ಸಿದ್ದಾಪುರ, ನ.9 : ಹಾಡಹಗಲೇ ಒಂಟಿ ಸಲಗವೊಂದು ಪಟ್ಟಣದ ಮುಖ್ಯ ರಸ್ತೆಯಲ್ಲಿ ಹಾದು ಹೋಗಿದ್ದು, ಕೂದಲೆಳೆಯ ಅಂತರದಲ್ಲಿ ಗ್ರಾ.ಪಂ ಸದಸ್ಯರೋರ್ವರು ಪಾರಾದ ಘಟನೆ ಮಾಲ್ದಾರೆಯಲ್ಲಿ ನಡೆದಿದೆ. ಶುಕ್ರವಾರಂದು ಬೆಳಿಗ್ಗೆ 10 ಗಂಟೆಯ ಸಮಯಕ್ಕೆ ಮಾಲ್ದಾರೆಯ ಪಟ್ಟಣ ಸಮೀಪದ ಕಾಫಿ ತೋಟವೊಂದರಿಂದ ದಿಢೀರನೆ ಆಗಮಿಸಿದ ಒಂಟಿ ಸಲಗವೊಂದು ಮಾಲ್ದಾರೆಯ ಮುಖ್ಯ ರಸ್ತೆಯ ಮೂಲಕ ಪಟ್ಟಣದಲ್ಲಿರುವ ಗಣಪತಿ ದೇವಾಲಯದ ಬಳಿ ರಾಜಾರೋಷವಾಗಿ ಹಾದು ಹೋಗಿದ್ದು ಸಾರ್ವಜನಿಕರು ನೋಡು ನೋಡುತ್ತಿದ್ದಂತೆಯೇ ಕಾಡಾನೆಯು ರಸ್ತೆ ಅಡ್ಡಲಾಗಿ ದಾಟಿ ಸಮೀಪದ ಅರಣ್ಯಕ್ಕೆ ತೆರಳಿದೆ.

ಈ ಸಂದರ್ಭದಲ್ಲಿ ರಸ್ತೆಯ ಬದಿಯಲ್ಲಿ ನಿಂತಿದ್ದ ಗ್ರಾ.ಪಂ ಸದಸ್ಯರಾದ ಬಿ.ಡಿ.ಮತ್ತಪ್ಪ ಅವರು ಕೂದಲೆಳೆಯ ಅಂತರದಿಂದ ಪಾರಾಗಿದ್ದಾರೆ. ಅದೃಷ್ಟವಶಾತ್ ಶಾಲೆಗಳಿಗೆ ಮಕ್ಕಳು ತೆರಳಿದ ಸಮಯವಾಗಿದ್ದ ಹಿನ್ನೆಲೆಯಲ್ಲಿ ಯಾವದೇ ಅನಾಹುತ ಸಂಭವಿಸಲಿಲ್ಲ. ಹಾಡುಹಗಲೇ ಒಂಟಿ ಸಲಗ ಸಾರ್ವಜನಿಕ ರಸ್ತೆಯಲ್ಲಿ ನಡೆದಾಡಿದನ್ನು ಕಂಡು ಗ್ರಾಮಸ್ಥರು ಭಯಭೀತರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಕಡಿಮೆಯಾಗಿದ್ದ ಕಾಡಾನೆಗಳ ಹಾವಳಿಯು ಇದೀಗ ಹೆಚ್ಚಾಗತೊಡಗಿದೆ. ಕಾಫಿ ತೋಟಗಳಲ್ಲಿ ಬೀಡುಬಿಟ್ಟಿದ್ದು, ಮಾಲ್ದಾರೆ, ಬಾಡಗ ಬಾಣಂಗಾಲ ಘಟ್ಟದಳ ವ್ಯಾಪ್ತಿಯಲ್ಲಿ ಕಾಡಾನೆಗಳು ಮರಿಯಾನೆಯೊಂದಿಗೆ ಸುತ್ತಾಡುತ್ತಿದ್ದು ಗ್ರಾಮಸ್ಥರು ಹಾಗೂ ಕಾರ್ಮಿಕರು ಆತಂಕಕ್ಕೆ ಸಿಲುಕಿದ್ದಾರೆ. ಕೂಡಲೇ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿರುವ ಕಾಡಾನೆಗಳ ಹಾವಳಿಯನ್ನು ತಡೆಗಟ್ಟಲು ಸರಕಾರ ಹಾಗೂ ಅರಣ್ಯ ಇಲಾಖೆ ಶಾಶ್ವತ ಯೋಜನೆಯನ್ನು ರೂಪಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಕಳೆದ ಕೆಲವು ತಿಂಗಳ ಹಿಂದೆ ರಾಜ್ಯದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ಜಿಲ್ಲಾ ಅರಣ್ಯ ಇಲಾಖಾಧಿಕಾರಿಗಳು ಕಾಫಿ ತೋಟಗಳಲ್ಲಿ ಬೀಡುಬಿಟ್ಟಿರುವ ಕಾಡಾನೆಗಳ ಹಿಂಡಿನ ಪೈಕಿ ಉಪಟಳ ನೀಡುವ 2 ಕಾಡಾನೆಗಳನ್ನು ಸೆರೆ ಹಿಡಿಯುವದಾಗಿ ತಿಳಿಸಿದ್ದರು. ಆದರೆ ಈ ವರೆಗೂ ಕಾಡಾನೆಗಳನ್ನು ಹಿಡಿಯುವ ಕಾರ್ಯಾಚರಣೆಯನ್ನು ಕೈಗೊಂಡಿಲ್ಲ. ಎಂದು ಗ್ರಾಮಸ್ಥರು ಹಾಗೂ ಬೆಳೆಗಾರರು ಇಲಾಖೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೂಡಿಗೆ : ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹುದುಗೂರು ಗ್ರಾಮದಲ್ಲಿ ಕಳೆದ ಮೂರು ದಿನಗಳಿಂದ ಕಾಡಾನೆಗಳು ರೈತರ ಭತ್ತದ ಗದ್ದೆಗಳಿಗೆ ಧಾಳಿ ಮಾಡಿ ಭತ್ತದ ಬೆಳೆ ತಿಂದು, ತುಳಿದು ನಷ್ಟಪಡಿಸಿವೆ. ಹುದುಗೂರು ಮೀಸಲು ಅರಣ್ಯ ಪ್ರದೇಶದಿಂದ ಅಡ್ಡ ರಸ್ತೆಯ ಮೂಲಕ ಹುದುಗೂರು ಗ್ರಾಮದ ರೈತರುಗಳ ಜಮೀನಿಗೆ ಧಾಳಿ ಮಾಡಿ ಅಪಾರ ಪ್ರಮಾಣದ ಬೆಳೆ ನಷ್ಟಪಡಿಸಿವೆ. ಈ ಭಾಗದ ರೈತರುಗಳಾದ ಗಿರೀಶ್, ಕಾಳೇಗೌಡ, ನಾರಾಯಣ, ಶಿವಣ್ಣ, ಎಂಬವರ ಭತ್ತದ ಗದ್ದೆಗಳಲ್ಲಿ ಕಾಡಾನೆ ದಾಳಿ ಮಾಡಿ ನಷ್ಟಪಡಿಸಿರುತ್ತವೆ. ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ಸೂಕ್ತ ಪರಿಹಾರ ಒದಗಿಸುವಂತೆ ವ್ಯಾಪ್ತಿಯ ರೈತರ, ಗ್ರಾಮಸ್ಥರ ಆಗ್ರಹವಾಗಿದೆ.