ವೀರಾಜಪೇಟೆ, ನ. 10: ವೀರಾಜಪೇಟೆಯಲ್ಲಿ ಟಿಪ್ಪು ಜಯಂತಿ ವಿರೋಧಿಸಿ ಇಂದು ಬೆಳಗಿನಿಂದ ಸಂಜೆ 6 ಗಂಟೆಯವರೆಗೆ ಸ್ವಯಂ ಪ್ರೇರಿತವಾಗಿ ಬಂದ್ ಆಚರಿಸಲಾಯಿತು. ಶಾಲಾ - ಕಾಲೇಜುಗಳು ಬಂದ್ ಆಗಿದ್ದವು. ಸ್ವಯಂ ಪ್ರೇರಣೆಯಿಂದ ಎಲ್ಲ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಎರಡನೇ ಶನಿವಾರದ ಪ್ರಯುಕ್ತ ಸರ್ಕಾರಿ ಕಚೇರಿಗಳು, ರಾಜ್ಯ ಹಾಗೂ ರಾಷ್ಟ್ರೀಕೃತ ಬ್ಯಾಂಕ್ಗಳು ತೆರೆಯಲಿಲ್ಲ. ಸಾರ್ವಜನಿಕ ಆಸ್ಪತ್ರೆಯಲ್ಲಿಯೂ ರೋಗಿಗಳ ಸಂಖ್ಯೆ ವಿರಳವಾಗಿತ್ತು. ಖಾಸಗಿ ಬಸ್ಸುಗಳು, ಆಟೋ ರಿಕ್ಷಾಗಳು, ಟ್ಯಾಕ್ಸಿಗಳು ಬಂದ್ಗೆ ಬೆಂಬಲಿಸಿ ಸಂಚರಿಸಲಿಲ್ಲ. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳು ಮೈಸೂರು, ಬೆಂಗಳೂರು ಕಡೆಗಿನ ಸಂಚಾರ ವಿರಳವಾಗಿತ್ತು. (ಮೊದಲನೇ ಪುಟದಿಂದ) ಸಾರಿಗೆ ಸಂಸ್ಥೆಯ ಬಸ್ಸು ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆ ಇತ್ತು.
ಯಾವದೇ ಅಹಿತಕರ ಘಟನೆಗಳಿಗೆ ಅವಕಾಶವಿಲ್ಲದಂತೆ ಪೊಲೀಸರು, ಹೋಮ್ಗಾರ್ಡ್ಗಳು, ಹೊರಗಿನಿಂದ ಬಂದ ಪೊಲೀಸ್ ಅಧಿಕಾರಿಗಳು ಬಂದೋ ಬಸ್ತ್ನಲ್ಲಿ ನಿರತರಾಗಿದ್ದರು.ಟಿಪ್ಪು ಜಯಂತಿ ವಿರುದ್ಧ ಕೆಜಿಬಿ ಭಾಷಣ
ಕೊಡಗಿನ ಜನತೆಯ ಭಾವನೆಗಳಿಗೆ ಧಕ್ಕೆ ತರುವಂತಹ ಯಾವದೇ ಕಾರ್ಯಕ್ರಮವಾದರೂ ವಿರೋಧಿಸುತ್ತೇವೆ. ಟಿಪ್ಪು ಸುಲ್ತಾನ್ ಕೊಡಗಿಗೆ ಒಬ್ಬ ಮಾರಕ ವ್ಯಕ್ತಿಯಾಗಿದ್ದು, ಕೊಡಗಿನಲ್ಲಿ ಕೊಡಗಿನವರನ್ನು ಶತ್ರುಗಳನ್ನಾಗಿ ಪರಿಗಣಿಸಿ ಹತ್ಯೆ ಮಾಡಿದ್ದ. ಕೊಡಗಿನ ಐತಿಹಾಸಿಕ ದೇವಾಲಯಗಳನ್ನು ನಾಶಪಡಿಸುವದರಲ್ಲಿ ಪ್ರಮುಖನಾಗಿದ್ದ. ಇಂತಹ ವ್ಯಕ್ತಿಯ ಜಯಂತಿ ಆಚರಣೆ ಸರಕಾರಕ್ಕೆ ಗೌರವ ತರುವಂತದ್ದಲ್ಲ ಎಂದು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಆಕ್ರೋಷ ವ್ಯಕ್ತಪಡಿಸಿದರು.
