ಸೋಮವಾರಪೇಟೆ, ನ. 10: ಟಿಪ್ಪು ಜಯಂತಿ ವಿರೋಧಿಸಿ ಕರೆ ನೀಡಲಾಗಿದ್ದ ಕೊಡಗು ಜಿಲ್ಲಾ ಬಂದ್ ಕರೆಗೆ ಸೋಮವಾರಪೇಟೆ ಸಂಪೂರ್ಣ ಸ್ತಬ್ಧಗೊಂಡಿತ್ತು. ಅಂಗಡಿ ಮುಂಗಟ್ಟುಗಳು ಬೆಳಗ್ಗಿನಿಂದಲೇ ಬಂದ್ ಆಗಿದ್ದರೆ, ಖಾಸಗಿ ಬಸ್‍ಗಳ ಸಂಚಾರ ಸ್ಥಗಿತಗೊಂಡಿತ್ತು. ಬೆರಳೆಣಿಕೆಯ ಸರ್ಕಾರಿ ಬಸ್‍ಗಳು ಓಡಾಟ ನಡೆಸಿದರೆ, ಆಟೋಗಳ ಸಂಚಾರವೂ ಇಳಿಮುಖಗೊಂಡಿತ್ತು.ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿರುವ ಅಂಗಡಿ ಮುಂಗಟ್ಟುಗಳು ಬೆಳಗ್ಗಿನಿಂದಲೇ ಬಂದ್ ಆಗಿದ್ದವು. ಅಗತ್ಯ ವಸ್ತುಗಳಾದ ಹಾಲು, ಮೆಡಿಕಲ್ ಶಾಪ್‍ಗಳು ಎಂದಿನಂತೆ ತೆರೆದಿದ್ದರೆ, ಬೆರಳೆಣಿಕೆಯ ಆಟೋಗಳು ಗ್ರಾಹಕರಿಗಾಗಿ ನಿಲ್ದಾಣದಲ್ಲಿ ನಿಲುಗಡೆಯಾಗಿದ್ದವು. ಆಗೊಮ್ಮೆ ಈಗೊಮ್ಮೆ ಆಗಮಿಸುತ್ತಿದ್ದ ಸರ್ಕಾರಿ ಬಸ್‍ಗಳಿಗೆ ಪ್ರಯಾಣಿಕರು ಗಂಟೆಗಟ್ಟಲೆ ನಿಲ್ದಾಣದಲ್ಲಿ ಕಾದು ಕುಳಿತಿದ್ದರು. ಬೆರಳೆಣಿಕೆಯ ಖಾಸಗಿ ವಾಹನಗಳು ಪಟ್ಟಣದಲ್ಲಿ ಸಂಚರಿಸುತ್ತಿದ್ದವು.ಮಾದಾಪುರ, ಕುಂಬೂರು, ಐಗೂರು, ಹಾನಗಲ್ಲು, ಆಲೇಕಟ್ಟೆ ರಸ್ತೆಗಳಲ್ಲೂ ಬಂದ್ ಯಶಸ್ವಿಯಾಗಿದ್ದರೆ, ಬೀಟಿಕಟ್ಟೆ, ಕಾಗಡಿಕಟ್ಟೆಗಳಲ್ಲಿ ಒಂದೆರಡು ಅಂಗಡಿಗಳನ್ನು ಹೊರತುಪಡಿಸಿದರೆ ಉಳಿದಂತೆ ಅಂಗಡಿಗಳು ತೆರೆದಿದ್ದವು. ಜಿಲ್ಲಾಡಳಿತದಿಂದ 144 ಸೆಕ್ಷನ್ ಜಾರಿಯಲ್ಲಿದ್ದ ಹಿನ್ನೆಲೆ ಪಟ್ಟಣದಲ್ಲಿ ಗುಂಪುಕಟ್ಟಿ ನಿಲ್ಲಬಾರದು ಎಂದು ಪೊಲೀಸರು ಎಚ್ಚರಿಕೆ ನೀಡುತ್ತಿದ್ದರು. ಪೊಲೀಸ್ ವೃತ್ತ ನಿರೀಕ್ಷಕ ನಂಜುಂಡೇಗೌಡ, ಠಾಣಾಧಿಕಾರಿ ಜಯರಾಂ ಅವರುಗಳು ಶಾಂತಿ ಸುವ್ಯವಸ್ಥೆಗೆ ಶ್ರಮಿಸಿದರು.

ಟಿಪ್ಪು ಜಯಂತಿ ತಡೆಗೆ ಯತ್ನ

ಹಿಂದೂಪರ ಸಂಘಟನೆಗಳ ವ್ಯಾಪಕ ವಿರೋಧದ ನಡುವೆಯೂ ಸರ್ಕಾರ ಆಚರಣೆಗೆ ಮುಂದಾದ ಟಿಪ್ಪು ಜಯಂತಿಗೆ ಪ್ರತಿಭಟನೆಯ ಮೂಲಕ ತಡೆಯೊಡ್ಡುವ ಯತ್ನ ಸೋಮವಾರಪೇಟೆಯಲ್ಲಿ ನಡೆಯಿತು.

