*ಪೊನ್ನಂಪೇಟೆ, ನ. 10: ಗೋಣಿಕೊಪ್ಪದಿಂದ ಪೊನ್ನಂಪೇಟೆ, ಶ್ರೀಮಂಗಲ, ಕುಟ್ಟ ಮಾರ್ಗವಾಗಿ ಕೇರಳಕ್ಕೆ ಸಂಪರ್ಕ ಕಲ್ಪಿಸುವ ಹೆದ್ದಾರಿಯು ಸಂಪೂರ್ಣವಾಗಿ ಹಳ್ಳ-ಕೊಳ್ಳಗಳಾಗಿ ಹಾಳಾಗಿ ತಿಂಗಳುಗಳೇ ಕಳೆದಿದ್ದು, ಈ ಬಗ್ಗೆ ಹಲವು ಬಾರಿ ಪತ್ರಿಕೆಗಳಲ್ಲಿ ವರದಿ ಪ್ರಕಟವಾದರೂ ಯಾವದೇ ಪ್ರಯೋಜನವಾಗಿಲ್ಲ. ಜನಪ್ರತಿನಿಧಿಗಳು ಕಣ್ಣು ಮುಚ್ಚಿ ಕುಳಿತಂತಿದೆ ಎಂದು ಇಲ್ಲಿನ ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ. ಶಾಲಾ-ಕಾಲೇಜು ವಿದ್ಯಾರ್ಥಿಗಳು ಹೆಚ್ಚಾಗಿ ಸಂಚರಿಸುವ ಈ ವ್ಯಾಪ್ತಿಯಲ್ಲಿ ವಾಹನಗಳ ಓಡಾಟವು ಹೆಚ್ಚಾಗಿದ್ದು, ರಸ್ತೆಯು ಸಂಪೂರ್ಣವಾಗಿ ಹಾಳಾಗಿದೆ.
ಪೊನ್ನಂಪೇಟೆ ನಗರದಲ್ಲಿ ರಸ್ತೆಗಳ ಗುಂಡಿ ಮುಚ್ಚುವ ಕಾರ್ಯವನ್ನು ನಿಯಮಾನುಸಾರ ಮುಚ್ಚದೆ ಜಲ್ಲಿ ಕಲ್ಲು ಹಾಕಿ ಡಾಂಬರು ಹಾಕುವದನ್ನು ಬಿಟ್ಟು ಮಣ್ಣು ತುಂಬಿದ ಪರಿಣಾಮ ತಾತ್ಕಾಲಿಕವಾಗಿ ವಾಹನ ಸಂಚಾರ ಸುಗಮವಾದರೂ, ಧೂಳಿನಿಂದ ಮೂಗು ಮುಚ್ಚಿಕೊಂಡು ಮತ್ತು ಮಾಸ್ಕ್ ಹಾಕಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಲೋಕೋಪಯೋಗಿ ಇಲಾಖೆಯು ಹೆದ್ದಾರಿಯ ಸಂಪೂರ್ಣ ಮರು ಡಾಂಬರೀಕರಣ ಮಾಡಬೇಕಾಗಿದೆ. ಕರ್ನಾಟಕ ಸರ್ಕಾರವು ರಾತ್ರಿಯ ವೇಳೆಯಲ್ಲಿ ಬಂಡಿಪುರದ ಹೆದ್ದಾರಿಯನ್ನು ವನ್ಯ ಜೀವಿಗಳ ಹಿತದೃಷ್ಟಿಯಿಂದ ಸಂಜೆ 6 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ಮುಚ್ಚಲ್ಪಟ್ಟಿದೆ. ಇದಕ್ಕೆ ಪರ್ಯಾಯ ಗೋಣಿಕೊಪ್ಪ, ಶ್ರೀಮಂಗಲ, ಕುಟ್ಟ ಮಾರ್ಗ ಕೇರಳಕ್ಕೆ ಸಂಪರ್ಕ ಕಲ್ಪಿಸುವದಾಗಿದೆ. ಈ ರಾಜ್ಯ ಹೆದ್ದಾರಿಯ ಕುಟ್ಟ ಸಮೀಪದ ಪೂಜೆಕಲ್ಲು ಸೇತುವೆಯ ಒಂದು ಭಾಗ ತೂತಾಗಿ ಸೇತುವೆಯ ತಳಭಾಗ ಕಾಣುತ್ತಿದ್ದು, ಪ್ರಸ್ತುತ ಅಪಾಯ ಸೂಚಿಸುತ್ತಿದ್ದೆ. ಈ ವ್ಯಾಪ್ತಿಯಲ್ಲಿ ರಾತ್ರಿ ವೇಳೆ ಭಾರೀ ವಾಹನಗಳ ಓಡಾಟವು ಹೆಚ್ಚಾಗಿದ್ದು, ಅನಾಹುತ ಸಂಭವಿಸುವ ಮುನ್ನ, ಸಂಬಂಧಪಟ್ಟ ಇಲಾಖೆ ಈ ಬಗ್ಗೆ ಎಚ್ಚೆತ್ತುಕೊಂಡು ಆದಷ್ಟು ಬೇಗ ರಸ್ತೆಯ ದುರಸ್ತಿ ಕಾರ್ಯ ಕೈಗೊಳ್ಳುವಂತೆ ಸಾರ್ವಜನಿಕರು ಮನವಿ ಮಾಡಿದ್ದಾರೆ.