ಮಡಿಕೇರಿ, ನ. 9 : ಟಿಪ್ಪು ಜಯಂತಿ ಆಚರಣೆಯ ಮೂಲಕ ಟಿಪ್ಪುವಿನ ವಿಚಾರಧಾರೆಗಳನ್ನು ಜನರಿಗೆ ಮನವರಿಕೆ ಮಾಡಿ ಕೊಡುವದು ಜಿಲ್ಲಾಡಳಿತದ ಕರ್ತವ್ಯವಾಗಿದೆ. ಆದರೆ ನಿಷೇಧಾಜ್ಞೆ ಜಾರಿ ಮಾಡಿ, ಬಾಗಿಲು ಹಾಕಿ ಟಿಪ್ಪು ಜಯಂತಿಯನ್ನು ಆಚರಿಸುವ ಅಗತ್ಯವೇನಿದೆ ಎಂದು ಕೊಡಗು ಮುಸ್ಲಿಂ ಸಮಾಜ ಪ್ರಶ್ನಿಸಿದೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಸ್ಲಿಂ ಸಮಾಜದ ಕಾರ್ಯಾಧ್ಯಕ್ಷ ಪಿ.ಎಂ.ಖಾಸಿಂ ಜಿಲ್ಲಾಡಳಿತ ಟಿಪ್ಪು ಜಯಂತಿಯನ್ನು ಮಾಡುವದಾದರೆ ಸಾರ್ವಜನಿಕವಾಗಿ ಮಾಡಲಿ, ಅದು ಬಿಟ್ಟು ಬಾಗಿಲು ಹಾಕಿ ಕಾರ್ಯಕ್ರಮ ಮಾಡುವದಾದರೆ ಟಿಪ್ಪು ಜಯಂತಿ ಆಚರಣೆಯ ಅಗತ್ಯವಿಲ್ಲವೆಂದರು.ಪ್ರಮುಖ ಅಮೀನ್ ಮೊಹಿಸಿನ್ ಮಾತನಾಡಿ ಪ್ರವಾದಿ ಅವರನ್ನು ಅವಹೇಳನ ಮಾಡಿದ ತಪ್ಪಿತಸ್ತರನ್ನು ತಕ್ಷಣ ಬಂಧಿಸದಿದ್ದಲ್ಲಿ ಟಿಪ್ಪು ಜಯಂತಿಯ ನಂತರ ಜಿಲ್ಲೆಯ ಎಲ್ಲಾ ಮುಸಲ್ಮಾನರು ಒಗ್ಗೂಡಿ ಬೃಹತ್ ಪ್ರತಿಭಟನೆಯನ್ನು ನಡೆಸಿ ಜಿಲ್ಲಾಡಳಿತದ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸುವದಾಗಿ ತಿಳಿಸಿದರು.
ತಾ. 10 ರಂದು ಖಾಸಗಿ ಬಸ್ ಮಾಲೀಕರು ಬಸ್ ಸಂಚಾರ ಸ್ಥಗಿತಗೊಳಿಸುವದಾಗಿ ತಿಳಿಸಿದ್ದು, ಜಿಲ್ಲಾಡಳಿತ ಪ್ರಯಾಣಿಕರ ಅನುಕೂಲಕ್ಕೆ ಸರಕಾರಿ
(ಮೊದಲ ಪುಟದಿಂದ) ಬಸ್‍ಗಳನ್ನು ನಿಯೋಜನೆ ಮಾಡಬೇಕೆಂದು ಅಮೀನ್ ಮೊಹಿಸಿನ್ ಒತ್ತಾಯಿಸಿದರು.
ಸಮಾಜದ ಉಪಾಧ್ಯಕ್ಷ ಮನ್ಸೂರ್ ಆಲಿ ಮಾತನಾಡಿ ಪ್ರವಾದಿ ಅವರ ಬಗ್ಗೆ ಅಗೌರವ ತೋರಿದವರನ್ನು ತಕ್ಷಣ ಬಂಧಿಸಬೇಕು ಮತ್ತು ಪತ್ರಿಕೆಯೊಂದರಲ್ಲಿ ಈ ಕುರಿತು ಬಂದ ಸುದ್ದಿ ಸುಳ್ಳೇ ಎನ್ನುವದನ್ನು ಸ್ಪಷ್ಟಪಡಿಸಬೇಕೆಂದು ಒತ್ತಾಯಿಸಿದರು.ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ನಾಸಿರ್, ಹಂಸ ಹಾಗೂ ಹುರೇರ ಉಪಸ್ಥಿತರಿದ್ದರು.