ಇಲ್ಲಿನ ಚನ್ನಬಸಪ್ಪ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮಕ್ಕೆ ತಡೆಯೊಡ್ಡುವ ಪ್ರಯತ್ನಕ್ಕೆ ಮುಂದಾದ 56 ಮಂದಿ ಹಿಂದೂಪರ ಸಂಘಟನೆಯ ಕಾರ್ಯಕರ್ತರನ್ನು ಬಂಧಿಸಿ, ತಾತ್ಕಾಲಿಕ ಬಂದೀಖಾನೆ ಮಾಡಿದ್ದ ಇಲ್ಲಿನ ಬಿಟಿಸಿಜಿ ಕಾಲೇಜಿಗೆ ಕರೆದೊಯ್ದು ನಂತರ ಬಿಡುಗಡೆಗೊಳಿಸಲಾಯಿತು.

ಬೆಳಿಗ್ಗೆ 8.50ಕ್ಕೆ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು, ಚನ್ನಬಸಪ್ಪ ಸಭಾಂಗಣದ 50 ಮೀಟರ್ ದೂರದಲ್ಲಿರುವ, ಕಾಲೇಜು ರಸ್ತೆಯಲ್ಲಿ ನಿರ್ಮಿಸಲಾಗಿದ್ದ ಬ್ಯಾರಿಕೇಡ್ ಬಳಿ ಆಗಮಿಸಿದರು. ಈ ಸಂದರ್ಭ ಬ್ಯಾರಿಕೇಡ್‍ಗಳನ್ನು ದೂಡಿಕೊಂಡು ಒಳಪ್ರವೇಶಿಸಲು ಯತ್ನಿಸಿದ ಪ್ರತಿಭಟನಾಕಾರರನ್ನು ಪೊಲೀಸರು ಬಿಗಿಯಾಗಿ ಹಿಡಿದುಕೊಂಡರು.

ಕಪ್ಪು ಪಟ್ಟಿ ಧರಿಸಿ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗುತ್ತಾ, ಮುನ್ನುಗ್ಗಿದ ಕೆಲ ಯುವಕರಿಗೆ ಪೊಲೀಸರು ಲಾಠಿ ಬೀಸಿದರು. ಟಿಪ್ಪು ಜಯಂತಿಗೆ ತಡೆಯೊಡ್ಡಲು ಯತ್ನಿಸಿದ ಆರೋಪದ ಮೇರೆ ಟಿಪ್ಪು ಜಯಂತಿ ವಿರೋಧಿ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ಅಭಿಮನ್ಯುಕುಮಾರ್, ಮಾಜೀ ಎಂಎಲ್‍ಸಿ ಎಸ್.ಜಿ.ಮೇದಪ್ಪ, ಪ್ರಮುಖರಾದ ಲೋಕೇಶ್ವರಿ ಗೋಪಾಲ್, ಸರೋಜಮ್ಮ, ದೀಪಕ್, ಗೌಡಳ್ಳಿ ಸುನಿಲ್, 9 ಮಂದಿ ಮಹಿಳಾ ಹೋರಾಟಗಾರರೂ ಸೇರಿದಂತೆ 56 ಮಂದಿಯನ್ನು ಕೆಪಿ ಆಕ್ಟ್ 71 ಪ್ರಕಾರ ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ಪಡೆದು ತಾತ್ಕಾಲಿಕ ಬಂದೀಖಾನೆಗೆ ಕರೆ ತಂದು ಬಿಡುಗಡೆಗೊಳಿಸಲಾಯಿತು.

10 ನಿಮಿಷದಲ್ಲಿ ಮುಕ್ತಾಯ

ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ತಾಲೂಕು ಆಡಳಿತದ ವತಿಯಿಂದ ಇಲ್ಲಿನ ಚನ್ನಬಸಪ್ಪ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಟಿಪ್ಪು ಜಯಂತಿ ಕಾರ್ಯಕ್ರಮ, ಆಹ್ವಾನಿತ ಅತಿಥಿಗಳ ಧಿಕ್ಕಾರ-ವಿರೋಧದ ನಂತರ ಕೇವಲ 10 ನಿಮಿಷದಲ್ಲಿ ಮುಕ್ತಾಯಗೊಂಡಿತು.

ಶಿಷ್ಟಾಚಾರದಂತೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಬೇಕಿದ್ದ ಶಾಸಕ ಅಪ್ಪಚ್ಚು ರಂಜನ್ ಗೈರಾಗಿದ್ದರಿಂದ ಆಹ್ವಾನ ಪತ್ರಿಕೆಯಲ್ಲಿ ಹೆಸರು ಮುದ್ರಿಸಲಾಗಿದ್ದ ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ತಾ.ಪಂ. ಉಪಾಧ್ಯಕ್ಷ ಅಭಿಮನ್ಯುಕುಮಾರ್, ಸದಸ್ಯೆ ತಂಗಮ್ಮ ಸೇರಿದಂತೆ ಒಂದಿಷ್ಟು ಮಂದಿ ಸಭಾಂಗಣದ ಒಳಗೆ ಹಾಜರಿದ್ದರು.