ವೀರಾಜಪೇಟೆಯ ತಾಲೂಕು ಆಡಳಿತ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಆಶ್ರಯದಲ್ಲಿ ಇಲ್ಲಿನ ತಾಲೂಕು ಕಚೇರಿಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಟಿಪ್ಪು ಜಯಂತಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಮುಸ್ಲಿಮರ ಪವಿತ್ರ ಖುರಾನ್ನಲ್ಲಿ ವ್ಯಕ್ತಿ ಪೂಜೆಗೆ ಅವಕಾಶವಿಲ್ಲದಿದ್ದರೂ ಸರಕಾರ ಹಿಂದೂ ಸಮಾಜ, ಹಿಂದೂಗಳ ಭಾವನೆಗಳನ್ನು ಕೆಣಕುತ್ತಿದೆ. ಇತಿಹಾಸಕಾರರ ಪ್ರಕಾರ ಟಿಪ್ಪು ಒಬ್ಬ ಮತಾಂಧ ಕ್ರೂರಿ ವ್ಯಕ್ತಿ, ಹಿಂದೂಗಳ, ಹಿಂದೂ ದೇವಾಲಯಗಳ ವಿರೋಧಿಯಾಗಿದ್ದನು. ಚರಿತ್ರೆಯ ಪ್ರಕಾರ ವೀರಾಜಪೇಟೆ ಸಂತ ಅನ್ನಮ್ಮ ದೇವಾಲಯವನ್ನು ಭಾಗಶ: ನಾಶ ಮಾಡಲು ಕಾರಣಕರ್ತನಾಗಿದ್ದನು. ಇಂತಹ ವ್ಯಕ್ತಿಯ ಜಯಂತಿ ಆಚರಣೆಯನ್ನು ಯಾರೂ ಒಪ್ಪುವದಿಲ್ಲ ಎಂದರು.
ಶಾಸಕ ಬೋಪಯ್ಯ ಅವರು ಭಾಷಣದ ನಂತರ ಬೆಂಬಲಿಗರೊಂದಿಗೆ ಹೊರ ನಡೆದರು. ಬಿಜೆಪಿ ಪಕ್ಷದ ಉಪಾಧ್ಯಕ್ಷ ಪಟ್ರಪಂಡ ರಘು ನಾಣಯ್ಯ ಇತರ 19 ಮಂದಿ ಬೆಂಬಲಿಗರು ಶಾಸಕರೊಂದಿಗೆ ತೆರಳಿದರು. ವೇದಿಕೆಯಲ್ಲಿ ತಾಲೂಕು ಪಂಚಾಯಿತಿ ಅಧ್ಯಕ್ಷೆ ಸ್ಮಿತಾ ಪ್ರಕಾಶ್, ಉಪಾಧ್ಯಕ್ಷ ಎನ್.ಚಲನ್ ಕುಮಾರ್, ಜಿಲ್ಲಾ ಪಂಚಾಯಿತಿ ಸದಸ್ಯೆ ಭವ್ಯ ಚಿಟ್ಟಿಯಪ್ಪ, ತಾಲೂಕು ತಹಶೀಲ್ದಾರ್ ಆರ್. ಗೋವಿಂದರಾಜ್ ಉಪಸ್ಥಿತರಿದ್ದರು.
ಶಾಸಕರು ಸೇರಿ 21 ಮಂದಿ ಬಂಧನ
ಟಿಪ್ಪು ಜಯಂತಿ ಕಾರ್ಯಕ್ರಮ ವನ್ನು ವಿರೋಧಿಸಿ ಸರಕಾರದ ಕಾರ್ಯಕ್ರಮಕ್ಕೆ ಧಿಕ್ಕಾರ ಕೂಗಿದ ಆರೋಪದ ಮೇರೆ ನಗರ ಪೊಲೀಸರು ಶಾಸಕ ಕೆ.ಜಿ.ಬೋಪಯ್ಯ ಸೇರಿದಂತೆ ಒಟ್ಟು 21 ಮಂದಿಯನ್ನು ಬಂಧಿಸಿ ಬಳಿಕ ಬಿಡುಗಡೆ ಮಾಡಿದರು.
