(ತಾ.8ರ ಸಂಚಿಕೆಯಿಂದ)

ಮಡಿಕೇರಿ, ನ. 9: ಮಾಕುಟ್ಟ ಮೀಸಲು ಅರಣ್ಯದ ರಬ್ಬರ್ ತೋಟದಲ್ಲಿ ತಾನು ಖರೀದಿಸಿರುವ ಜಾಗದ ಮರಗಳ ಮಾರಾಟಕ್ಕೆ ಅರಣ್ಯಾಧಿಕಾರಿಗಳು ಅಡ್ಡಿಪಡಿಸಿರುವದಾಗಿ, ತಾ. 10.7.2013 ರಂದು ಇಲಾಖೆಯ ಆಕ್ಷೇಪಣೆಗಳ ಕುರಿತು ಕೇರಳ ಮೂಲದ ಈ ಮಹಿಳೆ ವೀರಾಜಪೇಟೆ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸುತ್ತಾರೆ. ಈ ಸಂದರ್ಭ ವೀರಾಜಪೇಟೆ ಉಪವಿಭಾಗ ಮತ್ತು ಮಾಕುಟ್ಟ ಅರಣ್ಯಾಧಿಕಾರಿಗಳ ಪರವಾಗಿ ವಿಶೇಷ ಸರಕಾರಿ ವಕೀಲರಾದ ವಿ.ಕೆ. ದೇವಲಿಂಗಯ್ಯ ವಾದ ಮಂಡಿಸುತ್ತಾರೆ.

ಅಲ್ಲದೆ ಅಮೂಲ್ಯ ದಾಖಲೆಗಳನ್ನು ಕ್ರೋಢೀಕರಿಸಿ ನ್ಯಾಯಾಲಯಕ್ಕೆ ಸಲ್ಲಿಸುತ್ತಾರೆ. ದಾಖಲೆಗಳ ಪ್ರಕಾರ 1288.75 ಎಕರೆ ಜಾಗವು ಬೇಟೋಳಿ ಗ್ರಾ.ಪಂ. ವ್ಯಾಪ್ತಿಯ ಹೆಗ್ಗಳ ಗ್ರಾಮದಲ್ಲಿದ್ದು, 24.8.1908ರಲ್ಲಿ ಅಂದಿನ ಬ್ರಿಟಿಷ್ ಸರಕಾರದ ಕೊಡಗು ಚೀಫ್ ಕಮಿಷನರ್ ಅಧಿಸೂಚನೆ ಹೊರಡಿಸಿ, ರಬ್ಬರ್ ಕಂಪನಿಗೆ ಗುತ್ತಿಗೆಗೆ ನೀಡಿರುವ ಈರಟ್ಟಿ ಮೀಸಲು ಅರಣ್ಯಕ್ಕೆ ಸೇರಿದ್ದಾಗಿದೆ ಎಂದು ಗಮನ ಸೆಳೆಯುತ್ತಾರೆ. ಮಾತ್ರವಲ್ಲದೆ ಪೋರ್ಚ್‍ಲ್ಯಾಂಡ್ ಕಂಪೆನಿಯ ಸ.ನಂ. 211/1ರ ವಿಭಜಿತ 211/23ರ ಮೀಸಲು ಅರಣ್ಯ ಜಮೀನು ಎಂದು ಸ್ಪಷ್ಟಪಡಿಸುತ್ತಾರೆ.