ಈ ಸಂದರ್ಭ ಲೋಕೇಶ್ವರಿ, ಅಭಿಮನ್ಯುಕುಮಾರ್ ಹಾಗೂ ತಂಗಮ್ಮ ಅವರನ್ನು ತಾಲೂಕು ತಹಶೀಲ್ದಾರ್ ಮಹೇಶ್ ಅವರು ವೇದಿಕೆಗೆ ಆಹ್ವಾನಿಸಿದರು. ಈ ಆಹ್ವಾನವನ್ನು ತಿರಸ್ಕರಿಸಿದ ಅತಿಥಿಗಳು, ಟಿಪ್ಪು ಓರ್ವ ಮತಾಂಧ, ಕೊಡಗಿನ ಮೇಲೆ ಅನೇಕ ಬಾರಿ ಆಕ್ರಮಣ ಮಾಡಿ ದೌರ್ಜನ್ಯ ಎಸಗಿದ್ದಾನೆ. ಮತಾಂತರದ ಮೂಲಕ ಧರ್ಮ ವಿರೋಧಿ ನೀತಿ ಅನುಸರಿಸಿದ್ದೂ ಅಲ್ಲದೇ ಕನ್ನಡ ಭಾಷೆಯ ಅವನತಿಗೆ ಯತ್ನಿಸಿದ್ದಾನೆ. ಇಂತಹ ಜಯಂತಿಗೆ ನಮ್ಮ ವಿರೋಧವಿದೆ ಎಂದರು.

ವೇದಿಕೆಯಲ್ಲಿದ್ದ ತಾಲೂಕು ತಹಶೀಲ್ದಾರ್ ಮಹೇಶ್ ಅವರು ಸರ್ಕಾರಿ ಕಾರ್ಯಕ್ರಮವಾದ್ದರಿಂದ ಶಿಷ್ಟಚಾರ ಪಾಲಿಸಬೇಕಿದೆ. ವೇದಿಕೆಗೆ ಆಗಮಿಸುವಂತೆ ಮನವಿ ಮಾಡಿದರು. ನೀವುಗಳು ಮುಸ್ಲಿಂ ಮತ್ತು ಕ್ರೈಸ್ತ ಧರ್ಮದ ಮುಖಂಡರಿಗೆ ಮಾತ್ರ ಆಹ್ವಾನ ನೀಡಿದ್ದೀರಿ. ಅದೇ ಹಿಂದೂ ಧರ್ಮದ ಧಾರ್ಮಿಕ ಮುಖಂಡರಿಗೆ ಆಹ್ವಾನ ನೀಡಿಲ್ಲ. ಧರ್ಮವನ್ನು ಒಡೆಯುವ ಕೆಲಸ ಮಾಡುತ್ತಿದ್ದೀರಿ ಎಂದು ಅಭಿಮನ್ಯುಕುಮಾರ್ ಆರೋಪಿಸಿದರು.

ಶಾಂತಿ ಸಭೆಯಲ್ಲೂ ಸಹ ಜಯಂತಿಗೆ ವಿರೋಧ ವ್ಯಕ್ತಪಡಿಸಿದ್ದೇವೆ. ಆದರೂ ನೀವುಗಳು ಕಾರ್ಯಕ್ರಮ ಆಯೋಜಿಸಿದ್ದೀರಿ. ಇಂತಹ ಜಯಂತಿಗೆ ನಮ್ಮ ಧಿಕ್ಕಾರವಿದೆ ಎಂದು ತಿಳಿಸಿ ಸಭಾಂಗಣದಿಂದ ಧಿಕ್ಕಾರದ ಘೋಷಣೆ ಕೂಗುತ್ತಾ ಹೊರಬಂದರು. ಇವರೊಂದಿಗೆ ಲೋಕೇಶ್ವರಿ ಗೋಪಾಲ್,ಜಿ.ಪಂ. ಸದಸ್ಯರಾದ ಸರೋಜಮ್ಮ, ಬಿ.ಜೆ ದೀಪಕ್, ತಾ.ಪಂ. ಸದಸ್ಯರಾದ ಬಲ್ಲಾರಂಡ ಮಣಿ ಉತ್ತಪ್ಪ, ತಂಗಮ್ಮ, ಸಬಿತ ಚನ್ನಕೇಶವ, ಧರ್ಮಪ್ಪ, ಗಣೇಶ್, ಚೌಡ್ಲು ಗ್ರಾ.ಪಂ. ಸದಸ್ಯರಾದ ಧರ್ಮ, ಮಂಜುಳಾ, ದಿವ್ಯ, ಹಾನಗಲ್ಲು ಗ್ರಾ.ಪಂ. ಸದಸ್ಯ ಪ್ರಕಾಶ್ ಅವರೂಗಳೂ ಸಹ ಧಿಕ್ಕಾರದೊಂದಿಗೆ ಸಭಾಂಗಣದಿಂದ ಹೊರಬಂದರು.

