ಸೋಮವಾರಪೇಟೆ, ನ.10: ಕೊಡಗಿನ ಜನತೆಯ ಸಾರ್ವತ್ರಿಕ ವಿರೋಧದಿಂದಾಗಿ ರಾಜ್ಯ ಸರ್ಕಾರದ ಟಿಪ್ಪು ಜಯಂತಿ ಆಚರಣೆ ವಿಫಲವಾಗಿದೆ. ಸಮಿತಿಯ ಬಂದ್ ಕರೆಗೆ ಸ್ವಯಂಪ್ರೇರಣೆಯಿಂದ ಜನತೆ ಸ್ಪಂದಿಸುವ ಮೂಲಕ ಸರ್ಕಾರಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ ಎಂದು ಟಿಪ್ಪು ಜಯಂತಿ ವಿರೋಧಿ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ಎಂ.ಬಿ. ಅಭಿಮನ್ಯುಕುಮಾರ್ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳೇ ಭಾಗಿಯಾಗಿಲ್ಲ. ಕೊಡಗಿನಲ್ಲಿ ಜಯಂತಿಗೆ ವಿರೋಧಿಸಿದರೆ ಕಠಿಣ ಕ್ರಮ ಜರುಗಿಸುವದಾಗಿ ಎಚ್ಚರಿಕೆ ನೀಡಿದ್ದ ಉಸ್ತುವಾರಿ ಸಚಿವರೂ ಸಹ ಕಾರ್ಯಕ್ರಮಕ್ಕೆ ಆಗಮಿಸದೇ ದೂರ ಉಳಿದಿದ್ದಾರೆ. ಯಾರೂ ಕೇಳದೇ ಇದ್ದರೂ ಸಹ ಬಲವಂತದ ಆಚರಣೆ ಮಾಡುವ ಮೂಲಕ ಕಂಡವರ ಮಕ್ಕಳನ್ನು ಬಾವಿಗೆ ತಳ್ಳಿ ಆಳ ನೋಡುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದು ಆರೋಪಿಸಿದರು.
ಜಿಲ್ಲೆಯ 3 ತಾಲೂಕುಗಳಲ್ಲಿ ಟಿಪ್ಪು ಜಯಂತಿ ಯಶಸ್ವಿಯಾಗಿಲ್ಲ. ಸ್ವಯಂಪ್ರೇರಿತ ಬಂದ್ ನಡೆಸುವ ಮೂಲಕ ಜಿಲ್ಲೆಯ ಜನತೆ ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ. ಜಾತಿ, ಮತ, ಧರ್ಮ, ರಾಜಕೀಯ ಭೇದವಿಲ್ಲದೇ ಜಯಂತಿಗೆ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಅಭಿಮನ್ಯುಕುಮಾರ್ ವಿಶ್ಲೇಷಿಸಿದರು.
ಬಂದ್‍ನ್ನು ವಿಫಲಗೊಳಿಸಿ ಎಂದು ಕರೆ ನೀಡುವ ಮೂಲಕ ಕೆಲ ಸಂಘಟನೆಗಳು ಸಮಾಜದಲ್ಲಿ ಅಶಾಂತಿ ಮೂಡಿಸಲು ಯತ್ನಿಸಿದ್ದು, ಇಂತಹ ಸಂಘಟನೆಗಳ ವಿರುದ್ಧ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು. ಹಿಂದೂಪರ ಸಂಘಟನೆಗಳ ವಿರುದ್ಧ ಪ್ರಚೋದನಾಕಾರಿ ಹೇಳಿಕೆ ನೀಡುವವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಬೇಕು ಎಂದ ಅವರು, ಮುಂದಿನ ದಿನಗಳಲ್ಲಿ ಕೊಡಗಿನ ಜನರ ಭಾವನೆಯಂತೆ ಸರ್ಕಾರ ಟಿಪ್ಪು ಜಯಂತಿಯನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.
ಗೋಷ್ಠಿಯಲ್ಲಿ ಸಮಿತಿಯ ಪದಾಧಿಕಾರಿಗಳಾದ ಎಸ್.ಆರ್. ಸೋಮೇಶ್, ಪಿ. ಮಧು, ಚೇತನ್, ಪ್ರಜ್ವಲ್ ಅವರುಗಳು ಉಪಸ್ಥಿತರಿದ್ದರು.