ಮಡಿಕೇರಿ, ನ. 9: ಕೊಡಗಿನ ಜಿಲ್ಲಾ ಕೇಂದ್ರ ಮಡಿಕೇರಿಯ ಕೋಟೆ ವಿಧಾನ ಸಭಾಂಗಣ, ಸೋಮವಾರ ಪೇಟೆಯ ಚನ್ನಬಸಪ್ಪ ಸಭಾಂಗಣ ಹಾಗೂ ವೀರಾಜಪೇಟೆಯ ತಾಲೂಕು ಕಚೇರಿ ಸಭಾಂಗಣದಲ್ಲಿ ತಾ. 10 ರಂದು (ಇಂದು) ಬೆಳಿಗ್ಗೆ 9 ಗಂಟೆಗೆ, ಏಕ ಕಾಲಕ್ಕೆ ಮೂರು ಕಡೆಗಳಲ್ಲಿ ಸರಕಾರದ ನಿರ್ದೇಶನದಂತೆ ಟಿಪ್ಪು ಜಯಂತಿ ಏರ್ಪಡಿಸಲಾಗಿದೆ. ಈ ಸಂಬಂಧ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯು ಎಲ್ಲ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದು, ಜಿಲ್ಲೆಯ ಜನತೆ ಶಾಂತಿ ಕಾಪಾಡಲು ಸಹಕರಿಸುವಂತೆ ಕರ್ನಾಟಕ ದಕ್ಷಿಣ ವಲಯ ಪೊಲೀಸ್ ಮಹಾ ನಿರೀಕ್ಷಕ ಶರತ್ಚಂದ್ರ ಕರೆ ನೀಡಿದ್ದಾರೆ.ಟಿಪ್ಪು ಜಯಂತಿ ಹಿನ್ನೆಲೆ ಕೊಡಗಿನ ಪ್ರಮುಖ ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ನಿನ್ನೆ ಹಾಗೂ ಇಂದು ಪಥಸಂಚಲನದೊಂದಿಗೆ, ಜಿಲ್ಲಾ ಕೇಂದ್ರ ಸ್ಥಳ ಮಡಿಕೇರಿಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪಥಸಂಚಲನಕ್ಕೆ ಅಣಿಗೊಳಿಸಿ ಮಾತನಾಡಿದ ಐಜಿ ಅವರು, ಜಿಲ್ಲೆಯ ಮೂರು ಕಡೆಗಳಲ್ಲಿ ತಾ. 10ರ ಕಾರ್ಯಕ್ರಮಕ್ಕೆ ಯಾರಿಂದಲೂ ಅಡ್ಡಿ ಉಂಟಾಗದಂತೆ ಪೊಲೀಸ್ ತಂಡಗಳು ಕಟ್ಟೆಚ್ಚರ ವಹಿಸುವಂತೆ ಸೂಚಿಸಿದರು.ಜಿಲ್ಲೆಯಲ್ಲಿ ಭದ್ರತಾ ವ್ಯವಸ್ಥೆಗೆ ನಿಯೋಜನೆಗೊಂಡಿರುವ ಕೇಂದ್ರ ಕ್ಷಿಪ್ರ ಕಾರ್ಯಪಡೆ, ಕರ್ನಾಟಕ ವಿಶೇಷ ಕಾರ್ಯಪಡೆ, ಪೊಲೀಸ್ ಮೀಸಲು ಪಡೆ, ಜಿಲ್ಲಾ ಸಶಸ್ತ್ರ ದಳ ಹಾಗೂ ಪೊಲೀಸರೊಂದಿಗೆ ಗೃಹರಕ್ಷಕ ಸಿಬ್ಬಂದಿ ತಮ್ಮ ಪಾಲಿನ ಕರ್ತವ್ಯಗಳನ್ನು ನಿಷ್ಠೆ ಹಾಗೂ ಧೈರ್ಯವಾಗಿ ನಿರ್ವಹಿಸಬೇಕೆಂದು ಅವರು ನೆನಪಿಸಿದರು.ಕಾರ್ಯಕ್ರಮ ಸ್ಥಳಗಳಲ್ಲಿ ಹಾಗೂ ಇತರೆಡೆಗಳಲ್ಲಿ ಭದ್ರತೆಗೆ ನಿಯೋಜನೆಗೊಳ್ಳುವ ಸ್ಥಳ ಬಿಟ್ಟು ತೆರಳದೆ ಸರಿಯಾಗಿ ಕರ್ತವ್ಯ ಮಾಡುವಂತೆ ನೆನಪಿಸಿದ ಐಜಿ ಅವರು, ಕಾನೂನು ಉಲ್ಲಂಘಿಸಿ ಅಥವಾ ಕಿಡಿಗೇಡಿ ಕೃತ್ಯಗಳು ಎದುರಾದರೆ ಕಠಿಣ ಕ್ರಮ ಜರುಗಿಸಬೇಕೆಂದು ಆದೇಶಿಸಿದರು.