ಮತ್ತಷ್ಟು ವಿವರ: ಅಲ್ಲದೆ ಈ ಜಾಗವು ಗ್ಲಾಡಿಸ್ ಮ್ಯಾಥ್ಯೂ ಎಂಬವರ ಮಾಲೀಕತ್ವಕ್ಕೆ ಸೇರಿದ್ದಲ್ಲವೆಂದೂ ಬದಲಾಗಿ 20.9.2010ರಲ್ಲಿ ರಾಜ್ಯ ಉಚ್ಚ ನ್ಯಾಯಾಲಯದ ತೀರ್ಪಿನ ಪ್ರಕಾರ, ಸಂಬಂಧಿಸಿದ ಪ್ರದೇಶವು ಮೀಸಲು ಅರಣ್ಯವೆಂದು ಸ್ಪಷ್ಟಪಡಿಸಿದೆ, ಮುಂದುವರಿದು ಕಲಂ 6 ರಲ್ಲಿ ಅರಣ್ಯವೆಂದೂ, ಕಲಂ 9 ರಲ್ಲಿ ಸರಕಾರಿ ಜಮೀನು ಎಂದು ಉಲ್ಲೇಖಿಸಿರುವ ಅಂಶವನ್ನು ದೇವಲಿಂಗಯ್ಯ ನ್ಯಾಯಾಲಯಕ್ಕೆ ಮನವರಿಕೆ ಮಾಡಿದ್ದಾರೆ.

ಅಷ್ಟು ಮಾತ್ರವಲ್ಲದೆ ರಾಜ್ಯ ಉಚ್ಚ ನ್ಯಾಯಾಲಯವು ತನ್ನ ಆದೇಶದೊಂದಿಗೆ ಕಲಂ 11ರಲ್ಲಿ ಫೋರ್ಚ್‍ಲ್ಯಾಂಡ್ ರಬ್ಬರ್ ಕಂಪೆನಿಯು ‘ಗುತ್ತಿಗೆದಾರ’ ಎಂದು ನಮೂದಿಸಿರುವದಲ್ಲದೆ, ಈ ಸಂಬಂಧ ವೀರಾಜಪೇಟೆ ತಹಶೀಲ್ದಾರರಿಗೆ ನಿರ್ದೇಶಿಸಿರುವ ಸಂಗತಿಯನ್ನು ಪ್ರಸ್ತಾಪಿಸಿದ್ದಾರೆ.

ಮೇಲಿನ ಅಂಶಗಳನ್ನು ವೀರಾಜಪೇಟೆ ಹಿರಿಯ ಸಿವಿಲ್ ನ್ಯಾಯಾಲಯವು ಗಂಭೀರವಾಗಿ ಪರಿಗಣಿಸಿ ಪೋರ್ಚ್‍ಲ್ಯಾಂಡ್ ರಬ್ಬರ್ ಕಂಪೆನಿಯ ಮುಖಾಂತರ ಗ್ಲಾಡಿಸ್ ಮ್ಯಾಥ್ಯೂ ಜಾಗವನ್ನು ಖರೀದಿಸಿರುವದು ಅಸಿಂಧುವೆಂದು ಅಭಿಪ್ರಾಯಪಟ್ಟಿದೆ. ಮಾತ್ರವಲ್ಲದೆ ಬ್ರಿಟಿಷ್ ಸರಕಾರದ ಒಪ್ಪಂದದ ಪ್ರಕಾರ ಈ ಜಾಗವು ಸರಕಾರದ್ದಾಗಿದ್ದು, ಸಂರಕ್ಷಿತ ಮೀಸಲು ಅರಣ್ಯವಾಗಿದ್ದನ್ನು ಗುತ್ತಿಗೆ ಆಧಾರದಲ್ಲಿ ರಬ್ಬರ್ ಕೃಷಿಗೆ ನೀಡಿರುವದಾಗಿದೆ. ಪ್ರಸಕ್ತ ಈ ಅವಧಿಯೂ ಅರಣ್ಯಾಧಿಕಾರಿಗಳ ಪ್ರಕಾರ ಮುಕ್ತಾಯಗೊಂಡಿದ್ದು, ಅರ್ಜಿದಾರರಿಗೆ ಯಾವದೇ ಒಡೆತನ ಅಥವಾ ಜಾಗವನ್ನು ಅನುಭವಿಸುವ ಹಕ್ಕು ಇರುವದಿಲ್ಲವೆಂದು ವ್ಯಾಖ್ಯಾನಿಸಿದೆ.

