ಸೋಮವಾರಪೇಟೆ, ನ. 8: ಟಿಪ್ಪು ಜಯಂತಿ ಹಿನ್ನೆಲೆ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆ ಸನ್ನದ್ಧವಾಗಿದ್ದು, ಜಿಲ್ಲೆಯಾ ದ್ಯಂತ ಸಿ.ಸಿ. ಕ್ಯಾಮೆರಾ ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ. ಪಿ. ತಿಳಿಸಿದರು.
ಸೋಮವಾರಪೇಟೆ ಪೊಲೀಸ್ ಠಾಣೆಗೆ ಭೇಟಿ ನೀಡಿ, ಜಯಂತಿ ಹಿನ್ನೆಲೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಸೂಚನೆ ನೀಡಿದ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಸುಮನ್ ಅವರು, ಸರ್ಕಾರಿ ಕಾರ್ಯಕ್ರಮ ಟಿಪ್ಪು ಜಯಂತಿಯನ್ನು ಯಾವದೇ ಅಶಾಂತಿಯ ವಾತಾವರಣ ಇಲ್ಲದಂತೆ ನಡೆಸಲು ಅಗತ್ಯ ಬಂದೋಬಸ್ತ್ ಕಲ್ಪಿಸಲಿದೆ ಎಂದರು.
ಸೋಮವಾರಪೇಟೆಯಲ್ಲಿ ನಡೆಯುವ ಟಿಪ್ಪು ಜಯಂತಿ ಕಾರ್ಯಕ್ರಮದ ಸಭಾಂಗಣದ ಒಳಗೆ ಮತ್ತು ಪ್ರವೇಶ ದ್ವಾರದಲ್ಲಿ ಸಿ.ಸಿ. ಕ್ಯಾಮೆರಾ ಅಳವಡಿಸಲು ತಾಲೂಕು ತಹಸೀಲ್ದಾರ್‍ಗೆ ಜವಾಬ್ದಾರಿ ನೀಡಲಾಗಿದೆ.
ಸೋಮವಾರಪೇಟೆಗೆ ಸಂಬಂಧಿಸಿ ದಂತೆ ಓರ್ವರು ಅಡಿಷನಲ್ ಎಸ್.ಪಿ., ಡಿವೈಎಸ್‍ಪಿ, ವೃತ್ತ ನಿರೀಕ್ಷಕರು, ಪಿಎಸ್‍ಐಗಳನ್ನು ನಿಯೋಜಿಸಲಾಗಿದೆ. ಇದರೊಂದಿಗೆ 4 ಕೆಎಸ್‍ಆರ್‍ಪಿ ತುಕಡಿ, ಒಂದು ಆರ್‍ಎಎಫ್ ತುಕಡಿ, ಶಸ್ತ್ರ ಸಜ್ಜಿತ 8 ಜಿಲ್ಲಾ ಮೀಸಲು ಪಡೆ, 80 ಪೊಲೀಸ್ ಪೇದೆಗಳು, 40 ಮಂದಿ ಗೃಹರಕ್ಷಕ ದಳದ ಸಿಬ್ಬಂದಿ ಗಳನ್ನು ನಿಯೋಜಿಸ ಲಾಗುವದು ಎಂದರು.
ಈ ಬಾರಿ ಟಿಪ್ಪು ಜಯಂತಿ ಸಂದರ್ಭ ಯಾವದೇ ಅಹಿತಕರ ಘಟನೆಗಳು ನಡೆಯುವದಿಲ್ಲ ಎಂಬ ನಂಬಿಕೆಯಿದೆ. ಆದಾಗ್ಯೂ ಸಾಮಾಜಿಕ ಅಶಾಂತಿ ಸೃಷ್ಟಿಸಲು ಯತ್ನಿಸಿದರೆ ಅಂತಹ ಕಿಡಿಗೇಡಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಇಲಾಖೆ ಸಿದ್ಧವಿದೆ. ಸಾಮಾಜಿಕ ಶಾಂತಿಗೆ ಭಂಗ ತರುವವರ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಸುಪ್ರೀಂ ಕೋರ್ಟ್‍ನಿಂದಲೇ ನಿರ್ದೇಶನವಿದೆ. ಅದರಂತೆ ಕ್ರಮ ಜರುಗಿಸಲಾಗುವದು ಎಂದು ಎಚ್ಚರಿಸಿದರು. ಸರ್ಕಾರಿ ಕಾರ್ಯಕ್ರಮ ಯಾವದೇ ಗೊಂದಲವಿಲ್ಲದಂತೆ ನಡೆಯಲು ಜಿಲ್ಲೆಯ ಜನತೆ ಸಹಕರಿಸಬೇಕು ಎಂದೂ ಮನವಿ ಮಾಡಿದರು.
ಬಂದ್ ಮಾಡಿಸಿದರೆ ಕ್ರಮ: ಟಿಪ್ಪು ಜಯಂತಿ ವಿರೋಧಿ ಹೋರಾಟ ಸಮಿತಿ ಕರೆ ನೀಡಿರುವ ಸ್ವಯಂಪ್ರೇರಿತ ಬಂದ್ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ವರಿಷ್ಠಾಧಿಕಾರಿಗಳು, ಸ್ವಯಂಪ್ರೇರಿತರಾಗಿ ಜನತೆ ಬಂದ್ ಮಾಡಿದರೆ ಇಲಾಖೆಯ ಅಭ್ಯಂತರವಿಲ್ಲ. ಆದರೆ ಬಲವಂತವಾಗಿ ಅಂಗಡಿಮುಂಗಟ್ಟುಗಳನ್ನು ಮುಚ್ಚಿಸುವದು, ವಾಹನಗಳ ಓಡಾಟಕ್ಕೆ ತಡೆಯೊಡ್ಡುವದು ಕಂಡುಬಂದರೆ ಇಲಾಖೆ ಕ್ರಮ ಕೈಗೊಳ್ಳಲಿದೆ ಎಂದರು.
ಕಳೆದ 2 ವರ್ಷಗಳಿಂದ ರಸ್ತೆಗೆ ಮರವನ್ನು ಬೀಳಿಸಿ ಸಂಚಾರಕ್ಕೆ ಅಡ್ಡಿಪಡಿಸುವ ಪ್ರಯತ್ನಗಳು ನಡೆದಿರುವ ಬಗ್ಗೆ ತಿಳಿದಿದೆ. ಈ ಬಾರಿ ಅರಣ್ಯ ಇಲಾಖೆಗೆ ಸೂಚನೆ ನೀಡಲಾಗಿದ್ದು, ಕಿಡಿಗೇಡಿಗಳು ಮರವನ್ನು ಕಡಿದು ರಸ್ತೆಗೆ ಉರುಳಿಸಿದರೆ ತಕ್ಷಣ ತೆರವುಗೊಳಿಸಲು ಕ್ಷಿಪ್ರ ಕಾರ್ಯಪಡೆ ಕಾರ್ಯೋನ್ಮುಖ ವಾಗುವಂತೆ ನಿರ್ದೇಶನ ನೀಡಲಾಗಿದೆ ಎಂದರು.