ಮುಕ್ತ ವಾತಾವರಣದಲ್ಲಿ ಟಿಪ್ಪು ಜಯಂತಿ : ಸಮಾನ ಮನಸ್ಕರ ಆಗ್ರಹ
ಬ್ರಿಟೀಷರ ವಿರುದ್ಧ ಹೋರಾಡಿದ ಟಿಪ್ಪು ಸುಲ್ತಾನ್ ಎಲ್ಲಾ ಜನರ ಆಸ್ತಿಯಾಗಿದ್ದು, ಮುಕ್ತ ವಾತಾವರಣದಲ್ಲಿ ಟಿಪ್ಪು ಜಯಂತಿ ಆಚರಣೆಗೆ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸಮಾನ ಮನಸ್ಕರ ಒಕ್ಕೂಟ ಆಗ್ರಹಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಪ್ರಮುಖ ಕೆ.ಆರ್.ವಿದ್ಯಾಧರ್ ಕ್ಷುಲ್ಲಕ ರಾಜಕಾರಣಕ್ಕಾಗಿ ಇತಿಹಾಸವನ್ನು ತಿರುಚಿ ಸುಳ್ಳನ್ನೇ ಸತ್ಯವೆಂದು ನಂಬಿಸುವ ಪ್ರಯತ್ನಗಳು ನಡೆಯುತ್ತಿದ್ದು, ಇದರ ಪರಿಣಾಮವಾಗಿಯೇ ಟಿಪ್ಪು ಜಯಂತಿಯನ್ನು ವಿರೋಧಿಸಲಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.
ಟಿಪ್ಪು ಜಯಂತಿ ಕೇವಲ ಸರಕಾರಿ ಕಾರ್ಯಕ್ರಮವಾಗಿ ಉಳಿಯಬಾರದು, ಜನಸಾಮಾನ್ಯರು ಕೂಡ ಆಚರಿಸಲು ಅವಕಾಶ ನೀಡಬೇಕೆಂದರು. ಕಂದಾಯ, ಕೃಷಿ ಕ್ಷೇತ್ರ ಸೇರಿದಂತೆ ಎಲ್ಲಾ ವಿಧದಲ್ಲೂ ತನ್ನ ಆಡಳಿತಾವಧಿಯಲ್ಲಿ ಸುಧಾರಣೆಯನ್ನು ತಂದಿದ್ದ ಟಿಪ್ಪು, ಜಮೀನ್ದಾರ್ ಪದ್ಧತಿಯ ಶೋಷಣೆಯಿಂದ ದುರ್ಬಲರನ್ನು ಮುಕ್ತಗೊಳಿಸಿದ್ದ. ಟಿಪ್ಪುವಿನ ಉತ್ತಮ ಗುಣಗಳನ್ನು ಮರೆ ಮಾಚಿ ಸುಳ್ಳು ಇತಿಹಾಸ ಸೃಷ್ಟಿಸುವ ಮೂಲಕ ಜನರ ಹಾದಿ ತಪ್ಪಿಸಲಾಗುತ್ತಿದೆ. ಕೊಡಗಿನಲ್ಲಿ 85 ಸಾವಿರ ಸಂಖ್ಯೆಯಷ್ಟು ದೊಡ್ಡ ಪ್ರಮಾಣದಲ್ಲಿ ನರಮೇಧ ನಡೆದಿದೆ ಎನ್ನುವದು ಕೂಡ ಉತ್ಪ್ರೇಕ್ಷೆಯ ವರದಿಯಾಗಿದೆ ಎಂದು ಆರೋಪಿಸಿದ ವಿದ್ಯಾಧರ್, ಟಿಪ್ಪುವಿನ ಅವಹೇಳನ ಖಂಡನೀಯವೆಂದರು.
