪ್ಪ, ಶಿಲ್ಪಕಲೆ ಮಾದರಿ ರಚನೆ-ಬಿ. ದಯಾನಂದ, ಶಿಕ್ಷಣ- ಡಿ.ಪಿ. ಸತೀಶ್, ಸಾಹಿತ್ಯ- ಡಿ.ಎಂ. ಕುಮಾರಪ್ಪ, ವಿಶೇಷ ಕಲಾವಿದ-ಎಸ್.ಆರ್. ಶ್ರೀನಿವಾಸ್, ಸಮಾಜಸೇವೆ ಕ್ಷೇತ್ರದಿಂದ ಆಶಾ ಸತೀಶ್ ಅವರುಗಳನ್ನು ಸನ್ಮಾನಿಸಲಾಗುವದು ಎಂದು ನ.ಲ. ವಿಜಯ ತಿಳಿಸಿದ್ದಾರೆ.