ಮಹತ್ವದ ಅಂಶ: ಈ ಪ್ರಕರಣದಲ್ಲಿ ಯಾವದೇ ನಿರ್ಧಿಷ್ಟ ದಾಖಲೆ ಇಲ್ಲದೆ, ಕೇವಲ ಆರ್‍ಟಿಸಿ ಅಥವಾ ಕಂದಾಯ ಪತ್ರಗಳಿಂದ ಭೂ ಒಡೆತನ ನಿರ್ಧರಿಸಲು ಅಸಾಧ್ಯವೆಂದು ಅಭಿಪ್ರಾಯಪಟ್ಟಿರುವ ನ್ಯಾಯಾಲಯವು; 1908ರ ಬ್ರಿಟಿಷ್ ಸರಕಾರ ಮತ್ತು ರಬ್ಬರ್ ಕಂಪೆನಿ ನಡುವಿನ 99 ವರ್ಷಗಳ ಒಪ್ಪಂದ ಪೂರ್ಣಗೊಂಡಿರುವದಾಗಿ ಉಲ್ಲೇಖಿಸಿದೆ. ಆ ಪ್ರಕಾರ ಕೇರಳ ಮೂಲದ ಮಹಿಳೆ ಈಚಿನ ವರ್ಷಗಳಲ್ಲಿ ಸಂಬಂಧಿಸಿದ ಜಾಗವನ್ನು ಖರೀದಿಸಿರುವದಾಗಿ ಪ್ರಸ್ತಾಪಿಸಿರುವದು ಕೂಡ ಅಕ್ರಮವೆಂದು ಸ್ಪಷ್ಟಪಡಿಸಿದೆ.

ಈ ಎಲ್ಲಾ ಅಂಶಗಳನ್ನು ಆಧರಿಸಿ ಪೋರ್ಚ್‍ಲ್ಯಾಂಡ್ ರಬ್ಬರ್ ಕಂಪೆನಿ ಜಾಗ ಸಂಪೂರ್ಣ ಸರಕಾರದ ಭೂಮಿ ಮತ್ತು ಸಂರಕ್ಷಿತ ಮೀಸಲು ಅರಣ್ಯವೆಂದು ವೀರಾಜಪೇಟೆ ಹಿರಿಯ ಸಿವಿಲ್ ನ್ಯಾಯಾಧೀಶರಾದ ಜಯಪ್ರಕಾಶ್ ಅವರು ಕಳೆದ ತಾ. 6.9.2018 ರಂದು ಮಹತ್ವದ ತೀರ್ಪು ನೀಡಿದ್ದಾರೆ. ಪರಿಣಾಮ ವೀರಾಜಪೇಟೆ ನ್ಯಾಯಾಲಯ ನೀಡಿರುವ ತೀರ್ಪಿನ ಪ್ರಕಾರ ಕೊಡಗಿನ 6 ಸಾವಿರ ಎಕರೆಗೂ ಅಧಿಕ ರಬ್ಬರ್ ಕಂಪೆನಿಗಳ ಮಾಲೀಕತ್ವ ಹಾಗೂ ಅನ್ಯರಿಗೆ ಮಾರಾಟಗೊಳಿಸಿರುವದು ಅಸಿಂಧುವೆಂದು ಬಯಲಾಗಿದೆ.

ಇನ್ನಾದರೂ ಎಚ್ಚೆತ್ತುಕೊಳ್ಳಲಿ: ನ್ಯಾಯಾಲಯದ ಈ ಮಹತ್ವ ಪೂರ್ಣ ತೀರ್ಪು ಹೊರಬಿದ್ದು ತಾ. 6ಕ್ಕೆ 60 ದಿನಗಳು ಪೂರ್ಣಗೊಳ್ಳಲಿದ್ದು, ಇನ್ನಾದರೂ ಸರಕಾರ ಹಾಗೂ ಸಂಬಂಧಿಸಿದ ಇಲಾಖೆಗಳು ಎಚ್ಚೆತ್ತುಕೊಂಡು ಕಾನೂನಾತ್ಮಕ ಕ್ರಮಕ್ಕೆ ಮುಂದಾಗಲೆಂದು ಆಶಿಸೋಣ.