ತಾಲೂಕು ಆಡಳಿತ ಬೆಳಿಗ್ಗೆ 9ಗಂಟೆಗೆ ತಾಲೂಕು ಕಚೇರಿಯ ಸಭಾಂಗಣದಲ್ಲಿ ಕೆ.ಜಿ. ಬೋಪಯ್ಯ ಅಧ್ಯಕ್ಷತೆಯಲ್ಲಿ ಟಿಪ್ಪು ಜಯಂತಿಯನ್ನು ಏರ್ಪಡಿಸಿತ್ತು. ಶಾಸಕರು ತಮ್ಮ ಬೆಂಬಲಿಗರೊಂದಿಗೆ 9-10ಕ್ಕೆ ಸಭಾಂಗಣಕ್ಕೆ ಬಂದರು. ಮೊದಲು ಪ್ರಾರ್ಥನೆ ನಂತರ ಸ್ವಾಗತ ಭಾಷಣವಾದ ಮೇಲೆ ಟಿಪ್ಪು ಜಯಂತಿಯನ್ನು ಟೀಕಿಸಿ ಬೋಪಯ್ಯ ಭಾಷಣ ಮಾಡಿ ಸರಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಹೊರ ನಡೆದಾಗ ಮಿನಿ ವಿಧಾನಸೌಧದ ಮುಂದೆ ಬಂದೋಬಸ್ತ್ನಲ್ಲಿದ್ದ ಪೊಲೀಸರು ಶಾಸಕರು ಸೇರಿ 21 ಮಂದಿಯನ್ನು ಬಂಧಿಸಿ ಪಕ್ಕದಲ್ಲಿಯೇ ಇದ್ದ ಸರಕಾರಿ ಬಸ್ಸಿನಲ್ಲಿ ಸಂತ ಅನ್ನಮ್ಮ ಶಾಲೆಯ ಕಡೆಗೆ ಕರೆದೊಯ್ದರು.
ಶಾಸಕರೊಂದಿಗೆ ರೀನಾ ಪ್ರಕಾಶ್, ತಾಲೂಕು ಪಂಚಾಯಿತಿ ಅಧ್ಯಕ್ಷೆ ಸ್ಮಿತಾ ಪ್ರಕಾಶ್, ಉಪಾಧ್ಯಕ್ಷ ನೆಲ್ಲೀರ ಚಲನ್, ಸದಸ್ಯರುಗಳಾದ ಬಿ.ಎಂ.ಗಣೇಶ್, ಕೆ.ಅಜಿತ್, ಜಿಲ್ಲಾ ಪಂಚಾಯಿತಿ ಸದಸ್ಯರುಗಳಾದ ಅಚ್ಚಪಂಡ ಮಹೇಶ್, ಭವ್ಯ, ಶಶಿ ಸುಬ್ರಮಣಿ, ಸಿ.ಕೆ.ಬೋಪಣ್ಣ ಮತ್ತಿತರರು ಸೇರಿದಂತೆ ಬಂಧನಕ್ಕೊಳಗಾದರು.
ಕೇವಲ ಹತ್ತು ನಿಮಿಷಗಳಲ್ಲಿ ಟಿಪ್ಪು ಜಯಂತಿ ಆಚರಣೆ
ತಾಲೂಕು ಕಚೇರಿ ಸಭಾಂಗಣ ದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಬೋಪಯ್ಯ ಅವರು ಟಿಪ್ಪು ಸುಲ್ತಾನ್ನನ್ನು ಟೀಕಿಸಿ ಹೊರನಡೆದ ನಂತರ ತಾಲೂಕು ಕಾರ್ಯ ನಿರ್ವಹಣಾಧಿಕಾರಿ ಜಯಣ್ಣ ಅವರ ಅಧ್ಯಕ್ಷತೆಯಲ್ಲಿ ಟಿಪ್ಪು ಜಯಂತಿ ಕಾರ್ಯಕ್ರಮ ಕೇವಲ ಹತ್ತು ನಿಮಿóಷಗಳ ಕಾಲ ನಡೆಯಿತು.
ಈ ಕಾರ್ಯಕ್ರಮದಲ್ಲಿ ತಾಲೂಕು ತಹಶೀಲ್ದಾರ್ ಆರ್.ಗೋವಿಂದರಾಜ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶ್ರೀಧರ್, ಪ್ರಭಾರ ಶಿಕ್ಷಣಾಧಿಕಾರಿ ಅಂಬುಜಾ, ಹುಣಸೂರು ಡಿ.ವೈಎಸ್ಪಿ ಮಹಮ್ಮದ್ ಇರ್ಷಾದ್ ಉಪಸ್ಥಿತರಿದ್ದರು.