ಸಾರ್ವಜನಿಕರೊಂದಿಗೆ ಗೌರವಯುತವಾಗಿ ಇಲಾಖೆ ಮಂದಿ ವರ್ತಿಸುವಂತೆ ತಿಳಿಹೇಳಿದ ಶರತ್ಚಂದ್ರ ಅವರು, ಸಮಯ ಸಂದರ್ಭಗಳಿಗೆ ತಕ್ಕಂತೆ ಮೇಲಧಿಕಾರಿಗಳ ಆಜ್ಞೆಯಂತೆ ಕಿಡಿಗೇಡಿ ಕೃತ್ಯಗಳಿಗೆ ಯಾರೇ ಯತ್ನಿಸಿದರೂ ಕಠಿಣ ರೀತಿಯಲ್ಲಿ ಕರ್ತವ್ಯಕ್ಕೆ ಮುಂದಾಗಬೇಕೆಂದು ಸೂಚ್ಯವಾಗಿ ಎಚ್ಚರಿಸಿದರು.
ಮುಂಜಾಗ್ರತೆ: ಪಥಸಂಚಲನಕ್ಕೆ ಮುನ್ನ ಐಜಿ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ., ಕ್ಷಿಪ್ರ ಕಾರ್ಯಪಡೆ ಡೆಪ್ಯುಟಿ ಕಮಾಂಡೆಂಟ್ ಸುಮ ಹಾಗೂ ಡಿವೈಎಸ್‍ಪಿ ಕೆ.ಎಸ್. ಸುಂದರರಾಜ್ ಅವರುಗಳೊಂದಿಗೆ ತಾ. 10 ರಂದು ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಚರ್ಚಿಸಿದರು. ಅಲ್ಲದೆ ನಗರದಲ್ಲಿ ಮೊಕ್ಕಾಂ ಹೂಡಿದ್ದಾರೆ.
ಪಥ ಸಂಚಲನ: ಜಿಲ್ಲಾ ಕೇಂದ್ರದ ಕಾಲೇಜು ರಸ್ತೆ, ಗಣಪತಿ ಬೀದಿ, ಮಹದೇವಪೇಟೆ, ಖಾಸಗಿ ನಿಲ್ದಾಣ, ಚಿಕ್ಕಪೇಟೆ, ಗೌಳಿಬೀದಿ, ಕೈಗಾರಿಕಾ ಬಡಾವಣೆ, ನೂತನ ಬಸ್ ನಿಲ್ದಾಣ ಮಾರ್ಗವಾಗಿ ಪೊಲೀಸ್ ಕೇಂದ್ರ ಮೈದಾನ ತನಕ ಮುಸ್ಸಂಜೆ ನಡುವೆ ಪಥ ಸಂಚಲನದಲ್ಲಿ ಪೊಲೀಸ್ ವರಿಷ್ಠರೊಂದಿಗೆ ಹೆಚ್ಚಿನ ಸಿಬ್ಬಂದಿ ಪಾಲ್ಗೊಂಡಿದ್ದರು.
ಪರೀಕ್ಷೆ ಮುಂದೂಡಿಕೆ: ಕೊಡಗಿನ ಶಾಲಾ - ಕಾಲೇಜುಗಳಲ್ಲಿ ಅನೇಕ ಕಡೆ ತಾ. 10 ರಂದು ನಡೆಯಬೇಕಿದ್ದ ಶೈಕ್ಷಣಿಕ ಪರೀಕ್ಷೆಗಳನ್ನು ಸೋಮವಾರಕ್ಕೆ ಮುಂದೂಡಲಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಖಚಿತಪಡಿಸಿದರು.
(ಮೊದಲ ಪುಟದಿಂದ) ಅಲ್ಲದೆ, ಎಲ್ಲಾ ಮುಂಜಾಗ್ರತಾ ಕ್ರಮದೊಂದಿಗೆ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಯಿದ್ದು, ಕೊಡಗಿನ ಜನತೆ ಶಾಂತಿ ಕಾಪಾಡುವಲ್ಲಿ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವ ನಂಬಿಕೆ ಇದೆ ಎಂದು ಅವರು ವಿಶ್ವಾಸದ ನುಡಿಯಾಡಿದರು.
