ಕುಶಾಲನಗರ, ನ. 10: ದ್ವಿಚಕ್ರ ವಾಹನದಲ್ಲಿ ಆಗಮಿಸಿದ ದುಷ್ಕರ್ಮಿಗಳಿಬ್ಬರು ವ್ಯಕ್ತಿಯೊಬ್ಬರಿಗೆ ಚಾಕುವಿನಿಂದ ಇರಿದು ಪರಾರಿಯಾದ ಘಟನೆ ಕೂಡಿಗೆ ಗ್ರಾಪಂ ವ್ಯಾಪ್ತಿಯ ಹುದುಗೂರು ಗ್ರಾಮದಲ್ಲಿ ಶನಿವಾರ ಬೆಳಿಗ್ಗೆ ನಡೆದಿದೆ.

ಬೆಳಿಗ್ಗೆ 7 ಗಂಟೆ ಸಮಯದಲ್ಲಿ ಹುದುಗೂರು ಉಮಾಮಹೇಶ್ವರ ದೇವಾಲಯದ ಸಮೀಪದಲ್ಲಿ ಪ್ರಕರಣ ನಡೆದಿದ್ದು, ಕಿರಣ್ (35) ಎಂಬವರು ಇರಿತಕ್ಕೆ ಒಳಗಾದ ವ್ಯಕ್ತಿ. ಹೊಟ್ಟೆಯ ಬಲ ಭಾಗಕ್ಕೆ ಗಾಯವುಂಟಾಗಿದ್ದು ಗಾಯಾಳುವನ್ನು ಕುಶಾಲನಗರ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಮೈಸೂರಿಗೆ ಸಾಗಿಸಲಾಗಿದೆ.

ಕಿರಣ್ ಹುದುಗೂರು ಬಳಿ ನಾಲೆ ಏರಿಯಾದಲ್ಲಿ ತನ್ನ ಕಾರು ನಿಲ್ಲಿಸಿ ನಿಂತಿದ್ದ ಸಂದರ್ಭ ಬೈಕ್‍ನಲ್ಲಿ ಆಗಮಿಸಿದ ಅಪರಿಚಿತ ವ್ಯಕ್ತಿಗಳಿಬ್ಬರು ಚಾಕುವಿನಿಂದ ಇರಿದು ಪರಾರಿಯಾಗಿ ದ್ದಾರೆ ಎಂದು ತಿಳಿದುಬಂದಿದೆ. ಕೂಡಲೇ ಕಿರಣ್ ಅವರನ್ನು ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸಾಗಿಸಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗಾಯಾಳು ಕಿರಣ್ ಬ್ಯಾಡಗೊಟ್ಟ ಗ್ರಾಮದ ಚಂದ್ರ ಎಂಬವರ ಪುತ್ರನಾಗಿದ್ದು, ಖಾಸಗಿ ರೆಸಾರ್ಟ್ ಒಂದರಲ್ಲಿ ವ್ಯವಸ್ಥಾಪಕನಾಗಿ ಕೆಲಸ ನಿರ್ವಹಿಸುತ್ತಿದ್ದರು.

ಎಂದಿನಂತೆ ಕೆಲಸಕ್ಕೆ ತೆರಳುತ್ತಿದ್ದ ಸಂದರ್ಭ ಈ ಘಟನೆ ನಡೆದಿದೆ. ಸ್ಥಳಕ್ಕೆ ಕುಶಾಲನಗರ ಪೊಲೀಸ್ ಹಾಗೂ ಸಿಬ್ಬಂದಿ ಭೇಟಿ ನೀಡಿ, ಮುಂದಿನ ಕ್ರಮಕೈಗೊಂಡಿ ದ್ದಾರೆ.

ಕಿರಣ್ ಹೇಳಿಕೆ ಪ್ರಕಾರ ಗುರುವಾರ ರಾತ್ರಿ ಕೆಲಸ ಮುಗಿಸಿಕೊಂಡು ಬರುತ್ತಿದ್ದ ಸಂದರ್ಭ ತನ್ನ ಕಾರ್‍ಗೆ ಓವರ್‍ಟೇಕ್ ಮಾಡಿಕೊಂಡು ಬಂದು ಇಬ್ಬರು ವ್ಯಕ್ತಿಗಳು ತನ್ನೊಂದಿಗೆ ವಿನಾ ಕಾರಣ ವಾಗ್ವಾದ ಮಾಡಿದ್ದರು ಎನ್ನಲಾಗಿದ್ದು ಈ ಘಟನೆಗೂ ಸಂಬಂಧ ಇರುವ ಬಗ್ಗೆ ಕುಶಾಲನಗರ ಗ್ರಾಮಾಂತರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ನಡೆದಿದೆ ಎಂದು ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ನವೀನ್‍ಗೌಡ ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ಉನ್ನತ ಮಟ್ಟದ ತನಿಖೆ ಕೈಗೊಂಡಿದೆ.