ಮಡಿಕೇರಿ, ನ. 10: ಕರ್ನಾಟಕ ಸರಕಾರವು ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ನೇತೃತ್ವದಲ್ಲಿ 2015ರಲ್ಲಿ ಮೊದಲ ಬಾರಿಗೆ ಟಿಪ್ಪು ಜಯಂತಿ ಆಚರಿಸುವ ಮೂಲಕ ಕೊಡಗಿನಲ್ಲಿ ರಕ್ತಪಾತದೊಂದಿಗೆ ಸಾವು-ನೋವು ಸಂಭವಿಸಿತ್ತು. ಬಳಿಕ ಪರ-ವಿರೋಧದ ನಡುವೆ ಮತ್ತೆ ಎರಡು ವರ್ಷ ಜರುಗಿದ ಟಿಪ್ಪು ಜಯಂತಿಯೊಂದಿಗೆ ಈ ಬಾರಿಯ ಆಚರಣೆ ಸಾಕಷ್ಟು ಅನುಮಾನ ಮೂಡಿಸಿದೆ.

ರಾಜ್ಯದಲ್ಲಿ ಸಮ್ಮಿಶ್ರ ಸರಕಾರದ ಆಳ್ವಿಕೆ ನಡುವೆಯೂ ಟಿಪ್ಪು ಜಯಂತಿಗೆ ಇಂದು ಚಾಲನೆ ದೊರೆಯಿತಾದರೂ, ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಕಾರ್ಯಕ್ರಮಕ್ಕೆ ಮುನ್ನವೇ ಆಮಂತ್ರಣದಲ್ಲಿ ತಮ್ಮ ಹೆಸರನ್ನೂ ಪ್ರಕಟಿಸಲು ಅವಕಾಶ ನೀಡದೆ ದೂರ ಉಳಿದಿದ್ದಾರೆ. ಇನ್ನು ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್ ಹೆಸರು ಪ್ರಕಟಗೊಂಡರೂ ಅಂತಿಮ ಕ್ಷಣದಲ್ಲಿ ಗೈರಾಗಿದ್ದಾರೆ.

ಆ ಬೆನ್ನಲ್ಲೇ ಕೊಡಗಿನ ಜಿಲ್ಲಾ ಉಸ್ತುವಾರಿ ಸಚಿವ ಜೆಡಿಎಸ್‍ನ ಸಾ.ರಾ. ಮಹೇಶ್ ಹಾಗೂ ಕಾಂಗ್ರೆಸ್ಸಿನ ಮೇಲ್ಮನೆ ಸದಸ್ಯೆ ವೀಣಾ ಅಚ್ಚಯ್ಯ ಸಹಿತ ಬಹುತೇಕ ಸ್ಥಳೀಯ ಸಂಸ್ಥೆ ಪ್ರತಿನಿಧಿಗಳು ಇಂದು ಕಾರ್ಯಕ್ರಮದಿಂದ ದೂರ ಉಳಿದಿರುವದು ಸಾಕಷ್ಟು ಸಂಶಯಕ್ಕೆ ಕಾರಣವಾಗಿದೆ.

ಮಡಿಕೇರಿ ಕಾರ್ಯಕ್ರಮದಲ್ಲಿ ಕಾಂಗ್ರೆಸ್ಸಿನ ಬೆರಳೆಣಿಕೆ ಜನಪ್ರತಿನಿಧಿಗಳೊಂದಿಗೆ ಎಸ್.ಡಿ.ಪಿ.ಐ. ಸದಸ್ಯರಷ್ಟೇ ಒಂದಿಬ್ಬರು ಅಲ್ಪಸಂಖ್ಯಾತ ಮುಖಂಡರ ಸಹಿತ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇವರೆಲ್ಲರ ಒಟ್ಟು ಸಂಖ್ಯೆ ಎರಡಂಕಿ ದಾಟಿರಲಿಲ್ಲ! ಆಹ್ವಾನಿತ ಅಧಿಕಾರಿಗಳೊಂದಿಗೆ ಸಸಿಗೆ ನೀರೆರೆದು ಉದ್ಘಾಟನೆಯಲ್ಲಿ ತೊಡಗಿಸಿಕೊಂಡರೂ ನಗರದ ಪ್ರಥಮ ಪ್ರಜೆ ಕಾವೇರಮ್ಮ ಸೋಮಣ್ಣ ಏನೊಂದು ಮಾತನಾಡದೆ ಮೌನವಹಿಸಿದ್ದರು.

ಅಸಮಾಧಾನ: ಈ ಬಗ್ಗೆ ಎಸ್‍ಡಿಪಿಐ ಸದಸ್ಯ ಅಮೀನ್ ಮೊಯ್ಸಿನ್ ಪ್ರತಿಕ್ರಿಯಿಸಿ, ಜಿಲ್ಲಾಡಳಿತ ಪ್ರತಿರೋಧದ ನಡುವೆ ಕಾರ್ಯಕ್ರಮ ಆಯೋಜಿಸಿದ್ದು ಶ್ಲಾಘನೀಯವಾದರೂ ಉದ್ಘಾಟಕರು ಕೂಡ ಮಾತನಾಡದಿದ್ದದ್ದು ಬೇಸರದ ಸಂಗತಿ ಎಂದರು.

ಈ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ, ಪೂರ್ವನಿಗದಿತ ಕಾರ್ಯಕ್ರಮ ಶಾಂತಿಯುತವಾಗಿ ಮುಕ್ತಾಯಗೊಂಡಿದೆ ಎಂದು ಸೂಚ್ಯವಾಗಿ ನುಡಿದರು. ಭಾಷಣಕ್ಕೆ ಆಹ್ವಾನಿಸಿದ್ದ ಅತಿಥಿ ಕೂಡ ಕರುನಾಡಿನ ವೈಭವದ ಹಾಡಿನ ಮೂಲಕ ತಮ್ಮ ಮಾತಿಗೆ ತೆರೆಯೆಳೆಯುವ ಮುನ್ನ ಗೋವಿನ ಭಾವನೆಗಳನ್ನು ಬಣ್ಣಿಸುತ್ತಾ, ಕರುನಾಡಿನಲ್ಲಿ ಹಸುವಾಗಿ, ಗಂಧಮರವಾಗಿ ಜನಿಸಿ ಪರೋಪಕಾರಾರ್ಥ ಬಾಳಬೇಕೆಂಬ ಸಂದೇಶ ನೀಡಿದ್ದು ವಿಶೇಷವಾಗಿತ್ತು.

ಒಟ್ಟಿನಲ್ಲಿ ಇಂದಿನ ಟಿಪ್ಪು ಜಯಂತಿ ಆಚರಣೆ ಯಾರಿಗಾಗಿ ಎಂಬ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿಯಿತು. -ಶ್ರೀಸುತ