ಕೂಡಿಗೆ, ನ. 9: ಶಿರಂಗಾಲದಿಂದ ಕುಶಾಲನಗರದವರೆಗೆ ಇರುವ ರಾಜ್ಯ ಹೆದ್ದಾರಿ ಮಳೆ ಹಾಗೂ ಭಾರೀ ವಾಹನಗಳ ಸಂಚಾರದಿಂದಾಗಿ ಗುಂಡಿಗಳು ಬಿದ್ದು, ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ರಸ್ತೆಯಲ್ಲಿ ಸಾಗಾಟಕ್ಕೆ ಇರಬೇಕಾದ ಇತಿಮಿತಿಗಿಂತಲೂ ಹೆಚ್ಚಾಗಿ ಸಾಗಾಟ ಮಾಡುವ ಪರಿಣಾಮ ರಸ್ತೆಗಳು ಗುಂಡಿಬಿದ್ದಿದ್ದು, ವಾಹನ ಸಂಚಾರಕ್ಕೆ ಭಾರೀ ಸಮಸ್ಯೆಯುಂಟಾಗುತ್ತಿದ್ದು, ಅಪಘಾತಗಳು ಕೂಡಾ ಹೆಚ್ಚಾಗುತ್ತಿದೆ. ಕುಶಾಲನಗರ ಹೋಬಳಿಯ ಕೂಡ್ಲೂರು ಕೈಗಾರಿಕಾ ಪ್ರದೇಶಕ್ಕೆ ಜಿಲ್ಲೆಯ ಹಾಗೂ ಹಾಸನ ಮತ್ತು ಮೈಸೂರು ಜಿಲ್ಲೆಗಳ ಅಕ್ಕಪಕ್ಕದ ಗ್ರಾಮಗಳ ಸಾವಿರಾರು ಕಾರ್ಮಿಕರು ದ್ವಿಚಕ್ರ ವಾಹನದಲ್ಲಿ ಕೆಲಸ ನಿಮಿತ್ತ ಬರುವದು ಸಾಮಾನ್ಯವಾಗಿದೆ. ದಿನಂಪ್ರತಿ ಅಪಘಾತಗಳು ನಡೆಯುತ್ತಿವೆ. ಆದ್ದರಿಂದ ಸಂಬಂಧಪಟ್ಟ ಇಲಾಖೆ ಮತ್ತು ರಾಜ್ಯ ಹೆದ್ದಾರಿಯ ಅಧಿಕಾರಿಗಳು ತುರ್ತಾಗಿ ಅವ್ಯವಸ್ಥೆ ಸರಿಪಡಿಸಿ, ಅನಾಹುತಗಳನ್ನು ತಡೆಯಬೇಕು ಎಂದು ಈ ವ್ಯಾಪ್ತಿಯ ಕಾರ್ಮಿಕರು ಮತ್ತು ಸಾರ್ವಜನಿಕರು ಒತ್ತಾಯಿಸಿದ್ದಾರೆ.