ಅತಿಥಿಗಳು ಸಭಾಂಗಣದಿಂದ ಹೊರಬಂದ ನಂತರ ಟಿಪ್ಪು ಜಯಂತಿ ಕಾರ್ಯಕ್ರಮ ಪ್ರಾರಂಭವಾಯಿತು. ತಾಲೂಕು ತಹಶೀಲ್ದಾರ್ ಮಹೇಶ್, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಸುನಿಲ್, ವಲಯ ಅರಣ್ಯಾಧಿಕಾರಿ ಲಕ್ಷ್ಮೀಕಾಂತ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಾಚಪ್ಪ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಡಿ. ವಿಜೇತ್ ಅವರುಗಳು ವೇದಿಕೆಗೆ ಆಗಮಿಸಿ, ಟಿಪ್ಪು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಶಾಲಾ ವಿದ್ಯಾರ್ಥಿಗಳು ಪ್ರಾರ್ಥನೆಯೊಂದಿಗೆ ನಾಡಗೀತೆ ಹಾಡಿದರು. ತಹಶೀಲ್ದಾರ್ ಮಹೇಶ್ ‘ಟಿಪ್ಪು ಸುಲ್ತಾನ್ ಅವರಿಗೆ ಮೈಸೂರು ಹುಲಿ ಎನ್ನುತ್ತಾರೆ. ಅವರ ತಂದೆ ಹೈದರಾಲಿ ಮೊದಲನೇ ಮತ್ತು ಎರಡನೇ ಆಂಗ್ಲೋ ಮೈಸೂರು ಯುದ್ಧ ನಡೆಸಿದರು. ಟಿಪ್ಪು ಸುಲ್ತಾನ್ ಎರಡನೇ ಆಂಗ್ಲೋ ಮೈಸೂರು ಯುದ್ಧ ಹಾಗೂ 3 ಮತ್ತು 4 ನೇ ಯುದ್ಧದಲ್ಲೂ ಭಾಗವಹಿಸಿದ್ದರು. ಇವರ ಚಿಂತನೆಯಂತೆ ಸಮಾಜದಲ್ಲಿ ಶಾಂತಿ, ಸಹಬಾಳ್ವೆ, ಸಹೋದರತೆ ನೆಲೆಸಲಿ, ಉತ್ತಮ ಏಳಿಗೆಯಾಗಲಿ. ಇವರ ಚಿಂತನೆಗಳಂತೆ ಸರ್ಕಾರದ ಯೋಜನೆಗಳು ಉತ್ತಮವಾಗಿ ಕಾರ್ಯನಿರ್ವಹಿಸಲಿ’ ಎಂದು 49 ಸೆಕೆಂಡ್‍ನಲ್ಲಿ ತಮ್ಮ ಭಾಷಣ ಮುಗಿಸಿದರು. ತಾಲೂಕು ಕಚೇರಿಯ ಅರುಣ್‍ಕುಮಾರ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರೆ, ತಾ.ಪಂ. ಸಿಬ್ಬಂದಿ ರವೀಂದ್ರ, ಹಾನಗಲ್ಲು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ರವೀಶ್, ಬೇಳೂರು ಗ್ರಾ.ಪಂ. ಸದಸ್ಯ ಕೆ.ಎ. ಯಾಕೂಬ್ ಅವರುಗಳು ಮಾತ್ರ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಮಾದಾಪುರದಲ್ಲಿ ಹುತಾತ್ಮ ದಿನ ಆಚರಣೆ

ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಆಯೋಜನೆಗೊಂಡ ಟಿಪ್ಪು ಜಯಂತಿ ಸಂದರ್ಭ ಮಡಿಕೇರಿಯಲ್ಲಿ ಸಾವನ್ನಪ್ಪಿದ ವಿಶ್ವ ಹಿಂದೂ ಪರಿಷತ್‍ನ ಮುಖಂಡ ದೇವಪ್ಪಂಡ ಕುಟ್ಟಪ್ಪ ಹುತಾತ್ಮ ದಿನವನ್ನು ಮಾದಾಪುರದಲ್ಲಿ ಆಚರಿಸಲಾಯಿತು.

ಮಾದಾಪುರದ ಶ್ರೀಗಣಪತಿ ದೇವಾಲಯದ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಕುಟ್ಟಪ್ಪ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಕುಟ್ಟಪ್ಪ ಪುತ್ರ, ದೇವಪಂಡ ಡಾಲಿ ಟಿಪ್ಪುವಿನ ಕ್ರೌರ್ಯದ ಅರಿವಿದ್ದರೂ ಸಹ ಸರ್ಕಾರ ಆತನ ಜಯಂತಿ ಆಚರಿಸುತ್ತಿರುವದು ಸರಿಯಲ್ಲ. ಧರ್ಮಕ್ಕಾಗಿ ತನ್ನ ತಂದೆ ಜೀವ ಅರ್ಪಿಸಿದ್ದಾರೆ. ಅಂದು ನಮ್ಮ ಮನೆಗೆ ಬಂದಿದ್ದ ಕುಮಾರಸ್ವಾಮಿ ಅವರು ತಾನು ಮುಖ್ಯಮಂತ್ರಿಯಾದರೆ ಟಿಪ್ಪು ಜಯಂತಿಯನ್ನು ರದ್ದುಗೊಳಿಸುತ್ತೇನೆ ಎಂದಿದ್ದರು. ಆದರೆ ಇಂದು ಅವರ ನೇತೃತ್ವದ ಸರ್ಕಾರದಿಂದಲೇ ಕಾರ್ಯಕ್ರಮ ನಡೆಸುತ್ತಿರುವದು ಖಂಡನೀಯ ಎಂದರು.

