ಸಿದ್ದಾಪುರ ನ. 9: ರಸ್ತೆ ಇಲ್ಲದೆ ಪರಿತಪಿಸುತ್ತಿದ್ದ ಕಕ್ಕಟ್ಟುಕಾಡು ಗ್ರಾಮಕ್ಕೆ ನ್ಯಾಯ ದೊರಕುವ ಆಶಾಕಿರಣ ಮೂಡಿದ್ದು, ದಶಕಗಳ ಸಮಸ್ಯೆ ಪರಿಹಾರವಾಗುವ ನಿರೀಕ್ಷೆಯಲ್ಲಿ ಗ್ರಾಮಸ್ಥರಿದ್ದಾರೆ. ಸಿದ್ದಾಪುರದ ಗುಹ್ಯ ಗ್ರಾಮದ ಕಕ್ಕಟ್ಟುಕಾಡು ಭಾಗದಲ್ಲಿ ಸುಮಾರು 35 ಕುಟುಂಬಗಳು ವಾಸವಾಗಿದ್ದು, ಹಲವಾರು ವರ್ಷಗಳಿಂದ ಕಕ್ಕಟ್ಟುಕಾಡುವಿಗೆ ವಾಹನ ಸಂಚಾರದ ರಸ್ತೆ ಇಲ್ಲದೇ ಹೋರಾಟ ಮಾಡಿಕೊಂಡು ಬರುತ್ತಿದ್ದಾರೆ. ಕಕ್ಕಟ್ಟುಕಾಡು ಗ್ರಾಮದಲ್ಲಿ 35 ಕಟುಟುಂಬಗಳು ಹಲವಾರು ವರ್ಷಗಳಿಂದ ವಾಸವಾಗಿದ್ದು, ಸುಮಾರು ನೂರಕ್ಕೂ ಅಧಿಕ ಜನಸಂಖ್ಯೆಯನ್ನು ಹೊಂದಿದೆ. ಕಕ್ಕಟ್ಟುಕಾಡುವಿನಿಂದ ಗುಹ್ಯ ಅಗಸ್ತ್ಯೇಶ್ವರ ದೇವಾಲಯದವರೆಗೂ ಸುಮಾರು 1 ಕಿ.ಮೀ.ಗೂ ಅಧಿಕ ದೂರ ಕಾಲ್ನಡಿಗೆಯಲ್ಲೇ ಸಂಚರಿಸಬೇಕಾದ ದುಸ್ಥಿತಿ ಗ್ರಾಮಸ್ಥರದ್ದಾಗಿದೆ. ವಾಹನ ಸಂಚಾರಕ್ಕೆ ಯೋಗ್ಯವಾದ ರಸ್ತೆ ಇಲ್ಲದ ಕಾರಣ ಈ ಹಿಂದೆ ಗರ್ಬಿಣಿ ಮಹಿಳೆಯ ಪ್ರಸವ ವೇದನೆಯ ಸಂದರ್ಭ ಎತ್ತಿಕೊಂಡು ಆಸ್ಪತ್ರೆಗೆ ಸಾಗಿಸುವ ವೇಳೆ ಮಹಿಳೆ ಹಾಗೂ ಮಗು ದಾರಿ ಮದ್ಯದಲ್ಲೇ ಸಾವನ್ನಪ್ಪಿದ ದಾರುಣ ಘಟನೆ ನಡೆದಿತ್ತು. ವಿದ್ಯಾರ್ಥಿನಿಯೊರ್ವಳು ಕಾಲುಜಾರಿ ಕಾವೇರಿ ನದಿಗೆ ಬಿದ್ದ ಸಂದರ್ಭ ಗ್ರಾಮಸ್ಥರು ಆಕೆಯನ್ನು ರಕ್ಷಿಸಿ, ಆಸ್ಪತ್ರೆಗೆ ಸಾಗಿಸಲು ಮುಂದಾದರು. ಆದರೇ ವಾಹನವಿಲ್ಲದೇ ಸುಮಾರು 1 ಕಿ.ಮೀ ದೂರ ಎತ್ತಿಕೊಂಡು ಬಂದ ಸಂದರ್ಭ ತನ್ನ ತಂದೆಯ ಕೈಯಲ್ಲೇ ವಿದ್ಯಾರ್ಥಿನಿ ಜೀವಬಿಟ್ಟಳು. ಇದು ಮಾತ್ರವಲ್ಲದೇ ನಿತ್ಯವೂ ಕೂಡ ಗ್ರಾಮಸ್ಥರು ತೊಂದರೆ ಅನುಭವಿಸುತ್ತಿದ್ದು, ಅನಾರೋಗ್ಯದ ಸಂದರ್ಭ ನರಕಯಾತನೆಯನ್ನು ಅನುಭವಿಸಬೇಕಾಗಿದೆ.

