ಮಡಿಕೇರಿ, ನ. 9: ಇತ್ತೀಚಿಗೆ ಸಂಭವಿಸಿದ ಪ್ರಕೃತಿ ವಿಕೋಪದಿಂದ ಕೊಡಗಿನಲ್ಲಿ ಅನೇಕ ಕಷ್ಟ ನಷ್ಟಗಳು ಉಂಟಾಗಿದ್ದು, ಸಂತ್ರಸ್ತರ ಕಣ್ಣೀರನ್ನು ಒರೆಸಲು ಮುಂದಾಗಿರುವ ಬೆಳ್ಳೂರು ಹರಿಹರ ಮುಕ್ಕಾಟಿರ ಕುಟುಂಬಸ್ಥರ ಸಂಘ ರೂ. 1 ಲಕ್ಷಗಳನ್ನು ಮೂವತ್ತೊಕ್ಲು ಗ್ರಾಮದ ಮುಕ್ಕಾಟಿರ ಸಂತ್ರಸ್ತ ಕುಟುಂಬಗಳಿಗೆ ಪರಿಹಾರವಾಗಿ ವಿತರಿಸಿತು.
ನಗರದ ಪತ್ರಿಕಾ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಘದ ಪ್ರಮುಖರು ಸಂತ್ರಸ್ತರಿಗೆ ಹಣವನ್ನು ಚೆಕ್ ರೂಪದಲ್ಲಿ ಹಂಚಿಕೆ ಮಾಡಿದರು. ಈ ಸಂದರ್ಭ ಮಾತನಾಡಿದ ಸಂಘದ ಅಧ್ಯಕ್ಷ ಎಂ.ಪಿ.ಉತ್ತಯ್ಯ, ಜಿಲ್ಲೆಯಲ್ಲಿ ಉಂಟಾದ ಪ್ರಕೃತಿ ವಿಕೋಪದಿಂದಾಗಿ ಅನೇಕ ಸಾವು, ನೋವುಗಳು ಸಂಭವಿಸಿದ್ದು, ಎಲ್ಲರಿಗೂ ಧನ ಪರಿಹಾರವನ್ನು ಭರಿಸಲಾಗದ ನೋವು ನಮಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಎಲ್ಲವನ್ನೂ ಕಳೆದುಕೊಂಡು ಆಹಾರಕ್ಕಾಗಿ ಪರಿಹಾರ ಕೇಂದ್ರದಲ್ಲಿ ಸಾಲು ನಿಂತು ಆಹಾರ ಪಡೆಯುತ್ತಿದ್ದ ದೃಶ್ಯ ಮನಕಲಕುವಂತ್ತಿತ್ತು. ಕೆಲವೇ ಕುಟುಂಬಗಳ ಕಣ್ಣೀರನ್ನು ಒರೆಸುವ ಪ್ರಯತ್ನವನ್ನು ನಮ್ಮ ಸಂಘ ಮಾಡಿದ್ದು, ಸಂಗ್ರಹವಾದ ರೂ. 1 ಲಕ್ಷಗಳನ್ನು ಸಂತ್ರಸ್ತರಿಗೆ ಹಂಚಿಕೆ ಮಾಡಿರುವದಾಗಿ ತಿಳಿಸಿದರು.
ಮುಂದಿನ ದಿನಗಳಲ್ಲಿ ಮತ್ತಷ್ಟು ಧನ ಸಹಾಯ ಸಂಗ್ರಹಿಸುವ ಪ್ರಯತ್ನ ಮಾಡಿ ಸಂತ್ರಸ್ತರ ನೋವಿಗೆ ಸಂಘ ಸ್ಪಂದಿಸಲಿದೆ ಎಂದು ಉತ್ತಯ್ಯ ಭರವಸೆ ನೀಡಿದರು. ಸಂತ್ರಸ್ತರಾದ ಮಾದಾಪುರ ಗ್ರಾ.ಪಂ. ಸದಸ್ಯ ಎಂ.ಎಂ. ಬೆಳ್ಯಪ್ಪ ಮಾತನಾಡಿ ಮಾದಪುರ ಗ್ರಾ.ಪಂ. ವ್ಯಾಪ್ತಿಯಲ್ಲಿ ಬಹಳಷ್ಟು ನಷ್ಟ ಸಂಭವಿಸಿದ್ದು, ಒಂದೂವರೆ ಕಿ.ಮೀ. ದೂರದಷ್ಟು ಬರೆ ಬಿರುಕು ಕಾಣಿಸಿಕೊಂಡಿರುವ ಬಗ್ಗೆ ಮನವಿ ಸಲ್ಲಿಸಿದ್ದರೂ ಇಲ್ಲಿಯವರೆಗೆ ಯಾರೂ ಪರಿಶೀಲಿಸಿಲ್ಲವೆಂದು ಬೇಸರ ವ್ಯಕ್ತಪಡಿಸಿದರು. ಮುಂದಿನ ವರ್ಷ ಇದೇ ರೀತಿ ಮಳೆ ಬಂದಲ್ಲಿ ಭಾರೀ ಅನಾಹುತ ಸಂಭವಿಸಲಿದೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಮೂವತ್ತೊಕ್ಲು ಮುಕ್ಕಾಟಿರ ಕುಟುಂಬಸ್ಥರಾದ ಎಂ.ಎ. ಗೋಪಾಲ, ಸಂಘದ ಉಪಾಧ್ಯಕ್ಷ ರೋಹಿತ್ ಸುಬ್ಬಯ್ಯ, ಕಾರ್ಯದರ್ಶಿ ಎಂ.ಬಿ. ಪೂಮಣಿ, ಖಜಾಂಚಿ ಎಂ.ಡಿ. ಅಪ್ಪಚ್ಚು, ನಿರ್ದೇಶಕರಾದ ಶುಭಾ ಮುತ್ತಪ್ಪ, ಕರುಂಬಯ್ಯ ಮತ್ತಿತರರು ಉಪಸ್ಥಿತರಿದ್ದರು.