ಕಾರ್ಯಕ್ರಮದ ವೇದಿಕೆಯಲ್ಲಿ ಕುಟ್ಟಪ್ಪ ಅವರ ಪತ್ನಿ ಚಿಣ್ಣವ್ವ ಉಪಸ್ಥಿತರಿದ್ದರು. ಹಿಂದೂ ಜಾಗರಣಾ ವೇದಿಕೆಯ ಮಾದಾಪುರ ಹೋಬಳಿ ಅಧ್ಯಕ್ಷ ಕೇಶವ, ಸಂಚಾಲಕ ಸುನಿಲ್, ವಿಶ್ವಹಿಂದೂ ಪರಿಷತ್‍ನ ಸುಭಾಷ್ ಅವರುಗಳು ಉಪಸ್ಥಿತರಿದ್ದು, ಕುಟ್ಟಪ್ಪ ಅವರ ಧಾರ್ಮಿಕ ಹೋರಾಟಗಳನ್ನು ಮೆಲುಕು ಹಾಕಿದರು. ಸಂಘ ಪರಿವಾರದ 150ಕ್ಕೂ ಅಧಿಕ ಕಾರ್ಯಕರ್ತರು ಉಪಸ್ಥಿತರಿದ್ದರು.

ಕುಶಾಲನಗರ : ಟಿಪ್ಪು ಜಯಂತಿ ವಿರೋಧಿಸಿ ಟಿಪ್ಪು ಜಯಂತಿ ವಿರೋಧಿ ಹೋರಾಟ ಸಮಿತಿ ಕರೆ ನೀಡಿದ್ದ ಕೊಡಗು ಜಿಲ್ಲೆ ಬಂದ್ ಹಿನ್ನೆಲೆಯಲ್ಲಿ ಕುಶಾಲನಗರದಲ್ಲಿ ಬಹುತೇಕ ಬೆಂಬಲ ದೊರೆತಿದೆ. ಕುಶಾಲನಗರ ಸೇರಿದಂತೆ ನೆರೆಯ ಕೂಡಿಗೆ, ಶಿರಂಗಾಲ ಭಾಗಗಳಲ್ಲಿ ಬಹುತೇಕ ಅಂಗಡಿ ಮುಂಗಟ್ಟುಗಳು, ಹೊಟೇಲ್‍ಗಳು ಸ್ವಯಂ ಪ್ರೇರಿತವಾಗಿ ಬಂದ್‍ನಲ್ಲಿ ಪಾಲ್ಗೊಂಡು ಟಿಪ್ಪು ಜಯಂತಿಗೆ ವಿರೋಧ ವ್ಯಕ್ತಪಡಿಸಿದ್ದು ಗೋಚರಿಸಿತು. ಬೆರಳೆಣಿಕೆ ಅಂಗಡಿ ಮಳಿಗೆಗಳು ಮಾತ್ರ ಎಂದಿನಂತೆ ತಮ್ಮ ವ್ಯಾಪಾರ ವಹಿವಾಟಿನಲ್ಲಿ ತೊಡಗಿಸಿಕೊಂಡಿತ್ತು. ಸ್ಥಳೀಯ ಚಿತ್ರಮಂದಿರದಲ್ಲಿ ಚಲನಚಿತ್ರ ಪ್ರದರ್ಶನ ನಡೆಯಿತು. ಜಿಲ್ಲೆಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಕ್ಷೀಣಗೊಂಡಿತ್ತು. ಖಾಸಗಿ ಬಸ್ ಓಡಾಟ ಸಂಪೂರ್ಣ ಸ್ಥಗಿತಗೊಂಡಿತ್ತು. ಆಟೋ, ಸಾರಿಗೆ ಬಸ್‍ಗಳು ಸೇರಿದಂತೆ ಆಟೋ ರಿಕ್ಷಾ ವಾಹನಗಳ ಸಂಚಾರ ವಿರಳವಾಗಿ ಸಾಗಿತು.

144 ಸೆಕ್ಷನ್ ಜಾರಿಯಲ್ಲಿದ್ದ ಕಾರಣ ಜನಸಂಚಾರ ಕ್ಷೀಣಗೊಂಡಿತ್ತು. ಎಲ್ಲೆಂದರಲ್ಲಿ ಕಂಡುಬರುತ್ತಿದ್ದ ಗುಂಪುಗಳನ್ನು ಪೊಲೀಸರು ಚದುರಿಸುತ್ತಿದ್ದ ದೃಶ್ಯ ಕಂಡುಬಂತು. ಇದರಿಂದ ಭಯಭೀತರಾದ ಜನರು ಮನೆ ಸೇರಿದ ಹಿನ್ನೆಲೆಯಲ್ಲಿ ಪಟ್ಟಣದ ರಸ್ತೆಗಳು ಬಿಕೋ ಎನ್ನುತ್ತಿದ್ದವು.