ಸಭೆಯಲ್ಲಿ ಅಧಿಕವಾಗಿ ಅಧಿಕಾರಿಗಳು, ರೆವಿನ್ಯೂ ಸಿಬ್ಬಂದಿಗಳು, ಸರಕಾರಿ ನೌಕರರು ಹಾಜರಿದ್ದರು.
ದಕ್ಷಿಣ ಕೊಡಗಿನಲ್ಲಿ ಬಂದ್ಗೆ ವ್ಯಾಪಕ ಬೆಂಬಲ
ಗೋಣಿಕೊಪ್ಪ ವರದಿ : ಟಿಪ್ಪು ಜಯಂತಿ ವಿರೋಧಿಸಿ ಕರೆ ನೀಡಲಾಗಿದ್ದ ಸ್ವಯಂ ಘೋಷಿತ ಬಂದ್ಗೆ ದಕ್ಷಿಣ ಕೊಡಗಿನಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಯಿತು. ಸುತ್ತಲಿನ ಪಟ್ಟಣಗಳಲ್ಲಿ ಅಂಗಡಿ - ಮುಂಗಟ್ಟು ಮುಚ್ಚಿ ಬೆಂಬಲ ಸೂಚಿಸಿದರು. ಸರ್ಕಾರಿ ಬಸ್ಗಳು ಖಾಲಿ ಓಡಾಟ ನಡೆಸಿದವು. ಆಟೋಗಳು ವಿರಳವಾಗಿತ್ತು.
ಗೋಣಿಕೊಪ್ಪ, ಪೊನ್ನಂಪೇಟೆ, ಕಾನೂರು, ಹುದಿಕೇರಿ, ಬಾಳೆಲೆ, ತಿತಿಮತಿ, ಅಮ್ಮತ್ತಿ ವ್ಯಾಪ್ತಿಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ಗೋಣಿಕೊಪ್ಪ, ಬಾಳೆಲೆ, ಅಮ್ಮತ್ತಿ ಹಾಗೂ ಪೊನ್ನಂಪೇಟೆಯಲ್ಲಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳು ಪೋಷಕರ ಸಹಾಯದಿಂದ ಬಂದರು. ಬಸ್ ವ್ಯವಸ್ಥ್ತೆ ಇಲ್ಲದ ಕಾರಣ ತೊಂದರೆ ಅನುಭವಿಸಿದರು. ನಂತರ ವಿದ್ಯಾರ್ಥಿಗಳು ಮನೆಗಳಿಗೆ ಹಿಂತಿರುಗಿದರು. ಗೋಣಿಕೊಪ್ಪದಲ್ಲಿ ಏಕಮಾತ್ರ ಹೊಟೇಲ್ ತೆರೆದಿತ್ತು. ನಂತರ ವಿರೋಧಕ್ಕೆ ಮಣಿದು ಮುಚ್ಚಲಾಯಿತು.
ಪಾಲಿಬೆಟ್ಟದಲ್ಲಿ ಸ್ಥಳೀಯ ಮುಖಂಡರುಗಳ ನಿರುತ್ಸಾಹದಿಂದ ಬಂದ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಲಿಲ್ಲ. ಬಹುತೇಕ ಅಂಗಡಿಗಳು ತೆರೆದಿದ್ದವು. ಯಾರೂ ಕೂಡ ವಿರೋಧ ಮಾಡಲು ಮುಂದಾಗದ ಕಾರಣ ಬಂದ್ ಯಶಸ್ವಿಯಾಗಲಿಲ್ಲ. ವ್ಯಾಪಾರ ಎಂದಿನಂತೆ ನಡೆಯಿತು.