ಆಹ್ವಾನಿತರಿಗಷ್ಟೇ ಪ್ರವೇಶ: ಟಿಪ್ಪು ಜಯಂತಿ ಕಾರ್ಯಕ್ರಮಕ್ಕೆ ಪತ್ರಕರ್ತರೂ ಹಾಗೂ ಜನಪ್ರತಿನಿಧಿಗಳ ಸಹಿತ ಆಹ್ವಾನಿತರಿಗಷ್ಟೇ ಪ್ರವೇಶ ನೀಡಲಾಗುವದು ಎಂದು ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ. ಸ್ಪಷ್ಟಪಡಿಸಿದ್ದು, ಜಿಲ್ಲಾಡಳಿತದೊಂದಿಗೆ ಚರ್ಚಿಸಿ ಸಂದರ್ಭಕ್ಕೆ ಪೂರಕವಾಗಿ ಪೊಲೀಸ್ ಇಲಾಖೆ ಕ್ರಮ ವಹಿಸಲಿದ್ದು, ಶಾಂತಿ ಕದಡಿದರೆ ಐಜಿ ಅವರ ಮಾರ್ಗದರ್ಶನದಲ್ಲಿ ಕಠಿಣ ಕ್ರಮಕ್ಕೆ ಮುಂದಾಗುವ ಸುಳಿವು ನೀಡಿದರು.
ಸೋಮವಾರಪೇಟೆ
ತಾ.10ರಂದು ಟಿಪ್ಪು ಜಯಂತಿ ಆಚರಣೆ ಹಿನ್ನಲೆ ಪಟ್ಟಣದಲ್ಲಿ ಆರ್.ಎ.ಎಫ್, ಡಿ.ಎ.ಆರ್. ಹಾಗೂ ಪೊಲೀಸ್ ಸಿಬ್ಬಂದಿಗಳು ಪಥ ಸಂಚಲನ ನಡೆಸಿ, ಸಾರ್ವಜನಿಕ ವಲಯದಲ್ಲಿ ಧೈರ್ಯ ತುಂಬಿದರಲ್ಲದೇ, ಶಾಂತಿ ಕಾಪಾಡುವಂತೆ ಮನವಿ ಮಾಡಿದರು.
ಕಕ್ಕೆಹೊಳೆ ಸಮೀಪದಿಂದ ಮಡಿಕೇರಿ ರಸ್ತೆ ಮಾರ್ಗದಲ್ಲಿ ತೆರಳಿ ಜೇಸಿ ವೇದಿಕೆಯವರೆಗೆ ಸುಮಾರು 200 ಮಂದಿ ಸಿಬ್ಬಂದಿಗಳು ಸರ್ಕಲ್ ಇನ್ಸ್‍ಪೆಕ್ಟರ್ ನಂಜುಂಡೇಗೌಡ ನೇತೃತ್ವದಲ್ಲಿ ಪಥ ಸಂಚಲನ ನಡೆಸಿದರು.
ಐಜಿಪಿ ಭೇಟಿ: ಪಟ್ಟಣದ ಠಾಣೆಗೆ ಐಜಿಪಿ ಕೆ.ವಿ.ಶರತ್‍ಚಂದ್ರ ಭೇಟಿ ನೀಡಿ ಭದ್ರತೆಯ ಬಗ್ಗೆ ತಹಶೀಲ್ದಾರ್ ಮಹೇಶ್ ಅವರೊಂದಿಗೆ ಚರ್ಚಿಸಿದರು. ಟಿಪ್ಪು ಸುಲ್ತಾನ್ ಜಯಂತಿಯ ದಿನದಂದು ಸೂಕ್ತ ಬಂದೋಬಸ್ತ್ ಕಲ್ಪಿಸುವ ಬಗ್ಗೆ ಅಧಿಕಾರಿಗಳಿಗೆ ಸಲಹೆ ನೀಡಿದರು.