ಬಿಜೆಪಿ, ಭಜರಂಗದಳ, ಟಿಪ್ಪು ಜಯಂತಿ ವಿರೋಧಿ ಹೋರಾಟ ಸಮಿತಿ ಪ್ರಮುಖರು, ಕಾರ್ಯಕರ್ತರು ಪಟ್ಟಣದ ಗಣಪತಿ ದೇವಾಲಯದಲ್ಲಿ ಬೆಳಿಗ್ಗೆ ಪೂಜೆ ಸಲ್ಲಿಸುವ ಮೂಲಕ ಹುತಾತ್ಮ ಕುಟ್ಟಪ್ಪ ಅವರ ಆತ್ಮಕ್ಕೆ ಶಾಂತಿ ಕೋರಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ದೇವಾಲಯದ ಆವರಣದಿಂದ ಹೊರಬಂದು ಕುಟ್ಟಪ್ಪ ಅಮರ್ ರಹೇ, ರಾಜ್ಯ ಸರಕಾರಕ್ಕೆ ಧಿಕ್ಕಾರ ಸೇರಿದಂತೆ ಟಿಪ್ಪು ಜಯಂತಿ ವಿರೋಧಿ ಘೋಷಣೆಗಳನ್ನು ಕೂಗಿ ಪ್ರತಿಭಟಿಸಿದರು. ಸ್ಥಳದಲ್ಲೇ ಬೀಡು ಬಿಟ್ಟಿದ್ದ ಪೊಲೀಸ್ ಅಧಿಕಾರಿಗಳು, ಮೀಸಲು ಪೊಲೀಸ್, ಸ್ಥಳೀಯ ಸಿಬ್ಬಂದಿಗಳು ಪ್ರತಿಭಟನಾ ನಿರತರನ್ನು ವಶಕ್ಕೆ ಪಡೆದು ಬಸ್‍ನಲ್ಲಿ ಕೂಡಿಗೆ ಕಡೆಗೆ ಕರೆದೊಯ್ದರು. ಪ್ರತಿಭಟನಾಕಾರರನ್ನು ಕೂಡುಮಂಗಳೂರು ರಾಮೇಶ್ವರ ರೈತ ಸಹಕಾರ ಭವನದಲ್ಲಿ ಮಧ್ಯಾಹ್ನ ತನಕ ಇರಿಸಿ ನಂತರ ಬಿಡುಗಡೆಗೊಳಿಸಲಾಯಿತು.

ಟಿಪ್ಪು ಜಯಂತಿ ವಿರೋಧಿ ಹೋರಾಟ ಸಮಿತಿ ಪ್ರಮುಖರಾದ ಕೆ.ಜಿ. ಮನು, ಎಂ.ವಿ.ನಾರಾಯಣ, ಚಂಗು ತಿಮ್ಮಪ್ಪ, ಎಂ.ಡಿ.ಕೃಷ್ಣಪ್ಪ, ಮಂಜುನಾಥ್, ನವನೀತ್, ಭಾಸ್ಕರ್ ನಾಯಕ್, ಭರತ್ ಮಾಚಯ್ಯ, ಅನೀಶ್, ರಾಜೀವ್ ಸೇರಿದಂತೆ 18 ಮಂದಿಯನ್ನು ವಶಕ್ಕೆ ಪಡೆದುಕೊಂಡರು.

ಮೈಸೂರಿನ ಹಿರಿಯ ಪೊಲೀಸ್ ಅಧಿಕಾರಿ ಮ್ಯಾಥ್ಯು ಥಾಮಸ್, ವೃತ್ತ ನಿರೀಕ್ಷಕರಾದ ಕ್ಯಾತೆಗೌಡ, ಜಯಕುಮಾರ್ ನೇತೃತ್ವದಲ್ಲಿ ಠಾಣಾಧಿಕಾರಿಗಳಾದ ನವೀನ್‍ಗೌಡ, ಜಗದೀಶ್ ಸೇರಿದಂತೆ ಪೊಲೀಸ್ ಸಿಬ್ಬಂದಿಗಳು ಬಂದೋಬಸ್ತ್ ಕಲ್ಪಿಸುವುದರೊಂದಿಗೆ ಯಾವದೇ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಿದ್ದರು.

ವಿದ್ಯಾರ್ಥಿಗಳಿಗೆ ಬಂದ್ ಬಿಸಿ

ಸೋಮವಾರಪೇಟೆ :ಟಿಪ್ಪು ಜಯಂತಿ ವಿರೋಧಿಸಿ ಕರೆ ನೀಡಲಾಗಿದ್ದ ಕೊಡಗು ಜಿಲ್ಲಾ ಬಂದ್ ಕರೆಯಿಂದ ಜನಜೀವನ ಅಸ್ತವ್ಯಸ್ಥಗೊಂಡಿದ್ದರೆ, ಶಾಲಾ ಕಾಲೇಜುಗಳು ರಜೆ ಬಗ್ಗೆ ಯಾವದೇ ತೀರ್ಮಾನ ಕೈಗೊಳ್ಳದ ಹಿನ್ನೆಲೆ ವಿದ್ಯಾರ್ಥಿಗಳು ಪರದಾಡಿದರು.

ಗ್ರಾಮೀಣ ಭಾಗದಿಂದ ಪಟ್ಟಣಕ್ಕೆ ಆಗಮಿಸಿದ ಕೆಲ ಖಾಸಗಿ ವಾಹನಗಳ ಮೂಲಕ ಬೆಳಿಗ್ಗೆ ಶಾಲಾ ಕಾಲೇಜಿಗೆ ಆಗಮಿಸಿದ ವಿದ್ಯಾರ್ಥಿಗಳು, ವಾಪಸ್ ಮನೆಗೆ ತೆರಳಲು ತೊಂದರೆ ಅನುಭವಿಸಿದರು.

ಕೊಡಗು ಬಂದ್ ಕರೆಯಿಂದಾಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದ್ದರೆ, ಉಪನ್ಯಾಸಕರು, ಶಿಕ್ಷಕರುಗಳೂ ಸಹ ಶಾಲೆಗೆ ತೆರಳಲು ಸಾಧ್ಯವಾಗದೇ ಮನೆಯಲ್ಲೇ ಉಳಿದರು.