ಕಿರಿದಾದ ಕಾಲ್ನಡಿಗೆ ರಸ್ತೆಯ ಮೂಲಕವೇ ಶಾಲಾ ಮಕ್ಕಳು, ವಿದ್ಯಾರ್ಥಿಗಳು, ವೃದ್ಧರು ಸೇರಿದಂತೆ ಸಾರ್ವಜನಿಕರು ನಿತ್ಯ ನಡೆದಾಡಬೇಕಾಗಿದ್ದು, ಗ್ರಾಮ ನಕಾಶೆಯಲ್ಲಿರುವ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಯೋಗ್ಯವಾದ ರಸ್ತೆಯನ್ನು ಒದಗಿಸಿಕೊಡಲು ಹಲವು ಬಾರಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿರಲಿಲ್ಲ. ಬಳಿಕ ಕಳೆದ 9 ವರ್ಷಗಳ ಹಿಂದೆ ಗ್ರಾಮಸ್ಥರು ವಿರಾಜಪೇಟೆ ನ್ಯಾಯಾಲಯದಲ್ಲಿ ವಾಹನ ಸಂಚಾರಕ್ಕೆ ಯೋಗ್ಯವಾದ ರಸ್ತೆಯನ್ನು ಒದಗಿಸಿಕೊಡಲು ಸಲ್ಲಿಸಿದ್ದ ಅರ್ಜಿಯನ್ನು ಪರಿಶೀಲಿಸಿದ ನ್ಯಾಯಾಲಯ, ಕಕ್ಕಟ್ಟುಕಾಡುವಿಗೆ 10 ಅಡಿ ಅಗಲದ ರಸ್ತೆಯನ್ನು ಒದಗಿಸಬೇಕೆಂಬ ಆದೇಶವನ್ನು ನೀಡಿತ್ತು. ಆದೇಶ ಬಂದು ತಿಂಗಳಾದರೂ ರಸ್ತೆ ಅಭಿವೃದ್ಧಿಯಾಗಿಲ್ಲ ಎಂದು ಗ್ರಾಮಸ್ಥರು ಇತ್ತೀಚೆಗೆ ಜಿಲ್ಲಾಧಿಕಾರಿ ಕಚೇರಿ ಮುಂಬಾಗ ಪ್ರತಿಭಟನೆ ನಡೆಸಿದರು.

