ಮಡಿಕೇರಿ, ನ. 10: ಕೊಡಗಿನಲ್ಲಿ ಟಿಪ್ಪು ಜಯಂತಿ ನಡುವೆ ನಿಷೇಧಾಜ್ಞೆಯಲ್ಲೂ, ಜಿಲ್ಲಾಡಳಿತದಿಂದ ವಿಶೇಷ ಅನುಮತಿಯೊಂದಿಗೆ ಇಲ್ಲಿನ ಶ್ರೀ ವಿಜಯ ವಿನಾಯಕ ದೇವಾಲಯದ 20ನೇ ವಾರ್ಷಿಕೋತ್ಸವ ಹಾಗೂ ಪೂಜಾ ಕೈಂಕರ್ಯಗಳ ಸಹಿತ ಭಕ್ತರಿಗೆ ಅನ್ನಸಂತರ್ಪಣೆ ನೆರವೇರಿತು.

ಆಡಳಿತ ಮಂಡಳಿ ಹಾಗೂ ಸಾವಿರಾರು ಸದ್ಭಕ್ತರು ಮಧ್ಯಾಹ್ನದ ಮಹಾಪೂಜೆಯಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದ ಬಳಿಕ ಅನ್ನದಾನದಲ್ಲಿ ಭಾಗಿಯಾದರು. ನಗರದ ಸಂತ ಜೋಸೆಫರ ಶಾಲಾ ಮಕ್ಕಳು, ವಿವಿಧ ಇಲಾಖೆಗಳ ನೌಕರರು, ಪೊಲೀಸರು, ಸಾರ್ವಜನಿಕರು ಸರದಿಯಲ್ಲಿ ಬಂದು ಸಾವಿರಾರು ಸಂಖ್ಯೆಯಲ್ಲಿ ಅನ್ನದಾನದಲ್ಲಿ ತೊಡಗಿಸಿಕೊಂಡು ಶ್ರೀ ವಿನಾಯಕನ ಕೃಪೆಗೆ ಪಾತ್ರರಾದರು.

ದೇವಾಲಯ ಆಡಳಿತ ಮಂಡಳಿ ಪ್ರಮುಖರು, ಸನ್ನಿಧಿ ಪ್ರಧಾನ ಅರ್ಚಕ ಶ್ರೀಕೃಷ್ಣ ಉಪಾಧ್ಯ ನೇತೃತ್ವದಲ್ಲಿ ನೆರವೇರಿದ ಪೂಜಾ ಕೈಂಕರ್ಯ ಸುಸೂತ್ರವಾಗಿ ನೆರವೇರಿಸುವಲ್ಲಿ ಸಹಭಾಗಿಗಳಾಗಿದ್ದರು. ಅಪರಾಹ್ನ ಬಹು ಸಮಯದ ತನಕಗೂ ಅಧಿಕ ಸಂಖ್ಯೆಯಲ್ಲಿ ಭಕ್ತರು ದರ್ಶನದೊಂದಿಗೆ ಪ್ರಸಾದ ಸ್ವೀಕರಿಸಿದರು. ಈ ಬಾರಿಯ ಪ್ರಾಕೃತಿಕ ವಿಕೋಪದ ಕಾರಣ, 20ನೇ ವಾರ್ಷಿಕೋತ್ಸವ ಸರಳ ರೀತಿ ಆಯೋಜನೆಗೊಂಡಿತ್ತು.