ಸಿದ್ದಾಪುರ ನ. 9: ಗುಹ್ಯ ಗ್ರಾಮದ ಕಕ್ಕಟ್ಟುಕಾಡು ರಸ್ತೆ ವಿಚಾರದಲ್ಲಿ, ಗುಹ್ಯಗ್ರಾಮದ ಸದಸ್ಯರುಗಳು ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಸಿ.ಪಿ.ಐ (ಎಂ) ಮುಖಂಡ ಎನ್.ಡಿ. ಕುಟ್ಟಪ್ಪ ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಗ್ರಾ.ಪಂ. ವ್ಯಾಪ್ತಿಗೆ ಒಳಪಡುವ ಕಕ್ಕಟ್ಟುಕಾಡು ರಸ್ತೆಯ ವಿಚಾರದಲ್ಲಿ ಇತ್ತೀಚೆಗೆ ಕೆಲವು ಗ್ರಾ.ಪಂ ಸದಸ್ಯರುಗಳು ಮಡಿಕೇರಿಯಲ್ಲಿ ನಿವಾಸಿಗಳೊಂದಿಗೆ ಪ್ರತಿಭಟನೆ ನಡೆಸಿರುವದು ಸರಿಯಾದ ಕ್ರಮವಲ್ಲ ಎಂದು ತಿಳಿಸಿದರು. ಗ್ರಾಮ ಪಂಚಾಯಿತಿ ಆಡಳಿತವು ಕಾಂಗ್ರೆಸ್ ಬೆಂಬಲಿತ ಸದಸ್ಯರೇ ಅಧಿಕವಿದ್ದರೂ, ಕಕ್ಕಟ್ಟುಕಾಡು ವ್ಯಾಪ್ತಿಯ ರಸ್ತೆ ವಿಚಾರದಲ್ಲಿ ಸ್ಪಷ್ಟ ನಿಲುವನ್ನು ತೆಗೆದುಕೊಳ್ಳದೆ, ತಮ್ಮ ಸ್ವಾರ್ಥಕ್ಕಾಗಿ ಪಂಚಾಯಿತಿಯನ್ನ ಬಳಸಿಕೊಳ್ಳುತ್ತಿದ್ದಾರೆಂದು ದೂರಿದರು. ಸಿದ್ದಾಪುರ ವ್ಯಾಪ್ತಿಯ ಜಿ.ಪಂ. ಸದಸ್ಯರು ಹಾಗೂ ತಾ.ಪಂ. ಸದಸ್ಯರುಗಳು ಕಕ್ಕಟ್ಟುಕಾಡು ರಸ್ತೆ ವಿಚಾರದಲ್ಲಿ ಯಾವದೇ ಆಸಕ್ತಿ ವಹಿಸದೆ ಇರುವದು ಸರಿಯಾದ ಕ್ರಮವಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು. ಪತ್ರಿಕಾ ಗೋಷ್ಠಿಯಲ್ಲಿ ಪಕ್ಷದ ಪದಾಧಿಕಾರಿಗಳಾದ ಶಾಲಿ ಪೌಲೋಸ್, ಮಂಜು ಹಾಜರಿದ್ದರು.