ಬಹುತೇಕ ಶಾಲೆಗಳ ವಾಹನಗಳು ರಸ್ತೆಗಿಳಿಯದ ಹಿನ್ನೆಲೆ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿತ್ತು. ಪರಿಣಾಮವಾಗಿ ತರಗತಿಗಳು ನಡೆಯಲಿಲ್ಲ. ಇದರಿಂದಾಗಿ ಶಾಲೆಗಳಿಗೆ ಹಾಜರಾಗಿದ್ದ ಕೆಲ ವಿದ್ಯಾರ್ಥಿಗಳು 10 ಗಂಟೆ ಸುಮಾರಿಗೆ ಮನೆಯತ್ತ ಹೆಜ್ಜೆ ಹಾಕಿದರು. ಯಾವದೇ ವಾಹನಗಳು ಸಿಗದಿದ್ದರಿಂದ ನಡೆದುಕೊಂಡೇ ಮೂರ್ನಾಲ್ಕು ಕಿ.ಮೀ. ಕ್ರಮಿಸಿದರು.

ಗುಡ್ಡೆಹೊಸೂರು ಸಂಪೂರ್ಣ ಬಂದ್

ಗುಡ್ಡೆಹೊಸೂರು : ಟಿಪ್ಪು ಜಯಂತಿಯನ್ನು ವಿರೋದಿಸಿ ಗುಡ್ಡೆಹೊಸೂರಿನಲ್ಲಿ ಎಲ್ಲಾ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು ಕೆಲವು ದ್ವಿಚಕ್ರ ವಾಹನಗಳು ಮಾತ್ರ ಸಂಚರಿಸಿದವು. ಅಲ್ಲದೆ ತೋಟದ ಕಾರ್ಮಿಕರು ತಮ್ಮ ಕೆಲಸಗಳಿಗೆ ರಜೆ ಮಾಡಿದ್ದರು. ಗುಡ್ಡೆಹೊಸೂರು ಸುತ್ತಮುತ್ತ ಶಾಂತ ವಾತಾವರಣವಿದ್ದು, ಯಾವದೇ ರೀತಿಯ ಅಹಿತಕರ ಘಟನೆ ನಡೆಯಲಿಲ್ಲ.

ಚೆಟ್ಟಳ್ಳಿ: ಟಿಪ್ಪು ಜಯಂತಿ ಆಚರಣೆಯ ವಿರುದ್ಧ ಸ್ವಯಂ ಬಂದ್ ಆಚರಣೆಗೆ ಕರೆ ನೀಡಿದ ಹಿನ್ನಲೆ ಚೆಟ್ಟಳ್ಳಿಯಲ್ಲಿ ಮಿಶ್ರ ಪ್ರತಿಕ್ರಿಯೆ ಕಂಡು ಬಂದಿತು.

ಪಟ್ಟಣದಲ್ಲಿ ಬೆಳಗ್ಗಿನಿಂದಲೆ ಪೊಲೀಸ್ ವಾಹನ ಭದ್ರತೆಗೆ ಆಗಮಿಸಿತ್ತು. ಚೆಟ್ಟಳ್ಳಿಯಲ್ಲಿ ಕೆಲವೊಂದು ಅಂಗಡಿ ಮುಂಗಟ್ಟುಗಳು ಮುಚ್ಚಿ, ಬ್ಯಾಂಕುಗಳು ಮುಚ್ಚಿದ ಪರಿಣಾಮ ಇಂದು ವಾರದ ಸಂಬಳ ದಿನವಾದ್ದರಿಂದ ಸಾರ್ವಜನಿಕರು ಪರದಾಡುತ್ತಿದು ಕಂಡು ಬಂದವು. ವಾಹನಗಳು ಎಂದಿನಂತೆ ಓಡಾಡುತ್ತಿದ್ದವು. ಸಾರ್ವಜನಿಕರ ಓಡಾಟ ಕಡಿಮೆಯಾಗಿತ್ತು.