ಕುಶಾಲನಗರ
ಟಿಪ್ಪು ಜಯಂತಿ ಹಿನ್ನೆಲೆಯಲ್ಲಿ ಶಾಂತಿ ಸುವ್ಯವಸ್ಥೆ ಕ್ರಮಕ್ಕೆ ನಿಯೋಜನೆಗೊಂಡಿರುವ ಆರ್‍ಆರ್‍ಟಿ ಮತ್ತು ಪೊಲೀಸ್ ಸಿಬ್ಬಂದಿಗಳು ಕುಶಾಲನಗರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜಾಗೃತಿ ಪಥಸಂಚಲನ ನಡೆಸಿದರು. ಸಾರ್ವಜನಿಕರಲ್ಲಿರುವ ಆತಂಕದ ವಾತಾವರಣ ನಿವಾರಿಸುವ ನಿಟ್ಟಿನಲ್ಲಿ ಡಿವೈಎಸ್ಪಿ ಮುರಳೀಧರ್ ನೇತೃತ್ವದಲ್ಲಿ ಕ್ಷಿಪ್ರ ಕಾರ್ಯ ಪಡೆ, ಜಿಲ್ಲಾ ಪೊಲೀಸ್ ತುಕಡಿ ಸಿಬ್ಬಂದಿಗಳು ಪಥಸಂಚಲನ ನಡೆಸಿದರು.ಈ ಸಂದರ್ಭ ವೃತ್ತ ನಿರೀಕ್ಷಕ ಕ್ಯಾತೆಗೌಡ, ಠಾಣಾಧಿಕಾರಿಗಳಾದ ನವೀನ್‍ಗೌಡ, ಜಗದೀಶ್ ಇದ್ದರು.ಸುಂಟಿಕೊಪ್ಪ
ಟಿಪ್ಪು ಜಯಂತಿ ಆಚರಣೆಗೆ ‘ಶಾಂತಿ ಸುವ್ಯವಸ್ಥೆ ಕಾಪಾಡುವಂತೆ ಸುಂಟಿಕೊಪ್ಪ ಪಟ್ಟಣದಲ್ಲಿ ಪೊಲೀಸರು ಫಥಸಂಚಲನ ನಡೆಸಿ ಸಾರ್ವಜನಿಕರ ಗಮನ ಸಳೆದರು. ಆರ್‍ಎಎಫ್ ಸಶಸ್ತ್ರದಳ ಹಾಗೂ ಸಿಎಲ್ ಪೊಲೀಸ್ ಸಿಬ್ಬಂದಿಗಳು ಗದ್ದೆಹಳ್ಳದ ಗಾಂಧಿ ವೃತ್ತದಿಂದ ಸುಂಟಿಕೊಪ್ಪ ಪಟ್ಟಣದ ಪ್ರಮುಂಖ ಬೀದಿಗಳಲ್ಲಿ ಪಥಸಂಚಲನದಲ್ಲಿ ಪಾಲ್ಗೊಂಡಿದ್ದರು.
ಖಾಸಗಿ ಬಸ್ - ಆಟೋ ಸ್ಥಗಿತ
ಟಿಪ್ಪು ಜಯಂತಿ ಹಿನ್ನೆಲೆ ಖಾಸಗಿ ಬಸ್‍ಗಳು ಹಾಗೂ ಆಟೋ ರಿಕ್ಷಾಗಳ ಸಂಚಾರ ತಾ. 10 ರಂದು (ಇಂದು) ಇರುವದಿಲ್ಲವೆಂದು ಉಭಯ ಸಂಘಗಳ ಪ್ರಮುಖರು ಹೇಳಿಕೆ ನೀಡಿದ್ದಾರೆ. ಸರಕಾರಿ ಬಸ್‍ಗಳನ್ನು ಪರಿಸ್ಥಿತಿ ನೋಡಿಕೊಂಡು ಓಡಿಸಲು ನಿರ್ಧರಿಸುವದಾಗಿ ಇಲಾಖೆ ಪ್ರಮುಖರು ಸುಳಿವು ನೀಡಿದ್ದಾರೆ. ಶಾಲಾ - ಕಾಲೇಜುಗಳ ಸಹಿತ ಎಲ್ಲಾ ಇಲಾಖಾ ಕಚೇರಿಗಳು, ಬ್ಯಾಂಕ್‍ಗಳು ಎಂದಿನಂತೆ ಕಾರ್ಯನಿರ್ವಹಿಸಲಿದ್ದರೂ ಪರಿಸ್ಥಿತಿ ಅನುಸಾರ ಎಚ್ಚರ ವಹಿಸಲಿರುವದಾಗಿ ಜಿಲ್ಲಾಡಳಿತ ಅಭಿಪ್ರಾಯಪಟ್ಟಿದೆ.