ವೀರಾಜಪೇಟೆ, ನ. 9: ನಾಲ್ಕನೇ ಶತಮಾನದಿಂದ ಪ್ರಾರಂಭಗೊಂಡ ಕನ್ನಡ ಭಾಷೆ ಬೇರೆ ಬೇರೆ ರಾಜ್ಯ ಹಾಗೂ ಹೊರದೇಶಗಳಲ್ಲಿ ತನ್ನದೆ ಆದ ಹಿರಿಮೆ ಗರಿಮೆಯನ್ನು ಸಾರುತ್ತಿದೆ ಎಂದು ಕಾಫಿ ಮಂಡಳಿ ಉಪಾಧ್ಯಕ್ಷೆ ಪಟ್ಟಡ ರೀನಾ ಪ್ರಕಾಶ್ ಹೇಳಿದರು. ವೀರಾಜಪೇಟೆಯ ಕರ್ನಾಟಕ ಸಂಘದ ಆಶ್ರಯದಲ್ಲಿ ಪಟ್ಟಣದ ಪುರಭವನದಲ್ಲಿ ನಡೆದ ಹರಿದಾಸ ಅಪ್ಪಚ್ಚ ಕವಿಯ 150ನೇ ಜನ್ಮೋತ್ಸವದ ನೆನಪಿನ “ಅಮರ ಕಾವ್ಯ” ಕಾರ್ಯಕ್ರಮದಲ್ಲಿ ಮಾತನಾಡಿದ ರೀನಾ ಪ್ರಕಾಶ್ ಅವರು ಹಲವಾರು ಮಹಾನ್ ಕವಿಗಳನ್ನು ನೀಡಿದ ಶಾಸ್ತ್ರೀಯ ಭಾಷೆ ಕನ್ನಡಕ್ಕೆ ತನ್ನದೇ ಆದ ಪಾವಿತ್ರ್ಯತೆ ಇದೆ. 1860ರಲ್ಲಿ ಕವಿರಾಜಮಾರ್ಗ ಎಂಬ ಕೃತಿಯನ್ನು ರಚಿಸಿ ಕನ್ನಡದ ಬಗ್ಗೆ ತನ್ನದೇ ಆದ ರೀತಿಯಲ್ಲಿ ವಿಶ್ಲೇಷಣೆ ಮಾಡಿದ್ದಾರೆ. ಹಿಂದಿನವರ ಹೋರಾಟದ ಫಲವಾಗಿ ಇಂದು ಕನ್ನಡದ ನೆಲ, ಜಲವನ್ನು ಉಳಿಸಿಕೊಳ್ಳಲು ಸಹಕಾರಿಯಾಯಿತು ಎಂದು ಹೇಳಿದರು.
ಅಪ್ಪಚ್ಚ ಕವಿಯ ಜನ್ಮೋತ್ಸವದ ಅಮರ ಕಾವ್ಯವನ್ನು ರಚಿಸಿದ ರಂಗಕರ್ಮಿ ಅಡ್ಡಂಡ ಕಾರ್ಯಪ್ಪ ಮಾತನಾಡಿ, ಕೊಡವ ಕೊಂಕಣಿ ಭಾಷೆಗಳು ಕನ್ನಡದ ಸಹೋದರ ಭಾಷೆಯಾಗಿದೆ. ಅದರಲ್ಲಿ ಕೊಡವ ಭಾಷೆ ಕನ್ನಡ ಭಾಷೆಯ ಅವಿಭಾಜ್ಯ ಅಂಗವಾಗಿ ಅಧಿಕೃತ ಭಾಷೆಯಾಗಿದೆ. 1956ರಲ್ಲಿ ಮೈಸೂರು ರಾಜ್ಯ ಕರ್ನಾಟಕದೊಂದಿಗೆ ಏಕೀಕರಣ ವಾದ ಸಂದರ್ಭ ಮೈಸೂರು ರಾಜ್ಯದ ಅಂದಿನ ಸ್ಪೀಕರ್ ಆಗಿ ಬಿ.ಎಂ. ಕುಶಾಲಪ್ಪ ನಾಲ್ಕು ತಿಂಗಳು ಕಾರ್ಯ ನಿರ್ವಹಿಸಿದ್ದಾರೆ. ಅವರು ಕೂಡ ಅಪ್ಪಚ್ಚ ಕವಿಯ ಅನುಯಾಯಿ ಆಗಿದ್ದರು ಎಂದರು.
ಕರ್ನಾಟಕ ಸಂಘದ ಅಧ್ಯಕ್ಷ ಮಾಳೇಟಿರ ಬೆಲ್ಲು ಬೋಪಯ್ಯ ಸಭೆಯ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ವೀರಾಜಪೇಟೆ ಕೊಡವ ಸಮಾಜದ ಅಧ್ಯಕ್ಷ ವಾಂಚಿರ ನಾಣಯ್ಯ, ಕರ್ನಾಟಕ ಸಂಘದ ಕಾರ್ಯದರ್ಶಿ ಮೂಕಚಂಡ ಅಪ್ಪಣ್ಣ ಉಪಸ್ಥಿತರಿದ್ದರು. “ಅಮರಕಾವ್ಯ” ಕಾರ್ಯಕ್ರಮವನ್ನು ರಂಗಕರ್ಮಿ ಅಡ್ಡಂಡ ಕಾರ್ಯಪ್ಪ, ಮದ್ರಿರ ಸಂಜು ಬೆಳ್ಯಪ್ಪ, ಆಂಗಿರ ಕುಸುಮಾ ಮಾದಪ್ಪ, ವಿ.ಟಿ. ಶ್ರೀನಿವಾಸ್, ಚಂದ್ರು ಆಯೋಜಿಸಿದ್ದರು. ಸಂಘದ ನಿರ್ದೇಶಕ ಚೇನಂಡ ಸುರೇಶ್ ನಾಣಯ್ಯ ಸ್ವಾಗತಿಸಿ, ವಂದಿಸಿದರು.