ಕೂಡಿಗೆಯಲ್ಲಿ ಮಿಶ್ರ ಪ್ರತಿಕ್ರಿಯೆ

ಕೂಡಿಗೆ : ಕೂಡುಮಂಗಳೂರು ವ್ಯಾಪ್ತಿಯಲ್ಲಿ ಟಿಪ್ಪು ಜಯಂತಿ ವಿರೋಧಿಸಿ ಟಿಪ್ಪು ಜಯಂತಿ ವಿರೋಧಿ ಸಮಿತಿ ಕರೆ ನೀಡಿದ ಬಂದ್‍ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತಗೊಂಡಿತು. ಬೆರಳೆಣೆಕೆಯ ಅಂಗಡಿ ಮುಂಗಟ್ಟುಗಳನ್ನು ಹೊರತುಪಡಿಸಿ ಎಲ್ಲಾ ಅಂಗಡಿಗಳು ತೆರೆದಿದ್ದವು. ಇಂದು ಎರಡನೇ ಶನಿವಾರವಾಗಿದ್ದರೂ ಸಹ ಜಿಲ್ಲಾಧಿಕಾರಿಗಳ ಆದೇಶದಂತೆ ಹೋಬಳಿ ವ್ಯಾಪ್ತಿಯಲ್ಲಿನ ಎಲ್ಲಾ ಗ್ರಾಮ ಪಂಚಾಯತಿಗಳು ಕೆಲಸ ನಿರ್ವಹಿಸಿದ್ದವು. ಕೂಡಿಗೆ ವ್ಯಾಪ್ತಿಯ ಸರ್ಕಾರಿ ಕಚೇರಿಗಳು, ಶಾಲಾ-ಕಾಲೇಜುಗಳು ಎಂದಿನಂತೆ ತೆರೆದಿದ್ದವು. ವಿದ್ಯಾರ್ಥಿಗಳು ಇದ್ದರು. ಭಾರೀ ಪೊಲೀಸ್ ಬಂದೋಬಸ್ತ್ ಹಾಕಲಾಗಿತ್ತು. ಅಲ್ಲದೆ ಕೊಡಗಿನ ಗಡಿ ಭಾಗ ಶಿರಂಗಾಲದ ಗೇಟ್‍ನಲ್ಲಿ ಹಾಸನ ಕಡೆಯಿಂದ ಕೊಡಗಿಗೆ ಬರುವ ವಾಹನಗಳ ತಪಾಸಣೆ ಮಾಡಲಾಗುತ್ತಿತ್ತು. ಈ ವ್ಯಾಪ್ತಿಯ ಹೆಬ್ಬಾಲೆ, ತೊರೆನೂರು, ಶಿರಂಗಾಲ ಪ್ರದೇಶಗಳಲ್ಲಿ ಪೊಲೀಸ್ ವ್ಯವಸ್ಥೆ ಮಾಡಲಾಗಿತ್ತು.

ಸುಂಟಿಕೊಪ್ಪ :ಟಿಪ್ಪು ಜಯಂತಿಗೆ ಕೊಡಗಿನಲ್ಲಿ ವಿರೋಧ ವ್ಯಕ್ತಪಡಿಸಿ ಟಿಪ್ಪು ಜಯಂತಿ ವಿರೋಧಿ ಸಮಿತಿ ವತಿಯಿಂದ ಕರೆ ನೀಡಿದ್ದ ಬಂದ್‍ಗೆ ಸುಂಟಿಕೊಪ್ಪದಲ್ಲಿ ಮಿಶ್ರ ಪ್ರತಿಕ್ರಿಯೆ ಕಂಡು ಬಂದವು.

ಕೊಡಗು ಬಂದ್‍ಗೆ ಕರೆಗೆ ಸುಂಟಿಕೊಪ್ಪದಲ್ಲಿ ಹಿಂದೂ ವರ್ತಕರು ಅಂಗಡಿ ಮುಂಗಟ್ಟುಗಳನ್ನು ಸ್ವಯಂ ಪ್ರೇರಿತವಾಗಿ ಮುಚ್ಚಿ ಬಂದ್‍ಗೆ ಬೆಂಬಲ ನೀಡಿದರು.

ಶಾಲಾ-ಕಾಲೇಜುಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗಿತ್ತು. ಯಾವದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್, ಅಗ್ನಿ ಶಾಮಕದಳ, ಅರಣ್ಯ ಇಲಾಖೆ ಸಿಬ್ಬಂದಿಗಳು ಸೂಕ್ತ ಬಂದೋಬಸ್ತ್ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.

ರಾಮ ಮಂದಿರದಲ್ಲಿ ಸೇರಿದ ಹಿಂದೂ ಸಂಘಟನೆಯ ಪ್ರಮುಖರು ದಿ. ಕುಟ್ಟಪ್ಪ ಭಾವಚಿತ್ರಕ್ಕೆ ಪುಷ್ಟಾರ್ಚನೆ ಮಾಡುವದರ ಮೂಲಕ ಟಿಪ್ಪು ಜಯಂತಿ ಸಂದರ್ಭ ಮೃತಪಟ್ಟ ಕುಟ್ಟಪ್ಪ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಬಿಜೆಪಿ ಮುಖಂಡ ಬಿ.ಕೆ.ಮೋಹನ್, ಎಲ್ಲರ ವಿರೋಧದ ನಡುವೆ ಟಿಪ್ಪು ಜಯಂತಿ ಮಾಡುತ್ತಿರುವ ರಾಜ್ಯ ಸರ್ಕಾರಕ್ಕೆ ದಿಕ್ಕಾರ ಎಂದರು.

ಬಿಜೆಪಿ ನಗರ ಘಟಕದ ಅಧ್ಯಕ್ಷ ಪಿ.ಆರ್. ಸುನಿಲ್ ಕುಮಾರ್, ಕಾರ್ಯದರ್ಶಿ ಬಿ.ಕೆ. ಪ್ರಶಾಂತ್, ಬಜರಂಗದಳ ನಗರ ಸಂಚಾಲಕ ವಿಘ್ನೇಶ್, ಗೌರಿ ಗಣೇಶೋತ್ಸವ ಸಮಿತಿ ಕಾÀರ್ಯದರ್ಶಿ ಅಣ್ಣು ಶೇಖರ, ಹಿಂದೂ ಸಂಘಟನೆಯ ರಾಕೇಶ್, ಬಿ.ಎ. ರವಿ, ಸಿ.ಸಿ. ಸುನಿಲ್, ಗ್ರಾ.ಪಂ. ಸದಸ್ಯ ಸಿ. ಚಂದ್ರ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ರಂಜಿತ್ ಪೂಜಾರಿ, ಮತ್ತಿತರರು ಇದ್ದರು.