ಒಕ್ಕೂಟದ ಪ್ರಮುಖ ಅಲ್ಲಾರಂಡ ವಿಠಲ್ ನಂಜಪ್ಪ ಮಾತನಾಡಿ, ವೀರ ಕೊಡವರು ಟಿಪ್ಪು ಸುಲ್ತಾನನ ಒಂದೂವರೆ ಲಕ್ಷ ಸೈನಿಕರನ್ನು ಅನೇಕ ಧಾಳಿಗಳ ಸಂದರ್ಭ ಹತ್ಯೆಗೈದಿದ್ದಾರೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಸೈನಿಕರನ್ನು ಸದೆಬಡಿದ ಕೊಡವರ ಇತಿಹಾಸವನ್ನು ಹೆಮ್ಮೆಯಿಂದ ಹೇಳಿಕೊಳ್ಳುವ ಬದಲು ದೇವಟ್ ಪರಂಬುವಿನಲ್ಲಿ ಕೊಡವರ ಹತ್ಯೆಯಾಗಿದೆ ಎಂದು ಕೇವಲ ಸೋಲಿನ ವಿಚಾರವನ್ನಷ್ಟೇ ಪ್ರಚಾರ ಮಾಡುವ ಮೂಲಕ ಟಿಪ್ಪುವನ್ನು ಅವಹೇಳನ ಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ, ಮಹಾರಾಜರ ಕಾಲದಲ್ಲಿ ಯುದ್ಧ ತಂತ್ರಗಾರಿಕೆ ಚಾಲ್ತಿಯಲ್ಲಿದ್ದ ಪರಿಣಾಮ ಪರಸ್ಪರ ಹತ್ಯೆಗಳು ನಡೆದಿವೆ. ಕೊಡವರ ಹತ್ಯೆ ಹೇಗೆ ಆಗಿದೆಯೋ ಹಾಗೇ ಟಿಪ್ಪುವಿನ ಸೈನಿಕರ ಹತ್ಯೆಯೂ ಕೊಡವರಿಂದ ಆಗಿದೆ. ಈ ಸನ್ನಿವೇಶವನ್ನು ಅಂದಿನ ಕಾಲಕ್ಕೆ ಸರಿಹೊಂದುತ್ತಿದ್ದ ಯುದ್ಧ ತಂತ್ರಗಾರಿಕೆಗೆ ಹೋಲಿಕೆ ಮಾಡಬೇಕೆ ಹೊರತು ಹತಾಶ ಮನೋಭಾವವನ್ನು ವ್ಯಕ್ತಪಡಿಸುವದು ವೀರರ ನಾಡು ಕೊಡಗಿಗೆ ಅವಮಾನ ಮಾಡಿದಂತೆ ಎಂದು ಅಭಿಪ್ರಾಯಪಟ್ಟರು.
