ಪೊನ್ನಂಪೇಟೆ, ನ. 11: ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನಿಗೆ ಪೊನ್ನಂಪೇಟೆ ನ್ಯಾಯಾಲಯ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ತಾ. 19.9.2011 ರಂದು ವೀರಾಜಪೇಟೆ ನಿವಾಸಿ, ಕೃಷ್ಣ ಸುಬ್ರಾಯ ನಾಯಕ್ ಎಂಬವರು ಗೋಣಿಕೊಪ್ಪಲಿನ ಮುಳಿಯ ಕೇಶವ ಭಟ್ ಚಿನ್ನದ ಅಂಗಡಿಯಿಂದ ರೂ. 6,72,682 ಮೊತ್ತದ ಚಿನ್ನಾಭರಣ ವನ್ನು ಖರೀದಿಸಿ ಸದರಿ ಮೊತ್ತಕ್ಕೆ ರೂ. 6,72,682ರ ಮೊತ್ತಕ್ಕೆ ಆತ ಖಾತೆ ಹೊಂದಿರುವ ಎಸ್‍ಬಿಐ ವೀರಾಜಪೇಟೆ ಶಾಖೆಯ ಚೆಕ್‍ನ್ನು ನೀಡಿದ್ದ. ಮುಳಿಯ ಕೇಶವ ಭಟ್ ಸಂಸ್ಥೆ ಚೆಕ್ ಅನ್ನು ನಗದೀಕರಿಸಲು ಬ್ಯಾಂಕಿಗೆ ಹಾಕಿದಾಗ ಸದರಿ ಚೆಕ್ ಅಮಾನ್ಯಗೊಂಡಿತ್ತು. ಈ ಹಿನ್ನೆಲೆಯಲ್ಲಿ ಪಿರ್ಯಾದುದಾರರ ಪರ ಅಂಗಡಿಯ ಮ್ಯಾನೇಜರ್ ಗುರುರಾಜ್ ಅವಭೃತ ಅವರು ತಮ್ಮ ವಕೀಲರ ಮೂಲಕ ಪೊನ್ನಂಪೇಟೆ ಸಿವಿಲ್ ಮತ್ತು ಜೆಎಂಎಫ್‍ಸಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲು ಮಾಡಿದ್ದರು.

ಸದರಿ ಕೇಸಿನ ವಿಚಾರಣೆ ನಡೆಸಿದ ಪೊನ್ನಂಪೇಟೆ ಸಿವಿಲ್ ಮತ್ತು ಜೆಎಂಎಫ್‍ಸಿ ನ್ಯಾಯಾಧೀಶ ಮೋಹನ್ ಗೌಡ ಅವರು ಆರೋಪಿ ಕೃಷ್ಣ ಸುಬ್ರಾಯ ನಾಯಕ್‍ಗೆ ಶಿಕ್ಷೆಯ ತೀರ್ಪು ಪ್ರಕಟಿಸಿದ್ದು, ಪಿರಿಯಾದು ದಾರನಿಗೆ ರೂ. 11 ಲಕ್ಷವನ್ನು ಪಾವತಿ ಮಾಡುವಂತೆ ಮತ್ತು ಅದರಲ್ಲಿ ರೂ.10 ಸಾವಿರವನ್ನು ಸರಕಾರಕ್ಕೆ ಪಾವತಿಸುವಂತೆ ಆದೇಶಿಸಿದ್ದಾರೆ. ದಂಡ ಪಾವತಿಸಲು ತಪ್ಪಿದ್ದಲ್ಲಿ ಆರು ತಿಂಗಳ ಹೆಚ್ಚುವರಿ ಜೈಲು ಶಿಕ್ಷೆಯನ್ನು ಅನುಭವಿಸುವಂತೆ ತೀರ್ಪಿನಲ್ಲಿ ಆದೇಶಿಸಿದ್ದಾರೆ. ಪಿರ್ಯಾದುದಾರರ ಪರವಾಗಿ ವಕೀಲ ಮಚ್ಚಾಮಾಡ ಟಿ. ಕಾರ್ಯಪ್ಪ ವಾದ ಮಂಡಿಸಿದ್ದರು.