ಬಾಳೆಲೆಯಲ್ಲಿ ಟಿಪ್ಪು ಜಯಂತಿಯಂದು ಹುತಾತ್ಮರಾದ ದೇವಪಂಡ ಕುಟ್ಟಪ್ಪ ಅವರಿಗೆ ಶಾಂತಿ ಕೋರಿ ಅಲ್ಲಿನ ಗಣೇಶ ದೇವಸ್ಥಾನದಲ್ಲಿ ಸ್ಥಳೀಯರು ಪೂಜೆ ಸಲ್ಲಿಸಿದರು. ಕುಟ್ಟ, ಶ್ರೀಮಂಗಲ, ಬಿರುನಾಣಿ ವ್ಯಾಪ್ತಿಯಲ್ಲಿ ಅಂಗಡಿಗಳು ಮುಚ್ಚಿದ್ದವು. ಆಟೋ ಸಂಚಾರವಿರಲಿಲ್ಲ. ಅಂತರರಾಜ್ಯ ಹೆದ್ದಾರಿಯಾದ ಕಾರಣ ತಪಾಸಣೆ ಹೆಚ್ಚಾಗಿತ್ತು. ಖಾಸಗಿ ಕಾರ್ಯಕ್ರಮಕ್ಕೆ ತೆರಳುವವರು ತೊಂದರೆ ಅನುಭವಿಸಿದರು. ಖಾಸಗಿ ಬಸ್ ಇಲ್ಲದೆ ತೊಂದರೆ ಆಯಿತು.
ಬಹುತೇಕ ಜನರಲ್ಲಿ ಟಿಪ್ಪು ಜಯಂತಿ ವೇಳೆ ಏನಾಗಬಹುದು ಎಂಬ ಆತಂಕವಿತ್ತು. ಈ ಬಗ್ಗೆ ಕುತೂಹಲದಿಂದ ಅಲ್ಲಲ್ಲಿ ಮಾಹಿತಿ ಕಲೆ ಹಾಕುತ್ತಿದ್ದರು. ಅಚರಣೆ ಹೆಸರಿನಲ್ಲಿ ಸಾರ್ವಜನಿಕರಲ್ಲಿ ಘರ್ಷಣೆ ಉಂಟಾಗದಿರಲಿ ಎಂದು ಸಾರ್ವಜನಿಕರು ಮಾತಾಡಿಕೊಳ್ಳುತ್ತಿದ್ದರು.
ಸಿದ್ದಾಪುರದಲ್ಲೂ ಮಿಶ್ರ
ಸಿದ್ದಾಪುರ: ಟಿಪ್ಪು ಜಯಂತಿ ಆಚರಣೆ ವಿರುದ್ಧ ವಿವಿಧ ಹಿಂದೂಪರ ಸಂಘಟನೆಗಳು ಕರೆ ನೀಡಿದ್ದ ಬಂದ್ಗೆ ಸಿದ್ದಾಪುರದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಖಾಸಗಿ ಬಸ್ಸುಗಳ ಸಂಚಾರ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಸಾರ್ವಜನಿಕರ ಓಡಾಟ ವಿರಳವಾಗಿತ್ತು. ಉಳಿದೆಲ್ಲ ವಾಹನಗಳು ಎಂದಿನಂತೆ ಸಂಚರಿಸುತ್ತಿದ್ದವು.
ಶ್ರದ್ಧಾಂಜಲಿ
ಎರಡು ವರ್ಷಗಳ ಹಿಂದೆ ಟಿಪ್ಪು ಜಯಂತಿ ಆಚರಣೆ ಸಂದರ್ಭ ಹತ್ಯೆಯಾಗಿದ್ದ ದೇವಪಂಡ ಕುಟ್ಟಪ್ಪ ಅವರ ಪುಣ್ಯತಿಥಿ ಹಾಗೂ ಶ್ರದ್ಧಾಂಜಲಿ ಕಾರ್ಯಕ್ರಮವು ಸಿದ್ದಾಪುರ ಶ್ರಿ ಅಯ್ಯಪ್ಪ ದೇವಾಲಯದ ಆವರಣದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಹಿಂದೂಪರ ಸಂಘಟನೆಯ ಲತೀಶ್ ರೈ, ಪ್ರಜಿತ್, ಪ್ರವೀಣ್, ಬಿಜೆಪಿ ಜಿಲ್ಲಾ ಪ್ರದಾನ ಕಾರ್ಯದರ್ಶಿ ವಿ.ಕೆ. ಲೋಕೆಶ್, ಬಿಜೆಪಿ ಪಕ್ಷದ ಪದಾಧಿಕಾರಿಗಳಾದ ಪಂದಿಕಂಡ ಆಶೋಕ್, ಟಿ.ಸಿ ಆಶೋಕ್ ಇತರರು ಇದ್ದರು.