ಡಿ.ಎಸ್.ನಿರ್ವಾಣಪ್ಪ ಮಾತನಾಡಿ ಜಿಲ್ಲೆಯ ಶೇ.90 ರಷ್ಟು ಮಂದಿ ಟಿಪ್ಪು ಜಯಂತಿಯ ಪರವಾಗಿದ್ದು, ರಾಜಕೀಯ ಲಾಭಕ್ಕಾಗಿ ಕೆಲವರಷ್ಟೇ ಜಯಂತಿಯನ್ನು ವಿರೋಧಿಸುತ್ತಿದ್ದಾರೆ ಎಂದರು. ರಾಜ್ಯ ಸರಕಾರಕ್ಕೆ ಮುಕ್ತ ವಾತಾವರಣದಲ್ಲಿ ಜಯಂತಿ ಆಚರಿಸಲು ಸಾಧ್ಯವಾಗದಿದ್ದಲ್ಲಿ ಬಿಜೆಪಿ ಹಾಗೂ ಸಂಘ ಪರಿವಾರಕ್ಕೆ ಸೋತು ಮಂಡಿಯೂರಿರುವದಾಗಿ ಒಪ್ಪಿಕೊಳ್ಳಲಿ ಎಂದು ಒತ್ತಾಯಿಸಿದರು. ಅಮೀನ್ ಮೊಹಿಸಿನ್ ಮಾತನಾಡಿ ಟಿಪ್ಪು ಹೆಸರಿನ ವಿಶ್ವ ವಿದ್ಯಾನಿಲಯ ಸ್ಥಾಪನೆ ಮಾಡಬೇಕು ಮತ್ತು ಸಾಧಕರಿಗೆ ಟಿಪ್ಪು ಹೆಸರಿನಲ್ಲಿ ಪ್ರಶಸ್ತಿ ಪ್ರಧಾನ ಮಾಡಬೇಕೆಂದು ಒತ್ತಾಯಿಸಿದರು. ಬಹುಜನ ಕಾರ್ಮಿಕರ ಸಂಘದ ಅಧ್ಯಕ್ಷ ಕೆ.ಮೊಣ್ಣಪ್ಪ ಅವರು ಮಾತನಾಡಿ ಟಿಪ್ಪು ಜಯಂತಿಗೆ ಬೆಂಬಲ ವ್ಯಕ್ತಪಡಿಸಿದರು. ಪ್ರವಾದಿ ಅವರಿಗೆ ಅಗೌರವ ತೋರಿದವರನ್ನು ಬಂಧಿಸಬೇಕೆಂದು ಒತ್ತಾಯಿಸಿದರು.
ಧಾರ್ಮಿಕ ಭಾವನೆಗೆ ಧಕ್ಕೆ : ಕ್ರಮಕ್ಕೆ ಒತ್ತಾಯ
ಪ್ರವಾದಿ ಅವರಿಗೆ ಅಗೌರವ ತೋರುವ ಮೂಲಕ ಕೆಲವರು ಧಾರ್ಮಿಕ ಭಾವನೆಗೆ ಧಕ್ಕೆ ತಂದು ಸಮಾಜದಲ್ಲಿ ಅಶಾಂತಿ ಮೂಡಿಸುವ ಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿರುವ ಸೌತ್ ಕರ್ನಾಟಕ ಸಲಫಿ ಮೂವ್‍ಮೆಂಟ್‍ನ ಮಡಿಕೇರಿ ಹಾಗೂ ನಾಪೋಕ್ಲು ಘಟಕ ತಪ್ಪಿತಸ್ತರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಡಿಕೇರಿ ಘಟಕದ ಅಧ್ಯಕ್ಷ ಎಂ.ಇ.ರಿಯಾಜ್ó, ಗೋಣಿಕೊಪ್ಪದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿರುವ ರಾಜಕೀಯ ಪಕ್ಷಗಳ ದಲ್ಲಾಳಿಗಳು ಪ್ರವಾದಿಗಳನ್ನು ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಿದರು. ಶಾಂತಿ, ಸೌಹಾರ್ದತೆಯ ಕೊಡಗು ಜಿಲ್ಲೆಯಲ್ಲಿ ಕೋಮುಗಲಭೆ ಸೃಷ್ಟಿಸುವ ಸಾಧ್ಯತೆಯಿದ್ದು, ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ಕೆ.ಎ.ಅನಾಸ್, ಸಹ ಕಾರ್ಯದರ್ಶಿ ಷಂಶುದ್ದೀನ್, ಎಂ.ಇ.ಮುಸ್ತಫ, ನಾಪೋಕ್ಲುವಿನ ನವಾಜ್ó ಹಂಸ ಹಾಗೂ ಪಿ.ಎ.ಮೊಹಮ್ಮದ್ ಉಪಸ್ಥಿತರಿದ್ದರು.