ಇದೀಗ ಜಿಲ್ಲಾಧಿಕಾರಿಗಳ ಸೂಚನೆಯ ಮೇರೆಗೆ ಉಪ ವಿಭಾಗಾಧಿಕಾರಿಗಳಾದ ಜವರೇಗೌಡ ಅವರು ಕಕ್ಕಟ್ಟುಕಾಡು ರಸ್ತೆಯನ್ನು ಪರಿಶೀಲಿಸಿದ್ದಾರೆ. ನಡಿಗೆಯ ಮೂಲಕವೇ ಕಕ್ಕಟ್ಟುಕಾಡುವಿನವರೆಗೂ ತೆರಳಿದ ಉಪ ವಿಭಾಗಾಧಿಕಾರಿ, ಸಮಸ್ಯೆಯ ಬಗ್ಗೆ ಪರಿಶೀಲಿಸಿದರು. ಈ ಸಂದರ್ಭ ಗ್ರಾಮಸ್ಥರು ತಮ್ಮ ಅಳಲನ್ನು ತೋಡಿಕೊಂಡು, ಗ್ರಾಮದಲ್ಲಿರುವ ಅಂಗನವಾಡಿ ವಿದ್ಯಾರ್ಥಿಗಳು ಸೇರಿದಂತೆ ಎಲ್ಲರೂ ಕೂಡ ನಡೆದುಕೊಂಡೇ ಹೋಗಬೇಕಾಗಿದ್ದು, ತಮಗೆ ನ್ಯಾಯ ಒದಗಿಸಿ, ರಸ್ತೆಯನ್ನು ಮಾಡಿಕೊಡಬೇಕಾಗಿ ವಿನಂತಿಸಿಕೊಂಡರು. ಇದಕ್ಕೆ ಉತ್ತರಿಸಿದ ಉಪ ವಿಭಾಗಾಧಿಕಾರಿ ಜವರೇಗೌಡ, ಗ್ರಾಮದ ಜನತೆಗೆ ರಸ್ತೆ ಸಮಸ್ಯೆ ಇದ್ದು, ಕಾನೂನು ರೀತಿಯಲ್ಲಿ ರಸ್ತೆಯನ್ನು ಅಗಲೀಕರಣ ಮಾಡಿಕೊಡುವುದಾಗಿ ತಿಳಿಸಿದ್ದಾರೆ. ಮಾತ್ರವಲ್ಲದೇ ಕೂಡಲೇ ರಸ್ತೆಯನ್ನು ಸರ್ವೆ ನಡೆಸಿ, ವರದಿಯನಮ್ನು ನೀಡುವಂತೆ ಕಂದಾಯ ಪರಿವೀಕ್ಷಕರಾದ ವಿನು ರವರಿಗೆ ಸೂಚಿಸಿದರು. ಉಪವಿಭಾಗ ಅಧಿಕಾರಿಗಳೊಂದಿಗೆ ಡಿ.ವೈ.ಎಸ್.ಪಿ ಸುಂದರ್ ರಾಜ್, ವೃತ್ತನಿರೀಕ್ಷಕ ಅನೂಪ್ ಮಾದಪ್ಪ, ಠಾಣಾಧಿಕಾರಿ ದಯಾನಂದ, ಗ್ರಾಮ ಲೆಕ್ಕಿಗ ಮಂಜುನಾಥ್, ಅನಿಲ್, ಪಿ.ಡಿ.ಓ ವಿಶ್ವನಾಥ್ ಸೇರಿದಂತೆ ಇನ್ನಿತರರು ಇದ್ದರು.

ಕಾಡಾನೆ ಹಾವಳಿ: ಕಕ್ಕಟ್ಟುಕಾಡುವಿನ ಕಾಲುದಾರಿಯಲ್ಲಿ ಕಾಡಾನೆ ಹಾವಳಿಯು ಕೂಡ ಹೆಚ್ಚಾಗಿದ್ದು, ರಸ್ತೆ ಕಿರಿದಾದ ರಸ್ತೆಯಲ್ಲೇ ಕಾಡಾನೆಗಳು ಬೀಡುಬಿಡುತ್ತಿದೆ. ಇತ್ತೀಚೆಗೆ ಕಾಡಾನೆಗಳ ಹಿಂಡು ವಿದ್ಯಾರ್ಥಿಗಳ ಮೇಲೆ ದಾಳಿಗೆ ಮುಂದಾಗಿದ್ದು, ಅದೃಷ್ಟವಸಾತ್ ಪ್ರಾಣಾಪಾಯದಿಂದ ಪಾರಾದ ಘಟನೆಯೂ ಕೂಡ ನಡೆದಿತ್ತು. ವಾಹನ ಸಂಚಾರದ ರಸ್ತೆ ಆದಲ್ಲಿ ವಿದ್ಯಾರ್ಥಿಗಳಿಗೆ ಮನೆಯವರೆಗೂ ವಾಹನದಲ್ಲಿ ತೆರಳಬಹುದಾಗಿದೆ.

