ಮಡಿಕೇರಿ, ನ. 9: ಮಡಿಕೇರಿಯ ಪ್ರಸಿದ್ಧ ಪ್ರವಾಸಿ ತಾಣವಾಗಿರುವ ರಾಜಾಸೀಟು ಮಾರ್ಗದಲ್ಲಿ ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಮೂಲಕ ರೂ. 20 ಲಕ್ಷ ವೆಚ್ಚದಲ್ಲಿ ಅಳವಡಿಸಲಾಗಿರುವ ನೂತನ ಅಲಂಕಾರಿಕಾ ದೀಪಗಳನ್ನು ದೀಪಾ ವಳಿಯ ಸುಸಂದರ್ಭದ ಮೂಲಕ ಉದ್ಘಾಟಿಸಲಾಯಿತು. ಇದೀಗ ಈ ವಿಶಿಷ್ಟವಾದ ಅಲಂಕಾರಿಕಾ ದೀಪಗಳ ಬೆಳಗುವಿಕೆಯಿಂದಾಗಿ ಈ ಮಾರ್ಗದಲ್ಲಿ ಹೊಸ ಕಳೆ ಬಂದಂತಾಗಿದೆ.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ನಗರಸಭೆಯ ಹಿರಿಯ ಸದಸ್ಯರೂ ಆಗಿರುವ ಚುಮ್ಮಿ ದೇವಯ್ಯ ಅವರ ಅಧಿಕಾರಾವಧಿಯಲ್ಲಿ ಈ ಕುರಿತು ಯೋಜನೆ ರೂಪಿಸಲಾಗಿದ್ದು, ಇದೀಗ ಇದು ಉದ್ಘಾಟನೆಗೊಂಡಿದೆ. ಅಲಂಕಾರಿಕಾ ಬೀದಿ ದೀಪಗಳನ್ನು ತಾ. 4ರ ಸಂಜೆ ಉದ್ಘಾಟಿಸಿದ ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಅವರು ಇವುಗಳನ್ನು ಮನೆಯ ದೀಪಗಳಂತೆ ಸುಸ್ಥಿತಿಯಲ್ಲಿ ಕಾಪಾಡಿಕೊಳ್ಳಬೇಕು ಎಂದು ಕರೆ ನೀಡಿದರು.

ಅತಿಥಿಯಾಗಿದ್ದ ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಅವರು ಚುಮ್ಮಿ ದೇವಯ್ಯ ಅವರ ಚಿಂತನೆಯ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿ ಚುನಾವಣೆಯ ಸಂದರ್ಭದಲ್ಲಿ ಮಾತ್ರ ರಾಜಕೀಯ ಇರಬೇಕು. ನಂತರ ಎಲ್ಲರೂ ಪಕ್ಷಾತೀತವಾಗಿ ಕೆಲಸ ಮಾಡಬೇಕೆಂದರು. ಈ ಸಂದರ್ಭದಲ್ಲಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದ ಚುಮ್ಮಿದೇವಯ್ಯ ಅವರು ಯೋಜನೆ ಸಾಕಾರಗೊಳ್ಳುತ್ತಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿದರು. ನಗರಸಭೆಯ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಅವರು ಮುಂದಿನ ದಿನಗಳಲ್ಲಿ ಇದು ನಗರದ ಎಲ್ಲೆಡೆ ಅಳವಡಿಕೆಯಾಗಬೇಕು ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭ ನಗರಸಭಾ ಉಪಾಧ್ಯಕ್ಷ ಟಿ.ಎಸ್. ಪ್ರಕಾಶ್, ಸ್ಥಾಯಿ ಸಮಿತಿ ಅಧ್ಯಕ್ಷ ಪಿ.ಟಿ. ಉಣ್ಣಿಕೃಷ್ಣನ್ ಸೇರಿದಂತೆ ಇತರ ಸದಸ್ಯರು, ನಗರಸಭೆ ಹಾಗೂ ಮೂಡಾದ ಅಧಿಕಾರಿಗಳು ಪಾಲ್ಗೊಂಡಿದ್ದರು. ಮೇಜರ್ ಮಂಗೇರಿರ ಮುತ್ತಣ್ಣ ವೃತ್ತದಿಂದ ಕುಂದುರುಮೊಟ್ಟೆ ಚೌಟಿ ಮಾರಿಯಮ್ಮ ದೇವಾಲಯದವರೆಗೆ ರೂ. 20 ಲಕ್ಷ ವೆಚ್ಚದಲ್ಲಿ ಮಧ್ಯಪ್ರದೇಶದಿಂದ ತರಿಸಲಾಗಿರುವ ಒಟ್ಟು 24 ಪಾರಂಪರಿಕ ದೀಪದ (ಹೆರಿಟೇಜ್ ಲೈಟ್) ಕಂಬಗಳನ್ನು ನಿಲ್ಲಿಸಲಾಗಿದೆ. ಮೆದು ಕಬ್ಬಿಣ ಹಾಗೂ ತಾಮ್ರದಿಂದ ತಯಾರಿಸಲಾಗಿರುವ ಈ ಕಂಬಗಳು ತುಕ್ಕು ನಿರೋಧಕವಾಗಿದ್ದು, ನೋಡಲೂ ಆಕರ್ಷಕವಾಗಿವೆ.