ಬಂಧನಕ್ಕೆ ಆಗ್ರಹ : ಟಿಪ್ಪು ಜಯಂತಿ ಹಿನ್ನೆಲೆಯಲ್ಲಿ ಕೊಡಗಿನ ಶಾಂತಿಯನ್ನು ಕದಡುವ ಪ್ರಯತ್ನವಾಗಿ ಪ್ರವಾದಿ ಅವರಿಗೆ ಅಗೌರವ ತೋರಿರುವ ಪ್ರಕರಣವನ್ನು ಖಂಡಿಸುವದಾಗಿ ಕೊಡಗು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಎಸ್.ಪಿ.ಹನೀಫ್ ತಿಳಿಸಿದ್ದಾರೆ. ಪತ್ರಿಕಾ ಹೇಳಿಕೆ ನೀಡಿರುವ ಅವರು ಗೋಣಿಕೊಪ್ಪದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಟಿಪ್ಪುವನ್ನು ವಿರೋಧಿಸುವದರೊಂದಿಗೆ ಪ್ರವಾದಿ ಅವರಿಗೂ ಅಗೌರವ ತೋರಿದ ಹೇಳಿಕೆಯನ್ನು ಸಂತೋಷ್ ತಮ್ಮಯ್ಯ ಎಂಬವರು ನೀಡಿರುವ ಬಗ್ಗೆ ಪತ್ರಿಕೆಯೊಂದರಲ್ಲಿ ವರದಿ ಪ್ರಕಟವಾಗಿದ್ದು, ತಕ್ಷಣ ಇವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಖಂಡನೆ : ವಿಶ್ವ ಪ್ರವಾದಿ ಮುಹಮ್ಮದ್ ಪೈಗಂಬರ್ ಅವರನ್ನು ಭಯೋತ್ಪಾದನೆಗೆ ಹೋಲಿಸಿದ ಸಂತೋಷ್ ತಮ್ಮಯ್ಯರನ್ನು ಕೂಡಲೇ ಬಂಧಿಸಿ, ಕಾನೂನಿನಡಿಯಲ್ಲಿ ಕಠಿಣ ಶಿಕ್ಷೆಗೆ ಒಳಪಡಿಸಬೇಕೆಂದು ವೀರಾಜಪೇಟೆ ಯುವ ಕಾಂಗ್ರೆಸ್ ಉಪಾಧ್ಯಕ್ಷ ಅಬ್ದುರಹಮಾನ್ (ಅಂದಾಯಿ) ಅವರು ಒತ್ತಾಯಿಸಿದ್ದಾರೆ.
ಟಿಪ್ಪು ಜಯಂತಿಗೆ ಖಂಡನೆ
ಸೋಮವಾರಪೇಟೆ : ಸರ್ಕಾರದ ವತಿಯಿಂದ ಟಿಪ್ಪು ಸುಲ್ತಾನ್ ಜಯಂತಿಯನ್ನು ಆಚರಿಸುತ್ತಿರುವದು ಖಂಡನೀಯ. ಕೂಡಲೆ ಸರಕಾರ ಜಯಂತಿಯನ್ನು ರದ್ದುಪಡಿಸಬೇಕೆಂದು ಹಿಂದು ಜನ ಜಾಗೃತಿ ಸಮಿತಿ ಆಗ್ರಹಿಸಿದೆ. ಈ ಬಗ್ಗೆ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿರುವ ಪದಾಧಿಕಾರಿಗಳು, ಇಂತಹ ಮತಾಂಧ ವ್ಯಕ್ತಿಯ ಜನ್ಮ ದಿನ ಆಚರಿಸಿ ಹಿಂದೂ ಮತ್ತು ಕ್ರೈಸ್ತರ ಭಾವನೆಗೆ ನೋವುಂಟು ಮಾಡುವದು ಸರಿಯಲ್ಲ ಎಂದು ಪತ್ರದಲ್ಲಿ ತಿಳಿಸಿದ್ದಾರೆ. ಮನವಿ ಸಲ್ಲಿಕೆ ಸಂದರ್ಭ ಸಮಿತಿಯ ಪದಾಧಿಕಾರಿಗಳಾದ ಅರುಣ್ ಕುಮಾರ್, ಲಕ್ಷೀಶ್, ಪವಿತ್ರ, ರತ್ನ ಕುಮಾರ್, ಕಾಂತರಾಜ್, ಬ್ರಿಜೇಶ್, ದಿವಾಕರ್ ಇದ್ದರು.