ಗ್ರಾ.ಪಂ. ಬೆಂಬಲ: ಗುಹ್ಯ ಗ್ರಾಮದ ಕಕ್ಕಟ್ಟುಕಾಡುವಿಗೆ ತೆರಳಲು ರಸ್ತೆ ಸೌಕರ್ಯವಿಲ್ಲದೇ ಗ್ರಾಮಸ್ಥರು ತೊಂದರೆ ಅನುಭವಿಸುತ್ತಿದ್ದು, ಈ ಬಗ್ಗೆ ಸಿದ್ದಾಪುರ ಗ್ರಾ.ಪಂ. ವಿಶೇಷ ಸಭೆ ಕರೆದು ಗ್ರಾಮಕ್ಕೆ ರಸ್ತೆ ನಿರ್ಮಾಣಮಾಡಬೇಕೆಂಬ ನಿರ್ಣಯ ಕೈಗೊಂಡಿದೆ. ಠರಾವು ನಿರ್ಣಯವನ್ನು ಜಿಲ್ಲಾಧಿಕಾರಿಗಳು ಹಾಗೂ ತಹಶೀಲ್ದಾರರಿಗೆ ಕಳುಹಿಸಿಕೊಡಲಾಗಿದೆ. ಇತ್ತೀಚೆಗೆ ನಡೆದ ಸಾಮಾನ್ಯ ಸಭೆಯಲ್ಲೂ ರಸ್ತೆ ಅಗಲೀಕರಣಕ್ಕೆ ಅನುಮತಿ ಕೋರಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ರಸ್ತೆ ಒದಗಿಸದಿದ್ದಲ್ಲಿ ಗುಹ್ಯ ವಾರ್ಡ್‍ನ ಸದಸ್ಯರು ರಾಜೀನಾಮೆ ಸಲ್ಲಿಸುವುದಾಗಿ ಸಭೆಯಲ್ಲಿ ತಿಳಿಸಿದ್ದಾರೆ.

ಅಹೋರಾತ್ರಿ ಹೋರಾಟಕ್ಕೆ ನಿರ್ಧಾರ: ಜಿಲ್ಲಾಧಿಕಾರಿಗಳ ಕಚೇರಿಯ ಮುಂಬಾಗದಲ್ಲಿ ಕಕ್ಕಟ್ಟುಕಾಡಿನ ಗ್ರಾಮಸ್ಥರು ಹೋರಾಟ ನಡೆಸಿ, ಜಿಲ್ಲಾಧಿಕಾರಿಗಳ ಆದೇಶಕ್ಕಾಗಿ ಗಡುವು ನೀಡಿದ್ದಾರೆ. ಕೂಡಲೇ ರಸ್ತೆ ಅಗಲೀಕರಣ ಆಗದಿದ್ದಲ್ಲಿ ಸಿದ್ದಾಪುರದಲ್ಲಿ ಅಹೋರಾತ್ರಿ ಹೋರಾಟ ಹಮ್ಮಿಕೊಳ್ಳುವ ಬಗ್ಗೆ ಗ್ರಾಮಸ್ಥರ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಅಹೋರಾತ್ರಿ ಹೋರಾಟದಲ್ಲೂ ನ್ಯಾಯ ದೊರಕದಿದ್ದಲ್ಲಿ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳುವ ಬಗ್ಗೆಯೂ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. - ಎ.ಎನ್. ವಾಸು